ಸ ರ್ಕಾರಕ್ಕೆ ಹಣಕ್ಕಿಂತ ಹೆಣದ ಮೇಲೆ ಬಹಳ ಕಾಳಜಿ ಇದೆಯೇ ಎಂಬ ಅನುಮಾನ ಕಾಡುತ್ತಿದೆ! ರಾಜಕೀಯ ಪುಢಾರಿಗಳಾದ ದೊಡ್ಡ ದೊಡ್ಡ ಕುಳಗಳ ಉದರ ಪೋಷಣೆಗಾಗಿ ಮಾತ್ರ ರಾಜ್ಯದಲ್ಲಿ ಹಲವಾರು ಶಿಕ್ಷಣೋದ್ಯಮ ಸಂಸ್ಥೆಗಳು ಹುಟ್ಟಿಕೊಂಡಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಹಗಲುಸತ್ಯ. ಅವರಿಂದ ಸರ್ಕಾರದ ಬೊಕ್ಕಸಕ್ಕೆ, ಅಧಿಕಾರಿಗಳ ಒಳ ಜೇಬಿಗೆ ಸಾಕಷ್ಟು ಮನಿ ಟ್ರಾನ್ಸ್’ಫರ್ ಆಗೋದರಿಂದ ನಮ್ಮ ಮಕ್ಕಳ ರಕ್ತ ಬೆವರಾಗಿಸಿದ ದುಡ್ಡಿನ ತೊಂಭತ್ತು ಶೇಕಡಾ ಸಂಪಾದನೆಯು ಮೂರಾಬಟ್ಟೆಯಾಗಿದೆ.
ಇದೀಗ ಮಹಾಮಾರಿ ಕೊರೋನಾದಿಂದ ತತ್ತರಿಸಿದ ನಮ್ಮ ನಾಡಿನ ಪ್ರಜ್ಞಾವಂತರು ಅದರ ವಿರುದ್ಧ ಸರಿಯಾದ ಹೋರಾಟದಲ್ಲಿ ಭಾಗಿಯಾಗಿರುವಾಗ ನಮ್ಮ ಆಳುವ ಅಧಿಕಾರಿಗಳು ನಿಶ್ಚಿಂತೆಯಿಂದ ತಮಗನಿಸುವ ಕಾನೂನುಗಳನ್ನು ಛೂಬಿಟ್ಟು ನಿರುಮ್ಮಳರಾಗಿದ್ದಾರೆಂದರೆ ಅವರ ಕಾಳಜಿ ನಮ್ಮ ಹಣದ ಮೇಲೋ, ಹೆಣದ ಮೇಲೋ ಎಂದು ಯಾವುದೂ ಗೊತ್ತಾಗುತ್ತಿಲ್ಲ! ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆನ್ನುವ ನಮ್ಮ ಅಧಿಕಾರಿಗಳಿಗೆ ಶಾಲೆಯಲ್ಲಿರುವ ಮುಗ್ಧ ಮಕ್ಕಳ ಮಧ್ಯೆ ಈ ಅಂತರ ಬೇಡವೆನ್ನುವ ಹಠವಿದೆಯೇ? ಸಮಾಜದಲ್ಲಿ ಬೆರೆಯುವ ದೊಡ್ಡವರಿಗೇ ಅಂತರವೆಂಬುದು ಕ್ಷುಲ್ಲಕವಾಗಿ ಕಂಡರೆ, ನಮ್ಮ ಮಕ್ಕಳ ಸ್ಥಿತಿ ಹೇಗಾಗಿರಬೇಡ? ಸನ್ಮಾನ್ಯ ನಮ್ಮ ಮುಖ್ಯಮಂತ್ರಿಗಳು ಇದರ ಬಗ್ಗೆ ಆಲೋಚಿಸಬೇಕು. ಗೌರವಾನ್ವಿತ ಶ್ರೀ ಸುರೇಶ್ ಕುಮಾರ್ ಇದರ ಬಗ್ಗೆ ಗಹನವಾದ ಚಿಂತನೆ ನಡೆಸಲೇಬೇಕು. ತಮ್ಮ ಮಕ್ಕಳು ತಮ್ಮ ಕರುಳ ಕುಡಿಗಳೆಂಬ ನಿರ್ಧಾರವಿರುವ ಎಲ್ಲಾ ಹೆತ್ತವರು-ರಕ್ಷಕರು ಕೂಡಾ ಈ ನಿಟ್ಟಿನಲ್ಲಿ ಸರಿಯಾದ ನಿರ್ಧಾರವನ್ನು ತಾಳಬೇಕು.
ಶಿಕ್ಷಣ ಯಾವಾಗಲೂ ಸಿಗಬಹುದು. ಭವಿಷ್ಯ ಕೂಡಾ ಅಷ್ಟೆ. ಆದರೆ, ಕೊರೋನಾದಿಂದುಂಟಾಗುವ ಪ್ರಾಣಹಾನಿ ಯಾವತ್ತೂ ಮರುಸಿಗಲಾರದು. ಸರ್ಕಾರ ಕ್ಷಮೆ ಯಾಚಿಸಬಹುದು. ಪರಿಹಾರ ದುಡ್ಡು ನೀಡಬಹುದು. ನಮ್ಮಿಂದ ಕಳೆದು ಹೋದ ಆ ಅತ್ಯಮೂಲ್ಯ ಜೀವ, ನೆಮ್ಮದಿಯನ್ನು ಅದು ಪರಿಹಾರವಾಗಿ ನೀಡಲು ಸಾಧ್ಯವೇ? ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ತಕ್ಷಣ ಶಾಲಾ,ಕಾಲೇಜುಗಳು ಆರಂಭವಾಗಬೇಕೆಂಬ ಬಯಕೆ ಸಹಜವಾಗಿಯೇ ಇರಬಹುದು. ಯಾಕೆಂದರೆ ಶಿಕ್ಷಣದ ನೆಪದಲ್ಲಿ ವ್ಯಾಪಾರ ನಡೆಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಜನರನ್ನು ಹಗಲು ದರೋಡೆ ಮಾಡುತ್ತಿರುವುದು ಸರ್ವರಿಗೂ ತಿಳಿದಿರುವ ವಿಚಾರ. ಆದರೆ ಸರಕಾರ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಕಾರಣ, ಶಾಲೆಗಳನ್ನು ತೆರೆಯಲು ಮುಂದಾಗಲೇ ಬಾರದು.
ಸರ್ಕಾರ ಶಾಲೆ ಶುರು ಮಾಡಲು ಹೊರಟಿರೋದು ಅಕ್ಷಮ್ಯ. ಯಾವ ರೀತಿಯಿಂದಲೂ ಶ್ರೇಯಸ್ಕರವಲ್ಲ. ನಾನು ಖಂಡಿಸುತ್ತೇನೆ. ನೀವು ಪ್ರಜ್ಞಾವಂತರಾಗಿದ್ದರೆ ನೀವು ಕೂಡಾ.
– ಇಸ್ಮಾಈಲ್ ಶಾಫಿ ಬಬ್ಬುಕಟ್ಟೆ (ದ.ಕ. ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ [ರಿ.])
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.