ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):– ಕೆಜಿಎಫ್ ನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ವಿಳಂಬದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶಾಸಕಿ ರೂಪ ಶಶಿಧರ್, ಸ್ಥಳದಲ್ಲೇ ನಿಂತು ಜೆಸಿಬಿಯಿಂದ ಅಶೋಕ ನಗರದ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿದರು.
ಬಹಳಕಾಲದಿಂದ ನೆನೆಗುದಿಗೆ ಬಿದ್ದಿದ್ದ ಅಶೋಕ ನಗರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬದ ಕುರಿತು ಎಇಇ ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಕಟ್ಟಡ ತೆರವಿನ ಉಸ್ತುವಾರಿ ವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, ನಗರದಲ್ಲಿ ಸುಂದರ ಮಿನವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ 6.40 ಕೋಟಿ ರೂ, ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ 8 ಕೋಟಿ ರೂ, ತಾಪಂ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದೇನೆ ಎಂದರು.
ನಗರದ ಅಭಿವೃದ್ದಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನನಗೆ ಸಬೂಬು ಹೇಳಬೇಡಿ, ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಓಡಾಡಿದ್ದೇನೆ ಅದರ ಕಷ್ಟ ನನಗೆ ಗೊತ್ತಿದೆ, ಕೆಲಸಗಳು ಮುಗಿಯದಿದ್ದರೆ ಜನರಿಗೆ ಹೇಗೆ ಉತ್ತರ ನೀಡುವುದು ಎಂದು ಪ್ರಶ್ನಿಸಿದರು.
200 ಮೀಟರ್ ಅಶೋಕ ನಗರ ರಸ್ತೆ ಅಗಲೀಕರಣ ಕಾಮಗಾರಿಗೆ ಇನ್ನು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದಾಗ, ಅಗಲೀಕರಣಕ್ಕೆ ಮನೆಯೊಂದು ಅಡ್ಡಿ ಇರುವ ಕುರಿತು ಸಬೂಬು ಹೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ ತಾವೇ ಖುದ್ದು ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಗೆ ಸೂಚನೆ ನೀಡಿದರು.
ಕಾಮಗಾರಿಗಳ ವಿಳಂಬ ಸಹಿಸಲು ಸಾಧ್ಯವಿಲ್ಲ, ಅಧಿಕಾರಿಗಳು ಜನರ ತೆರಿಗೆ ಹಣವನ್ನು ಸಂಬಳವಾಗಿ ಪಡೆಯುತ್ತಿದ್ದೀರಿ, ಜನರ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಸರ್ಕಾರಿ ಕೆಲಸ ದೇವರ ಕೆಲಸ ಎಂಬುದನ್ನು ಮರೆತಿದ್ದೀರಿ, ಹಣ ಮಂಜೂರಾಗಿದೆ, ಗುತ್ತಿಗೆದಾರರಿಂದ ಕೆಲಸ ಮಾಡಿಸಲು ನಿಮಗೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿ, ಕಾಮಗಾರಿ ವಿಳಂಬದ ಕುರಿತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕೆಜಿಎಫ್ ಹೊಸ ತಾಲ್ಲೂಕು ಆಗಿದೆ, ಇಲ್ಲಿ ತಾಲ್ಲೂಕು ಆಡಳಿತಕ್ಕೆ ಅಗತ್ಯವಾದ ಎಲ್ಲಾ ಕಟ್ಟಡ, ಆಸ್ಪತ್ರೆ, ಕಾಲೇಜು ಎಲ್ಲವೂ ಸುಸಜ್ಜಿತವಾಗಿರಬೇಕು, ಮಿನಿ ವಿಧಾನಸೌಧ ಕಟ್ಟಡಕ್ಕೆ ಸರ್ಕಾರ 10 ಕೋಟಿ ನೀಡಿದೆ, ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಿರಬೇಕು ಎಂದು ಸೂಚನೆ ನೀಡಿದರು. ಪ್ರಥಮ ದರ್ಜೆ ಕಾಲೇಜಿಗೆ ಅಡಿಪಾಯ ಹಾಕಿ 3 ತಿಂಗಳಾಗಿದೆ, ನಿಮಗೆ ಕೆಲಸ ಮಾಡಲು ಇನ್ನು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ ಅವರು ಕಾಲೇಜು ಕಾಮಗಾರಿ ಶೀಘ್ರ ಮುಗಿಸಿ ಎಂದು ಸೂಚಿಸಿದರು.
ಕೆಜಿಎಫ್ ಮಾದರಿ ತಾಲ್ಲೂಕು ಆಗಬೇಕು, ಅದಕ್ಕಾಗಿ ಸರ್ಕಾರದೊಂದಿಗೆ ಹೋರಾಡಿಯಾದರೂ ಅಗತ್ಯ ಅನುದಾನ ತರುತ್ತೇನೆ ಆದರೆ ಇಲ್ಲಿ ಕಾಮಗಾರಿಗಳ ವಿಳಂಬ ಅತ್ಯಂತ ಬೇಸರ ತರಿಸಿದೆ, ಅಧಿಕಾರಿಗಳು ನಗರದ ಅಭಿವೃದ್ದಿ ಅಗತ್ಯವಿಲ್ಲ ಎನ್ನುವಂತೆ ವರ್ತಿಸುತ್ತಿದ್ದೀರಿ, ನಿಮ್ಮ ವೈಪಲ್ಯ ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ, ಇಂಜಿನಿಯರ್ ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮಾಜಿ ಅಧ್ಯಕ್ಷ ರಮೇಶ್ಜೈನ್, ಕಾಂಗ್ರೆಸ್ ಒಬಿಸಿ ಮುಖಂಡ ಮುನಿಸ್ವಾಮಿ,ನಗರಸಭೆ ಸದಸ್ಯರಾದ ಕೋದಂಡ್, ಜರ್ಮನ್, ಮುಖಂಡ ಜಾನ್ ಮತ್ತಿತರ ಮುಖಂಡರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.