ಮುಲ್ಕಿ (www.vknews.com) : ಅಧಿಕಾರವನ್ನು ಹಿಡಿಯಲು ಮತ್ತು ಅದನ್ನು ಭದ್ರಪಡಿಸಲು ಧರ್ಮದ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು,ಅವರ ಆಹಾರದ ಹಕ್ಕುಗಳನ್ನು ಕಸಿಯುವುದು, ರಾಜಕೀಯ ಕಾರಣಕ್ಕಾಗಿ ತಮಗಾಗದವರ ವಿರುದ್ದ ವಿವಿಧ ತನಿಖಾ ಇಲಾಖೆಗಳ ಮೂಲಕ ದಾಳಿ ನಡೆಸಿ ಸೇಡು ತೀರಿಸಿ ಕೊಳ್ಳುವುದು,ತನಿಖೆಯ ನೆಪದಲ್ಲಿ ಸುಳ್ಳು ಕೇಸು ದಾಖಲಿಸಿ ಮಾತಾಡುವವರ ಬಾಯಿ ಮುಚ್ಚಿಸುವುದು ಇವೇ ಮೊದಲಾದ ಪಕ್ಷಪಾತಿ ಧೋರಣೆಯ ಕ್ರೂರ ಮನೋಭಾವ ಇರುವ ಆಡಳಿತಶಾಹಿಗಳ ವಿರುದ್ದ ಕಾನೂನಾತ್ಮಕವಾಗಿ ದ್ವನಿ ಎತ್ತುವುದು ದೇಶದ ಮತ್ತು ಪ್ರಜೆಗಳ ಹಿತ ದೃಷ್ಟಿಯಿಂದ ಬಹಳ ಅಗತ್ಯವಾಗಿದೆ. ಇಂತಹ ಸಂಧರ್ಭದಲ್ಲಿ ದೃತಿಗೆಡದೇ ಎದೆಗುಂದದೇ ಹೋರಾಟ ಮಾಡಬೇಕಾಗುತ್ತದೆ. ಇದು ಪ್ರಜೆಗಳ ಸಂವಿಧಾನಾತ್ಮಕ ಹಕ್ಕು ಕೂಡಾ ಆಗಿದೆ. ಇಂತಹ ಹೋರಾಟದ ಸಂಧರ್ಭ ಸಹನೆ ಮತ್ತು ಪ್ರಾರ್ಥನೆಯು ಪ್ರತಿರೋಧದ ಅತ್ಯುತ್ತಮ ಅಸ್ತ್ರವಾಗಿದೆ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಜುಮಾ ಬಳಿಕದ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಜಗತ್ತಿನಲ್ಲಿ ಅದೆಷ್ಟೋ ಸರ್ವಾಧಿಕಾರಿ ಧೋರಣೆಯ ಆಡಳಿತಗಾರರು ಮಣ್ಣು ಮುಕ್ಕಿದ್ದಾರೆ.ಕಳೆದ ಐವತ್ತು ವರ್ಷದ ಕನಿಷ್ಟ ಅವಧಿಯಲ್ಲೇ ಇಂತಹ ಅದೆಷ್ಟೋ ಅನುಭವ ನಮ್ಮ ಗಮನಕ್ಕೆ ಬಂದಿದೆ. ಮರ್ಧಿತರ ಪ್ರಾರ್ಥನೆ ಮತ್ತು ಅವರ ಶಾಪದಿಂದಾಗಿ ಕ್ರೂರರು ನರಳಿ ಸತ್ತಿದ್ದಾರೆ.
ಮರ್ಧಿತನು ಯಾವುದೇ ಜಾತಿ ಧರ್ಮದವನಾಗಿದ್ದರೂ ಅವನ ಮೊರೆಯನ್ನು ದೇವನು ಬೇಗ ಆಲಿಸುತ್ತಾನೆ. ಪ್ರಜಾಮರ್ಧಕನು ಯಾವ ಧರ್ಮಕ್ಕೆ ಸೇರಿದವನಾದರೂ ಅವನಿಗೆ ದೇವನ ಶ್ರೀ ರಕ್ಷೆ ಇರುವುದಿಲ್ಲ. ಅಂತವರಿಗೆ ಸಮಾಧಾನದಿಂದ ಆಡಳಿತ ನಡೆಸಲು ಕೂಡಾ ಸಾದ್ಯವಾಗುವುದಿಲ್ಲ ಎಂದ ಖತೀಬರು ಅಹಂಕಾರ,ಧರ್ಪದಿಂದ ವರ್ತಿಸುವ ಪ್ರತಿಯೊಬ್ಬನೂ ಈ ಜಗತ್ತಿನಲ್ಲೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಇದು ಪಕೃತಿ ನಿಯಮ ಕೂಡಾ ಹೌದು ಎಂದು ಎಚ್ಚರಿಸಿದರು.
ಒಪ್ಪೊತ್ತಿನ ಊಟಕ್ಕೆ ಗತಿ ಇಲ್ಲದ ಕೋಟ್ಯಾಂತರ ಜನರಿರುವ ಒಂದು ದೇಶದ ಆಡಳಿಶಾಹಿಗಳು ಜನರ ಧಾರ್ಮಿಕ ಭಾವನೆಯ ಜೊತೆ ಚೆಲ್ಲಾಟವಾಡಿ ದೇಶವನ್ನು ಮತ್ತಷ್ಟು ಬಡತನಕ್ಕೆ ದೂಡಿಹಾಕುವ ಪ್ರಕ್ರಿಯೆ ಒಪ್ಪತಕ್ಕದ್ದಲ್ಲ ಎಂದು ಹೇಳಿದ ದಾರಿಮಿಯವರು ಈ ಬಗ್ಗೆ ದೇಶದ ಜನರು ಎಚ್ಚೆತ್ತುಕೊಳ್ಳಬೇಕಾಗಿದ್ದು ಪಕ್ಷ ,ಜಾತಿ ,ಮತ ಭೇದ ಮೆರೆತು ನ್ಯಾಯದ ಪರವಾಗಿ ಎಲ್ಲರೂ ಒಟ್ಟಾಗ ಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಸ್ಪಷ್ಟ ಪಡಿಸಿದರು.
ಮುಂದುವರೆದು ಮಾತನಾಡಿದ ಅವರು ಸಹನೆ ಮತ್ತು ಪ್ರಾರ್ಥನೆಗೆ ಅದ್ಬುತ ಶಕ್ತಿ ಇದೆ.ಈ ಎರಡು ಅಸ್ತ್ರ ಗಳ ಮೂಲಕ ದೇವನೊಂದಿಗೆ ಸಹಾಯ ಯಾಚಿಸಲು ಕುರಾನಿನಲ್ಲಿ ಸೂಚಿಸಲಾಗಿದೆ. ಸಹನೆಯು ವಿಶ್ವಾಸದ ಅರ್ಧ ಭಾಗವಾಗಿದೆ.ನಮಾಜ್ ಸತ್ಯ ವಿಶ್ವಾಸಿಯ ಲಕ್ಷಣವಾಗಿದೆ. ಇವೆರಡನ್ನೂ ಗಟ್ಟಿಯಾಗಿ ಹಿಡಿದು ಕೊಂಡು ಅನ್ಯಾಯದ ವಿರುದ್ದ ದ್ವನಿ ಎತ್ತಿದರೆ ಅದು ಬೇಕಾದಲ್ಲಿಗೆ ತಲುಪುತ್ತೆ ಎಂದ ಖತೀಬರು ಪ್ರಾರ್ಥನೆ ಮತ್ತು ಸಹನೆ ಜನರ ವ್ಯಕ್ತಿತ್ವವನ್ನು ವಿಕಾಸ ಗೊಳಿಸುತ್ತಿದೆಯಲ್ಲದೇ ಅದರಿಂದ ಯಶಸ್ಸು ಸಾಧಿಸಿ ಬದುಕು ಹಸನಾಗುತ್ತದೆ ಎಂದರು.
“ದುನಿಯಾದಲ್ಲಿ ದರ್ಪ ತೋರದ ಮತ್ತು ಅರಾಜಕತೆಯನ್ನು ಬಯಸದ ಜನರಿಗಾಗಿಯೇ ಪರಲೋಕದಲ್ಲಿ ಸ್ವರ್ಗವನ್ನು ಕಾಯ್ದಿರಿಸಲಾಗಿದೆ” ಎಂಬ ಕುರಾನ್ ವಚನವನ್ನು ಉಲ್ಲೇಖಿಸಿದ ಖತೀಬರು ಇಂದು ಸರಳತೆಯನ್ನು ಮೈಗೂಡಿಸಿಕೊಂಡರೆ ಅದನ್ನು ತಿರಸ್ಕಾರದಿಂದ ಕಾಣುವ ಪರಿಸ್ಥಿತಿ ಜನರಲ್ಲಿ ರೂಡಿಯಾಗಿದೆ. ಈ ಮನೋಭಾವ ಇಂದು ಸರಳತೆಯನ್ನು ಭೋದಿಸ ಬೇಕಾದ ಧಾರ್ಮಿಕ ಕ್ಷೇತ್ರಕ್ಕೂ ವ್ಯಾಪಿಸಿ ನಿಂತಿದೆ. ಬೆಲೆ ಬಾಲುವ ಕಾರಿನಲ್ಲಿ ಬಂದಿಳಿಯುವ ಗುರುಗಳ ಸುತ್ತ ಜನ ಸೇರುತ್ತಾರೆ.ಸಾಮಾನ್ಯ ಬಸ್ಸಿನಲ್ಲಿ ಯಾತ್ರೆ ಗೈದು ಬಂದರೆ ಅವರನ್ನು ತಿರಸ್ಕಾರ ಮನೋಭಾವದಿಂದ ಕಾಣುತ್ತಾರೆ ಎನ್ನುತ್ತಾ ಉಧಾಹರಣೆಯೊಂದನ್ನು ಜನರ ಮುಂದಿಟ್ಟರು.
ಶ್ರೀಮಂತನ ಔತಣ ಕೂಟಕ್ಕೆ ಕೋಟು ಸೂಟಿನವರ ಮದ್ಯೆ ಸಾಮಾನ್ಯ ವೇಷದಲ್ಲಿ ಆಗಮಿಸಿದ ಸಂತನನ್ನು ಕೇಳುವವರೇ ಇರಲಿಲ್ಲ. ಆದರೆ ಅಂತಹದೇ ಮತ್ತೊಂದು ಔತಣಕ್ಕೆ ಕೋಟು ಸೂಟಿನೊಂದಿಗೆ ಆಗಮಿಸಿದ ಸಂತನ ಸುತ್ತಮುತ್ತ ಸೇರಿದ ಜನ ಅವರಿಗೆ ಗೌರವದ ಮಹಾಪೂರವೇ ಹರಿಸಿತು. ಊಟಕ್ಕೆ ಕುಳಿತ ಸಂತ ಊಟವನ್ನು ಕೋಟಿನ ಜೇಬಿಗೆ ತುರುಕಿಸುತ್ತಾ ಇದ್ದ. ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿದವರಲ್ಲಿ ಸಂತ ಹೀಗೆಂದ..ಮೊದಲ ಔತಣ ಕೂಟಕ್ಕೆ ನಾನು ಬಂದಿದ್ದೆ .ನನ್ನಲ್ಲಿ ಊಟ ಮಾಡಲು ಯಾರೂ ಹೇಳಿಲ್ಲ.ಈಗ ಅದೇ ನಾನು ಬಂದಿದ್ದೇನೆ.ಆದರೆ ಕೋಟಿಗೆ ಗೌರವ ಕೊಟ್ಟಿದ್ದೀರಿ.ಆದ್ದರಿಂದ ಕೋಟಿಗೆ ತಿನ್ನಲು ಕೊಡ್ತಾ ಇದ್ದೇನೆ ಎನ್ನುತ್ತಾ ಸೇರಿದವರಿಗೆ ಉತ್ತಮ ಪಾಠವನ್ನು ಸಂತ ನೀಡಿದ.
ರಿಪೋರ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.