(www.vknews.in) : ಒರಿಸ್ಸಾದ ರೈಲು ದುರಂತ ನೋಡಿ ಎಲ್ಲ ಭಾರತೀಯರು ದುಃಖಪಟ್ಟರು. ನೂರಾರು ಜನರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡರು. ಅದು ಕುಟುಂಬಸ್ಥರ ಬದುಕಿನಲ್ಲಿ ಆರದ ಗಾಯ. ನನ್ನ ಹೆಂಡತಿ ಮತ್ತು ಮಕ್ಕಳೇ ತೀರಿಕೊಂಡಾಗ ಸಂತ್ರಸ್ಥರ ಸಹಾಯ ಧನ ತೆಗೆದುಕೊಂಡು ಏನು ಮಾಡಲಿ ಎಂದು ಹೇಳುತ್ತಾ ಒಬ್ಬ ಗಂಡ ಕಣ್ಣೀರಿಡುತ್ತಿದ್ದ. ಆ ದುಃಖದ ದೃಶ್ಯ ನೋಡಿದವರಿಗೂ ಕಣ್ಣೀರು ಬರದೆ ಇರಲಾರದು. ಹೆಣಗಳನ್ನು ಲಗೇಜ್ ಟೆಂಪೋ ಒಂದರಲ್ಲಿ ತರಕಾರಿ ಮೂಟೆಗಳನ್ನು ಬಿಸಾಕುವ ಹಾಗೆ ಬಿಸಾಕುತ್ತಿದ್ದರು. ಆ ವಿಡಿಯೋ ವೈರಲ್ ಸಹ ಆಯಿತು.
ಅಲ್ಲಿ ಯಾರೂ ಸಹ ಸರಿ ತಪ್ಪು ಹೇಳುವ ಸ್ಥಿಯಲ್ಲಿ ಇರಲಿಲ್ಲ. ದುರಂತಗಳು ಹೇಳಿ ಕೇಳಿ ಬರುವುದಿಲ್ಲ. ಆಕಸ್ಮಿಕವಾಗಿ ನಡೆದು ಹೋಗುತ್ತವೆ. ಮಾನವ ದುರಂತಗಳಿಂದ, ಪ್ರಾಕೃತಿಕ ವಿಕೋಪಗಳಿಂದ, ಅನಾಹುತಗಳಿಂದ ತತ್ತರಿಸಿ ಹೋಗುತ್ತಾನೆ. ಒಂದೇ ಕ್ಷಣದಲ್ಲಿ ಬದುಕು ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ.
ನಮ್ಮ ದೇಶದಲ್ಲಿ ದುರಂತ ನಿಗ್ರಹ ದಳ ಅಷ್ಟೊಂದು ಬಲಶಾಲಿಯಾಗಿ ಇದುವರೆಗೂ ಬೇರೂರಿಲ್ಲ. ನಾವು ತುರ್ತು ಮತ್ತು ಶೀಘ್ರ ಸಹಾಯ ಪಡೆಯುವುದನ್ನು ಇಚ್ಚಿಸುವುದು ಅಗ್ನಿಶಾಮಕ ದಳ ಮತ್ತು ಸೈನಿಕರಿಂದ ಮಾತ್ರ. ಅದು ದುರಂತದ ಪ್ರಮಾಣದ ಮೇಲೆ ನಿರ್ಭರವಾಗಿರುತ್ತದೆ. ತುರ್ತು ಪ್ರತಿಕ್ರಿಯೆ ದಳ ಬರುವಷ್ಟರಲ್ಲಿ ಪರಿಸ್ಥಿತಿ ಬಹಳ ಹದಗೆಟ್ಟಿ ಹೋಗಿರುತ್ತದೆ. ಪರದೇಶಗಳಲ್ಲಿ ಒಂದು ನಾಯಿಯ ಪ್ರಾಣ ಉಳಿಸಲು ಸಹ ಸ್ಥಳೀಯ ಜನರು ಮತ್ತು ಸರಕಾರಿ ಹೆಲಿಕಾಪ್ಟರ್ ಕಾರ್ಯನಿರತವಾಗುತ್ತದೆ.
ಅದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಬಹುಶಃ ಜನಸಂಖ್ಯೆ ಹೆಚ್ಚಾಗಿರುವ ಕಾರಣ ನಮ್ಮ ದೇಶದಲ್ಲಿ ಮನುಷ್ಯ ಪ್ರಾಣಕ್ಕೆ ಅಷ್ಟೊಂದು ಬೆಲೆ ಇಲ್ಲವೆಂದು ಭಾಸವಾಗುತ್ತದೆ. ಕರೋನ ಬಂದಾಗ ಯಾರು, ಏನು ಮತ್ತು ಎಷ್ಟು ಯಾವ ರೀತಿಯ ಸಹಾಯ ಮಾಡಿದರು ದೇಶದ ಜನರು ಚೆನ್ನಾಗಿ ಬಲ್ಲರು. ಆ ವಿಷಯ ಹಾಗಿರಲಿ, ದುರಂತಗಳ ಬಗ್ಗೆ ಮಾತನಾಡೋಣ. ಯಾವುದೇ ಅನಾಹುತ ನಡೆದಾಗ ತಕ್ಷಣ ಸಹಾಯಕ್ಕೆ ಬರುವುದು ನೆರೆಹೊರೆಯವರು. ಸರ್ಕಾರಿ ಸಿಬ್ಬಂದಿಗಳೇ ಬಂದು ನಿಗಾ ವಹಿಸಲಿ ಎಂದು ಕಾದು ಕುಳಿತರೆ ಅಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ.
ಯಾವುದೇ ದುರ್ಘಟನೆ, ದುರಂತ, ಅನಾಹುತ ನಡೆದರೆ ಅದನ್ನು ನಿಭಾಯಿಸಲು ಸುಸಜ್ಜಿತ ಒಂದು ಕಾರ್ಯಪಡೆಯ ಅವಶ್ಯಕತೆ ಇರುತ್ತದೆ. ಬೆಂಕಿಯ ಅನಾಹುತ, ಪ್ರವಾಹ, ಭೂಕಂಪ, ಅಪಘಾತಗಳು, ವಿದ್ಯುತ್ಛಕ್ತಿ ಅವಘಡ, ಭಯೋತ್ಪಾದಕ ಕೃತ್ಯ, ಮಳೆನೀರು ಸಮಸ್ಯೆ, ಕಾಡುಗಿಚ್ಚು, ಕಾಡುಪ್ರಾಣಿಗಳ ಕಾಟ, ಮಹಾಮಾರಿ ಕಾಯಿಲೆಗಳು ಇತ್ಯಾದಿ. ಇದರ ಬಗ್ಗೆ ಜ್ಞಾನ ಉಳ್ಳವರು, ತರಬೇತಿ ಪಡೆದವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆದಷ್ಟು ಸಫಲರಾಗುತ್ತಾರೆ. ಅದರ ಬಗ್ಗೆ ಜ್ಞಾನವೇ ಇಲ್ಲದವರು ಏನು ಮಾಡುತ್ತಾರೆ, ಮೂಕ ಪ್ರಾಣಿಗಳಂತೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುವುದುಂಟು.
ಉದಾಹರಣೆಗೆ ಒಂದು ದಾರಿಯಲ್ಲಿ ನೀವು ನಡೆದುಕೊಂಡು ಹೋಗುತಿರುತ್ತೀರಿ. ನಿಮಗೆ ತಿಳಿಯದ ಹಾಗೆ ನಿಮ್ಮ ಪಕ್ಕದಲ್ಲೇ ಪಟಾಕಿ ಸಿಡಿದುಬಿಟ್ಟರೆ ಏನು ಮಾಡುತ್ತೀರಿ. ಭಯ ಪಡುತ್ತೀರಿ, ಗಾಬರಿಗೊಳ್ಳುತ್ತೀರಿ. ಒಂದೆರಡು ನಿಮಿಷ ಏನಾಯಿತೋ, ಏನಾಗುತ್ತಿದಿಯೋ ನಿಮಗೆ ತಿಳಿಯುವುದೇ ಇಲ್ಲ. ಅದೇ ಪಟಾಕಿಯನ್ನು ನೀವು ನಿಮ್ಮ ಕೈಯ್ಯಾರೆ ಸಿಡಿದರೆ, ಆಗ ನಿಮಗೆ ಭಯ ಆಗುವುದಿಲ್ಲ ಏಕೆ ? ಆ ಪಟಾಕಿಯ ಶಬ್ದಕ್ಕೆ ಸ್ಪಂದಿಸುವ ಶಕ್ತಿ ನಿಮ್ಮಲ್ಲಿ ಇರುತ್ತದೆ. ನಿಮ್ಮ ಮನಸ್ಸು ಜಾಗರೂಕವಾಗಿರುತ್ತದೆ. ಪಟಾಕಿಗಳನ್ನು ಬಳಸಿ ನಿಮಗೆ ರೂಢಿಯಾಗಿ ಹೋಗಿರುತ್ತದೆ. ನಿಮಗೆ ತರಬೇತಿಯೇ ಇಲ್ಲದೆ ಪೈಲಟ್ ಸೀಟಿನ ಮೇಲೆ ಕುಳ್ಳರಿಸಿ ವಿಮಾನ ಉಡಾಯಿಸು ಎಂದರೆ ಆಗುತ್ತದೆಯೇ ?
ಈಗ ವಿಷಯಕ್ಕೆ ಬರೋಣ. ಕಂಪನಿಗಳಲ್ಲಿ ಕೆಲಸ ಮಾಡುವವರು ERT (Emergeny Response Team ) ತುರ್ತು ಅಥವಾ ಶೀಘ್ರ ಪ್ರತಿಕ್ರಿಯೆ ತಂಡದ ಬಗ್ಗೆ ಕೇಳಿರಬಹುದು. ಬೆಂಕಿ, ನೀರು, ಲಿಫ್ಟ್, ಸೆಕ್ಯೂರಿಟಿ, ವಿದ್ಯುತ್ಛಕ್ತಿ – ಏನಾದರು ಅನಾಹುತ ಕಾಣಿಸಿಕೊಂಡರೆ ತಕ್ಷಣ ಇ.ಆರ್.ಟಿ. ತಂಡ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತದೆ. ನಿಪುಣತೆ ಪಡೆದಿರುವ ಇ.ಆರ್.ಟಿ. ತಂಡ ಅಥವಾ ದಳದ ಜೊತೆ ಕೈಜೋಡಿಸಲು ಕಂಪನಿಯ ಉದ್ಯೋಗಿಗಳನ್ನು ಸಹ ಪ್ರತಿ ಇಲಾಖೆಯಿಂದ ಸದಸ್ಯರನ್ನಾಗಿ ಮಾಡಲಾಗುತ್ತದೆ.
ನಂತರ ಇಡೀ ಕಂಪನಿಯ ಉದ್ಯೋಗಿಗಳು ಅನಾಹುತ ಸಂಭವಿಸಿದಾಗ ಇ.ಆರ್.ಟಿ. ತಂಡದ ಜೊತೆ ಹೇಗೆ ಕಾರ್ಯ ನಿರ್ವಹಿಸಬೇಕು, ಹೇಗೆ ಒಬ್ಬರನ್ನೊಬ್ಬರು ಸಹಾಯ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಶಮನ ಮಾಡುವ ವಿಧಾನ, ಸಹದ್ಯೋಗಿಗಳನ್ನು ಸುರಕ್ಷಿತವಾಗಿ ಸ್ಥಳದಿಂದ ಖಾಲಿ ಮಾಡಿಸುವ ಕ್ರಿಯೆ, ಯಾವ ದಾರಿಯಿಂದ ಎಲ್ಲಿ ಹೋಗಿ ಸೇರಬೇಕು, ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದೆ ಕೆ.ಆರ್. ವೃತ್ತದಲ್ಲಿ ನಡೆದ ಘಟನೆ ಯಾರೂ ಮರೆಯುವಂತಿಲ್ಲ. ಕಾರು ಕೆಳಸೇತುವೆಯ ಮಳೆ ನೀರಿನಲ್ಲಿ ಸಿಲುಕಿ ನಡು ರಸ್ತೆಯಲ್ಲಿ ಆಚೆ ಬರಲಾಗದೆ ಓರ್ವ ಮಹಿಳೆಯ ಪ್ರಾಣ ಹೊರಟು ಹೋಯಿತು. ಇದಕ್ಕೆ ನೂರು ಜನ ನೂರೆಂಟು ಕಾರಣಗಳನ್ನು ಹೇಳೆಬಹುದು. ಸರ್ಕಾರಗಳನ್ನು, ವ್ಯವಸ್ಥೆಯನ್ನು ಟೀಕಿಸಬಹುದು. ಆದರೆ ನಮ್ಮ ದೇಶದಲ್ಲಿ ವಿಪತ್ತು ಕಾಲದಲ್ಲಿ ನಮ್ಮ ಸುರಕ್ಷೆ ಮತ್ತು ದೇಶವಾಸಿಗಳ ಸುರಕ್ಷೆ ಹೇಗೆ ಮಾಡಿಕೊಳ್ಳಬೇಕು, ಮಾಡಬೇಕು ಎಂಬುದರ ಬಗ್ಗೆ ಸರ್ಕಾರದ ವತಿಯಿಂದಾಗಲಿ, ಸರ್ಕಾರೇತರ ಸಂಸ್ಥೆಗಳಿಂದಾಗಲಿ, ಜನಸಾಮಾನ್ಯರಿಂದಾಗಲಿ ಒಂದು ನಿರ್ದಿಷ್ಟ ಜಾಗೃತಿ ಅಭಿಯಾನವಾಗಲಿ, ತರಬೇತಿ ಶಿಬಿರಗಳಾಗಲಿ ನಡೆದಿಲ್ಲ, ನಡೆಯುತ್ತಿಲ್ಲ. ನಡೆದರೂ ಅದರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ.
ಪ್ರವಾಹ ಪೀಡಿತರು, ಭೂಕಂಪಕ್ಕೆ ಸಿಲುಕಿಕೊಂಡವರು ಯಾವ ರೀತಿ ಒದ್ದಾಡುತ್ತಾರೆ ಎಂಬುವುದನ್ನು ವೀಡಿಯೊಗಳ ಮುಖಾಂತರ ನಾವು ನೋಡಿದ್ದೇವೆ. ಆದರೆ ಅದರಿಂದ ಪಾರಾಗಲು ಕಟ್ಟೆಚ್ಚರಗಳು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನಾವು ಹೆಚ್ಚಿನ ಗಮನ ಹರಿಸುವುದಿಲ್ಲ. ಅನಾಹುತಗಳಿಂದ ಜನರನ್ನು ರಕ್ಷಿಸುವುದಿರಲಿ ಸತ್ತವರ ಮೈಮೇಲಿರುವ ಚಿನ್ನಾಭರಣಗಳನ್ನು ಮತ್ತು ಅವರ ವಸ್ತುಗಳನ್ನು ಕದಿಯುವುದರಲ್ಲಿ ತೊಡಗಿರುವ ದೃಶ್ಯಗಳನ್ನು ಸಹ ನಾವು ನೋಡಿರುವುದುಂಟು. ೨೦೧೩ರ ಕೇದಾರನಾಥ ಪ್ರವಾಹ ಇದಕ್ಕೆ ಸಾಕ್ಷಿಯಾಯಿತು. ಹೋದ ವರ್ಷ ರಾಮನಗರದಲ್ಲಿ ಮಳೆ ನೀರು ಮನೆಗಳಲ್ಲಿ ೧೦ ಅಡಿಗಳಷ್ಟು ಎತ್ತರವಾಗಿ ತುಂಬಿಕೊಂಡು ಜನರು ಪರದಾಡಿದ್ದು ಸಹ ನಾವು ಗಮನಿಸಿದ್ದೇವೆ. ಬೆಂಗಳೂರಿನಂತಹ ನಗರದಲ್ಲಿ ವೈಟ್ ಫೀಲ್ಡ್ ಏರಿಯಾದಲ್ಲಿ ಜನರು ಬೀದಿಗಳಲ್ಲಿ ಬೋಟ್ ಉಪಯೋಗಿಸಬೇಕಾಯಿತು. ಐ.ಟಿ. ಕಂಪನಿಗಳಿಗೆ ರಜೆ ಘೋಷಿಸಲಾಯಿತು. ನಮಗೆ ಮತ್ತು ನಮ್ಮ ಸರ್ಕಾರಗಳಿಗೆ ಇನ್ನೂ ಬುದ್ಧಿ ಬಂದಿಲ್ಲವೆಂದರೆ ಅದರಲ್ಲಿ ತಪ್ಪೇನಿಲ್ಲ. ಇನ್ನೊಂದು ಅವಘಡಕ್ಕೆ ಕಾದು ಕುಳಿತಿದ್ದೇವೆಯೇನೋ..!
ಗೃಹರಕ್ಷಕ ದಳ, ಎನ್.ಸಿ.ಸಿ, ಎನ್.ಡಿ.ಆರ್.ಎಫ್. (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ), ಎಸ್.ಡಿ.ಆರ್.ಎಫ್., ಮತ್ತು ಶ್ವಾನ ದಳ ಯಾವ ರೀತಿ ತರಬೇತಿಯನ್ನು ಪಡೆದುಕೊಳ್ಳುತ್ತದೋ, ಸಾಮಾನ್ಯ ಜನರಿಗೆ ತುರ್ತುಪರಿಸ್ಥಿಗಳು ಎದುರಾದಾಗ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬುದನ್ನು ಸುರಕ್ಷತಾ ತರಬೇತಿಗಳನ್ನು ಏರ್ಪಡಿಸಿ ಹೇಳಿಕೊಡಬೇಕು. ಜಾಗೃತಿ ಮೂಡಿಸಬೇಕು. ಗಾಯಾಳುಗಳನ್ನು ಹೇಗೆ ಎತ್ತಿಕೊಂಡು ಹೋಗಬೇಕು ಎಂಬುದು ಸಹ ನಮಗೆ ಬರುವುದಿಲ್ಲ. ಪ್ರಥಮ ಚಿಕಿತ್ಸೆ ಬಗ್ಗೆ ಕೆಲವರಿಗೆ ಗೊತ್ತೇ ಇಲ್ಲ.
ಪ್ರತಿ ಅಪಾರ್ಟ್ಮೆಂಟುಗಳಲ್ಲಿ CERT – ಸಮುದಾಯ ತುರ್ತು ಪ್ರತಿಕ್ರಿಯೆ ತಂಡ ಇರಬೇಕು. ಪ್ರತಿ ಮಂದಿರ ಮಸೀದಿ ಚರ್ಚುಗಳಲ್ಲಿ CERT ದಳ ಸಿದ್ಧಪಡಿಸಬೇಕು. ನಾಗರಿಕರ ಸುರಕ್ಷೆ ಹೇಗೆ ಮಾಡಬೇಕು ಎಂಬುದನ್ನು ಕಲಿತಿರಬೇಕು. ಕರೋನ ಕಾಲದಲ್ಲಿ ವೈದ್ಯರ ಸಹಾಯವಿಲ್ಲದೆ ಆಕ್ಸಿಜನ್ ಸಿಲಿಂಡರ್ಗಳನ್ನು ಮನೆಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಕಲಿತುಕೊಳ್ಳಲಿಲ್ಲವೇ ? ಅಭಿದಮನಿ ಇಂಜೆಕ್ಷನ್ ಹೇಗೆ ಕೊಡುವುದು ಎಂಬುವುದನ್ನು ಕಲಿತುಕೊಳ್ಳಲಿಲ್ಲವೇ ? ವ್ಯವಸ್ಥಿತವಾಗಿ ಅನ್ನದಾನ ಹೇಗೆ ಮಾಡುವುದು ಎಂಬುದನ್ನು ಸಹ ಕಲಿತುಕೊಳ್ಳಲಿಲ್ಲವೇ ? ವ್ಯವಸ್ಥಿವಾಗಿ ಮಾಡದೇ ಹೋಗಿದಿದ್ದರೆ ಕಾಲು ತುಳಿತಕ್ಕೇ ಎಷ್ಟೋ ಜನರು ಸತ್ತು ಹೋಗುವುದುಂಟು. ಮನಸ್ಸು ಮಾಡಿದರೆ ನಾಗರಿಕರು ಏನು ಬೇಕಾದರೂ ಕಲಿತುಕೊಳ್ಳಬಹುದು.
ಬೀದಿ ಯಲ್ಲಿ ಕೊಲೆ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನೆ ನಿಂತಿರುತ್ತೇವೆ. ಹತ್ತಿರದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಸಹ ನಮಗೆ ಗೊತ್ತಿರುವುದಿಲ್ಲ. ಬೆಂಕಿ ಹೊತ್ತು ಉರಿಯುತ್ತಿದ್ದರೂ ಅಗ್ನಿ ಶಾಮಕ ದಳಕ್ಕೆ ಕರೆಯುವುದರಲ್ಲಿ ತಡ ಮಾಡುತ್ತೇವೆ. ಅನೇಕ ದುರಂತಗಳನ್ನು ತಪ್ಪಿಸಬಹುದು ಅದಕ್ಕೆ ಜಾಗ್ರತೆ ಮತ್ತು ಮುಂದಾಳತ್ವ ಬಹಳ ಮುಖ್ಯ. ಮೊಹಲ್ಲಾ ಕ್ಲಿನಿಕ್ ಮಾಡಬಹುದು, ಇಂದಿರಾ ಕ್ಯಾಂಟೀನ್ ಮಾಡಬಹುದು, ಮೊಹಲ್ಲಾ ಸಿ.ಇ.ಆರ್.ಟಿ. ತಂಡ ಮಾಡಲು ಏಕೆ ಸಾಧ್ಯವಿಲ್ಲ. ಇದನ್ನು ಸರ್ಕಾರವೇ ಮಾಡಬೇಕೆಂದೇನಿಲ್ಲ. ಬಡಾವಣೆಗಳ ಗುರುಹಿರಿಯರು, ಯುವಕರು ಸೇರಿ ಮಾಡಬಹುದು. ನಂತರ ಸರ್ಕಾರದಿಂದ ಸಹಾಯ ಪಡೆದುಕೊಳ್ಳಬಹುದು. ಬಡಾವಣೆಗಳಲ್ಲಿ ನಾಗರಿಕರ ಸುರಕ್ಷತಾ ದಳ ಸೃಷ್ಟಿಯಾದರೆ ಜನರಲ್ಲಿ ಒಂದು ಧೈರ್ಯ ಬರುತ್ತದೆ. ಅಪಾರ್ಟ್ಮೆಂಟುಗಳಲ್ಲಿ ಜನರು ಜೀವಂತವಾಗಿ ಸುಟ್ಟು ಕರಕಲು ಆಗುತ್ತಿದ್ದರೆ ಜನರು ಸಿನಿಮಾ ವೀಕ್ಷಿಸುವ ಹಾಗೆ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು ನಿಂತಿರುತ್ತಾರೆ.
ಏಕೆಂದರೆ ಸುರಕ್ಷೆ ಮಾಡುವ “ಸಾಮಾನ್ಯ” ತರಬೇತಿಯೂ ಸಹ ಅವರಿಗೆ ಇರುವುದಿಲ್ಲ. ಯಾವ ಅಪಾರ್ಟ್ಮೆಂಟುಗಳಲ್ಲಿ ಸುರಕ್ಷತೆಗೆ ಸಂಬಂಧಪಟ್ಟ ಸಾಮಗ್ರಿಗಳು ಇರುವುದಿಲ್ಲವೋ ಅವರಿಗೆ ದಂಡ ವಿಧಿಸಿ, ಕೆಲವು ಮಾನದಂಡಗಳನ್ನು ಮಾಡಬೇಕು. ಮಕ್ಕಳಿಗೆ ಈಜು ಕಲಿಸಿ ಎಂದರೆ ಅವರು ಎಲ್ಲಿ ಹೋಗಿ ಈಜಾಡಬೇಕು ಬಿಡ್ರಿ ಅಂತಾರೆ. ಹೆಂಗಸರು ಈಜು ಕಲಿಯಬಾರದು ಎಂದು ಯಾವುದಾದರು ಪುರಾಣದಲ್ಲಿದೆಯೇ ? ಸ್ವರಕ್ಷಣೆ ಮಾಡಿಕೊಳ್ಳಲು ಆಗದೇ ಇರುವವರು ಬೇರೆಯವರ ಪ್ರಾಣ ಕಾಪಾಡುತ್ತಾರೆಯೇ ? ನಮ್ಮ ರಕ್ಷಣೆ, ನಮ್ಮ ನೆರೆಹೊರೆಯವರ ರಕ್ಷಣೆ ಮಾಡಿಕೊಳ್ಳಲು ನುರಿತ ಸೈನಿಕರೇ ಆಗಬೇಕೆಂದೇನಿಲ್ಲ. ಸಾಮಾನ್ಯ ತರಬೇತಿಗಳಿಂದ ನೂರಾರು ನಿಸ್ಸಹಾಯಕ ಜನರ ಪ್ರಾಣ ಉಳಿಸಬಹುದು ಅಷ್ಟೇ ನನ್ನ ಮಾತಿನ ತಾತ್ಪರ್ಯ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.