ಕಾರ್ಯಕ್ರಮದಲ್ಲಿ “ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರ್” ಯೂ ಟ್ಯೂಬ್ ಚಾನಲ್ ನಲ್ಲಿ ಮೂಡಿಬರಲಿರುವ “ಡಯಾಟಾಕ್” ವಿಡಿಯೋ ಸರಣಿಯ ಬಿಡುಗಡೆ
ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್(ರಿ ) ವತಿಯಿಂದ 14/ 11/2020 ಶನಿವಾರದಂದು ಪೂರ್ವಾಹ್ನ 9.30 ಕ್ಕೆ ರೋಟರಿ ಟ್ರಸ್ಟ್ ಹಾಲ್ ನಲ್ಲಿ ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ( ಡಯಾಬಿಟಿಕ್ ಚಿಲ್ದ್ರೆನ್ಸ್ ಕೇರ್ ಸೆಂಟರ್) ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಟೈಪ್ 1 ಡಯಾಬಿಟಿಸ್ : ಸಕ್ಕರೆ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಅದರಲ್ಲೂ ಸುಮಾರು 5% -10% ಟೈಪ್ 1 ಡಯಾಬಿಟಿಸ್ ಆಗಿರುತ್ತದೆ. ಸಾಧಾರಣವಾಗಿ ಗುಣಪಡಿಸಲು ಅಸಾಧ್ಯವಾದ ಇದು ನವಜಾತ ಶಿಶುವಿನಿಂದ ಹಿಡಿದು ಸುಮಾರು 20 ವರ್ಷ ಪ್ರಾಯದವರಲ್ಲಿ ಕಂಡುಬರುತ್ತದೆ. ಈ ಮಧುಮೇಹಕ್ಕೆ ತುತ್ತಾದ ಮಕ್ಕಳು ತಮ್ಮ ಜೀವನ ಪರ್ಯಂತ ಇನ್ಸುಲಿನ್ ಇಂಜೆಕ್ಷನ್ ದಿನಕ್ಕೆ 4 ರಿಂದ 5 ಬಾರಿ ತೆಗೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿದಿನ 2 ರಿಂದ 3 ಸಲ ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಗ್ಲುಕೋಮೀಟರ್ ನಿಂದ ಸ್ವತ: ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಸುಮಾರು 5ರಿಂದ 10 ಸಾವಿರದವರೆಗೆ ವೆಚ್ಚವಾಗುವುದಲ್ಲದೆ, ಆಗಿಂದಾಗೆ ಸಕ್ಕರೆಯ ಏರಿಳಿತದಿಂದಾಗಿ ಉಂಟಾಗುವ ಇತರ ಸಮಸ್ಯೆಗಳು ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅವರಲ್ಲಿ ಆತ್ಮ ವಿಶ್ವಾಸದ ಕೊರತೆ ಮೂಡಿಸುತ್ತದೆ. ಅಲ್ಲದೆ ದೇಹದಲ್ಲಿನ ಅನಿಯಂತ್ರಿತ ಸಕ್ಕರೆಯ ಅಂಶ ಭವಿಷ್ಯದಲ್ಲಿ ವಿವಿಧ ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಬಹುದು.
“ಪ್ರಾಜೆಕ್ಟ್ ಸ್ವೀಟ್ ಚೈಲ್ಡ್” : ಇಂತಹ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ( ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ| ನಜೀರ್ ಡಯಾಬಿಟಿಕ್ ಸೆಂಟರ್ ಮತ್ತು EDRT ಬೆಂಗಳೂರು ಇವರ ಸಹಯೋಗದೊಂದಿಗೆ ರೂಪುಗೊಳಿಸಲಾಗಿದೆ. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ.
ಟೈಪ್ 1 ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ “ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರ್” (drnazeer’s diabetes centre https://www.youtube.com/channel/UCSiOA1_Ehd7vI8_k2SSU6vA) ಯೂ ಟ್ಯೂಬ್ ಚಾನಲ್ ನಲ್ಲಿ ಮೂಡಿಬರಲಿರುವ “ಡಯಾಟಾಕ್” ವಿಡಿಯೋ ಸರಣಿಯ ಬಿಡುಗಡೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.
ವೈದ್ಯರು, ಔಷಧ ಮಾರಾಟಗಾರರು, ಶಾಲಾ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಥವಾ ಇನ್ನಾವುದೇ ಸಹೃದಯಿ ನಾಗರಿಕರು ಇಂತಹ ಮಕ್ಕಳ ಬಗ್ಗೆ ಮಾಹಿತಿಯಿದ್ದಲ್ಲಿ ಮಕ್ಕಳ ಹೆಸರು ಮತ್ತು ವಿಳಾಸವನ್ನು ನೀಡಬೇಕಾಗಿ ರೋಟರಿ ಕ್ಲಬ್ ವತಿಯಿಂದ ವಿನಂತಿಸಲಾಯಿತು. ಯೋಜನೆಗೆ ಆರ್ಥಿಕ ನೆರವು ಮತ್ತು ಬೆಂಬಲ ನೀಡಬಯಸುವ ದಾನಿಗಳು ರೋಟರಿ ಕ್ಲಬ್ ಅನ್ನು ಸಂಪರ್ಕಿಸಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.