ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕಣ್ಣೂರಿನಲ್ಲಿ ಕಾರು ಅಪಘಾತದಲ್ಲಿ ದಂಪತಿ ಸುಟ್ಟು ಕರಕಲಾದ ಘಟನೆಗೆ ಮೋಟಾರು ವಾಹನ ಇಲಾಖೆಯ ತನಿಖಾ ತಂಡ ಕಾರಣ ಪತ್ತೆ ಮಾಡಿದೆ. ಕಾರಿನೊಳಗೆ ಎರಡು ಬಾಟಲ್ ಪೆಟ್ರೋಲ್ ಇಡಲಾಗಿತ್ತು ಮತ್ತು ಶಾರ್ಟ್ ಸರ್ಕ್ಯೂಟ್ ಬೆಂಕಿ ವೇಗವಾಗಿ ಹರಡಲು ಇದು ಕಾರಣವಾಯಿತು ಎಂದು ಎಂವಿಡಿ ಪತ್ತೆ ಮಾಡಿದೆ.
ಮೃತ ಪ್ರಜಿತ್ ಜೆಸಿಬಿ ಚಾಲಕರೂ ಆಗಿದ್ದು, ಕಾರಿನ ಡ್ರೈವಿಂಗ್ ಸೀಟಿನ ಕೆಳಗೆ ಎರಡು ಬಾಟಲ್ ಪೆಟ್ರೋಲ್ ಇಟ್ಟುಕೊಂಡಿದ್ದರು. ಕಾರಿನ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಎರಡು ಬಾಟಲ್ ಪೆಟ್ರೋಲ್ ಇರುವುದೂ ಅಪಘಾತದ ಪರಿಣಾಮವನ್ನು ಹೆಚ್ಚಿಸಿದೆ. ಬೆಂಕಿ ಬಾಗಿಲಿಗೆ ವ್ಯಾಪಿಸಿದ್ದರಿಂದ ಲಾಕಿಂಗ್ ವ್ಯವಸ್ಥೆಯೂ ನಿಷ್ಕ್ರಿಯಗೊಂಡಿದೆ.
ಗುರುವಾರ ಕಾರಿಗೆ ಬೆಂಕಿ ತಗುಲಿ ತುಂಬು ಗರ್ಭಿಣಿ ಹಾಗೂ ಆಕೆಯ ಪತಿ ಸಾವನ್ನಪ್ಪಿದ ದಾರುಣ ಘಟನೆ ಕಣ್ಣೂರಿನಲ್ಲಿ ನಡೆದಿತ್ತು. ಕುಟ್ಟಿಯಾತೂರಿನ ನಿವಾಸಿಗಳಾದ ರೀಶಾ ಮತ್ತು ಪ್ರಜಿತ್ ಆಸ್ಪತ್ರೆ ಹೋಗುವ ಮಾರ್ಗಮಧ್ಯೆ ಸುಟ್ಟು ಕರಕಲಾದರು. ಕಾರಿನ ಹಿಂದಿನ ಸೀಟಿನಲ್ಲಿದ್ದ ಮಗು ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆರಿಗೆಯ ದಿನಾಂಕ ಹತ್ತಿರವಿದ್ದುದರಿಂದ ದಾಖಲಾತಿಗೆ ಬಟ್ಟೆ ಸೇರಿದಂತೆ ಎಲ್ಲ ಸಿದ್ಧತೆಗಳೊಂದಿಗೆ ರೀಶಾ ಮತ್ತು ಅವರ ಕುಟುಂಬದವರು ಆಸ್ಪತ್ರೆಗೆ ತೆರಳಿದ್ದರು. ಕಾರಿನಿಂದ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಹಿಂಬದಿಯ ವಾಹನದಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಕಾರಿನ ಡೋರ್ ಲಾಕ್ ಆದ ಕಾರಣ ಮುಂದಿನ ಸೀಟ್ ನಲ್ಲಿದ್ದವರನ್ನು ಉಳಿಸಲು ಸಾಧ್ಯವಾಗಿಲ್ಲ. ಮೃತ ಪ್ರಜಿತ್ ಕಾರಿನ ಹಿಂದಿನ ಬಾಗಿಲು ತೆರೆಯಲು ಯತ್ನಿಸಿದ್ದಾನೆ.
ಕೇವಲ ಇನ್ನೂರು ಮೀಟರ್ ದೂರದಲ್ಲಿದ್ದ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ರೀಷಾ ಮತ್ತು ಪ್ರಜೀತ್ ಸುಟ್ಟು ಕರಕಲಾಗಿದ್ದರು. ಹಿಂದಿನ ಸೀಟಿನಲ್ಲಿದ್ದ ರೀಶಾ ಅವರ ಏಳು ವರ್ಷದ ಮಗಳು, ತಂದೆ ವಿಶ್ವನಾಥನ್, ತಾಯಿ ಶೋಭನಾ ಮತ್ತು ಮಗಳು ಶ್ರೀ ಪಾರ್ವತಿ, ಚಿಕ್ಕಮ್ಮ ಸಜ್ನಾ ಪ್ರಾಣಾಪಾಯದಿಂದ ಪಾರಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.