ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕುದುರೆ ವ್ಯಾಪಾರ ಎಂಬುದು ವಸ್ತು ವಿನಿಮಯದ ಕಾಲದಲ್ಲಿ ಅರಬರೊಂದಿಗೆ ಆರಂಭವಾದ ನಗದು ವ್ಯಾಪಾರದ ವಿದ್ಯಮಾನವಾಗಿದ್ದು, ಅದು ಇಂದು ರಾಜಕೀಯ ಕ್ಷೇತ್ರಕ್ಕೆ ಪಸರಿಸಿ ಹೆಸರುವಾಸಿಯಾಗಿದೆ. ವ್ಯಂಗ್ಯ ವಿಡಂಬನೆ ತುಂಬಿರುವ ಇಂತಹ ಅಪರೂಪದ ವಿಚಾರಗಳನ್ನು ಎತ್ತಿಕೊಂಡು ಲೇಖಕ ಕೆ. ಎಂ. ಕೃಷ್ಣಭಟ್ಟರು ಬರೆದಿರುವ ಕುದುರೆವ್ಯಾಪಾರ ಎಂಬ ಈ ಪುಸ್ತಕದಲ್ಲಿ ಹತ್ತಾರು ಒಳ್ಳೆಯ ಲಲಿತಪ್ರಬಂಧಗಳಿವೆ ಎಂದು ನಗರದ ಹಿರಿಯ ನ್ಯಾಯವಾದಿ ಎಂ. ವಿ. ಶಂಕರ ಭಟ್ ಹೇಳಿದರು.
ನಗರದ ಸುಬ್ರಹ್ಮಣ್ಯ ಸದನದಲ್ಲಿ ಜರಗಿದ ನ್ಯಾಯವಾದಿ ಕೆ. ಎಂ. ಕೃಷ್ಣಭಟ್ಟರ ಕುದುರೆವ್ಯಾಪಾರ ಎಂಬ ಲಲಿತಪ್ರಬಂಧಗಳ ಸಂಕಲನ ಬಿಡುಗಡೆಗೊಳಿಸಿ ಅವರು ಮಾತಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಸಿದ್ಧ ಕವಿ – ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ವಹಿಸಿದ್ದರು. ಸಮಾಜದ ಕೆಲವು ಅವ್ಯವಸ್ಥೆಗಳನ್ನು ನೇರವಾಗಿ ಟೀಕಿಸಲು ಅಥವಾ ತಿದ್ದಲು ಸಾಧ್ಯವಾಗದೇ ಹೋದಾಗ ಹಿತವಾಗಿ ಟೀಕಿಸಿ ವ್ಯವಸ್ಥೆಯನ್ನು ತಿದ್ದಲು ಲಲಿತಪ್ರಬಂಧಗಳು ಅತ್ಯುತ್ತಮ ಮಾದರಿಯಾಗಿದೆ. ವಿನೋದದ ಹಾದಿಯಲ್ಲಿ ನೋವಾಗದಂತೆ ಹೇಳುವ ಕಲೆ ಪ್ರಬಂಧ ಪ್ರಕಾರಕ್ಕೆ ಮಾತ್ರ ಸಾಧ್ಯವಾಗುವಂಥದ್ದು. ಅಂತಹ ಉತ್ತಮವಾದ ಲಲಿತಪ್ರಬಂಧಗಳು ಈ ಸಂಕಲನದಲ್ಲಿವೆ ಎಂದು ಡಾ. ಪೆರ್ಲ ಅವರು ಹೇಳಿದರು.
ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವವರು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿ ತಮ್ಮ ತಮ್ಮ ಅನುಭವಗಳನ್ನು ದಾಖಲಿಸಿದಾಗ ಸಾಹಿತ್ಯಕ್ಕೆ ಬಹುಮುಖತೆ ಮತ್ತು ವೈವಿಧ್ಯತೆ ದೊರೆತು ಸಾಹಿತ್ಯಕ್ಷೇತ್ರ ಶ್ರೀಮಂತವಾಗುತ್ತದೆ. ನ್ಯಾಯವಾದಿಗಳಾದ ಕೆ. ಎಂ. ಕೃಷ್ಣಭಟ್ಟರಿಗೆ ಬಾಲ್ಯದಲ್ಲಿ ದೊರೆತ ಉತ್ತಮ ಬುನಾದಿ ಶಿಕ್ಷಣ ಮತ್ತು ಸಹಜವಾಗಿಯೇ ಬಂದ ಸಾಹಿತ್ಯಪೀತಿಯಿಂದಾಗಿ ಲಲಿತಪ್ರಬಂಧದಂತಹ ವಿರಳ ಕ್ಷೇತ್ರದಲ್ಲಿ ಕೃತಿ ರಚಿಸಲು ಸಾಧ್ಯವಾಯಿತು ಎಂದು ಡಾ. ಪೆರ್ಲ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾಂಸ, ಮಧುರೈ ಕಾಮರಾಜ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ಹರಿಕೃಷ್ಣ ಭರಣ್ಯ ಅವರು ಲಲಿತಪ್ರಬಂಧ ಎಂಬ ಪ್ರಕಾರ ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಆ ಪ್ರಕಾರಕ್ಕೆ ಇದೊಂದು ನೂತನ ಸೇರ್ಪಡೆ ಎಂದರಲ್ಲದೆ ಕೃತಿಯಲ್ಲಿರುವ ಉತ್ತಮ ಪ್ರಬಂಧಗಳ ಪರಿಚಯ ಮಾಡಿಕೊಟ್ಟರು.
ಲೇಖಕರಾದ ಕೆ. ಎಂ. ಕೃಷ್ಣ ಭಟ್ಟರು ಕೃತಿ ರಚನೆಗೆ ಪ್ರೇರಣೆಯಾದ ಅಂಶಗಳ ಬಗ್ಗೆ ಮಾತಾಡಿದರು. ಬಿ ಶ್ರೀಕೃಷ್ಣ ಭಟ್ ಪ್ರಾರ್ಥನೆ ಹಾಡಿದರು. ಗಣರಾಜ ಬೊಳುಂಬು ಸ್ವಾಗತಿಸಿ ವಂದನಾರ್ಪಣೆಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.