(www.vknews.in) ; ಫೆ.25 ಶನಿವಾರ ಗಡಿನಾಡ ವಿದ್ಯಾಸಂಸ್ಥೆ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯದಲ್ಲಿ ಜರುಗಿದ,ಆರನೇಯ ಕರ್ನಾಟಕ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ,ಪತ್ರಕರ್ತ ಮಲಾರ್ ಜಯರಾಮ ರೈಯವರು ಯುವಕವಿ ಮುಹಮ್ಮದ್ ಸಿಂಸಾರುಲ್ ಹಖ್ ತಾನು ಎಂಟನೇ ತರಗತಿಯಲ್ಲಿರುವಾಗಲೇ ಬರೆದಿರುವ “ಪುಟ್ಟನ ಕನಸು” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ “ಮುಂದೆ ದೊಡ್ಡ ಸಾಹಿತಿಯಾಗಿ ಬೆಳಗಿರಿ…”ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀಶ್ರೀಗುರುದೇವ ಸಂಸ್ಥಾನಮ್ ನ ಮಾತಾನಂದಮಯಿ, ಮಾಜಿಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಮ್ಮೇಳನದ ಪೂರ್ವಾಧ್ಯಕ್ಷರಾದ ನಾರಾಯಣ ರೈ ಕುಕ್ಕುವಳ್ಳಿ, ಕಾವು ಹೇಮನಾಥ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ, ಹಿರಿಯ ಸಾಹಿತಿ ಎಸ್.ಜಿ.ಕೃಷ್ಣ, ಸಾಹಿತ್ಯ ಸಂಘಟಕ ಕಲಾಪ್ರೇಮಿ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಗಡಿನಾಡ ಸೇವಾಟ್ರಸ್ಟ್ ನ ಸಂಚಾಲಕ, ಗಡಿನಾಡ ಧ್ವನಿ ಪತ್ರಿಕೆ, ವೆಬ್ ನ್ಯೂಸ್ನ ಪ್ರಧಾನ ಸಂಪಾದಕರೂ ಬರಹಗಾರರೂ, ಹಲವು ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ.ಹಾಜಿ ಅಬೂಬಕ್ಕರ್ ಆರ್ಲಪದವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಅಧ್ಯಕ್ಷರಾಗಿರುವ ಉಮೇಶ್ ನಾಯಕ್ ಪುತ್ತೂರು, ಹಿರಿಯರಾದ ಕಡಂದೇಲು ಈಶ್ವರ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮೂಲತ: ಗಡಿನಾಡು ಪ್ರದೇಶ ಪಾಣಾಜೆ ಆರ್ಲಪದವಿನ ಮುಹಮ್ಮದ್ ಸಿಂಸಾರುಲ್ ಹಖ್, ಗಡಿನಾಡ ಧ್ವನಿ ಮಾಸ ಪತ್ರಿಕೆ-ವೆಬ್ ನ್ಯೂಸ್ನ ಮುಖ್ಯ ಸಂಪಾದಕರೂ, ಆರನೇಯ ಕರ್ನಾಟಕ ಗಡಿನಾಡ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಘಟಕರೂ ಆಗಿರುವ ಡಾ.ಹಾಜಿ ಅಬೂಬಕ್ಕರ್ ಆರ್ಲಪದವು ಮತ್ತು ಫಾತಿಮ್ಮತ್ ಝುಹರ ಅವರ ಪುತ್ರ. ಇವರು ಪಾಣಾಜೆ ಮಾದರಿ ಹಿರಿಯಪ್ರಾಥಮಿಕ ಶಾಲೆ ಪಾಣಾಜೆ ಮತ್ತು ಸುಬೋಧ ಪ್ರೌಢಶಾಲೆ ಪಾಣಾಜೆಯಲ್ಲಿ, ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಕೃತ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವರು.
ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಚುಟುಕು,ಕವನ, ಲೇಖನ ಬರೆಯುತ್ತಿದ್ದ ಸಿಂಸಾರುಲ್ ಹಕ್, ಸುಮಾರು 50-60 ಕವನಗಳನ್ನು ಬರೆದಿದ್ದರು. ಅವುಗಳನ್ನು ಪರಿಶೀಲಿಸಿ “ಪುಟ್ಟನ ಕನಸು” ಮಕ್ಕಳ ಕವನ ಸಂಕಲನ ರೂಪಿಸಲಾಯಿತು. ಈಗ ಪ್ರಬುದ್ಧ ಕವನ ರಚಿಸುತ್ತಿರುವ ಸಿಂಸಾರುಲ್ ಹಖ್ ಅಪ್ಪಟ ಕನ್ನಡಾಭಿಮಾನಿ. ತಾಲೂಕು, ಜಿಲ್ಲಾಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಹಿರಿಮೆಗೂ ಪಾತ್ರರಾಗಿರುವರು. ಧರ್ಮಸ್ಥಳ ಡಾ.ಡಿ.ಹೇಮಾವತಿ ವಿ. ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಉಜಿರೆಯಲ್ಲಿ ಜರುಗಿದ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಪ್ರಥಮ ಬಾರಿಗೆ, ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಅಪಾರ ಜನಮನ್ನಣೆಗೆ ಪಾತ್ರರಾಗಿರುವರು.
ವಿದ್ಯಾರ್ಥಿದೆಸೆಯಲ್ಲಿಯೇ ನಾಯಕತ್ವಗುಣ ಹೊಂದಿರುವ ಮುಹಮ್ಮದ್ ಸಿಂಸಾರುಲ್ ಹಖ್, ಕಬಡ್ಡಿ, ಕ್ರಿಕೆಟ್ ಆಟಗಾರರೂ ಹೌದು. ಆಶುಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲೂ ಬಹುಮಾನಿತರಾಗಿರುವರು. ಅತ್ಯಂತ ಎಳೆಯ ಪ್ರಾಯದಲ್ಲೇ ಗಡಿನಾಡ ಧ್ವನಿ ಮಾಸಪತ್ರಿಕೆ ಮತ್ತು ವೆಬ್ ನ್ಯೂಸ್ನ ಸಹಸಂಪಾದಕರಾಗಿ ತನ್ನ ತಂದೆ ಡಾ.ಹಾಜಿ ಅಬೂಬಕ್ಕರ್ ಆರ್ಲಪದವು ಅವರಿಂದ ಅಧಿಕಾರ ವಹಿಸಿಕೊಂಡಿರುವ ಯುವ ಪ್ರತಿಭೆ ಸಿಂಸಾರುಲ್ ಹಖ್ ತನ್ನ ತಂದೆಯವರಂತೆ ಸಾಹಿತಿ-ಸಂಘಟನಾ ಚತುರರಾಗಿ ಕೀರ್ತಿಗಳಿಸಲೆಂದು ಹಾರೈಸೋಣ.
✍️ ನಾರಾಯಣ ರೈ ಕುಕ್ಕುವಳ್ಳಿ, ಪ್ರಧಾನ ಸಂಪಾದಕರು ಮಧುಪ್ರಪಂಚ ಪುತ್ತೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.