ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಹಾಗಾಗಿ ದ್ವೇಷದ ರಾಜಕಾರಣವನ್ನು ಮಾಡಲು ಹೊರಟಿದ್ದಾರೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಬಿಜೆಪಿ ಪಕ್ಷ ಇದರ ವಿರುಧ್ಧ ಅ.03 ರಂದು ಕೋಲಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಶಿಡ್ಲಘಟ್ಟ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.
ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾಸೌಧ ಕಚೇರಿಯಲ್ಲಿ ಸುಧ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರವನ್ನು ರಾಜ್ಯದ ಅಭಿವೃದ್ದಿಗಾಗಿ ಜನ ಸಾಮಾನ್ಯರ ಹಿತಕ್ಕಾಗಿ ಬಳಸಿಕೊಳ್ಳಿ. ಅದು ಬಿಟ್ಟು ಅಧಿಕಾರ ಇದೆ ಎಂದು ದ್ವೇಷ ರಾಜಕಾರಣ ಮಾಡಲು ಮುಂದಾದರೆ, ಮತದಾರರು ಮುಂದಿನ ಸಂಸತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ದೂರವೇನಿಲ್ಲ ಎಂದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಇದ್ದಾಗ ತಗ್ಗಿ ಬಗ್ಗಿ ನಡೆಯಬೇಕೆಂದು ಅವರು ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದರಲ್ಲದೆ ಕೋಲಾರದಲ್ಲಿ ಇತ್ತೀಚೆಗೆ ನಡೆದ ಜನತಾ ದರ್ಶನದಲ್ಲಿ ಕಾಂಗ್ರೆಸ್ಸಿಗರ ನಿಜವಾದ ಮುಖ ದರ್ಶನವಾಗಿದೆ. ಅವರ ಮತ್ತೊಂದು ಮುಖ ಜನ ಸಾಮಾನ್ಯರ ಎದುರು ಬಹಿರಂಗಗೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ದಬ್ಬಾಳಿಕೆಯನ್ನು ಖಂಡಿಸಿದರು.
ಸಂಸದ ಎಸ್.ಮುನಿಸ್ವಾಮಿ ಅವರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಅಕ್ಟೋಬರ್ 3ರಂದು ಮಂಗಳವಾರ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿ ರಾಜ್ಯದ ಪ್ರಮುಖರು, ಜಿಲ್ಲಾ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಶಿಡ್ಲಘಟ್ಟದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುಧ್ಧಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಬಿಜೆಪಿ ಯುವ ಮುಖಂಡ ಸೀಕಲ್ ಆನಂದಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಿ.ಸಿ.ನಂದೀಶ್, ಜಿಲ್ಲಾ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಕೆ.ಎಸ್.ಕನಕಪ್ರಸಾದ್, ತಾಪಂ ಮಾಜಿ ಸದಸ್ಯ ಅರಿಕೆರೆ ಮುನಿರಾಜು, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.