ಅಹಮದಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ಐದು ವರ್ಷಗಳಲ್ಲಿ ಗುಜರಾತ್ನಲ್ಲಿ ದೇಶದಲ್ಲೇ ಅತಿ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿವೆ. ಗುಜರಾತ್ನಲ್ಲಿ 80 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಇದೆ. ಮಹಾರಾಷ್ಟ್ರದಲ್ಲಿ 76 ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಇಲ್ಲಿ 41 ಜನರು ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟರು. ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ 40 ಮತ್ತು ಬಿಹಾರದಲ್ಲಿ 38 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ಅವರು ರಾಜ್ಯಸಭೆಯಲ್ಲಿ ಭಾರತದಲ್ಲಿ ಕಸ್ಟಡಿ ಸಾವಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರು ರಾಜ್ಯಸಭೆಯಲ್ಲಿ ಏಪ್ರಿಲ್ 1, 2017 ಮತ್ತು ಮಾರ್ಚ್ 31, 2022 ರ ನಡುವೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾದ ಕಸ್ಟಡಿ ಸಾವಿನ ವಿವರಗಳನ್ನು ಮಂಡಿಸಿದರು.
ಈ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಒಟ್ಟು 669 ಸಾವುಗಳು ವರದಿಯಾಗಿವೆ. 2017-2018ರಲ್ಲಿ 146, 2018-2019ರಲ್ಲಿ 136, 2019-2021ರಲ್ಲಿ 112, 2020-2021ರಲ್ಲಿ 100 ಮತ್ತು 2021-2022ರಲ್ಲಿ 175 ಪ್ರಕರಣಗಳು ವರದಿಯಾಗಿವೆ. 2017-18ರಲ್ಲಿ ಗುಜರಾತ್ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ 14 ಸಾವುಗಳು ಸಂಭವಿಸಿವೆ. 2018-19ರಲ್ಲಿ 13 ಸಾವುಗಳು, 2019-20ರಲ್ಲಿ 12 ಸಾವುಗಳು, 2020-21ರಲ್ಲಿ 17 ಸಾವುಗಳು ಮತ್ತು 2021-22ರಲ್ಲಿ 24 ಸಾವುಗಳು ವರದಿಯಾಗಿವೆ ಎಂದು ನಿತ್ಯಾನಂದ ತಿಳಿಸಿದ್ದಾರೆ.
ಒಂಬತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳನ್ನು ವರದಿ ಮಾಡಿದೆ. ದಿಲ್ಲಿಯಲ್ಲಿ 29 ಮಂದಿ ಕಸ್ಟಡಿಗಳ ಹೊಡೆತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ನೀಡಿರುವ ಮಾಹಿತಿಯ ಪ್ರಕಾರ 201 ಪ್ರಕರಣಗಳಲ್ಲಿ 5,80,74,998 ರೂ.ಗಳ ಆರ್ಥಿಕ ನೆರವು ಮತ್ತು ಒಂದು ಪ್ರಕರಣದಲ್ಲಿ ಶಿಸ್ತು ಕ್ರಮಕ್ಕೆ ಆಯೋಗ ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದರು.
ಮಹಾರಾಷ್ಟ್ರದಲ್ಲಿ 2017-18ರ ಅವಧಿಯಲ್ಲಿ 19 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. 2018-19ರಲ್ಲಿ 11, 2019-20ರಲ್ಲಿ ಮೂವರು, 2020-21ರಲ್ಲಿ 13 ಮತ್ತು 2021-22ರಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 2017-18ರಲ್ಲಿ 10 ಸಾವುಗಳು ವರದಿಯಾಗಿವೆ. 2018-19ರಲ್ಲಿ 12, 2019-2020ರಲ್ಲಿ 3, 2020-2021ರಲ್ಲಿ 8 ಮತ್ತು 2021-22ರಲ್ಲಿ 8 ಸಾವುಗಳು ವರದಿಯಾಗಿವೆ ಎಂದು ಅವರು ಹೇಳಿದರು. 2017-18ರಲ್ಲಿ ತಮಿಳುನಾಡಿನಲ್ಲಿ 11 ಕಸ್ಟಡಿ ಸಾವುಗಳು ಸಂಭವಿಸಿವೆ. 2018-19 ರಲ್ಲಿ 11 ಸಾವುಗಳು, 2019-20 ರಲ್ಲಿ 12, 2020-21 ರಲ್ಲಿ ಎರಡು ಸಾವುಗಳು ಮತ್ತು 2021-22 ರಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ.
ಬಿಹಾರದಲ್ಲಿ 2017-18ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಏಳು ಸಾವುಗಳು ವರದಿಯಾಗಿವೆ. 2018-19 ಮತ್ತು 2019-2020ರಲ್ಲಿ ತಲಾ ಐದು ಸಾವುಗಳು, 2020-21ರಲ್ಲಿ ಮೂರು ಸಾವುಗಳು ಮತ್ತು 2021-22ರಲ್ಲಿ 18 ಸಾವುಗಳು ವರದಿಯಾಗಿವೆ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.