ಉತ್ತರ ಪ್ರದೇಶ (ವಿಶ್ವ ಕನ್ನಡಿಗ ನ್ಯೂಸ್) : ಗೋಹತ್ಯೆ ಮಾಡಿ ಮುಸ್ಲಿಮರ ಮೇಲೆ ಆರೋಪ ಹೊರಿಸಲು ಹೋಗಿ ಹಿಂದೂ ಮಹಾಸಭಾದ ಕೆಲವು ಸದಸ್ಯರು ಸಿಕ್ಕಿಬಿದ್ದಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಗೋಹತ್ಯೆ ಆರೋಪದ ಮೇಲೆ ನಾಲ್ವರು ಯುವಕರನ್ನು ಆಗ್ರಾ ಪೊಲೀಸರು ಬಂಧಿಸಿದ್ದರು. ಆದರೆ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ರಾಮನವಮಿಯ ಮುನ್ನಾದಿನ ಹಿಂದೂ ಮಹಾಸಭಾದ ಸದಸ್ಯರು ತಮಗೆ ಗೋಮಾಂಸ ದೊರಕಿದೆ ಎಂದು ದೂರು ದಾಖಲಿಸಿದ್ದರು. ಜಿತೇಂದ್ರ ಕುಶ್ವಾಹ ಎಂಬಾತ ದಾಖಲಿಸಿದ್ದ ದೂರಿನ ಅನುಸಾರ ಸ್ಥಳೀಯರಾದ ಮುಹಮ್ಮದ್ ರಿಝ್ವಾನ್, ಮುಹಮ್ಮದ್ ನಕೀಂ ಮತ್ತು ಮುಹಮ್ಮದ್ ಶಾನು ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಹಿಂದುತ್ವ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆಯನ್ನೂ ಹಾಕಿದ್ದರು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಗೋಹತ್ಯೆ ಎಂಬುವುದರ ಹಿಂದೆ ಸಂಚು ಇರುವುದು ತಿಳಿದು ಬಂದಿದೆ. ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಎಂಬಾತ ಪ್ರಮುಖ ರೂವಾರಿ ಎಂದು ತಿಳಿದು ಬಂದಿದೆ. ಪೊಲೀಸ್ ವಿಚಾರಣೆಯ ನಂತರ, ಬ್ರಿಜೇಶ್ ಬದೌರಿಯಾ, ಸೌರಭ್ ಶರ್ಮಾ, ಅಜಯ್ ಮತ್ತು ಸಂಜಯ್ ಜಾತ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ದೂರು ನೀಡಿದ ಜಿತೇಂದ್ರ ಸುಳ್ಳು ಹೇಳಿದ್ದನೆಂದು ಪೊಲೀಸರಿಗೆ ವಿಚಾರಣೆಯಿಂದ ತಿಳಿದು ಬಂದಿದೆ. ಕರೆ ಮಾಹಿತಿ ನೋಡಿದಾಗ ಸಂಜಯ್ ಮತ್ತಿತರರು ಗೋವುಗಳ ಹತ್ಯೆ ನಡೆದ ಸ್ಥಳದಲ್ಲಿದ್ದರೆಂಬ ಮಾಹಿತಿ ದೊರಕಿತ್ತು, ಆದರೆ ಆರೋಪಿಗಳೆಂದು ಬಂಧಿತರಾದವರು ಅಲ್ಲಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮಾಧ್ಯಮದೊಂದಿಗೆ ಮಾತನಾಡಿದ ಆಗ್ರಾ ಪೊಲೀಸ್ ಕಮಿಷನರ್ ಪ್ರೀತೀಂದರ್ ಸಿಂಗ್, ಇದು ಹಬ್ಬಕ್ಕೆ ಮುಂಚಿತವಾಗಿ ಭಿನ್ನಾಭಿಪ್ರಾಯಗಳನ್ನು ಕೆರಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.