(www.vknews.com) : ಕೊರೊನ ಬಂತು. ಅದಕ್ಕೆಲ್ಲ ಹೆದರಿ ನೀವೆಲ್ಲ ಕಳೆದ ಎರಡು ತಿಂಗಳಿಂದ ಮನೆಯೊಳಗೆ ಕುಳಿತಿರುವಿರಿ. ಎರಡು ತಿಂಗಳ ಲಾಕ್ ಡೌನ್ ಎಷ್ಟು ಕಷ್ಟ ಎಂದು ನಿಮಗೆ ಅನುಭವ ಆಗಿದೆ . ಆದರೆ ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಮನೆಯ ಒಳಗೆ ಲಾಕ್ ಡೌನ್ ಆಗಿದ್ದೇನೆ.
ನನ್ನ ಹೆಸರು ಫಾತಿಮ . ನನ್ನ ಪ್ರಾಯ ನಲುವತ್ತು . ನನ್ನ ಒಟ್ಟಿಗೆ ಓದುತ್ತಿದ್ದ ನನ್ನ ಎಲ್ಲ ಫ್ರೆಂಡ್ಸ್ ಗಳಿಗೆ ಮದುವೆಯಾಗಿದೆ . ಅವರಿಗೆ ಮಕ್ಕಳಾಗಿವೆ . ಅವರ ಮಕ್ಕಳಿಗೆ ಮಕ್ಕಳಾಗಿ ಅವರು ಇವತ್ತು ಅಜ್ಜಿಯಾಗಿದ್ದಾರೆ . ಆದರೆ ಪ್ರಾಯ ನಲುವತ್ತು ಆದರೂ ನನಗೆ ಇನ್ನೂ ಮದುವೆಯಾಗಿಲ್ಲ . ಮನೆಯ ಒಳಗೆ ಕೂತು ಇಪ್ಪತ್ತೈದು ವರ್ಷಗಳಾಯಿತು. ತಹಜುದ್ ನಮಾಝ್ ಮಾಡಿ ಅಲ್ಲಾಹನಲ್ಲಿ ಬೇಡುತ್ತಿದ್ದೇನೆ. ನನ್ನ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದೇನೆ.
ನಿಮ್ಮ ಹೆಣ್ಣು ಮಕ್ಕಳಿಗಿರುವಂತೆ ನನಗೂ ಕೂಡ ಮದುವೆಯ ಆಸೆ ಇದೆ . ದಾಂಪತ್ಯದ ಕನಸು ಇದೆ . ತಾಯ್ತನದ ಬಯಕೆ ಇದೆ . ಕೆಲವೊಮ್ಮೆ ಮದುವೆಯಾಗದೆ ಹೀಗೇ ಸಾಯುತ್ತೇನಾ? ಎಂಬ ಭಯವೂ ಇದೆ. ಮುಂದೆ ನಮಗೆ ಯಾರು ದಿಕ್ಕು ಎಂಬ ಆತಂಕವೂ ಇದೆ . ನನ್ನ ಕ್ಲಾಸ್ ಮೇಟ್ ಗಳು ಅವರ ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ ಬರುವುದನ್ನು ನೋಡುವಾಗ ತುಂಬಾ ನೋವಾಗುತ್ತದೆ. ಕಣ್ಣುಗಳು ಒದ್ದೆಯಾಗುತ್ತವೆ. ನಮಗೂ ಆ ಸೌಭಾಗ್ಯ ಇಲ್ಲವಲ್ಲ ಎಂಬ ಕೊರಗು ಆಗಾಗ ಕಾಡುತ್ತಿದೆ . ನನಗೇ ಯಾಕೆ ಈ ಶಿಕ್ಷೆ ಎಂಬ ಪ್ರಶ್ನೆ ನನ್ನೊಳಗೆ ಆಗಾಗ ಕೇಳುತ್ತಿದ್ದೇನೆ . ಕೆಲವೊಮ್ಮೆ ಬದುಕೇ ಬೇಡ ಎಂದು ಅನ್ನಿಸುತ್ತಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ನಾನು ಎಲ್ಲೂ ಹೋಗಿಲ್ಲ. ಯಾವುದೇ ಮದುವೆಗೆ ಕೂಡಿಲೢ. ಎಲ್ಲೂ ಸುತ್ತಾಡಿಲ್ಲ . ಮನೆಯೇ ನನ್ನ ಪ್ರಪಂಚ. ಆ ಮನೆಯಿಂದ ಹೊರಗಡೆ ನಾನು ಕಾಲು ಇಟ್ಟಿಲ್ಲ . ನನಗೆ ಫೇಸ್ ಬುಕ್,ವಾಟ್ಸಪ್ ಯಾವುದೂ ಗೊತ್ತಿಲ್ಲ .
ಹದಿಹರೆಯದ ಸಮಯದಲ್ಲಿ ನಾನು ತುಂಬಾ ಸುಂದರವಾಗಿದ್ದೆ . ಆದರೂ ನಾನು ಪ್ರೀತಿ ಪ್ರೇಮದ ಬಲೆಗೆ ಬೀಳಲಿಲ್ಲ. ಅನ್ಯ ಪುರುಷರ ಮುಖವನ್ನು ತಲೆ ಎತ್ತಿ ನೋಡಲಿಲ್ಲ. ಅವತ್ತೇ ಯಾರೊಟ್ಟಿಗೆ ಓಡಿ ಹೋಗುತ್ತಿದ್ದರೆ ಇವತ್ತು ನಾಲ್ಕು ಮಕ್ಕಳ ತಾಯಿ ಆಗಿರುತ್ತಿದ್ದೆ . ಆದರೆ ಅಲ್ಲಾಹನಿಗೆ ಹೆದರಿ ಆ ಕೆಲಸ ನಾನು ಮಾಡಿಲ್ಲ.
ನಾನೂ ಒಂದು ಹೆಣ್ಣಲ್ಲವೇ? ನನಗೂ ಎಲ್ಲರಂತೆ ದಾಂಪತ್ಯ ಜೀವನ ಬೇಡವೇ? ನನಗೂ ತಾಯ್ತನದ ಆಸೆ ಇಲ್ಲವೇ? ನಾನು ಕನ್ಯೆಯಾಗಿಯೇ ಮರಣ ಹೊಂದಬೇಕೇ?
ಎರಡು ತಿಂಗಳ ಲಾಕ್ ಡೌನ್ ಅನುಭವ ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಾಗಿದೆ . ಲಾಕ್ ಡೌನ್ ನಿಮಗೆ ಅನೇಕ ಪಾಠಗಳನ್ನು ಕಲಿಸಿದೆ . ಎರಡು ತಿಂಗಳು ಲಾಕ್ ಡೌನ್ ನಿಮಗೆ ಇಷ್ಟು ಕಷ್ಟ ಆದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಮನೆಯೊಳಗೆ ಲಾಕ್ ಡೌನ್ ಆದ ನನಗೆ ಎಷ್ಟು ಕಷ್ಟ ಆಗಿರಬಹುದು . ನನ್ನ ಜಾಗದಲ್ಲಿ ನಿಂತು ನೀವು ಒಮ್ಮೆ ಯೋಚಿಸಿ.
ಇದೀಗ ಮುಗಿದಿರುವುದು ಭೂಮಿಯಲ್ಲಿನ ಒಂದು ಸಣ್ಣ ಅವಧಿಯ ಲಾಕ್ ಡೌನ್ ಮಾತ್ರ. ಇದಕ್ಕಿಂತಲೂ ಭಯಾನಕವಾದ ಲಾಕ್ ಡೌನ್ ಗಳು ಮುಂದಕ್ಕೆ ಬರಲಿಕ್ಕಿವೆ. ಖಬರ್ ನೊಳಗೆ ಲಾಕ್ ಡೌನ್ . ನಾಳೆ ಮಹಶರದಲ್ಲಿ ಅಲ್ಲಾಹನ ಮುಂದೆ ಲಾಕ್ ಡೌನ್ . ಒಂದು ವೇಳೆ ನಾನು ಮದುವೆಯಾಗದೆ ಕನ್ಯೆಯಾಗಿಯೇ ಮರಣ ಹೊಂದಿದರೆ ಬಹುಶಃ ನನ್ನ ಕಣ್ಣೀರು ನಿಮಗೆ ಬಹಳ ನಷ್ಟಕರ ಆಗಬಹುದು. ಇದು ನನ್ನೊಬ್ಬಳ ಕಥೆಯಲ್ಲ. ನನ್ನಂತೆ ನೂರಾರು ಮಂದಿ ನಮ್ಮ ಜಿಲ್ಲೆಯಲ್ಲಿ ಇದ್ದಾರೆ. ಇವರೆಲ್ಲರ ಮದುವೆಯ ಕನಸು ನನಸಾಗ ಬೇಕಲ್ಲವೇ?
*ನನ್ನ ಕ್ಲಾಸ್ ಮೇಟ್ ಆಗಿದ್ದ ನಿಮ್ಮ ಮಗಳ ಮದುವೆಯ ಸಂದರ್ಭದಲ್ಲಿ ನನ್ನನ್ನು ಮರೆತು ಬಿಟ್ಟಿರಿ. ಆದರೆ ಅವಳ ಮಗಳ ಮದುವೆಯ ಸಂದರ್ಭದಲ್ಲಾದರೂ ನನ್ನನ್ನು ನೆನಪಿಸಿಕೊಳ್ಳಿ . ನನಗೂ ಮದುವೆ ಮಾಡಿಸಿ.
* ಅನುಕೂಲ ಉಳ್ಳವರು ತಮ್ಮ ಮಗಳ ಅಥವಾ ಮಗನ ಮದುವೆಯ ಜೊತೆಗೆ ನನ್ನಂತಹ ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿ ಪುಣ್ಯ ಸಂಪಾದಿಸಿರಿ.
*ಬಡವರ ಮನೆಯಲ್ಲೂ ಚೆಂದ ಚೆಂದದ ಹೆಣ್ಣು ಮಕ್ಕಳಿದ್ದಾರೆ. ನಮ್ಮ ಯುವಕರು ಆ ಮನೆಯ ಹೆಣ್ಮಕ್ಕಳಿಗೂ ಬದುಕು ಕೊಡಲು ಮುಂದಕ್ಕೆ ಬನ್ನಿ . ನನಗೆ ನಲುವತ್ತು ವರ್ಷ ಆದಂತೆ ಮುಂದೆ ಯಾವ ಹೆಣ್ಣಿಗೂ ಆ ರೀತಿ ಆಗಬಾರದು . ಈ ದುಸ್ಥಿತಿ ಮುಂದೆ ಯಾವ ಹೆಣ್ಣಿಗೂ ಬರಬಾರದು. ಯುವಕರೇ, ನೀವು ಚಿಂತಿಸಿ, ಒಂದು ನಿರ್ಧಾರಕ್ಕೆ ಬನ್ನಿ .
*ಹೆಂಡತಿ ಬಿಟ್ಟವರು, ವಿಧುರರು, ಪ್ರಾಯ ಮೀರಿ ಮದುವೆಯಾಗದೆ ಇರುವವರು ನಮ್ಮಂತವರಿಗೆ ಬದುಕು ಕೊಡಲು ಮುಂದೆ ಬನ್ನಿ .
*ಪ್ರತಿ ಜಮಾತಿನಲ್ಲಿ ನನ್ನಂತೆ ಪ್ರಾಯ ಮೀರಿದ ಹೆಣ್ಣು ಮಕ್ಕಳ ಸರ್ವೆ ನಡೆಸಿ ಮದುವೆಗೆ ಯೋಜನೆ ಹಾಕಿರಿ.
*ನಂಡೆ ಪೆಂಙಲ್ ಅಭಿಯಾನದಡಿ ಬಹಳಷ್ಟು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಈ ಅಭಿಯಾನದಲ್ಲಿ ನೀವೂ ಸಹಕರಿಸಿ.
ನನ್ನ ಪ್ರಾಯ ಓಡುತ್ತಿದೆ. ಚರ್ಮ ಸುಕ್ಕುಗಟ್ಟುತ್ತಿದೆ. ತಲೆ ಕೂದಲು ಹಣ್ಣಾಗುತ್ತಿದೆ . ಮುಖದಲ್ಲಿ ಪ್ರಾಯ ಎದ್ದು ಕಾಣುತ್ತಿದೆ . ಆದರೂ ನನ್ನ ಮದುವೆಯ ಕನಸು ಇನ್ನೂ ಜೀವಂತವಿದೆ .
ಕಾಯುತ್ತಿದ್ದೇನೆ ಓರ್ವ ಮದುಮಗನ ಆಗಮನಕ್ಕಾಗಿ. ಕಾಯುತ್ತಿದ್ದೇನೆ ಒಂದು ದಾಂಪತ್ಯ ಜೀವನಕ್ಕಾಗಿ.
ದಯವಿಟ್ಟು ನನಗೂ ಒಂದು ಮದುವೆ ಮಾಡಿಸಿ.
ಇತಿ ನಿಮ್ಮ ಸಹೋದರಿ ಫಾತಿಮಾ
ನಿರೂಪಣೆ: ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.