(www.vknews. in) ; ಯಕೃತ್ತು ನಮ್ಮ ದೇಹದ ಎರಡನೇ ಅತಿ ದೊಡ್ಡ ಅಂಗ. ಚರ್ಮ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು ದೇಹದ ರಕ್ಷಣೆಯ ಪ್ರಥಮ ಅಂಗವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಯಕೃತ್ತು ಇದ್ದು, ದೇಹದ ತೂಕಕ್ಕನುಗುಣವಾಗಿ 2 ರಿಂದ 2.5 ಕಿಲೋ.ಗ್ರಾಂನಷ್ಟು ತೂಕವಿರುತ್ತದೆ. ನಮ್ಮ ದೇಹದ ಅತಿ ಅವಿಬಾಜ್ಯ ಅಂಗವಾಗಿರುವ ಈ ಯಕೃತ್ತುನ್ನು ‘ಲಿವರ್’ ಎಂದೂ ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ.
ನಮ್ಮ ದೇಹದ ಎಲ್ಲಾ ರಕ್ಷಣಾಕಾರ್ಯ, ಪಚನಕಾರ್ಯ, ಜೀರ್ಣ ಪ್ರಕ್ರಿಯೆ, ರಕ್ತ ಹೆಪ್ಪುಗಟ್ಟುವಿಕೆ, ಕಿಣ್ವಗಳ ಉತ್ಪಾದನೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಯಕೃತ್ತಿನದ್ದೇ ಮೇಲುಸ್ತುವಾರಿ ಆಗಿರುತ್ತದೆ. ಈ ಯಕೃತ್ ಒಂದು ರೀತಿಯಲ್ಲಿ ಮೆಸ್ತ್ರಿ ಇದ್ದಂತೆ. ಯಕೃತ್ ತನ್ನ ಕಾರ್ಯವೆಸಗದೆ ಚಳವಳಿ ಹೂಡಿದಲ್ಲಿ ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳೂ ನಿಂತು ಹೋಗಿ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಅದುವೇ ನಮ್ಮ ಯಕೃತ್ತಿನ ತಾಕತ್ತು ಮತ್ತು ಕರಾಮತ್ತು. ಹತ್ತು ಹಲವು ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಈ ಯಕೃತ್ತು, ನಮ್ಮ ಜೀವ ಜಗತ್ತಿನ ಒಂದು ವಿಸ್ಮಯ ಎಂದರೂ ತಪ್ಪಾಗಲಿಕ್ಕಿಲ್ಲ.
ಯಕೃತ್ತಿನ ರಚನೆ :-
ಯಕೃತ್ತು ಎಂಬ ಅಂಗ ನಮ್ಮ ಕಿಬ್ಬೊಟ್ಟೆಯ ಮೇಲ್ಭಾಗದ ಬಲಗಡೆಯಲ್ಲಿ ಇದೆ. ಇದರ ಮೇಲೆ ವಫೆ ಇರುತ್ತದೆ. ಗಾತ್ರದಲ್ಲಿ ಸುಮಾರು 25 ರಿಂದ 27 ಸೆ.ಮಿ ಅಗಲ, 15 ರಿಂದ 18 ಸೆ.ಮಿ ಎತ್ತರ ಹಾಗೂ 10 ರಿಂದ 13 ಸೆ.ಮಿ ಮುಂದಿನಿಂದ ಹಿಂದಕ್ಕೆ ಅಳತೆ ಮಾಡಿದಾಗ ಇರುತ್ತದೆ. ಕೆಂಪು ಮಿಶ್ರಿತ ಕಂದು ಬಣ್ಣದ ಈ ಅಂಗ ಸುಮಾರು ಮೆತ್ತಗಿರುತ್ತದೆ. ತುಂಬ ಗಡುಸಾಗಿಯೂ ಇರುವುದಿಲ್ಲ, ಬಲಹಾಲೆ ಮತ್ತು ಎಡಹಾಲೆ ಅಥವಾ ಲೋಬ್ ಎಂದು ಪ್ರತ್ಯೇಕಿಸಲ್ಪಟ್ಟದ್ದು, ಇದರ ಸುತ್ತಲೂ ಬಲಯುತವಾದ ನಾರುಯುಕ್ತ ಕವಚ ಇರುತ್ತದೆ.
ಯಕೃತ್ತು ತುಂಬಾ ಜಟಿಲವಾದ ಮತ್ತು ಸಂಕೀರ್ಣವಾದ ಅಂಗವಾಗಿದ್ದು ಬಹಳಷ್ಟು ರಕ್ತನಾಳಗಳಿಂದ ಕೂಡಿದೆ. ಯಕೃತ್ತಿನಲ್ಲಿರುವ ರಕ್ತ ಪ್ರಸರಣ ಮತ್ತು ಇತರ ಪ್ರಸರಣ ಪ್ರಕ್ರಿಯೆ ಇತರ ಅಂಗಗಳಿಗಿಂತ ವಿಭಿನ್ನವಾಗಿದೆ. ಯಕೃತ್ತ್ ಹೆಪಾಟಿಕ್ ರಕ್ತನಾಳಗಳಿಂದ 25 ಶೇಕಡ ಮತ್ತು 75 ಶೇಕಡಾ ರಕ್ತವನ್ನು ಮುಖ್ಯ ರಕ್ತನಾಳಗಳಿಂದ ಪಡೆಯುವುದು. ಈ ರಕ್ತವು ಜೀರ್ಣವಾಗಲು ಬೇಕಾದ ಪೋಷಕತ್ವಗಳನ್ನು ಹೊಂದಿರುತ್ತದೆ. ಒಟ್ಟಿನಲ್ಲಿ ಯಕೃತ್ತ್ ಒಂದು ರಾಸಾಯನಿಕ ಕಾರ್ಖಾನೆಯಾಗಿದ್ದು ದೇಹಕ್ಕೆ ಸೇರಿದ ಆಹಾರವನ್ನು ಪರಿಷ್ಕರಿಸಿ, ಶುದ್ಧಿಕರಿಸಿ ಉಪಯೋಗಿಸಿಕೊಂಡು ಉಳಿದ ತ್ಯಾಜ್ಯವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
ಯಕೃತ್ತಿನ ಕಾರ್ಯವೇನು?
ಯಕೃತ್ತ್ ನಮ್ಮ ದೇಹದ ಅತ್ಯಂತ ಅವಿಭಾಜ್ಯ ಅಂಗ. ಜೀರ್ಣ ಪ್ರಕ್ರಿಯೆ, ರಕ್ಷಣಾ ಕಾರ್ಯ ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಯಕೃತ್ತ್ ಯಜಮಾನಿಕೆ ವಹಿಸುತ್ತದೆ.
1. ದೇಹದೊಳಗಡೆ ಸೇರಿದ ಎಲ್ಲಾ ಆಹಾರ ಪದಾರ್ಥಗಳನ್ನು ಸಂಸ್ಕರಿಸುತ್ತದೆ. ನಾವು ಸೇವಿಸಿದ ಆಹಾರವನ್ನು ಗುರುತಿಸಿ ಅದರಲ್ಲಿ ಹೀರಬೇಕಾದ ಅಂಶಗಳನ್ನು ಹೀರಿಕೊಂಡು, ಅನಗತ್ಯವಾದ ವಿಷಕಾರಕವಾದ ವಸ್ತುಗಳನ್ನು (ಉದಾ : ಕೆಫೇನ್ ನಿಕೋಟಿನ್) ವಿಸರ್ಜಿಸಿ, ದೇಹದ ಫಿಲ್ಟರ್ನಂತೆ ಕೆಲಸ ಮಾಡುತ್ತದೆ. ನಮ್ಮ ದೇಹದ ಅತಿ ದೊಡ್ಡ ಫಿಲ್ಟರ್ ಎಂದರೆ ಯಕೃತ್ತ್ ಎಂದರೂ ತಪ್ಪಾಗಲ್ಲಿಕ್ಕಿಲ್ಲ.
2. ದೇಹದ ರಕ್ಷಣೆಗೆ ಬೇಕಾದ ಎಲ್ಲ ರೀತಿಯ ಪ್ರೋಟೀನ್ಗಳನ್ನು ಯಕೃತ್ತ್ ತಯಾರಿಸುತ್ತದೆ. ಅದೇ ರೀತಿ ಜೀರ್ಣ ಪ್ರಕ್ರಿಯೆಗೆ ಬೇಕಾದ ಕಿಣ್ಣಗಳನ್ನೂ ಉತ್ಪಾದಿಸುತ್ತದೆ. ದೇಹದ ರಕ್ತ ಹೆಪ್ಪುಗಟ್ಟಲು ಅವಶ್ಯಕವಾದ 3, 5, 7, 9 ಎಂಬ ರಕ್ತ ಹೆಪ್ಪುಗಟ್ಟಲು ಕಾರಣವಾಗುವ ಅಂಶಗಳನ್ನು ಯಕೃತ್ತ್ ಉತ್ಪಾದಿಸುತ್ತದೆ. ಈ ಕಾರಣದಿಂದಲೇ ಯಕೃತ್ತಿನ ತೊಂದರೆಯಿಂದ ಬಳಲುವವರಿಗೆ ಹೆಚ್ಚು ರಕ್ತಸ್ರಾವವಾಗುವ ಸಾಧ್ಯತೆ ಇದೆ ಮತ್ತು ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ರೀತಿ ಯಕೃತ್ತ್ ನಮ್ಮ ದೇಹದೊಳಗಿನ ಒಂದು ರಾಸಾಯನಿಕ ಕಾರ್ಖಾನೆ ಎಂದರೂ ತಪ್ಪಲ್ಲ.
3. ಮೆದೋಜಿರಕ ಗ್ರಂಥಿ (Pancreas), ಜಠರ, ಸಣ್ಣ ಕರುಳು, ಪ್ಲೀಹ (Spleen) ಗಳಿಂದ ಬಂದ ರಕ್ತವೂ ಪೋರ್ಟಲ್ ರಕ್ತನಾಳದಲ್ಲಿ ಕೂಡಿಕೊಳ್ಳುತ್ತದೆ. ಸಣ್ಣ ಕರುಳಿನಲ್ಲಿ ಹೀರಲ್ಪಟ್ಟ ಎಲ್ಲಾ ಆಹಾರವೂ ಮೊದಲು ಬರುವುದು ಯಕೃತ್ತಿಗೆ. ಇಲ್ಲಿ ಎಲ್ಲಾ ಪೋಷಕಾಂಶ ಹೀರಲ್ಪಡುತ್ತದೆ. ಒಟ್ಟಿನಲ್ಲಿ ಸಣ್ಣ ಕರುಳಿನಲ್ಲಿ ಹೀರಲ್ಪಟ್ಟ ಎಲ್ಲಾ ಅಂಶಗಳನ್ನು ಕೆಲಸಕ್ಕೆ ಬರುವಂತೆ ಮಾಡುವುದು ಯಕೃತ್ತಿನ ಮಹಿಮೆ. ಆಹಾರದಲ್ಲಿನ ಪರಕೀಯ ಸತ್ವಗಳನ್ನು ಜೀರ್ಣಿಸಿ, ಅನುಕೂಲಕರವಾಗಿ ಪರಿರ್ವತಿಸಿ ದೇಹಕ್ಕೆ ಸೇರುವಂತೆ ಮಾಡುತ್ತದೆ.
4. ಪಿತ್ತರಸದ ಉತ್ಪಾದನೆ ಯಕೃತ್ತಿನ ಮತ್ತೊಂದು ಬಹುದೊಡ್ಡ ಕೆಲಸ. ದಿನನಿತ್ಯ 400 ರಿಂದ 500 ಮಿ.ಲೀನಷ್ಟು ಪಿತ್ತರಸವನ್ನು ನಮ್ಮ ಯಕೃತ್ತು ಉತ್ಪಾದಿಸುತ್ತದೆ. ನಾವು ತಿಂದ ಕೊಬ್ಬಿನಾಂಶವನ್ನು ಜೀರ್ಣಿಸಲು ಈ ಪಿತ್ತ ರಸ ಅತಿ ಅವಶ್ಯಕ. ಯಕೃತ್ತಿನಲ್ಲಿ ಉತ್ಪಾದನೆಗೊಂಡ ಈ ಪೈತ್ತರಸ, ಪಿತ್ತಾಶಯವನ್ನು (Gall Blader) ಸೇರಿ, ಬಳಿಕ ಸಣ್ಣ ಕರುಳಿನ ಮೊದಲ ಭಾಗ ಮುಂಗರುಳಿಗೆ ಅಥವಾ ಡುಯೋಡಿನಮ್ ಭಾಗಕ್ಕೆ, ಸಾಮಾನ್ಯ ಪೈತ್ತ ನಾಳದ ಮುಖಾಂತರ ಕಳಿಸುತ್ತದೆ. ಆ ಮೂಲಕ ಜೀರ್ಣ ಪ್ರಕ್ರಿಯೆಗೆ ಪೂರಕವಾದ ಕೆಲಸವನ್ನು ಯಕೃತ್ತ್ ಮಾಡುತ್ತದೆ. ಯಕೃತ್ತ್ ತುಂಬೆಲ್ಲಾ ಪಿತ್ತರಸದ ನಾಳಗಳಿಂದ ತುಂಬಿದ್ದು, ಇವು ಉತ್ಪತ್ತಿಯಾದ ಪಿತ್ತರಸವನ್ನು ಒಂದು ದೊಡ್ಡನಾಳಕ್ಕೆ ಕಳುಹಿಸುತ್ತದೆ. ಅದನ್ನು ಸಾಮಾನ್ಯ ಪಿತ್ತನಾಳ ಎಂದು ಕರೆಯುತ್ತಾರೆ.
5. ರಕ್ತದಲ್ಲಿ ಅಧಿಕವಿರುವ ಗ್ಲುಕೋಸ್ನ್ನು ಹೀರಿ, ಗ್ಲೈಕೋಜೆನ್ ಆಗಿ ಪರಿವರ್ತಿಸಿ ಶೇಖರಿಸುತ್ತದೆ. ನಮ್ಮ ದೇಹಕ್ಕೆ ಶಕ್ತಿಯ ಅವಶ್ಯಕತೆ ಇದ್ದಾಗ, ಯಕೃತ್ತು ಈ ಗ್ಲೆಕೋಜೆನ್ನನ್ನು ಗ್ಲುಕೋಸ್ನ್ನಾಗಿಸಿ ಪರಿವರ್ತಿಸಿ ರಕ್ತನಾಳಗಳ ಮೂಲಕ ಜೀವಕೋಶಗಳಿಗೆ ತಲುಪಿಸುತ್ತದೆ. ಒಟ್ಟಿನಲ್ಲಿ ನಮ್ಮ ದೇಹದ ಸಕ್ಕರೆಯ ಪ್ರಮಾಣದ ನಿಯಂತ್ರಣವನ್ನೂ ಮಾಡುವ ಅಂಗವೆಂದರೆ ಯಕೃತ್ತು.
6. ದೇಹಕ್ಕೆ ಸೇರಿದ ಆಹಾರದಲ್ಲಿನ ಕ್ಲಿಷ್ಟಕರವಾದ ಶರ್ಕರಪಿಷ್ಟಗಳನ್ನು ವಿಂಗಡಿಸಿ, ವಿಭಜಿಸಿ ಸುಲಭವಾಗಿ ಜೀರ್ಣಿಸುವ ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಅದೇ ರೀತಿ ನೈಟ್ರೊಜೆನ್ ಅಥವಾ ನಿರ್ಗಂಧ ವಾಯುವಿನಿಂದ ಕೂಡಿದ ದ್ರವ್ಯ ಪದಾರ್ಥಗಳನ್ನು ಉಪಯುಕ್ತ ಪದಾರ್ಥಗಳನ್ನಾಗಿ ಮಾರ್ಪಾಡು ಮಾಡುತ್ತದೆ. ಆಮ್ಲಗಳನ್ನು ಸಸಾರಜನಕವಾಗಿ ಪರಿವರ್ತಿಸುತ್ತದೆ. ಈ ಸಸಾರಜನಕವೆಂದರೆ ಅಲ್ಬುಮಿನ್ ಪೈಬ್ರಿನೋಜಿನ್, ಪ್ರೋತ್ರೊಂಬಿನ್, ಗ್ಲೂಬುಲಿನ್ ಇತ್ಯಾದಿ.
7. ಜೀರ್ಣ ಪಕ್ರಿಯೆಯಲ್ಲಿ ತಯಾರಿಸಲ್ಪಟ್ಟ ತ್ಯಾಜ್ಯಗಳಾದ ಬಿಲಿರುಬಿನ್ ಮತ್ತು ಬಿಲಿವರಿಡಿನ್ ಎಂಬ ಪಿತ್ತರಸ ರಾಸಾಯನಿಕ ವರ್ಣ ತಂತುಗಳನ್ನು ದೇಹದಿಂದ ಹೊರಹಾಕುವ ಮಹತ್ತರ ಹೊಣೆಗಾರಿಕೆ ಯಕೃತ್ತಿನ ಮೇಲಿದೆ. ಕಾರಣಾಂತರದಿಂದ ಯಕೃತ್ತಿನ ಕಾರ್ಯ ವೈಖರಿ ಕೆಟ್ಟು ಹೋದಲ್ಲಿ, ದೇಹದಲ್ಲಿ ಬಿಲಿವರ್ಡಿನ್ ಮತ್ತು ಬಿಲಿರುಬಿನ್ ಅಂಶ ಹೆಚ್ಚಾದಲ್ಲಿ ಅದನ್ನೇ ಜಾಂಡೀಸ್ ಅಥವಾ ಕಾಮಾಲೆ ರೋಗ, ಹಳದಿ ರೋಗ ಎಂದು ಕರೆಯುತ್ತಾರೆ.
8. ನಾವು ಸೇವಿಸಿದ ಯಾವುದೇ ಕಾಫಿ, ಟಿ, ಆಲ್ಕೋಹಾಲ್ ಅಥವಾ ಇನ್ನಾವುದೇ ಔಷಧಿಯ ಜೀರ್ಣ ಪ್ರಕ್ರಿಯೆಗೆ ಯಕೃತ್ತು ಅತೀ ಅವಶ್ಯಕ. ನಾವು ಸೇವಿಸಿದ ಔಷಧಿಯನ್ನು ವಿಭಜಿಸಿ, ವಿಂಗಡಿಸಿ ಹಾನಿಕಾರಕವಲ್ಲದ ರೀತಿಯ ಉತ್ಪನ್ನಗಳನ್ನಾಗಿಸಿ ದೇಹದಿಂದ ಹೊರ ಹಾಕುವ ಗುರುತರ ಜವಾಬ್ದಾರಿ ಯಕೃತ್ತಿನ ಮೇಲಿದೆ.
ಏನಿದು ಸಿರ್ಹೋಸಿಸ್?
ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಹೋದಲ್ಲಿ ಈ ಸನ್ನಿವೇಶವನ್ನು ಸಿರ್ಹೊಸಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಕೃತ್ತಿನಲ್ಲಿ ಹೆಪಾಟೋಸೈಟ್ ಎಂಬ ಜೀವಕೋಶಗಳು ತುಂಬಿರುತ್ತದೆ. ದಿನ ಬೆಳಗಾಗುವುದರಲ್ಲಿ ಈ ಯಕೃತ್ತಿಗೆ ಹಾನಿಯಾಗುವುದಿಲ್ಲ. ಸಾಮಾನ್ಯವಾಗಿ ಅತಿಯಾದ ಮಧ್ಯಪಾನ ಸೇವನೆ, ಹೆಪಟೈಟಿಸ್ ಸಿ ಮತ್ತು ಬಿ ಎಂಬ ಸೋಂಕು ಮತ್ತು ಅತಿಯಾದ ಔಷಧಿಗಳ ಸೇವನೆ ಮುಂತಾದ ಕಾರಣಗಳಿಂದ ಯಕೃತ್ತ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಬಹುದು.
ಈ ಹಂತದಲ್ಲಿ ಯಕೃತ್ತಿನ ತುಂಬ ಹೆಪಾಟೋಸೈಟ್ ಜೀವಕೋಶಗಳ ಬದಲಾಗಿ ಫೈಬ್ರಸ್ ಅಂಶಗಳು ತುಂಬಿಕೊಂಡು ಯಕೃತ್ತಿನ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ಅತಿಯಾದ ದೇಹದ ತೂಕ, ಸ್ಥೂಲಕಾಯ, ಮಧುಮೇಹ, ಅತಿಯಾದ ರಕ್ತದೊತ್ತಡ, ಅತಿಯಾದ ಕೊಬ್ಬಿನ ಶೇಖರಣೆ, ಅತಿಯಾದ ಅನಗತ್ಯ ಔಷಧಿ ಸೇವನೆ, ದೇಹದ ರಕ್ಷಣಾ ವ್ಯವಸ್ಥೆಯ ಮೇಲಿನ ಸ್ವಯಂ ದ್ವೇಷ ಮುಂತಾದ ಕಾರಣಗಳಿಂದಲೂ ಲಿವರ್ ಸಿರೋಸಿಸ್ ಕಾಯಿಲೆ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆಯೂ ಯಕೃತ್ತ್ ನಾರುಗಳಿಂದ ತುಂಬಿಕೊಂಡು ಆಲ್ಕೋಹಾಲ್ ರಹಿತ ಲಿವರ್ ಸಿರ್ಹೋಸಿಸ್ ಖಾಯಿಲೆಗೆ ತುತ್ತಾಗುತ್ತದೆ. ಆಂಗ್ಲಭಾಷೆಯಲ್ಲಿ ಸಿರ್ಹೋಸಿಸ್ ಖಾಯಿಲೆಗೆ ಕೊಬ್ಬು ತುಂಬಿದ ಯಕೃತ್ತು ಎಂದು ಕರೆಯುತ್ತಾರೆ.
ಈ ಕಾಯಿಲೆ ಬಂದಾಗ ವ್ಯಕ್ತಿ ವಿಪರೀತ ಬಳಲಿಕೆ, ಸುಸ್ತು, ಹಸಿವಿಲ್ಲದಿರುವುದು, ತುರಿಕೆ, ಕಾಲುಗಳು ಊದಿಕೊಳ್ಳುವುದು, ಹಳದಿ ಚರ್ಮ, ಹೊಟ್ಟೆಯ ಸುತ್ತ ನೀರು ತುಂಬಿಕೊಳ್ಳುವುದು, ಬೇಗನೆ ಗಾಯವಾಗುವುದು, ರಕ್ತ ಹೆಪ್ಪುಗಟ್ಟದಿರುವುದು, ಜೇಡರ ಬಲೆಯ ರೂಪದ ರಕ್ತನಾಳಗಳು ಹೊಟ್ಟೆಯ ಸುತ್ತು ಕಾಣಿಸಿಕೊಳ್ಳುವುದು, ಯಕೃತ್ತ್ ಊದಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರ ಸಲಹೆ ಅವಶ್ಯಕ.
ಮಧ್ಯಪಾನ ಸೇವನೆಯನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು. ಹೊಟ್ಟೆಯ ಸ್ಕ್ಯಾನ್ ಮತ್ತು ಕೂಲಂಕುಷವಾದ ದೇಹದ ಪರೀಕ್ಷೆ, ರಕ್ತ ಪರೀಕ್ಷೆ, ಲಿವರ್ ಕಾರ್ಯಕ್ಷಮತೆಯ ಪರೀಕ್ಷೆ, ಮತ್ತು ಯಕೃತ್ತ್ತಿನ ಬಯಾಪ್ಸಿ ಅಥವಾ ಸಣ್ಣ ತುಂಡನ್ನು ಕತ್ತರಿಸಿ ತೆಗೆದು ಸೂಕ್ತ ದರ್ಶಕ ಅಡಿಯಲ್ಲಿ ಅಧ್ಯಯನ ಮಾಡಿದಾಗ ‘ಸಿರ್ಹೋಸಿಸ್’ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಅತಿಯಾದ ಔಷಧಿ ಸೇವನೆ, ಅನಗತ್ಯವಾಗಿ ನೋವು ನಿವಾರಕಗಳ ಸೇವನೆಯಿಂದಲೂ ಯಕೃತ್ತಿಗೆ ಹಾನಿಯಾಗಿ, ತನ್ನ ಕಾರ್ಯ ಕ್ಷಮತೆಯನ್ನು ಕಳೆದುಕೊಂಡು, ವ್ಯಕ್ತಿಯ ಜೀರ್ಣ ಕ್ರಿಯೆ, ರಕ್ಷಣಾ ಕ್ರಿಯೆ ಮತ್ತು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಹೊಡೆತ ಬಿದ್ದು, ಮಾರಣಾಂತಿಕ ರೋಗವಾಗಿ ಪರಿಣಮಿಸುವ ಸಾಧ್ಯತೆಗಳೂ ಇದೆ.
ತಡೆಗಟ್ಟುವುದು ಹೇಗೆ?
1. ಮಧ್ಯಪಾನ ಮತ್ತು ಧೂಮಪಾನ ವಿರ್ಜಸಲೇಬೇಕು. ದಿನಕ್ಕೆ ಮೂರಕ್ಕಿಂತ ಜಾಸ್ತಿ ಪೆಗ್ ಹಾಕುವವರಿಗೆ ಲಿವರ್ ಸಿರ್ನೋಸಿಸ್ ಕಟ್ಟಿಟ್ಟ ಬುತ್ತಿ. 2. ಅನಗತ್ಯವಾಗಿ ಔಷಧಿ ಸೇವಿಸಬಾರದು. ನೋವು ನಿವಾರಕ ಔಷಧಿಯನ್ನು ಚಾಕಲೇಟ್ ರೀತಿಯಲ್ಲಿ ತಿನ್ನುವ ಖಯಾಲಿಗೆ ತಿಲಾಂಜಲಿ ಇಡಬೇಕು. ಅತೀ ಅಗತ್ಯವಿದ್ದಲ್ಲಿ ಮಾತ್ರ ಔಷಧಿಯನ್ನು ಸೇವಿಸತಕ್ಕದ್ದು. 3. ಹೆಪಟೈಟಿಸ್ B. ಮತ್ತು C. ರೋಗವನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟತಕ್ಕದ್ದು.
4. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗವನ್ನು ಯಾವತ್ತೂ ಹತೋಟಿಯಲ್ಲಿಡಬೇಕು. ಜೀವನಶೈಲಿ ಮಾರ್ಪಾಡು, ಆಹಾರ ಪದ್ಧತಿಯಲ್ಲಿನ ಸೂಕ್ತ ಮಾರ್ಪಾಡು ಮಾಡಿ, ಔಷಧಿಯ ನೆರವಿಲ್ಲದೆ ರೋಗ ನಿಯಂತ್ರಣದಲ್ಲಿಡಬೇಕು. 5. ದೇಹದಲ್ಲಿ ಅತೀ ಕೊಬ್ಬು ಶೇಕರಣೆಯಾಗದಂತೆ ನೋಡಿಕೊಳ್ಳಬೇಕು. ದೇಹದ ತೂಕದ ಮೇಲೆ ಸೂಕ್ತ ನಿಗಾ ಇಡಬೇಕು. ನಿಯಮಿತವಾದ ದೈಹಿಕ ವ್ಯಾಯಾಮ, ಬಿರುಸು ನಡಿಗೆ, ಈಜುವುದು ಮುಂತಾದ ಹವ್ಯಾಸಗಳು ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆ. 6. ಜಂಕ್ ಪುಡ್ ಅತಿಯಾದ ಕೆಫೇನ್ಯುಕ್ತ ಪಾನೀಯ ಮತ್ತು ರಾಸಾಯನಿಕಯುಕ್ತ ಪೇಯಗಳನ್ನು ವರ್ಜಿಸಬೇಕು. ಸಿದ್ಧ ಆಹಾರ ವರ್ಜಿಸಿ, ನೈಸರ್ಗಿಕ ಆಹಾರ ಸೇವಿಸತಕ್ಕದ್ದು. ಇಂಗಾಲಯುಕ್ತ ಪೇಯಗಳನ್ನು ವಿಸರ್ಜಿಸಿ, ಸ್ವಾಭಾವಿಕವಾದ ರಾಸಾಯನಿಕರಹಿತ ನೈಸರ್ಗಿಕ ಪೇಯನ್ನು ಸೇವಿಸುವುದು ಉತ್ತಮ.
ಕೊನೆಮಾತು
ಯಕೃತ್ತು ನಮ್ಮ ದೇಹದ ಅತ್ಯಂತ ಅವಿಭಾಜ್ಯ ಅಂಗ ಮತ್ತು ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳ ಕೇಂದ್ರಸ್ಥಾನ. ದೇಹದ ರಕ್ಷಣೆ, ಜೀರ್ಣ ಪ್ರಕ್ರಿಯೆ, ದಾಸ್ತಾನು ಕೇಂದ್ರ ಅಥವಾ ತುರ್ತು ಶೇಖರಣಾ ಉಗ್ರಾಣ ಮುಂತಾದ ಕೆಲಸವನ್ನು ಯಶ್ವಸಿಯಾಗಿ ಮಾಡುವ ಏಕೈಕ ಅಂಗ ಯಕೃತ್ತು. ಯಕೃತ್ತಿನ ತಾಕತ್ತನ್ನು ನಾವು ತಪ್ಪಾಗಿ ಅರ್ಥೈಸಿಕೊಂಡು ನಿರ್ಲಕ್ಷ ಮಾಡಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಕೃತಿಗೆ ವಿರುದ್ಧವಾಗಿ ಆಹಾರ ಸೇವನೆ ಮತ್ತು ಜೀವನಶೈಲಿ ಅಳವಡಿಸಿಕೊಂಡಲ್ಲಿ ಯಕೃತ್ತ್ತಿಗೆ ಹಾನಿಯಾಗಿ, ಯಕೃತ್ತು ಖಂಡಿತವಾಗಿಯೂ ತನ್ನ ಕರಾಮತ್ತನ್ನು ತೋರಿಸಿ, ತನ್ನ ಅಸ್ಥಿತ್ವದ ಮಹಿಮೆಯನ್ನು ಹತ್ತು ಹಲವು ರೂಪಗಳಿಗೆ ತೋರಿಸಿಕೊಡುವ ಸಾಧ್ಯತೆಯೂ ಇದೆ.
ಒಂದು ಹಂತದವರೆಗೆ ತನ್ನ ಮೇಲಿನ ದೌರ್ಜನ್ಯಗಳನ್ನು ಯಕೃತ್ತು ಮೆಟ್ಟಿ ನಿಂತು, ಹತ್ತು ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಏಕಕಾಲದಲ್ಲಿ ನಿರ್ವಹಿಸಬಹುದು ಆದರೆ ದೌರ್ಜನ್ಯದ ಮಿತಿ ಮೀರಿದಲ್ಲಿ ಯಕೃತ್ತು ತನ್ನ ಕಾರ್ಯ ದಕ್ಷತೆಯನ್ನು ಕಳಕೊಂಡಲ್ಲಿ, ಸಾವು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವೆಲ್ಲಾ ಏಚ್ಚೆತ್ತು ‘ನಮಗಿರುವುದೊಂದೇ ಯಕೃತ್ತು’ ಎಂಬ ಸತ್ಯದ ಅರಿವಿನಿಂದ, ಸಾತ್ವಿಕ ಜೀವನಶೈಲಿ ಅಳವಡಿಸಿಕೊಂಡಲ್ಲಿ ನೂರುಕಾಲ ಸುಖವಾಗಿ ಬದುಕಬಹುದು.
ಡಾ ಮುರಲೀ ಮೋಹನ್ ಚೂಂತಾರು BDS MDS DNB MBA MOSRCSEd Consultant oral and maxillofacial surgeon ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.