(www.vknews.in) : ಹಿಂದೂ ಸಮಾವೇಶದ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಲಾಮ್ ಧರ್ಮವನ್ನು ಅತ್ಯಂತ ಹೀನಾಯವಾಗಿ ಅವಹೇಳನ ನಡೆಸಿದ ಸಂಘಪರಿವಾರದ ನಾಯಕ ರಾಧಾಕೃಷ್ಣ ಅಡ್ಯಂತಾಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ, ಪೊಲೀಸ್ ಇಲಾಖೆಯ ತಾರತಮ್ಯ ನೀತಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಧಾಕೃಷ್ಣ ಅಡ್ಯಂತಾಯ ಅದೇ ದಿನ ಭಾಗವಹಿಸಿದ ಮತ್ತೊಂದು ಕಾರ್ಯಕ್ರಮದಲ್ಲೂ ಧರ್ಮ ನಿಂದನೆ ಮಾಡಿ ತನ್ನ ವಿಕೃತಿಯನ್ನು ಪ್ರದರ್ಶಿಸಿದ್ದಾರೆ. ಆದಾಗ್ಯೂ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಕೊಂಡು ಆತನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕಾದ ಜಿಲ್ಲೆಯ ಪೊಲೀಸ್ ಇಲಾಖೆ ಯಾರದೋ ಅಪ್ಪಣೆಗೆ ಕಾಯುತ್ತಿರುವಂತೆ ತೋರುತ್ತಿದೆ. ಈ ಹಿಂದೆ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಯವರಿಗೆ ಬೆದರಿಕೆಯೊಡ್ಡಿದಾಗಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ನಂತರ ಜಿಲ್ಲಾಧಿಕಾರಿಯವರೇ ಈ ಬಗ್ಗೆ ಸ್ವತಃ ದೂರು ದಾಖಲಿಸಿದರೂ ಪೊಲೀಸರಿಗೆ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ.
ಇತ್ತೀಚಿಗೆ ಇಬ್ಬರು ಮುಸ್ಲಿಮ್ ಯುವಕರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು ಎಂಬ ಕಾರಣಕ್ಕಾಗಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸರಣಿ ಬಂಧನ ನಡೆಸಿ ಹಲವಾರು ಮುಸ್ಲಿಮ್ ಯುವಕರ ಬೇಟೆಯಲ್ಲಿ ತೊಡಗಿದ್ದರು. ಇದೀಗ ಸಂಘಪರಿವಾರದ ನಾಯಕನೊಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಇಸ್ಲಾಂ ಧರ್ಮವನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದಾಗ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವುದು ತಮ್ಮ ವೃತ್ತಿ ಧರ್ಮಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಮಾತೆತ್ತಿದರೆ ಸದಾ ದ್ವೇಷ ಉಗುಳುವ, ಸರಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡುವ ಇಂತಹ ವ್ಯಕ್ತಿಗಳ ವಿರುದ್ಧ ಮೃದು ಧೋರಣೆ ತಾಳುತ್ತಿರುವುದು ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನೇ ಪ್ರಶ್ನಾರ್ಹವಾಗಿಸಿದೆ.
ಧರ್ಮ ನಿಂದನೆ ಹಾಗೂ ಕೋಮು ದ್ವೇಷ ಹರಡಿದ ಗಂಭೀರ ಆರೋಪದಡಿಯಲ್ಲಿ ಕಠಿಣ ಸೆಕ್ಷನ್ ಗಳನ್ನು ಹಾಕಿ ರಾಧಾಕೃಷ್ಣ ಅಡ್ಯಂತಾಯರನ್ನು ಕೂಡಲೇ ಬಂಧಿಸಬೇಕು. ಕಾರ್ಯಕ್ರಮ ಸಂಘಟಿಸಿದ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳದ ನಾಯಕರ ಮೇಲೆಯೂ ಪ್ರಕರಣ ದಾಖಲಿಸಬೇಕು. ಸಂಘಪರಿವಾರದ ವಿಕೃತಿ ಹಾಗೂ ಪೊಲೀಸರ ತಾರತಮ್ಯ ಧೋರಣೆ ಇದೇ ರೀತಿ ಮುಂದುವರಿದರೆ ಜಿಲ್ಲೆಯ ಜನತೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಇಜಾಝ್ ಅಹ್ಮದ್ ಎಚ್ಚರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.