“ಆ ಕಣ್ಣುಗಳಲ್ಲೇ ಕ್ರೌರ್ಯವಿದೆ..”(ಅಂಧಾಲೋಕ)

ಅಂಧಾಲೋಕ(ವಿಶ್ವಕನ್ನಡಿಗ ನ್ಯೂಸ್): ಬಿಕರಿಯಾದ ನ್ಯಾಯದ ಮುಂದೆ ಅಪರಾಧಗಳು ನೃತ್ಯವಾಡುತ್ತಿದೆ. ನ್ಯಾಯಾಲಯವು ಆಡಳಿತದ ಕೈಗೊಂಬೆಯಾದಲ್ಲಿ ಮುಂದೆ ನ್ಯಾಯ ನಿರೀಕ್ಷೆಯೇ ಮೂರ್ಖತನ. ಕಟ್ಟುನಿಟ್ಟಿಲ್ಲದ ಕಾನೂನಿನಿಂದಾಗಿ ಅಥವಾ ಹಣ ಮತ್ತು ಅಧಿಕಾರದ ತೂಕಕ್ಕೆ ತಕ್ಕಂತೆ ಸಡಿಲಗೊಳ್ಳುವ ನ್ಯಾಯದ ಗಂಟಿನಿಂದಾಗಿ ಇಡೀ ಭಾರತ ಬೆತ್ತಲೆಗೊಂಡಿದೆ. ಸತ್ಯವನ್ನು ಅಳೆಯುವ ಮಾಪನವೂ ಸುಳ್ಳು ಹೇಳತೊಡಗಿದರೆ ದುರಂತದ ಅಪಾಯ ಊಹೆಗೂ ನಿಲುಕದ್ದು. ಕಣ್ಣುಮುಚ್ಚಿಕೊಂಡ ನ್ಯಾಯದೇವತೆಯನ್ನು ಆಗಾಗ ಕೂಗಿ ಕರೆದರೂ ಕೂಡ ಮುನಿಸಿಕೊಂಡಂತೆ ಇನ್ನೂ ಕಣ್ಣು ತೆರೆಯದರ ಹಿಂದಿರುವ ಕರಾಳ ಕೈಗಳನ್ನು ಕಟ್ಟಿಹಾಕಿದರಷ್ಟೇ ದೇಶ ಮತ್ತೊಮ್ಮೆ ಸ್ವತಂತ್ರವಾಗಿ ಹಾರಾಡಬಲ್ಲದು. ಧರ್ಮ ಮತ್ತು ದೇಶವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ತೊಡಗಿದಂದಿನಿಂದ ಈ ಪುಣ್ಯ ಮಣ್ಣಿಗೆ ರಕ್ತ ಚಿಮ್ಮಲಾರಂಭಿಸಿದೆ. ಅಂದಿನಿಂದ ಇಂದಿನವರೆಗೂ ದುರಂತಗಳು ಹೆಚ್ಚುತ್ತವೆಯಲ್ಲದೆ, ನಿಯಂತ್ರಣವಿನ್ನೂ ಸಾಧ್ಯವಾಗಲಿಲ್ಲ. ಸಾಧ್ಯವಾಗಲಿಲ್ಲ ಅನ್ನುವುದಕ್ಕಿಂತ ಅದಕ್ಕೆ ಪೂರಕವಾದ ಪ್ರಯತ್ನಗಳಾಗಲಿಲ್ಲ ಅಥವಾ ನಿಯಂತ್ರಿಸುವುದನ್ನೂ ನಿಯಂತ್ರಿಸಲು ಒಂದಷ್ಟು ಮಂದಿ ಹುಟ್ಟಿಕೊಂಡರು ಅನ್ನಬಹುದು.

ದಿನಂಪ್ರತಿ ಹ್ಯಾಶ್ ಟ್ಯಾಗ್ ಸಮರಗಳು ಮುಂದುವರಿಯುತ್ತಲೇ ಇದೆ. ಇತ್ತೀಚೆಗೆ ಇಡೀ ದೇಶದಲ್ಲಿ ಸದ್ದಾದ ಉತ್ತರ ಪ್ರದೇಶದ ಹತ್ರಾಸ್ ಘಟನೆಯ ಬಗ್ಗೆ ಚರ್ಚೆಗಳು ಇನ್ನೂ ಕೊನೆಗೊಂಡಿಲ್ಲ. ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯನ್ನು ನಾಲ್ವರು ಯುವಕರು ಸೇರಿ ಅತಿಕ್ರೂರವಾಗಿ ಅತ್ಯಾಚಾರಗೈದು ಕೊಲೆ ಮಾಡಿದ್ದಕ್ಕಿಂತಲೂ ನನಗೆ ಹೆಚ್ಚು ಆಕ್ರೋಶವುಂಟಾಗಿದ್ದು ಆ ಬಳಿಕ ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಪೋಲೀಸರ ವರ್ತನೆಯಿಂದಲೇ. ನ್ಯಾಯದ ಪರ ನಿಂತು ಜನರ ಸುರಕ್ಷತೆಗೆ ಸಂರಕ್ಷಣೆ ಒದಗಿಸಬೇಕಾದ ಸರಕಾರ ಮತ್ತು ವ್ಯವಸ್ಥೆಯು ಜಾತಿಯ ಆಧಾರದಲ್ಲಿ, ಹಣಬಲದ ಆಧಾರದಲ್ಲಿ, ಅಧಿಕಾರದ ದುರಹಂಕಾರದಲ್ಲಿ ನ್ಯಾಯ ಮತ್ತು ಅನ್ಯಾಯವನ್ನು ವಿಂಗಡಿಸಿ ಹಂಚುವ ದುಷ್ಟ ಪರಿಯ ವಿರುದ್ಧ ಅನಿವಾರ್ಯ ಧ್ವನಿಯಾಗಬೇಕಿದೆ. ನಿಷ್ಟುರ ಕೈಗಳಿಂದ ಅಮಾನವೀಯವಾಗಿ ಸಾವನ್ನಪ್ಪಿಕೊಳ್ಳಬೇಕಾಗಿ ಬಂದ ಮನಿಷಾಳನ್ನು ಸರಕಾರ ಮತ್ತೊಮ್ಮೆ ಬೆತ್ತಲೆಯಾಗಿಸಿ ಕೊಂದಿದ್ದು ದೇಶದ ವ್ಯವಸ್ಥೆಯ ದಾರಿಯನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತಿದೆ.

ದೇಶದಲ್ಲಿ ಸುರಕ್ಷತೆಯೇ ಇಲ್ಲದ ರಾಜ್ಯ ಉತ್ತರಪ್ರದೇಶವಂತೆ‌. ಯೋಗಿ ಆದಿತ್ಯನಾಥ್ ಎಂಬ ನರರಕ್ಕಸ ಅಯೋಗಿಯ ಆಡಳಿತದಲ್ಲಿ ಯುಪಿ ಅತ್ಯಾಚಾರಗಳ ತವರೂರಾಗಿ ಸುದ್ದಿಯಾಗುತ್ತಿದೆ. ದಲಿತ ಹೆಣ್ಣೊಬ್ಬಳನ್ನು ಸ್ವಘೋಷಿತ ಮೇಲ್ಜಾತಿಯ ಹುಡುಗರು ಅತ್ಯಾಚಾರಗೈದು ಕೊಲೆಮಾಡಿದಲ್ಲಿ ಇಡೀ ವ್ಯವಸ್ಥೆಯೇ ಅತ್ಯಾಚಾರಿಗಳ ಪರ ನಿಂತು ಅವರನ್ನು ತಮ್ಮದೇ ಹೊದಿಕೆಯೊಳಗೆ ಬೆಚ್ಚಗೆ ಸಂರಕ್ಷಿಸುವ ಕೌಶಲ್ಯ ಇತರ ರಾಜ್ಯಗಳಿಗಿಂತ ಯೋಗಿ ನಾಡಲ್ಲಿ ತುಸು ಹೆಚ್ಚೇ. ಇಡೀ ದೇಶವನ್ನು ಕೇಂದ್ರ ಸರಕಾರ ಸರ್ವಾಧಿಕಾರದ ಹಿಡಿತಕ್ಕೆ ತರಲು ಪ್ರಯತ್ನಿಸುತ್ತಿದ್ದರೆ, ಯೋಗಿ ಅಷ್ಟೇ ಕುಶಲತೆಯಿಂದ ರಾಜ್ಯದಲ್ಲಿ ಸರ್ವಾಧಿಕಾರ ಸ್ಥಾಪಿಸಹೊರಟಿದ್ದಾನೆ. ಕ್ರೌರ್ಯಗಳಿಂದಷ್ಟೇ ಅಸ್ತಿತ್ವ ಸ್ಥಾಪಿಸಿದ ಬಿಜೆಪಿಗೆ ಕೊಲೆ, ಅತ್ಯಾಚಾರ, ಗಲಭೆಗಳೆಲ್ಲಾ ಓಟಿನ ಬಂಡವಾಳವೇ. ಬಹುಸಂಖ್ಯಾತರ ಮನವೊಲಿಕೆಗಾಗಿ ಮತ್ತು ದೇಶದಲ್ಲಿಡೀ ಅಶಾಂತಿಯ ಕಿಡಿಹಚ್ಚಿ ಆ ಬೆಂಕಿಯಲ್ಲೇ ಅಡುಗೆಯುನ್ನುವ ಸಂಘಪರಿವಾರದ ದುಷ್ಟ ಮನಸ್ಸಿನ ಬಗ್ಗೆ ಹೆಚ್ಚಿನ ವ್ಯಾಕರಣದ ಅಗತ್ಯವಿಲ್ಲ. ಕ್ರೌರ್ಯವೆಂದರೆ ಸಂಘಪರಿವಾರ ಎಂಬುದು ಎಷ್ಟು ಸತ್ಯವೋ, ಅದೇರೀತಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ ಕಣ್ಣಿನಲ್ಲಿ ಕ್ರೂರತೆಯ ಬೆಂಕಿಯುಂಡೆ ಉರಿಯುತ್ತಿದೆ ಎಂಬುದನ್ನೂ ಮನದಟ್ಟುಮಾಡಿಕೊಳ್ಳಬೇಕಿದೆ.

#JusticeFor ಹ್ಯಾಶ್ ಟ್ಯಾಗ್ ಅಭಿಯಾನಗಳು ಇನ್ನೂ ಹೆಚ್ಚಿಗೆ ಟ್ರೆಂಡ್ ಮಾಡಬೇಕಾದೀತು. ಮಧ್ಯರಾತ್ರಿಯಲ್ಲಿ ಮೊಂಬತ್ತಿಗಳು ಇನ್ನೂ ಅದೆಷ್ಟೋ ಕರಗಿಹೋಗಬಹುದು. ವ್ಯವಸ್ಥೆಯನ್ನು ವಿರೋಧಿಸಿರುವ ಧಿಕ್ಕಾರದ ಕೂಗುಗಳು ಬೀದಿಯುದ್ದಕ್ಕೂ ಕೇಳಿಸಬಹುದು. ಇವೆಲ್ಲವನ್ನೂ ಅಡಗಿಸಲು ಸರ್ವಾಧಿಕಾರಿಗಳು ಶ್ರಮಿಸುತ್ತಲೇ ಇದ್ದಾರೆ. ಹಲವದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಫ್ಯಾಸಿಸ್ಟ್ ಆಡಳಿತ ಶುರುವಾದಂದಿನಿಂದ ನ್ಯಾಯ ಮರೀಚಿಕೆಯಾದ ದೇಶದಲ್ಲಿ ಪ್ರತಿಯೊಂದು ಅಪರಾಧವನ್ನೂ ಜನತೆ ಪ್ರಶ್ನಿಸಿ ಹೋಗಬೇಕಾಗಿದೆ. ಆದರೆ, ಯಾವುದೂ ನ್ಯಾಯ ಸುವಾಸನೆ ಬೀರದೇ ದೇಶವನ್ನು ಅನ್ಯಾಯದ ಕೊಚ್ಚೆಯಲ್ಲೇ ಹೊರಳಾಡುವಂತೆ ಮಾಡಿ ಜರ್ಜರಿತಗೊಳಿಸಲಾಗುತ್ತಿದೆ. ಅಸಹ್ಯ ರಾಜಕಾರಣದ ಮುಂದೆ ನಗ್ನವಾಗಿದ್ದು ಭಾರತ.

ಮನಿಷಾ ವಾಲ್ಮೀಕಿಯ ನಂತರವೂ ಅದೇ ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲೂ ಇನ್ನಷ್ಟು ರೇಫ್ ಮರ್ಡರ್ ನಡೆಯಿತಾದರೂ ಎಲ್ಲವೂ ಸುದ್ದಿಯಾಗಿಲ್ಲ. ಅದು ಸ್ವಾಭಾವಿಕ, ನೂರರಲ್ಲಿ ಒಂದಷ್ಟೇ ಚರ್ಚೆಯಾಗುತ್ತದೆ, ಸದ್ದು ಮಾಡುತ್ತದೆ. ಆದಾಗ್ಯೂ ಇಷ್ಟೊಂದು ಆಕ್ರೋಶದ ಧ್ವನಿಯನ್ನೂ ಕುರುಡರಂತೆ ಕೇಳಿಸಿಕೊಂಡು ಅಪರಾಧಗಳ ದಾಖಲೆಯನ್ನೇ ಸುಟ್ಟುಹಾಕುವುದಾದರೆ ನ್ಯಾಯವನ್ನು ಕನಸಿನಲ್ಲೂ ಬಯಸಬಾರದು ಎಂದೇ ಹೇಳಬಹುದಾದೀತು. ಕಳೆದ ಆರು ವರ್ಷಗಳಿಂದ ವಿವಿಧ ರೀತಿಯಲ್ಲಿ ದೇಶ ಪ್ರಜೆಗಳ ಮೇಲೆ ಚಾಟಿಯೇಟು ಬೀಸುತ್ತಲೇ ಬಂದ ಸರ್ಕಾರದ ದೌರ್ಜನ್ಯಗಳ ಪಟ್ಟಿ ದೀರ್ಘವಿದೆ. ಒಂದರ್ಥದಲ್ಲಿ ಇವತ್ತಿನ ಆಡಳಿತ ಸ್ವಾತಂತ್ರ ಪೂರ್ವದ ಬ್ರಿಟಿಷರ ಆಡಳಿತಕ್ಕಿಂತಲೂ ಕಳಪೆಯಾಗಿದೆ ಎನ್ನಲೂಬಹುದು.

ಇಡೀ ದೇಶವೇ ಅರಿತಿರುವಂತಹ ಬಾಬರಿ ಮಸೀದಿ ಧ್ವಂಸದ ಕಥೆಯನ್ನು ‘ಆಕಸ್ಮಿಕ’ ಎಂಬ ಪದದಡಿ ಅಡಗಿಸಿಟ್ಟ ತೀರ್ಪು, ಧ್ವಂಸಗೈದಿದ್ದು ಕಾನೂನುಬಾಹಿರವೇ ಎಂಬ ಸುಪ್ರೀಂ ಹೇಳಿಕೆಯ ಜೊತೆಯಲ್ಲೇ ಆರೋಪಿಗಳನ್ನೆಲ್ಲಾ ಖುಲಾಸೆಗೊಳಿಸುವ ನ್ಯಾಯಾಲಯ, ಜನವರಿರೋಧಿ ಮಸೂದೆಗಳಿಗೆ ಜನಾಕ್ರೋಶದ ನಡುವೆಯೇ ರಾತ್ರೋರಾತ್ರಿ ಅಂಕಿತ ನೀಡುವ ರಾಷ್ಟ್ರಪತಿಗಳು, ಸಂತೃಸ್ತರಿಗೆ ಸಾಂತ್ವನ ನೀಡಲು ತೆರಳುವ ವಿರೋಧಪಕ್ಷದ ನಾಯಕರ ಮೇಲೆಯೇ ಬಲಪ್ರಯೋಗಿಸುವ ದುರ್ವ್ಯವಸ್ಥೆ, ಅದನ್ನೂ ನಾಟಕವೆನ್ನುತ್ತಾ ಕೇಕೆ ಹಾಕಿ ಕುಣಿಯುವ ಭಕ್ತಗಣ, ಪ್ರಧಾನಿಯು ಖಾಲಿ ಸುರಂಗದಲ್ಲಿ ಕ್ಯಾಮರಾಗಳಿಗೆ ಕೈಬೀಸಿದರೂ ರಿಯಲಿಸ್ಟಿಕ್ ದೇಶಪ್ರೇಮವೆನ್ನುವ ಜನಾಂಗವು ಆಳುತ್ತಿರುವ ದೇಶದಲ್ಲಿ ಸತ್ಯ ಮತ್ತು ನ್ಯಾಯದ ಕೊಲೆಯಾಗುತ್ತಲೇ ಇರುತ್ತದೆ ಹಾಗೂ ಅನ್ಯಾಯ, ಅಕ್ರಮಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತದೆ‌. ನೀತಿ ಎಂಬುವುದು ಆರು ವರ್ಷಗಳ ಹಿಂದೆಯೇ ಸತ್ತು ಹೂಳಲ್ಪಟ್ಟಿದೆ ಎಂಬ ವಾಸ್ತವವನ್ನು ಅರ್ಥಮಾಡಿಕೊಂಡು ಉಸಿರು ಬಿಗಿದಪ್ಪಿ ಬದುಕುವುದಷ್ಟೇ ಇನ್ನುಳಿದ ಮಾರ್ಗ. ಅದರ ಹೊರತಾಗಿ ನಿರೀಕ್ಷೆಗಳಿಗೆ ಇದು ಸಕಾಲವಲ್ಲ.

– ಹಕೀಂ ಪದಡ್ಕ

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...