(www.vknews.in) : ಮಾನವರಿಗೆ ಈ ಲೋಕದಲ್ಲಿ ಶಾಂತಿಯುತವಾಗಿ ಬದುಕಬೇಕಾದರೆ ನಾಡಿನ ಆಡಳಿತಗಾರರು ನ್ಯಾಯ ನೀತಿಯನ್ನು ಪಾಲನೆ ಮಾಡುವುದು ಮುಖ್ಯವಾಗಿರುವಂತೆಯೇ ಶಾಂತಿಯುತ ಜೀವನಕ್ಕೆ ಬೇಕಾಗಿ ಆಯಾ ಕಾಲಕ್ಕೆ ತಕ್ಕಂತೆ ಆಯಾ ದೇಶದ ಆಡಳಿತಗಾರರು ರೂಪಿಸಿದ ಉತ್ತಮ ಕಾನೂನಿಗೆ ಬದ್ದರಾಗಿ ಜೀವಿಸಲು ಪ್ರಜೆಗಳೂ ಬದ್ದರಾಗಿರಬೇಕಾಗುತ್ತದೆ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಕಾನೂನುಗಳೇ ಇಂದಿನ ನಾಗರಿಕ ಜಗತ್ತಿನಲ್ಲಿ ಎಲ್ಲಾ ದೇಶಗಳಲ್ಲಿಯೂ ಜಾರಿಯಲ್ಲಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಆದಾಗ್ಯೂ ಕೆಲವೊಂದು ಸಂಧರ್ಭದಲ್ಲಿ ಆಡಳಿತ ಗಾರರು ಮತ್ತು ಪ್ರಜೆಗಳು ಕಾನೂನನ್ನು ಮೀರಿ ನಡೆಯುವುದಿದೆ. ಎರಡೂ ಕಡೆಯ ಅತಿಕ್ರಮಣವೂ ನಾಡಿನಲ್ಲಿ ಅರಾಜಕತೆ ಸೃಷ್ಟಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ದೇಶವಾಗಿರಲಿ,ಒಂದು ಕುಟುಂಬವಾಗಿರಲಿ,ಒಂದು ಸಂಘಟನೆಯಾಗಿರಲಿ,ಒಂದು ಸಂಸ್ಥೆಯೇ ಆಗಿರಲಿ ಅಲ್ಲಿನ ಕಾರ್ಯಚಟುವಟಿಕೆಗಳು ಎಲ್ಲವೂ ಸುಗಮವಾಗಿ ನಡೆಯುವಂತಾಗಲು ನ್ಯಾಯದ ಪಾಲನೆಯು ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರೂ ತಮಗೆ ವಹಿಸಲಾದ ಜವಾಬ್ದಾರಿಯನ್ನು ಸರಿಯಾಗಿ ನ್ಯಾಯಯುತವಾಗಿ ನಿಭಾಯಿಸಿದರೆ ಮಾತ್ರ ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ. ತಮಗಿಷ್ಟ ಬಂದತೆ ಕಾನೂನಿಗೆ ಅತೀತರಾಗಿ ಜನರು ಬದುಕಿದರೆ ಅಲ್ಲಿ ಅರಾಜಕತೆ ತಾಂಡವವಾಡುತ್ತೆ.
ನಮ್ಮ ದೇಶದ ಇಂದಿನ ಕಾನೂನು ಪರಿಸ್ಥಿತಿಯ ಬಗ್ಗೆ ಹೇಳೋದಾದರೆ ಹಲವು ಜಸ್ಟಿಸ್ ಗಳು, ಬುದ್ದಿ ಜೀವಿಗಳು,ಸಾಮಾಜಿಕ ಕಾರ್ಯಕರ್ತರು ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರವಾದಿ ನಿಂದನೆಯ ವಿರುದ್ದ ಒಂದು ವರ್ಗದವರು ಮಾಡಿದ ಪ್ರತಿಭಟನೆಯನ್ನು ಅಧಿಕೃತರೇ ವಿಕೋಪಕ್ಕೆ ತಿರುಗಿಸಿ ನಂತರ ಅದರಲ್ಲಿ ಭಾಗವಹಿಸಿದವರೆಂದು ಹೇಳಲಾಗುತ್ತಿರುವವರ ಮನೆಗಳನ್ನೇ ಬುಲ್ಡೋಜರ್ ಬಳಸಿ ದ್ವಂಸ ಮಾಡಿದ ಘಟನೆ ಮಾನವೀಯತೆಗೂ ದೇಶದ ಕಾನೂನಿಗೂ ನಿಲುಕುವಂತದ್ದಲ್ಲ ಎಂಬುದಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾನೂನು ಪಾಲಕರೇ ಕಾನೂನು ಬಂಜಕರಾದರೆ ಮತ್ತೆ ಕಿಡಿಗೇಡಿಗಳಿಗೆ ಅರಾಜಕತೆ ಸೃಷ್ಟಿಸಲು ಹಾದಿ ಸುಲಭವಾಗುತ್ತೆ.
ರಾಜನಾಗಲಿ, ಪ್ರಜೆಯಾಗಲಿ, ಹಿಂದುವಾಗಿರಲಿ, ಮುಸ್ಲಿಮನಾಗಿರಲಿ ಯಾರೂ ಕೂಡಾ ಕಾನೂನಿಗೆ ಮೀರಿ ನಡೆಯಬಾರದೆಂಬ ಬೇಡಿಕೆ ನ್ಯಾಯಯುತವಾಗಿದೆ. ಸಾವಿರ ಅಪರಾಧಿಗಳನ್ನು ಶಿಕ್ಷಿಸದೇ ಹೋದರೂ ಒಂದು ನಿರಪರಾಧಿಗೆ ಶಿಕ್ಷೆ ಆಗ ಬಾರದು ಎಂಬ ಹೆಸರಿನ ತತ್ವ ಜಗತ್ತೇ ಒಪ್ಪಿ ಕೊಂಡ ಆದರ್ಶವಾಗಿದೆ. ದೇವನ ಭಯ ಇರುವವರು ಯಾರೂ ಕೂಡಾ ಕಾನೂನು ಕೈಗೆತ್ತಿಕೊಂಡು ಇತರರಿಗೆ ವಿನಾ ಕಾರಣ ಹಿಂಸೆ ಕೊಡಲಾರರು. ಹಿಂಸೆ ಮತ್ತು ಕ್ರೌರ್ಯ ಮೇಲುಗೈ ಸಾಧಿಸಿ ಅಲ್ಲಿ ಕಾನೂನು ಪಾಲನೆಯಾಗದೇ ಅರಾಜಕತೆ ಸೃಷ್ಟಿಯಾದರೆ ಮತ್ತೆ ಅಲ್ಲಿ ದೇವನ ಕಾನೂನು ಜಾರಿಯಾಗುತ್ತೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ದೃಷ್ಟಾಂತಗಳಿವೆ.
ಒಂದು ದಿನ ಪೂರ್ವ ಪ್ರವಾದಿ ಹಝ್ರತ್ ಮೂಸಾ ನೆಬಿಯವರು ಮಸೀದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೊರಗೆ ಕೊಳವೊಂದರಲ್ಲಿ ಒಬ್ಬ ಸ್ನಾನ ಮಾಡುತ್ತಿದ್ದ. ಆತ ಸ್ನಾನ ಮುಗಿಸಿ ತೆರಳುವಾಗ ಹಣದ ಕಟ್ಟು ಮರೆತು ಬಿಟ್ಟಿದ್ದ. ನಂತರ ಯಾರೋ ದಾರಿಹೋಕ ಬಂದು ಅದನ್ನು ಕೊಂಡೋದ. ಆ ನಂತರ ಮತ್ತೊಬ್ಬ ಬಂದು ಸ್ನಾನ ಮಾಡಲು ತೊಡಗಿದ. ಆಗ ಅಲ್ಲಿಗೆ ಆಗಮಿಸಿದ ಹಣ ಮೆರೆತು ಹೋದ ಮೊದಲನೇ ವ್ಯಕ್ತಿ ಸ್ನಾನ ಮಾಡುವವನೊಂದಿಗೆ ತಾನು ಹಣದ ಬಗ್ಗೆ ವಿಚಾರಿಸಿದಾಗ ತನಗೇನೂ ತಿಳಿಯದು ಎಂದ. ಆಗ ಅಲ್ಲಿ ಪರಸ್ಪರ ಕಾದಾಟ ಉಂಟಾಗಿ ಸ್ನಾನ ಮಾಡುತ್ತಿದ್ದವ ಕೊಲೆಯಾದ. ಈ ಘಟನೆ ಮೂಸಾ ನೆಬಿಯವರನ್ನು ತೀವ್ರವಾಗಿ ಕಾಡತೊಡಗಿತು.
ಇದು ಅನ್ಯಾಯವಲ್ಲವೇ? ಕದ್ದದ್ದು ಯಾರೋ ಕೊಲೆಯಾದದ್ದು ಇನ್ಯಾರೋ. ಇದ್ಯಾವ ನ್ಯಾಯ? ಕೊನೆಗೂ ಮೂಸಾ ನೆಬಿಯವರ ಸಂಶಯವನ್ನು ದೇವನೇ ನಿವಾರಿಸ ಬೇಕಾಯಿತು. ನೋಡಿ ಮೂಸಾ, ಇಲ್ಲಿ ಈಗ ಕಾನೂನು ಪಾಲನೆಯಾಗುತ್ತಿಲ್ಲ. ಕ್ರೂರ ಆಡಳಿತಗಾರರು ನ್ಯಾಯ ತೀರ್ಮಾನಿಸುತ್ತಿಲ್ಲ. ಅದಕ್ಕೆ ನಾನೇ ಖುದ್ದಾಗಿ ನ್ಯಾಯ ಜಾರಿ ಮಾಡುತ್ತಿದ್ದೇನೆ. ಆ ಕೊಲೆಯಾದ ವ್ಯಕ್ತಿಯು ಹಂತಕನ ತಂದೆಯನ್ನು ಕೊಲೆ ಮಾಡಿ ನಂತರ ಆರಾಮವಾಗಿ ಒಡಾಡುತ್ತಿದ್ದ. ಕಾನೂನು ಜಾರಿಯಾಗಿರಲಿಲ್ಲ. ಅದಕ್ಕೆ ಮಗನ ಮೂಲಕವೇ ತಂದೆಯ ಹಂತಕನಿಗೆ ಕಾನೂನು ಜಾರಿ ಮಾಡಿದೆ. ಅದೇ ರೀತಿ ಹಣ ಕೊಂಡೊಯ್ದ ವ್ಯಕ್ತಿಯ ತಂದೆಯ ಹಣವನ್ನು ಹಣ ಮೆರೆತು ಹೋದವ ಲಪಟಾಯಿಸಿದ್ದ. ಅದಕ್ಕೂ ನ್ಯಾಯ ಪಾಲನೆ ಆಗಿರಲಿಲ್ಲ.
ಆದ್ದರಿಂದ ಅದನ್ನು ಅದರ ವಾರಿಸುದಾರರಿಗೆ ಮರಳಿಸುವ ಕೆಲಸ ಆಯಿತು ಎಂಬುದಾಗಿ ದೇವ ಸಂದೇಶ ಬಂದಾಗ ಮೂಸಾ ನೆಬಿಯವರಿಗೆ ದೇವನ ಕಾನೂನು ಯಾವ ರೀತಿಯಲ್ಲೆಲ್ಲಾ ಜಾರಿಯಾಗುತ್ತೆ ಎಂದು ತಿಳಿದು ಅಚ್ಚರಿಯಾಯಿತು. ಹೌದು ನಾವು ಯಾರ್ಯಾರಿಗೋ ಏನೇನೋ ಅನ್ಯಾಯವೆಸಗಿ ಆರಾಮವಾಗಿರಬಹುದೆಂದು ಗ್ರಹಿಸಿದ್ದರೆ ಅದು ಕೇವಲ ಮೂರ್ಖತನವಾಗಿದೆ. ಅಕ್ರಮಿಗಳು ಪರಲೋಕದ ಶಿಕ್ಷೆಯ ಜೊತೆಗೆ ಇಹ ಲೋಕದಲ್ಲೂ ಪರಿಣಾಮವನ್ನು ಎದುರಿಸ ಬೇಕಾಗಿತ್ತದೆ. ಜನರ ಶಾಪವನ್ನು ಮೈ ಮೇಲೆಳೆದು ಕೊಂಡು ಬದುಕು ದುಸ್ತರವಾಗಿಸುವ ಬದಲು ದಯೆ ,ಕರುಣೆ,ಸೇವೆಯ ಮೂಲಕ ಜನರ ಆಶಿರ್ವಾದ ಪಡೆಯೋಣ.
“ಜನರ ಪೈಕಿ ಕೆಲವರನ್ನು ಇನ್ನು ಕೆಲವರಿಂದ ಅಲ್ಲಾಹನು ತಡೆಯದೇ ಇರುತ್ತಿದ್ದರೆ ಈ ಭೂಮಿಯಲ್ಲಿ ಅರಾಜಕತೆ ಉಂಟಾಗುತ್ತಿತ್ತು” (ಕುರ್ಅನ್)
“ಮರ್ಧಿತರ ಪ್ರಾರ್ಥನೆ ಮತ್ತು ದೇವನ ಮದ್ಯೆ ಯಾವುದೇ ಅಡೆತಡೆಗಳು ಇರುವುದಿಲ್ಲ” “ಭೂಮಿಯಲ್ಲಿರುವವರಿಗೆ ದಯೆ ತೋರಿರಿ.ಆಕಾಶದಲ್ಲಿರುವವರು ನಿಮಗೆ ದಯೆ ತೋರುವರು” (ಹದೀಸ್ ವಚನ)
– ಎಸ್ ಬಿ ದಾರಿಮಿ. ಅದ್ಯಕ್ಷರು ಜಂಇಯ್ಯತ್ತುಲ್ ಖುತಬಾ ದ ಕ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.