ಜೈಪುರ (ವಿಶ್ವ ಕನ್ನಡಿಗ ನ್ಯೂಸ್) : ಹರಿಯಾಣದ ಲೋಹರು ಎಂಬಲ್ಲಿ ಸುಟ್ಟ ವಾಹನದಲ್ಲಿ ಯುವಕರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಗೋವು ಕಳ್ಳಸಾಗಣೆ ಆರೋಪದ ಮೇಲೆ ರಾಜಸ್ಥಾನದ ಇಬ್ಬರು ಮುಸ್ಲಿಂ ಯುವಕರನ್ನು ಸುಟ್ಟು ಕೊಂದರು. ಘಟನೆಯಲ್ಲಿ ಹರಿಯಾಣ ಮೂಲದ ಟ್ಯಾಕ್ಸಿ ಚಾಲಕ ರಿಂಕು ಸೈನಿಯನ್ನು ಬಂಧಿಸಲಾಗಿದೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಘಾಟ್ಮಿಕಾ ಗ್ರಾಮದ ನಿವಾಸಿಗಳಾದ ನಜೀರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಬುಧವಾರ ಅಪಹರಣಕ್ಕೊಳಗಾಗಿದ್ದು, ನಂತರ ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ಬೆಳಗ್ಗೆ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಬೊಲೆರೊ ಎಸ್ಯುವಿಯಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ. ಅನಿಲ್, ಶ್ರೀಕಾಂತ್, ರಿಂಕು ಸೈನಿ, ಲೋಕೇಶ್ ಸಿಂಗ್ಲಾ ಮತ್ತು ಮೋಹಿತ್ ಯಾದವ್ ಅಲಿಯಾಸ್ ಮೋನು ಮಾನೇಸರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಅಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಹತ್ಯೆಯಾದ ಯುವಕರನ್ನು ಬುಧವಾರ ರಾಜಸ್ಥಾನದಿಂದ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಜುನೈದ್ ವಿರುದ್ಧ ಐದು ಅಕ್ರಮ ಗೋ ಸಾಗಾಟದ ಪ್ರಕರಣಗಳಿವೆ. ನಜೀರ್ಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹತ್ಯೆಯನ್ನು ಖಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಬಜರಂಗದಳದ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್, ಘಟನೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯಿಂದ ಇಬ್ಬರು ಹಸು ಕಳ್ಳಸಾಗಣೆದಾರರು ನಾಪತ್ತೆಯಾಗಿದ್ದು, ಅವರ ವಿರುದ್ಧ ಹಲವು ಗೋವು ಕಳ್ಳಸಾಗಣೆ ಪ್ರಕರಣಗಳಿವೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ. ಈ ಪೈಕಿ ಓರ್ವನ ಸಹೋದರ ಭಜರಂಗದಳದ ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಿ ಪ್ರಾಥಮಿಕ ತನಿಖೆಯನ್ನೂ ನಡೆಸದೆ ಪ್ರಕರಣ ದಾಖಲಿಸಿದ್ದ. ಘಟನೆಯಲ್ಲಿ ಬಜರಂಗದಳವನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ.
ರಾಜಸ್ಥಾನ ಪೊಲೀಸರ ಈ ಕ್ರಮವು ವೋಟ್ ಬ್ಯಾಂಕ್ ರಾಜಕಾರಣದ ಗುರಿಯಾಗಿದೆ. ಈ ವಿಚಾರದಲ್ಲಿ ಬಜರಂಗದಳದ ಹೆಸರನ್ನು ಅನಗತ್ಯವಾಗಿ ಎಳೆದು ತರುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ರಾಜಸ್ಥಾನ ಸರ್ಕಾರ ಸುಳ್ಳು ಆರೋಪಗಳನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಸುರೇಂದ್ರ ಜೈನ್ ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.