ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ): ಸಾಗರವನ್ನು ಸ್ವಚ್ಛವಾಗಿರಿಸುವ ಮೂಲಕ ಸಮುದ್ರದಲ್ಲಿನ ಜೀವಿಗಳ ಸಂರಕ್ಷಣೆ ಮಾಡುವುದರ ಜೊತೆಗೆ ಜನರ ಆರೋಗ್ಯವನ್ನು ಕಾಪಾಡುವುದು ಸ್ವಚ್ಛ ಸಾಗರ ಸುರಕ್ಷಿತ ಸಾಗರ್ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಪೌರಾಯುಕ್ತ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಹೇಳಿದರು. ಅವರು ಉಡುಪಿಯ ಮಲ್ಪೆಯಲ್ಲಿ ಕೇಂದ್ರ ಸರ್ಕಾರದ ಭೂವಿಜ್ಞಾನ ಸಚಿವಾಲಯ, ಸಮುದ್ರ ಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ ಹಾಗೂ ಎ.ಟಿ.ಎ.ಎಲ್ ಭವನ್ ಕೊಚ್ಚಿ ಇವರ ಸಹಯೋಗದಲ್ಲಿ ಸ್ವಚ್ಛ್ ಸಾಗರ್ ಸುರಕ್ಷಿತ್ ಸಾಗರ್ ಕಾರ್ಯಕ್ರಮದಡಿ ನಡೆದ ಸಮುದ್ರ ಮಾಲಿನ್ಯ ಮತ್ತು ಕಡಲ ತೀರದ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರವಾಸಿಗರನ್ನು ಆಕರ್ಷಿಸಲು ಬೀಚ್ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಲ್ಪೆ ಅಭಿವೃದ್ಧಿ ಸಂಸ್ಥೆಯು ಸ್ವಚ್ಛತೆಗೆ ಹೆಚ್ಚು ಪ್ರೋತ್ಸಾಹ ನೀಡಿದೆ ಎಂದ ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಧನಂಜಯ್ ಕಾಂಚನ್, ಮಾಧವ ಕೃಪ ಸ್ಕೂಲ್ನ ಉಪಪ್ರಾಂಶುಪಾಲರಾದ ಜ್ಯೋತಿ ಸಂತೋಷ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.