ಮುಂಬೈ (www.vknews.in) : ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಪೂರ್ವಭಾವಿಯಾಗಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮಾನ್ಪ್ರೀತ್ ಕೌರ್ ಅವರನ್ನು ನಾಯಕಿಯನ್ನಾಗಿ ನೇಮಿಸಲಾಗಿದೆ. ಇತ್ತೀಚೆಗಷ್ಟೇ 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿದ್ದ ಹರ್ಮಾನ್ಪ್ರೀತ್, 20ನೇ ವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಬಳಿಕ ಕಳೆದೊಂದು ದಶಕದಿಂದ ಎಲ್ಲ ಕ್ರಿಕೆಟ್ ಪ್ರಕಾರದಲ್ಲೂ ಭಾರತ ತಂಡಕ್ಕೆ ಆಧಾರಸ್ತಂಭವೆನಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ. ಮಹಿಳೆಯರ ವಿಶ್ವಕಪ್ನಲ್ಲಿ ನಾಕೌಟ್ ಹಂತದ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್ (171*) ಸಿಡಿಸಿದ ದಾಖಲೆ ಜತೆಗೆ ನಾಯಕಿಯಾಗಿ ಉತ್ತಮ ಗೆಲುವಿನ ದಾಖಲೆಯನ್ನೂ ಹೊಂದಿದ್ದಾರೆ.’ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮಾನ್ ಪ್ರೀತ್ ಕೌರ್ ಅವರ ಹೆಸರನ್ನು ಘೋಷಿಸಲು ಅಪಾರ ಖುಷಿಯಾಗುತ್ತಿದೆ. ರಾಷ್ಟ್ರೀಯ ತಂಡದ ನಾಯಕಿಯಾಗಿ ಅವರು, ಭಾರತೀಯ ಮಹಿಳಾ ತಂಡಕ್ಕೆ ಕೆಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ತರಬೇತುದಾರರಾದ ಚಾರ್ಲೋಟ್ ಮತ್ತು ಜೂಲನ್ ಬೆಂಬಲದೊಂದಿಗೆ ಅವರು, ಎಂಐ ಮಹಿಳಾ ತಂಡಕ್ಕೆ ಶ್ರೇಷ್ಠ ಕ್ರಿಕೆಟ್ ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ಎಂಐ ತಂಡದ ಹೊಸ ಅಧ್ಯಾಯದ ಆರಂಭವನ್ನು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಅಭಿಮಾನಿಗಳ ನೆಚ್ಚಿನ ಎಂಐ ಬ್ರ್ಯಾಂಡ್ನ ನಿರ್ಭೀತಿ ಮತ್ತು ಮನರಂಜನೆಯ ಆಟವನ್ನು ನಮ್ಮ ಹುಡುಗಿಯರೂ ಆಡುವುದನ್ನು ನೋಡಲು ನಾನು ಕಾತರಗೊಂಡಿದ್ದೇನೆ. ಮುಂಬರುವ ಉತ್ಸಾಹಿ ಪ್ರಯಣಕ್ಕೆ ಹರ್ಮಾನ್ಪ್ರೀತ್ ಕೌರ್ ಮತ್ತು ಎಂಐ ತಂಡಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ’ ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದ್ದಾರೆ.
ಮುಖ್ಯ ಕೋಚ್ ಚಾರ್ಲೋಟ್ ಎಡ್ವರ್ಡ್ಸ್ ಎದುರಾಳಿಯಾಗಿ ಮತ್ತು ಮೆಂಟರ್ ಜೂಲನ್ ಗೋಸ್ವಾಮಿ ಸಹ-ಆಟಗಾರ್ತಿ ಹಾಗೂ ನಾಯಕಿಯಾಗಿ ಆಡಿದ ಅನುಭವವನ್ನು ಹರ್ಮಾನ್ಪ್ರೀತ್ ಕೌರ್ ಹೊಂದಿದ್ದಾರೆ. ವಿದೇಶಿ ಟಿ20 ಲೀಗ್ಗಳಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿರುವ ಹರ್ಮಾನ್ಪ್ರೀತ್, ಭಾರತೀಯ ಕ್ರಿಕೆಟ್ನ ಶ್ರೇಷ್ಠತೆಯನ್ನು ವಿಶ್ವಕ್ಕೆ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಾಗತಿಕ ಮಹಿಳಾ ಕ್ರಿಕೆಟ್ನ ಕೆಲ ಅತ್ಯುತ್ತಮ ತಾರೆಯರು ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಈಗ ಹರ್ಮಾನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ಮುಂಬೈ ಇಂಡಿಯನ್ಸ್ ತರಬೇತಿ ಬಳಗದಲ್ಲಿ ಚಾರ್ಲೋಟ್ ಎಡ್ವರ್ಡ್ಸ್(ಮುಖ್ಯ ಕೋಚ್), ಜೂಲನ್ ಗೋಸ್ವಾಮಿ (ಮೆಂಟರ್, ಬೌಲಿಂಗ್ ಕೋಚ್), ದೇವಿಕಾ ಪಾಲ್ಶಿಕರ್ (ಬ್ಯಾಟಿಂಗ್ ಕೋಚ್), ಲೈಡಿಯಾ ಗ್ರೀನ್ವೇ (ಫೀಲ್ಡಿಂಗ್ ಕೋಚ್) ಇದ್ದಾರೆ. ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ತಂಡದಲ್ಲಿ ನಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಬೆಲ್ ವೊಂಗ್, ಅಮನ್ಜೋತ್ ಕೌರ್, ಧಾರಾ ಗುಜ್ಜರ್, ಶೇಕಾ ಇಶಾಕ್, ಹ್ಯಾಲಿ ಮ್ಯಾಥ್ಯೂಸ್, ಕ್ಲೋಯಿ ಟ್ರೈಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್, ನೀಲಮ್ ಬಿಸ್ಟ್, ಜಿಂಟಿಮನಿ ಕಲಿಟಾ ಆಟಗಾರ್ತಿಯರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಡಬ್ಲ್ಯುಪಿಎಲ್2023ರ ಮೊದಲ ಪಂದ್ಯದಲ್ಲಿ ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.