(www.vknews.in) : ಇವರು ಬಳಿಕ ಹಝ್ರತ್ ಹೂದ್ರವರನ್ನು ಸಂಪರ್ಕಿಸಿದಾಗ ತನಗುಂಟಾದ ಅನುಭವ ಮತ್ತು ಪವಾಡದ ಬಗ್ಗೆ ತನ್ನ ಪತ್ನಿಯಲ್ಲಿ ಹೇಳಿದಾಗ ಪತ್ನಿ ಕೂಡ ಇಸ್ಲಾಂ ಧರ್ಮ ಸ್ವೀಕಾರ ಮಾಡಿದರು. ಅಲ್ಲದೆ ಇವರು ಊರಿನಲ್ಲಿ ಬಹಳ ಪ್ರತಿಭಾವಂತ ವ್ಯಕ್ತಿ ಆದ್ದರಿಂದ ಫಿತ್ನ ಆಗಬಾರದೆಂಬ ಉದ್ದೇಶದಿಂದ ತನ್ನ ಇಸ್ಲಾಮನ್ನು ಬಹಳ ರಹಸ್ಯವಾಗಿ ಇಟ್ಟಿದ್ದರು. ಇವರ ಹೆಸರು ಮರ್ಸದ್ ಬಿನ್ ಸಅ್ದ್ ಎಂದಾಗಿತ್ತು. ಇವರು ನಮ್ಮ ಪ್ರವಾದಿ ಮುಹಮ್ಮದ್ ﷺ ರಿಗೆ ಖಲೀಫಾ ಅಬೂಬಕರ್ ಸಿದ್ದೀಖ್ (ರ) ಇರುವಂತೆ ಯಾವಾಗಲೂ ಒಟ್ಟಿಗೆ ಇರುವ ಮಿತ್ರರಾಗಿದ್ದರು.
ಹಝ್ರತ್ ಹೂದ್ರವರು ಸುಮಾರು ಎಪ್ಪತ್ತು ವರ್ಷಗಳ ಕಾಲ ಬೋಧನೆ ಮಾಡಿದಾಗ ಶತ್ರುಗಳಿಂದ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಿ ಬಂತು. ಅವರಿಗೆ ಕಲ್ಲೆಸೆದರು. ಚಾಟಿಯಿಂದ ಹೊಡೆದರು. ಪಾದರಕ್ಷೆ ಹಾಕಿ ತುಳಿದರು. ಕೈಕಾಲು ಕಟ್ಟಿ ಮಾರ್ಗದಲ್ಲಿ ಎಳೆದುಕೊಂಡು ಹೋದರು. ಕೆಲವೊಮ್ಮೆ ಅವರ ಮೂರ್ಛೆ ತಪ್ಪಿದರೆ ಅವರನ್ನು “ಹೂದ್ ಸತ್ತಿದ್ದಾನೆ” ಎಂದು ಹೇಳಿ ಅಲ್ಲೇ ಬಿಟ್ಟು ಹೋಗುತ್ತಿದ್ದರು. ಆದರೆ ಅವರು ಮಾತ್ರ ತನ್ನ ಜವಾಬ್ದಾರಿಯನ್ನು ಚಾಚೂ ತಪ್ಪದೆ ಸರಿಯಾಗಿ ನಿರ್ವಹಿಸಿದರು. ಕೊನೆಗೆ ಉಪದ್ರವ ಸಹಿಸಲಾರದಾಗ ಅವರಿಗೆ ಎದುರಾಗಿ ಅಲ್ಲಾಹನಲ್ಲಿ ದುಆ ಮಾಡಿದರು. “ಅಲ್ಲಾಹ್, ಈ ಜನಾಂಗವನ್ನು ಬರಗಾಲ ಕೊಟ್ಟು ಪರೀಕ್ಷಿಸು. ಈತನಕ ಯಾರಿಗೂ ಮುಂದಕ್ಕೆ ಇನ್ಯಾರಿಗೂ ಕೊಡದ ಶಿಕ್ಷೆ ಕೊಟ್ಟು ಇವರನ್ನು ನಾಶ ಮಾಡು” ಎಂದು.
ಅಲ್ಲಾಹನು ಅವರ ದುಆಕ್ಕೆ ಉತ್ತರ ನೀಡಿದನು. ಅವರಲ್ಲಿ ಮತ್ತು ಅನುಚರರಲ್ಲಿ ಒಂದು ಪ್ರತ್ಯೇಕ ಮೀಸಲು ಜಾಗದಲ್ಲಿ ವಾಸ ಮಾಡಲು ಹೇಳಿದನು. ದಿನಗಳು ಉರುಳಿದಂತೆ ಮೊದಲಾಗಿ ಮಳೆ ಬರುವುದು ನಿಂತಿತು. ಭೂಮಿ ಬರಡಾಯಿತು. ಹುಲ್ಲು ಕಡ್ಡಿ ಕೂಡ ಚಿಗುರುವುದು ನಿಂತು ಹೋಯಿತು. ಹೀಗೆಯೇ ನಾಲ್ಕು ವರ್ಷಗಳು ಕಳೆಯಿತು. ಜಾನುವಾರುಗಳು ಮತ್ತು ಇತರ ಸಾಕು ಪ್ರಾಣಿಗಳೆಲ್ಲವೂ ಸತ್ತು ಹೋದವು. ಅವರ ಎಲ್ಲಾ ನಿರೀಕ್ಷೆಗಳು ನೀರುಪಾಲಾಯಿತು. ಬಳಿಕ ಏನೇ ಆಗಲಿ ಇನ್ನು ಇಸ್ಲಾಂ ಸ್ವೀಕಾರ ಮಾಡೋಣ ಎಂಬ ತೀರ್ಮಾನಕ್ಕೆ ಬಂದಾಗ ಅರಸನು ಅವರನ್ನು ತಡೆದು ಹೇಳಿದನು. “ಸ್ವಲ್ಪ ಸಬೂರ್ ಮಾಡಿ. ನಮಗೆ ವಿಜಯ ಇದೆ” ಎಂದು.
ಸುಬ್ಹಾನಲ್ಲಾಹ್! ನಂತರ ಕೆಲವು ದಿನಗಳ ಬಳಿಕ ಆಕಾಶದಲ್ಲಿ ಒಂದು ದಿನ ಮೋಡ ಕವಿಯಿತು. ಆ ಕೆಟ್ಟ ಆದ್ ಜನಾಂಗವು ಮಳೆ ಬರುತ್ತದೆ ಎಂದು ಭಾವಿಸಿ ಬಹಳ ಖುಷಿ ಪಟ್ಟರು. ಆದರೆ ಅದು ಮಳೆಯ ಮೋಡವಾಗಿರಲಿಲ್ಲ. ಅದು ನರಕದ ಬೆಂಕಿಯ ಬಿಸಿ ಗಾಳಿಯ ಮೋಡವಾಗಿತ್ತು. ಅದು ಕೂಡ ಎಪ್ಪತ್ತು ಬಾರಿ ಎಪ್ಪತ್ತು ಶೀತ ಜಲದ ಕಾಲುವೆಯಲ್ಲಿ ಮುಳುಗಿಸಿ ತೆಗೆದದ್ದಾಗಿತ್ತು. ಇಲ್ಲವಾದರೆ ಅದರ ಉಷ್ಣದ ಶಕ್ತಿಯಿಂದ ಪರ್ವತಗಳು ನೀರಾಗುತ್ತಿತ್ತು. ನಿರಂತರವಾಗಿ ಒಂದು ವಾರಗಳ ತನಕ ಬಿಸಿ ಗಾಳಿ ಬೀಸಿತು. ಗಾಳಿಯ ರಭಸಕ್ಕೆ ಹೆದರಿ ಕೆಲವರು ದೊಡ್ಡ ದೊಡ್ಡ ಕಲ್ಲಿನ ಗುಹೆಗಳ ಅಡಿಯಲ್ಲಿ ಅಡವಿ ಕುಳಿತರು. ಆದರೆ ಅದು ಸಾಮಾನ್ಯ ಗಾಳಿ ಆಗಿರಲಿಲ್ಲ. ಅಲ್ಲಾಹನ ಶಿಕ್ಷೆಯ ಗಾಳಿಯಾಗಿತ್ತು. ಕೆಲವು ಪೆದ್ದರು ಅದನ್ನು ಎದುರಿಸಲು ಬಿಲ್ಲು ಬಾಣ ಹಿಡಿದು ನಿಂತರು. ಇದನ್ನೆಲ್ಲಾ ನೋಡುತ್ತಿದ್ದ ಹಝ್ರತ್ ಹೂದ್ರವರಲ್ಲಿ ಕೆಲವರು ಹೇಳಿದರು. “ಬರಲಿ ನಿನ್ನ ಅಲ್ಲಾಹನ ಶಿಕ್ಷೆ, ನೋಡೋಣ ಹೇಗುಂಟು ಎಂದು” ಗಾಳಿಯು ದೊಡ್ಡ ದೊಡ್ಡ ಬಂಡೆ ಕಲ್ಲುಗಳನ್ನೇ ಉರುಳಿಸಿತು. ಅದರ ವೇಗಕ್ಕೆ ಜನರು ಗಾಳಿಯಲ್ಲಿ ಹತ್ತಿಯಂತೆ ಹಾರಿ ಹೋಗಿ ರುಂಡ ಮುಂಡ ಬೇರೆ ಬೇರೆಯಾಗಿ ಎಲ್ಲೆಲ್ಲಿ ಬಿದ್ದು ಸತ್ತರು. ಆದರೆ ಆ ದುಷ್ಟ ಅರಸನನ್ನು ಮಾತ್ರ ಈ ದುರಂತಗಳನ್ನೆಲ್ಲಾ ನೋಡಿ ತಿಳಿಯಲು ಕೊನೆಯ ತನಕ ಬಾಕಿ ಇಟ್ಟನು. ಅವನನ್ನು ಅವಸಾನವಾಗಿ ಗಾಳಿಯು ಆಕ್ರಮಣ ಮಾಡಿತು. ಕೊನೆಗೆ ಅವನೂ ಸತ್ತನು.
ಒಟ್ಟಿನಲ್ಲಿ ಹಝ್ರತ್ ನೂಹ್ರವರ ತೂಫಾನಿನ ನಂತರದ ಈ ಮಹಾ ದುರಂತದಲ್ಲಿ ಮತ್ತೊಮ್ಮೆ ಅವಿಶ್ವಾಸಿಗಳು ಸಂಪೂರ್ಣವಾಗಿ ನಾಶವಾದರು. ಬಳಿಕ ಹಝ್ರತ್ ಹೂದ್ರವರು ಮತ್ತು ಅವರೊಂದಿಗಿದ್ದ ಮುಅ್ಮಿನುಗಳು ಅಲ್ಲಾಹನ ನಿರ್ದೇಶದಂತೆ ಯಮನಿನ ಹಿಂದೂ ಮಹಾಸಾಗರ ಸಮುದ್ರಕ್ಕೆ ತಾಗಿಕೊಂಡಿರುವ ಕರಾವಳಿ ವಲಯಕ್ಕೆ ವಾಸ ಬದಲಾಯಿಸಿದರು. ಅಲ್ಲಿ ತಲುಪಿ ಎರಡು ವರ್ಷವಾಗುವಾಗ ಹೂದ್ (ಅ) ರವರು ವಫಾತಾದರು. ಬಳಿಕ ಅವರ ಜನಾಝವನ್ನು ಹಳರ ಮೌತ್ ಎಂಬ ಜಾಗದಲ್ಲಿ ದಫನ ಮಾಡಲಾಯಿತು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.