(www.vknews.in) : ಶೈಕ್ಷಣಿಕ ವರ್ಷದ ಆರಂಭದಲ್ಲಿ ಎಲ್ಲಾ ಶಾಲೆಗಳಲ್ಲಿ ನಡೆಯುವುವಂತೆ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಕೂಡ ವಿದ್ಯಾರ್ಥಿಗಳ ಮತದಾನ ನಡೆಯಿತು. ಆದರೆ ಇಲ್ಲಿ ನಡೆದ ಮತದಾನದ ಪ್ರಕ್ರಿಯೆ ವಿಧಾನಸಭೆಯ ಚುನಾವಣೆಯ ರೀತಿಯಲ್ಲಿದ್ದು ,ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸುವ ಜೊತೆಗೆ ಮತದಾನ ಮಾಡುವ ಕ್ರಮವನ್ನು ಕೂಡ ವಿವರವಾಗಿ ತೋರಿಸಕೊಟ್ಟಿದೆ. ಪಂಚಾಯತ್, ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯ ಸಮಯದಲ್ಲಿ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸುವಾಗ ನಮ್ಮ ವಿದ್ಯಾರ್ಥಿಗಳಿಗೂ ಈ ಬಗ್ಗೆ ಕುತೂಹಲವಿರಬಹುದು. ಅದನ್ನೆಲ್ಲವನ್ನೂ ಬಗೆ ಹರಿಸುವ ನಿಟ್ಟಿನಲ್ಲಿ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಈ ಪ್ರಕ್ರಿಯೆ ಸಹಕಾರಿಯಾಗಲಿದೆ.
ವಿಧಾನಸಭಾ ಚುನಾವಣೆಯಂತೆ ನಾಮಪತ್ರ ಸಲ್ಲಿಸುವಿಕೆ,ಹಿಂತೆಗೆಯಲು ದಿನ ನಿಗದಿ, ಅಭ್ಯರ್ಥಿಗಳಿಗೆ ಚಿಹ್ನೆ, ಮತ ಪ್ರಚಾರ ,ಮತಯಂತ್ರದ ಮೂಲಕ ಮತ ಚಲಾವಣೆ,ಮುಖ್ಯ ಚುನಾವಣಾಧಿಕಾರಿಗಳಾಗಿ ಮುಖ್ಯ ಶಿಕ್ಷಕರು,ಮತದಾನ ಕೇಂದ್ರಾಧಿಕಾರಿಗಳಾಗಿ ವಿವಿಧ ಶಿಕ್ಷಕರು,ಪೊಲೀಸ್ ಮತ್ತು ಸೈನಿಕರಾಗಿ ಹಿರಿಯ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುವ ಮೂಲಕ ನೈಜ ಚುನಾವಣೆಯ ಚಿತ್ರಣವನ್ನು ಕಣ್ಣ ಮುಂದಿರಿಸಿದ್ದರು.
ಇಲ್ಲಿ ಹನ್ನೆರಡು ತರಗತಿಗಳನ್ನು ಹನ್ನೆರಡು ಮತ ಕ್ಷೇತ್ರಗಳನ್ನಾಗಿ ವಿಂಗಡಿಸಿ ಪ್ರತೀ ಕ್ಷೇತ್ರಗಳಿಗೂ ಅಂಬೇಡ್ಕರ್ ನಗರ,ಆಝಾದ್ ನಗರ ,ಗಾಂಧಿ ನಗರ ಎಂದು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನೀಡಲಾಗಿತ್ತು. ಹಾಗೆಯೇ ನ್ಯಾಯ ಪಕ್ಷ,,ಸ್ವಾತಂತ್ರ್ಯ ಪಕ್ಷ, ಸಂವಿಧಾನ ಪಕ್ಷ ಹಾಗೂ ಸಮತಾ ಪಕ್ಷ ಎಂಬ ನಾಲ್ಕು ಪಕ್ಷಗಳನ್ನಾಗಿ ಮಾಡಲಾಗಿತ್ತು.ಸ್ಪಷ್ಟ ಬಹುಮತಕ್ಕೆ ಏಳು ಸ್ಥಾನಗಳನ್ನು ಪಡೆಯಬೇಕೆಂಬ ನಿಯಮ ಮಾಡಲಾಗಿತ್ತು.
ಮತ ಎಣಿಕೆಯ ನಂತರ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡಿ,ಆ ಬಳಿಕ ಮಂತ್ರಿಮಂಡಲ ರಚಿಸಿ ವಿವಿದ ಖಾತೆಗಳನ್ನು ಹಂಚಿ ನೂತನ ನಾಯಕ ಹಾಗೂ ಮಂತ್ರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ಸಂವಿಧಾನಿಕ ವ್ಯವಸ್ಥೆಯ ಪರಿಚಯ ಮಾಡಲಾಗುತ್ತಿದೆ. ನಾಯಕನ ಜವಾಬ್ದಾರಿ ಹಾಗೂ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದೇ ರೀತಿ ಸ್ಪೀಕರ್ ನ್ನು ನೇಮಿಸಿ ಅವರಿಂದ ಕಲಾಪ ನಡೆಸಲಾಗಿದೆ.ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿ,ಆಡಳಿತ ವರ್ಗದವರ ಕಾರ್ಯವೈಖರಿಯಲ್ಲಿ ಲೋಪ ಕಂಡರೆ ಆ ನಾಯಕನ ಜವಾಬ್ದಾರಿ ಏನೆಂಬುದನ್ನೂ ತಿಳಿಸಲಾಗಿದೆ.
ಬೇರೆ ಶಾಲೆಗಳಲ್ಲಿ ಮತದಾನ ನಡೆದು ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡುವ ಕ್ರಮ ಇದೆಯಾದರೂ, ಸಂಪೂರ್ಣವಾಗಿ ವಿಧಾನಸಭೆಯ ಚುನಾವಣೆಯನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟು ಅವರಿಗೆ ರಾಜಕೀಯ ವ್ಯವಸ್ಥೆಯನ್ನು ಪರಿಚಯಿಸಿ ಎಳೆ ಮನಸ್ಸುಗಳಿಗೆ ನಾಯಕತ್ವ ಗುಣ,ಮತದಾನದ ಮಹತ್ವವನ್ನು ತಿಳಿಸುವ ರೀತಿ ನಾನು ಕಂಡಂತೆ ಇದೇ ಪ್ರಥಮ ಎನ್ನಬಹುದಾಗಿದೆ.
✍️ ಅಬೂಬಕರ್ ಅನಿಲಕಟ್ಟೆ ವಿಟ್ಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.