ಬೆಳ್ತಂಗಡಿ (www.vknews.com) ; ಮುಸ್ಲಿಂ ಸಮಾಜದ ವಿರುದ್ಧ ಶಡ್ಯಂತ್ರಗಳು ನಾನಾ ಬಗೆಯಿಂದ ನಡೆಯುತ್ತಿದೆ. ಅದರ ವಿರುದ್ಧ ಸರಕಾರ ಸೂಕ್ತ ಕ್ರಮ ಜರುಗಿಸಿ ಕೋಮು ಪ್ರಚೋದನೆ ಎಸಗುವವರ ವಿರುದ್ಧ ಕಠಿಣ ಕ್ರಮಕೈಗೊಂಡು ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಒತ್ತಾಯಿಸಿದ್ದಾರೆ.
ಎಸ್ಕೆಎಸ್ಎಸ್ಎಫ್ ಬೆಳ್ತಂಗಡಿ ವಲಯದ ನೇತೃತ್ವದಲ್ಲಿ ಸೋಮವಾರ ಬೆಳ್ತಂಗಡಿ ಮಿನಿವಿಧಾನ ಸೌಧದ ಬಳಿನಡೆದ ಪ್ರತಿಭಟನೆಯನ್ನುದ್ಧೇಶಿಸಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಮದರಸ ತಾಲಿಬಾನೀಕರಣ ಎಂದು ಕೆಲವರು ಆಧಾರ ರಹಿತವಾಗಿ ಆರೋಪಿಸುತ್ತಿದ್ದಾರೆ. ಇಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು, ನಮ್ಮ ರಾಷ್ಟಪತಿಗಳಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರಂತವರನ್ನು ಸೃಷ್ಟಿ ಮಾಡಿದ್ದೇ ಈ ಮದರಸಗಳಾಗಿವೆ ಎಂಬ ಸತ್ಯ ಅರಿತುಕೊಳ್ಳಬೇಕು. ಬಾಬಾ ಬುಡನ್ಗಿರಿ ದಾದಾ ಹಯಾತ್ ನಮ್ಮ ರಾಜ್ಯದ ಪ್ರಬುದ್ಧ ಸೌಹಾರ್ದಯೆ ಕೇಂದ್ರವಾಗಿತ್ತು. ಅದನ್ನೂ ವಿವಾದಾತ್ಮಕ ಕೇಂದ್ರವಾಗಿ ಮಾರ್ಪಡಿಸಲಾಗುತ್ತಿರುವುದರ ಹಿಂದಿನ ಸತ್ಯ ಎಲ್ಲರಿಗೂ ತಿಳಿದಿದೆ. ಕರಾವಳಿ ಜಿಲ್ಲೆಯಲ್ಲಿ ಪ್ರವಾದಿಯವರನ್ನು ನಿಂದಿಸುವ ಕೆಲಸ ಒಂದು ವರ್ಗದಿಂದ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ರಾಜಕೀಯ ಉದ್ದೇಶದಿಂದ ಯಾರಾದರೂ ಈ ಮಾತುಗಳನ್ನು ಆಡಿದ್ದರೆ ನಮ್ಮ ಯುವ ಜನತೆ ರೌಡಿಸಂ ಮೂಲಕ ಅದನ್ನು ಪ್ರತಿರೋಧಿಸಿ ಅಶಾಂತಿ ಸೃಷ್ಟಿಸಬಹುದು ಎಂದು ಆ ವರ್ಗ ತಿಳಿದುಕೊಂಡಿದ್ದರೆ, ನಾವು ಸಂಘರ್ಷಕ್ಕೆ ಬದಲಾಗಿ ಯುವ ಜನತೆಯನ್ನು ಶಿಕ್ಷಣದ ಮೂಲಕ ಜಾಗೃತರನ್ನಾಗಿಸಿ ನಮ್ಮ ಸಮುದಾಯ ಅದನ್ನು ಎದುರಿಸುವಂತೆ ಮಾಡುತ್ತೇವೆ ಎಂದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಕೆಎಸ್ಎಸ್ಎಫ್ ಬೆಳ್ತಂಗಡಿ ವಲಯಾಧ್ಯಕ್ಷ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಮಸ್ಜಿದ್ ಖತೀಬ್ ನಝೀರ್ ಅಝ್ಹರಿ ಅವರು, ಲವ್ ಜಿಹಾದ್ ಗೂ ಇಸ್ಲಾಂ ಗೂ ಯಾವುದೇ ಸಂಬಂಧವಿಲ್ಲ. ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ ಅರ್ಥರಹಿತ ಕಲ್ಪಿತ ಶಬ್ಧ ಸೃಷ್ಟಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಸ್ವಂತ ಧರ್ಮದಲ್ಲಿರುವ ಅನ್ಯ ಸ್ತ್ರೀಯನ್ನು ಮಾತನಾಡಿಸುವುದಾಗಲೀ, ನೋಡುವುದಾಗಲೀ ನಿಶಿದ್ಧ ಎಂದು ಸಾರಿರುವ ಇಸ್ಲಾಂ ನಲ್ಲಿ ಇಂತಹಾ ರೀತಿಯ ಮತಾಂತರಕ್ಕೆ ಅವಕಾಶವೇ ಇಲ್ಲ. ಮತ್ತೆಲ್ಲಿಯ ಲವ್ ಜಿಹಾದ್ ಎಂದು ಅವರು ಪ್ರಶ್ನಿಸಿದರು.
ಗೋ ಕಳ್ಳತನ ಧರ್ಮ ಭಾಹಿರ ಚಟುವಟಿಕೆ ಎಂಬುದರಲ್ಲಿ ಯಾರಿಗೂ ಚರ್ಚೆಇಲ್ಲ. ಗೋವುಗಳನ್ನು ಕದಿಯುವವ ಯಾವುದೇ ಜಾತಿಯವನೇ ಆಗಿರಲಿ ಅದು ಅಪರಾಧ. ಅದನ್ನು ಅಪರಾಧವಾಗಿ ನೋಡಬೇಕೇ ಹೊರತು ಧರ್ಮ ಆಧಾರಿತವಾಗಿ ನ್ಯಾಯ ಅನ್ಯಾಯ, ನೀತಿ ಅನೀತಿ ಅಳೆಯುವುದು ಸರಿಯಲ್ಲ, ಮುಸ್ಲಿಂ ಮಹಿಳೆಯರನ್ನು ನಾಮಹಾಕಿ ಕರೆದುಕೊಂಡು ಬರುತ್ತೇವೆ ಎನ್ನುವ ಚೈತ್ರಾ ಕುಂದಾಪುರ ಅವರು ನಮ್ಮ ಜಿಲ್ಲೆ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರದ ಬಗ್ಗೆ ಧ್ವನಿಎತ್ತಲಿ, ಇಲ್ಲಿ ಮಹಿಳೆ ದೌರ್ಜನ್ಯಕ್ಕೊಳಗಾದಾಗ ಆಕೆ ಮಹಿಳೆಯೇ ಹೊರತು ಅಲ್ಲಿಧರ್ಮದ ಲೇಪನ ಬೇಡ ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಶಂಶುದ್ದೀನ್ ದಾರಿಮಿ, ಹನೀಫ್ ಧೂಮಳಿಕೆ, ಹಕೀಂ ಬಂಗೇರಕಟ್ಟೆ, ರಝಾಕ್ ಕನ್ನಡಿಕಟ್ಟೆ, ಮಮ್ಮಿಕುಂಞಿ ಅರೆಕ್ಕಲ್, ಶಕೀಲ್ ಅರೆಕ್ಕಲ್, ಇಮ್ರಾನ್ ಕಕ್ಕಿಂಜೆ, ಅಬೂಬಕ್ಕರ್ ಮುಸ್ಲಿಯಾರ್ ಸೋಮಂತಡ್ಕ, ಸಾದಿಕ್ ಕಟ್ಟೆ, ಹಾಶಿಂ ಪೈಝಿ ಪಾಂಡವರಕಲ್ಲು, ಅಬೂಬಕ್ಕರ್ ಬಂಗೇರಕಟ್ಟೆ, ನವಾಝ್ ಕಟ್ಟೆ, ಸಮದ್ ಮಾಸ್ಟರ್, ಸದಕತುಲ್ಲಾ ದಾರಿಮಿ ಹಾಗೂ ಬೆಳ್ತಂಗಡಿ ದಾರುಸ್ಸಲಾಂ ವಿದ್ಯಾರ್ಥಿಗಳು, ಹಲವು ಜಮಾಅತ್ಗಳ ನೇತಾರರು, ಸಾರ್ವಜನಿಕರು ಭಾಗವಹಿಸಿದ್ದರು.
ಎಸ್ಕೆಎಸ್ಎಸ್ಎಫ್ ವಲಯ ಕಾರ್ಯದರ್ಶಿ ರಿಯಾಝ್ ಪೈಝಿ ಸ್ವಾಗತಿಸಿದರು. ಬೆಳ್ತಂಗಡಿ ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ ಉದ್ಘಾಟಿಸಿದರು.ಕೌಸರ್ ಪುಂಜಾಲಕಟ್ಟೆ ನಿರೂಪಿಸಿ, ಸಂಚಾಲಕ ಸಿರಾಜ್ ಚಿಲಿಂಬಿ ಧನ್ಯವಾದವಿತ್ತರು. ಪ್ರತಿಭಟನೆ ಬಳಿಕ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.