ಧಾರವಾಡ (www.vknews) : ಶಾಲೆಗಳಿಗೆ ರಜೆ ಇದ್ದುದರಿಂದ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಿವ್ಯಾ ಅವಳು ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಲೇ 3ನೇ ತರಗತಿಯ ತನ್ನ ಸ್ವಂತ ಸಹೋದರಿಗೆ ನಿತ್ಯವೂ ಪಾಠ ಬೋಧನೆ ಮಾಡುವ ಮೂಲಕ ಗಮನಸೆಳೆದಿದ್ದಾಳೆ.
ನಗರದ ರಾಜ್ಯಮಟ್ಟದ ತರಬೇತಿ ಸಂಸ್ಥೆಯಾಗಿರುವ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ನಿರ್ದೇಶಕ ಬಿ. ಎಸ್. ರಘುವೀರ್ ತಮ್ಮ ಕಚೇರಿಗೆ ತೆರಳುತ್ತಿರುವಾಗ ಮಾರ್ಗ ಮಧ್ಯದಲ್ಲಿ ಈ ದೃಶ್ಯವನ್ನು ಕಂಡು ಕೆಳಗಿಳಿದು ವಿದ್ಯಾರ್ಥಿನಿಯರನ್ನು ಮಾತನಾಡಿಸಿ, ದಿವ್ಯಾಳ ಪಾಠಬೋಧನೆಯ ವಿಧಾನವನ್ನು ಮೆಚ್ಚಿಕೊಂಡು ಕೆಲಕಾಲ ಪಾಠ ಬೋಧನೆಯನ್ನು ವೀಕ್ಷಿಸಿ ಪೂರಕ ಸಲಹೆಗಳನ್ನು ನೀಡಿ ಅವಳನ್ನು ಪ್ರೋತ್ಸಾಹಿಸಿದ್ದಾರೆ. ಅವರ ಕುಟುಂಬಕ್ಕಿರುವ ಬಡತನದ ಜೊತೆಗೇ ತಾನೂ ಕಲಿಯಬೇಕು, ಜೊತೆಗೆ ತನ್ನ ಸಹೋದರಿಯೂ ವಿದ್ಯಾವಂತಳಾಗಿ ಉನ್ನತ ದರ್ಜೆಗೆ ಹೋಗಬೇಕೆಂಬ ದಿವ್ಯಾ ಅವಳ ಕಳಕಳಿಯನ್ನು ಸಿಸ್ಲೆಪ್ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ.
“ನಾವು ಮಾಧ್ಯಮದಲ್ಲಿ ಆನ್ಲೈನ್ ಪಾಠಗಳ ಕುರಿತು ಅಲ್ಲಿ ಮೂಡಿ ಬರುವ ಲೈವ್ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಈ ವಿದ್ಯಾರ್ಥಿನಿ ರಸ್ತೆ ಬದಿಯಲ್ಲಿಯೇ ನಿತ್ಯವೂ ತನ್ನ ತಂಗಿಗೆ ತರಕಾರಿ ಮಾರಾಟ ಮಾಡುತ್ತಲೇ ಪಾಠ ಹೇಳಿಕೊಡುತ್ತಿರುವುದು ನಿಜವಾದ ಆನ್ಲೈನ್ ಪಾಠದ ತರಗತಿಯಾಗಿದೆ” ಎಂದು ವಿಶ್ಲೇಷಿಸಿದ್ದಾರೆ.
ಮನಸ್ಸು ಧನಾತ್ಮಕ ನೆಲೆಯಲ್ಲಿ ಆಲೋಚಿಸಿ, ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲ ಕುಂದು-ಕೊರತೆಗಳನ್ನು ನೀಗಿ ಪ್ರಯತ್ನಗಳನ್ನು ನಿರಂತರ ಮುನ್ನಡೆಸಿದಾಗ ಯಶಸ್ಸು ಲಭಿಸುತ್ತದೆ. ಈ ನಿಟ್ಟಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಿವ್ಯಾ ಅವಳ ಪ್ರಯತ್ನಕ್ಕೆ ವ್ಯಾಪಕ ಪ್ರತಿಫಲ ಲಭಿಸಲಿ ಎಂದು ಸಿಸ್ಲೆಪ್ ನಿರ್ದೇಶಕ ರಘುವೀರ್ ಶುಭ ಹಾರೈಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.