ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ತರಾವೀಹ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಭಕ್ತರನ್ನು ಬಜರಂಗದಳ ಕಾರ್ಯಕರ್ತರು ತಡೆದಿರುವ ದೂರು. ಹಿಂದುತ್ವ ಸಂಘಟನೆ ಬಜರಂಗದಳದ ರಾಜ್ಯಾಧ್ಯಕ್ಷ ರೋಹನ್ ಸಕ್ಸೇನಾ ನೇತೃತ್ವದ ಗುಂಪು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ವ್ಯಕ್ತಿಯೊಬ್ಬರ ಗೋದಾಮಿನೊಳಗೆ ಪ್ರಾರ್ಥನೆ ಮಾಡುತ್ತಿದ್ದ ಜನರನ್ನು ತಡೆದಿದೆ ಎಂದು ಆರೋಪಿಸಲಾಗಿದೆ.
ಮೊರಾದಾಬಾದ್ ಲಜಪತ್ ನಗರದಲ್ಲಿರುವ ಜಾಕೀರ್ ಹುಸೇನ್ ಎಂಬುವವರ ಗೋದಾಮಿನಲ್ಲಿ ಈ ಘಟನೆ ನಡೆದಿದೆ. ತರಾವೀಹ್ ರಂಜಾನ್ ರಾತ್ರಿಯಲ್ಲಿ ಮುಸ್ಲಿಮರ ವಿಶೇಷ ಪ್ರಾರ್ಥನೆಯಾಗಿದೆ. ಆದರೆ ಹುಸೇನ್ ತಮ್ಮ ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಕ್ಸೇನಾ ಅವರು ಪ್ರಾರ್ಥನೆ ನಿಲ್ಲಿಸಿದ್ದಕ್ಕೆ ವಿವರಣೆ ನೀಡಿದ್ದಾರೆ ಎಂದು ಮುಸ್ಲಿಮರು ಹೇಳಿದ್ದಾರೆ. ಇದರ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು, ಇಲ್ಲದಿದ್ದಲ್ಲಿ ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಕ್ಸೇನಾ ಹೇಳಿದ್ದಾರೆ.
ಪ್ರಾರ್ಥನಾ ಸಭೆಯ ಬಗ್ಗೆ ಲಜಪತ್ ನಗರದ ಸ್ಥಳೀಯ ನಿವಾಸಿಗಳಿಂದ ದೂರು ಸ್ವೀಕರಿಸಿದ್ದೇವೆ ಎಂದು ಮೊರಾಬಾದ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಶನಿವಾರದಂದು ಪ್ರಾರ್ಥನೆಗೆ ಅವಕಾಶ ನೀಡಲಾಗಿದ್ದು, ಆ ಪ್ರದೇಶದ ಮುಸ್ಲಿಮರು ತಮ್ಮ ಮನೆಗಳಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಮೊರಾದಾಬಾದ್ನಲ್ಲಿ ಇಬ್ಬರು ಮುಸ್ಲಿಮರ ಮನೆಗಳಲ್ಲಿ ನಮಾಜ್ ಮಾಡಿದ್ದಕ್ಕಾಗಿ 26 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು, ಆದರೆ ನಂತರ ಆರೋಪಗಳನ್ನು ಕೈಬಿಡಲಾಯಿತು. ದೂರು ಸುಳ್ಳು ಎಂದು ಕಂಡು ಉತ್ತರ ಪ್ರದೇಶ ಪೊಲೀಸರು ಪ್ರಕರಣವನ್ನು ಹಿಂಪಡೆದಿದ್ದಾರೆ ಎಂದು ವಿವರಣೆ ನೀಡಿದ್ದಾರೆ. ಮುಖ್ಯ ದೂರುದಾರ ಚಂದ್ರಪಾಲ್ಸಿಂಗ್ ನೀಡಿರುವ ವಿಡಿಯೋ ನಕಲಿ ಎಂದು ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ. ಇಂತಹ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರನ್ನು ಬಂಧಿಸಿರುವ ಘಟನೆಗಳು ಸಾಕಷ್ಟು ನಡೆದಿವೆ ಎಂದು ಆರೋಪಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.