ಹಿರಿಯ ಗುರು ಎಂಬ ಬಿರುದು ಪಡೆದವರು ಹ.ಷೇಖ್ ಅಬ್ದುಲ್ ಖಾದಿರ್ ಜೀಲಾನಿ ಬಾಗ್ದಾದಿ(ರ)

ನಾವು ಸಾಮಾನ್ಯವಾಗಿ ದರ್ಗಾಗಳ ಹತ್ತಿರ ಹಸಿರು ಬಣ್ಣದ ಧ್ವಜಸ್ತಂಭವನ್ನು ಕಾಣುತ್ತೇವೆ. ಹಸಿರು ಬಣ್ಣದ ಬಾವುಟ ಹಾರುತ್ತಿರುವುದನ್ನು ನೋಡುತ್ತೇವೆ. ಆ ಬಾವುಟ ಪಾಕಿಸ್ತಾನದ ಬಾವುಟವಲ್ಲ. ಹಾಗಾದರೆ ಆ ಬಾವುಟ ಯಾವುದಿರಬಹುದು ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಆ ಬಾವುಟ ಬೇರಾರದೂ ಅಲ್ಲ, ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಎಂಬ ಮಹಾನ್ ಹಿರಿಯ ಸೂಫಿ ಗುರುವಿನ ನಿಶಾನೆಯೇ ಅದಾಗಿದೆ. ಪ್ರಪಂಚದಲ್ಲಿ ಎಲ್ಲೆಲ್ಲಿ ಸೂಫಿ ಸಂತರ ಸಮಾಧಿ ಇದೆಯೋ ಅಲ್ಲೆಲ್ಲ ನಾವು ಆ ಹಸಿರು ಬಾವುಟವನ್ನು ಕಣಬಹುದು. ಅದು ಸೂಫಿ ಸಾಮ್ರಾಜ್ಯದ ಜೀವಂತ ಗುರುತು. ಹಿಂದಿನ ಕಾಲದಲ್ಲಿ ಪ್ರತೀ ರಾಜನಿಗೂ ತನ್ನದೇ ಆದ ಲಾಂಛನ ಮತ್ತು ಬಾವುಟ ಇರುತ್ತಿತ್ತು. ಯುದ್ಧ ಕಾಲದಲ್ಲಿ ತಮ್ಮ ಗುರುತಿನ ಚಿಹ್ನೆಯಾಗಿ ಅದನ್ನು ಬಳಸಲಾಗುತ್ತಿತ್ತು ಮತ್ತು ಕೋಟೆಗಳ ಮೇಲೂ ತಮ್ಮದೇ ಆದ ಪ್ರತ್ಯೇಕ ಬಾವುಟಗಳು ರಾರಾಜಿಸುತ್ತಿದ್ದವು. ಅವರ ಪತನದ ನಂತರ ಆ ಕೋಟೆಯ ಮೇಲೆ ಯಾರು ದಿಗ್ವಿಜಯ ಸಾಧಿಸುತ್ತಿದ್ದರೋ ಅವರ ಬಾವುಟವನ್ನು ಹಾರಿಸಲಾಗುತ್ತಿತ್ತು.

ರಾಜರುಗಳ ಯುಗ ಮುಗಿದ ಮೇಲೆ ಪ್ರಜಾಪ್ರಭುತ್ವದ ಯುಗ ಪ್ರಾರಂಭವಾಯಿತು. ಪ್ರತಿಯೊಂದು ದೇಶಕ್ಕೂ, ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಆದ ಬಾವುಟ ಮತ್ತು ಚಿಹ್ನೆಗಳಿವೆ. ಆ ಬಾವುಟಗಳÀಲ್ಲಿ ತಮ್ಮದೇ ಆದ ಬಣ್ಣಗಳಿವೆ. ಅವು ತಮ್ಮ ಭಾವನೆಗಳನ್ನು ಇಡೀ ಪ್ರಪಂಚಕ್ಕೆ ಸಾರುತ್ತವೆ.

ಭಾರತದ ಆಟಗಾರ ಹೊರದೇಶಗಳಿಗೆ ಹೋಗಿ ಆಡಿದರೆ, ಭಾರತದ ಪರವಾಗಿರುವವರು ಭಾರತದ ಬಾವುಟದಿಂದ ತಮ್ಮ ಗುರುತನ್ನು ವೀಕ್ಷಕರಿಗೆ ತೋರಿಸುವುದನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಬಾವುಟಕ್ಕೆ ಸಂವಿಧಾನದಲ್ಲಿ ತನ್ನದೇ ಆದ ಸ್ಥಾನಮಾನಗಳಿವೆ. ಒಟ್ಟಿನಲ್ಲಿ ಬಾವುಟ, ಗುರುತಿನ ಚಿಹ್ನೆ ಅಥವಾ ನಿಶಾನೆ ಎಂದು ಹೇಳಬಹುದು. ಪ್ರಪಂಚದಲ್ಲಿ ಶೃಂಗ ಸಭೆಗಳು ನಡೆದರೂ ಆ ಸಭೆಯಲ್ಲಿ ಭಾಗವಹಿಸುವವರ ಪ್ರತಿಯೊಂದು ದೇಶದ ಬಾವುಟ ಗೌರವದಿಂದ ಹಾರಿಸಲಾಗಿರುತ್ತದೆ. ಬಾವುಟವನ್ನು ನೋಡಿ ಯಾವ ಯಾವ ದೇಶಗಳು ಸಭೆಯಲ್ಲಿ ಹಾಜರಾಗಿವೆ ಎಂದು ತಿಳಿದುಕೊಳ್ಳಬಹುದು.

ಬೇರೆ ದೇಶದ ಬಾವುಟವನ್ನು ನಾವು, ನಮ್ಮ ದೇಶದ ಬಾವುಟವನ್ನು ಬೇರೆಯವರು ಇದು ನಮ್ಮ ರಾಷ್ಟ್ರಧ್ವಜ ಎಂದು ಹೇಳುವಹಾಗಿಲ್ಲ. ಅದು ಸಂವಿಧಾನದ ಕಾನೂನಿನ ವಿರುದ್ಧವಾಗುತ್ತದೆ.

ಸೂಫಿಸಂತರು ಸಹ ತಮ್ಮ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. ಪ್ರಾಪಂಚಿಕ ಸಾಮ್ರಾಜ್ಯಗಳಿಗೆ, ದೇಶಗಳಿಗೆ ಸರಹದ್ದುಗಳಿವೆ. ಆದರೆ ಸೂಫಿ ಸಾಮ್ರಾಜ್ಯಕ್ಕೆ ಸರಹದ್ದುಗಳಿಲ್ಲ. ಪ್ರೀತಿಯ ಸಾಮ್ರಾಜ್ಯಕ್ಕೆ ಸರಹದ್ದುಗಳಿಂದ ಬಂಧಿಸಲು ಸಾಧ್ಯವೆ? ಖಂಡಿತ ಇಲ್ಲ. ಸೂಫಿ ಸಂತರ ಪ್ರೀತಿಯ ಮತ್ತು ಆಧ್ಯಾತ್ಮಿಕ ಸಾಮ್ರಾಜ್ಯ ಇಡೀ ಪ್ರಪಂಚದಲ್ಲಿ ವ್ಯಾಪಿಸಿದೆ. ಇದಕ್ಕೆ ಮುಖ್ಯ ಕಾರಣ ಅವರು ದೇಶಗಳ ಮೇಲೆ ಆಡಳಿತ ನಡೆಸುತ್ತಿರಲಿಲ್ಲ. ಅದರ ಬದಲಾಗಿ ಅವರು ಆಡಳಿತ ನಡೆಸುತ್ತಿದ್ದುದು ಮನಸ್ಸುಗಳ ಮೇಲೆ. ಆದುದರಿಂದಲೇ ಅವರದು ಅಮರ ಸಾಮ್ರಾಜ್ಯ. ಈ ಪ್ರಪಂಚ ಇರುವವರೆಗೂ, ನಂತರವೂ ಅವರ ಸಾಮ್ರಾಜ್ಯ ಚಿರಂಜೀವಿಯಾಗಿ ಉಳಿದಿರುತ್ತದೆ. ಶರೀರಕ್ಕೆ ಸಾವು, ಆತ್ಮಕ್ಕೆ ಸಾವು ಉಂಟೆ? ಅದನ್ನು ಕೋಣೆಗಳಲ್ಲಿ ಬಂಧಿಸಿಡಲು ಸಾಧ್ಯವೇ?

ಸೂಫಿ ಸಂತರಲ್ಲಿ ಪ್ರಮುಖ ನಾಲ್ಕು ಪರಂಪರೆಗಳು ಅಥವಾ ಮನೆತನಗಳಿವೆ. ಖಾದಿರಿ, ಚಿಶ್ಟಿಯಾ, ಸುಹರ್ವದಿಯಾ ಮತ್ತು ನಕ್ಷ್ ಬಂದಿಯಾ. ಖದಿರಿಯಾ ಮನೆತನದವರು ತಮ್ಮನ್ನು ಹಸಿರು ಮತ್ತು ಕಪ್ಪು ಬಣ್ಣಗಳಿಂದ ಗುರುತಿಸಿಕೊಳ್ಳುತ್ತಾರೆ. ಖಾದಿರಿ ಗುರುಗಳು ಅಥವಾ ಸೂಫಿಗಳು ಹಸಿರು ಪೇಟವನ್ನು ಧರಿಸಿರುತ್ತಾರೆ. ಅವರನ್ನು ಗುಂಪಿನಲ್ಲಿ ನೋಡಿದಾಕ್ಷಣ ಇವರು ಖಾದಿರಿ ಮನೆತನದವರು ಎಂದು ಗುರುತಿಸಬಹುದು. ಚಿಶ್ಟಿಯಾ ಮನೆತನದವರು ತಮ್ಮನ್ನು ಕಾವಿ ಬಣ್ಣದಿಂದ ಗುರುತಿಸಿಕೊಳ್ಳುತ್ತಾರೆ. ಚಿಶ್ಟಿಯಾ ಮನೆತನದ ಗುರುಗಳು ಕಾವಿ (ಕೇಸರಿ) ಬಣ್ಣದ ಪೇಟವನ್ನು ಧರಿಸಿರುತ್ತಾರೆ. ಹೀಗೆ ರಫಾಯಿ ಮನೆತನದವರು ಬಿಳಿ ಬಣ್ಣದಿಂದ ಗುರುತಿಸಲ್ಪಡುತ್ತಾರೆ. ಆ ಮನೆತನಕ್ಕೆ ಸಂಬಂಧಿಸಿದ ಅನುಯಾಯಿಗಳು ಆ ಪ್ರತ್ಯೇಕ ಬಣ್ಣದ ಟೋಪಿಗಳನ್ನು ಧರಿಸಿರುತ್ತಾರೆ.

ಹ. ಅಬ್ದುಲ್ ಖಾದಿರ್(ರ) ಹುಟ್ಟಿದ್ದು ಪರ್ಶಿಯಾ ದೇಶದಲ್ಲಿ. ನಾವು ಇರುವುದು ಕರ್ನಾಟಕದಲ್ಲಿ. ಅವರು ಸ್ವರ್ಗವಾಸಿಯಾಗಿ ನೂರಾರು ವರ್ಷಗಳು ಕಳೆದಿವೆ. ಆದರೆ ಅವರ ಧ್ವಜ ಪ್ರತಿ ಊರಲ್ಲಿ ರಾರಾಜಿಸುತ್ತಿದೆ. ಸೂಫಿಸಂತರ ಸಾಮ್ರಾಜ್ಯಕ್ಕೆ ಸಾವಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಸಾಕ್ಷಿ ಬೇಕೆ? ಸೂಫಿಸಂತರು ಒಂದೇ ರಾಜ್ಯದ ಅಥವಾ ದೇಶದ ಸ್ವತ್ತಲ್ಲ. ಅವರು ಜನ್ಮತಾಳಿರುವುದು ಇಡೀ ವಿಶ್ವದ ಮಾನವಕುಲದ ಉದ್ಧಾರಕ್ಕಾಗಿ. ಹೃದಯದಿಂದ ಹೃದಯಕ್ಕೆ ಅವರ ಆಧ್ಯಾತ್ಮಿಕ ಜ್ಞಾನ ಹರಿಯುತ್ತಾ ಬರುತ್ತಿದೆ. ಹೀಗೆ ಹರಿಯುತ್ತಾ ಮುಂದೆ ಸಾಗುತ್ತಿರುತ್ತದೆ. ಆದರೆ ನಾವು ಮಾತ್ರ ಈ ಪ್ರಪಂಚದಲ್ಲಿ ಇರುವುದಿಲ್ಲ. ದೇವರು ಎಲ್ಲರಿಗೂ ಸತ್ಯ ಗುರುವಿನ ಸಾನ್ನಿಧ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುತ್ತೇನೆ.

 

ಪರ್ಶಿಯಾ ದೇಶದ ಗಿಲಾನ್ (ಜಿಲಾನ್) ಎಂಬ ಊರಲ್ಲಿ ಅವರ ಜನ್ಮ. ಇಸವಿ 1077ರಲ್ಲಿ ಆಯಿತು. ಅವರ ತಂದೆಯ ಹೆಸರು ಅಬು ಸಾಲೆಹ್(ರ) ಮತ್ತು ತಾಯಿ ಸಯ್ಯಿದ ಫಾತಿಮಾ(ರ). ತಂದೆಯವರು ದೇವರಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದರು. ತನ್ನ ಜೀವನವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದರು. ನದಿಯ ತೀರದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಒಂದು ದಿನ ಹೀಗೆ ಕುಳಿತಿರುವಾಗ ಒಂದು ಸೇಬು ನದಿಯಲ್ಲಿ ತೇಲಿಕೊಂಡು ಬರುತ್ತಿತ್ತು. ಇವರಿಗೆ ಹಸಿವಾಗಿದ್ದ ಕಾರಣ ಆ ಸೇಬನ್ನು ಎತ್ತಿಕೊಂಡು ತಿಂದರು. ತಿಂದ ನಂತರ ಬಹಳ ಚಿಂತೆಗೆ ಒಳಗಾದರು. ಈ ಸೇಬು ಯಾರ ತೋಟದ್ದೋ? ಮಾಲೀಕನ ಅನುಮತಿ ಇಲ್ಲದೆಯೇ ನಾನು ಆ ಸೇಬನ್ನು ತಿಂದುಬಿಟ್ಟೆನಲ್ಲ, ನನ್ನಿಂದ ಒಂದು ತಪ್ಪು ನಡೆದುಹೋಯಿತಲ್ಲ. ದೇವರಿಗೆ ನಾನು ಏನೆಂದು ಉತ್ತರ ಕೊಡಲಿ ಎಂದು ಕೊರಗತೊಡಗಿದರು. ನದಿಯ ತೀರದಲ್ಲಿ ಯಾರ ಸೇಬಿನ ತೋಟವಿರಬಹುದು? ಆ ಮಾಲೀಕನನ್ನು ಹುಡುಕಿ ಕ್ಷಮೆ ಕೇಳಬೇಕು ಎಂದು, ಅದೇ ನದಿಯ ತೀರದಿಂದ ನಡೆದುಕೊಂಡು ಸೇಬು ಹರಿದುಬಂದ ದಿಕ್ಕಿನಲ್ಲಿ ಮುಂದುವರೆದರು. ಕೊನೆಗೂ ಒಂದು ಸೇಬಿನತೋಟ ಸಿಕ್ಕಿತು. ತೋಟದ ಒಳಗೆ ಹೋದರು. ಅಲ್ಲಿದ್ದ ವ್ಯಕ್ತಿಯನ್ನು ಕಂಡು ನಾನು ತೋಟದ ಮಾಲೀಕರೊಂದಿಗೆ ಮಾತನಾಡಬೇಕು ಎಂದರು. ನಾನೇ ಮಾಲಿಕ ಬಂದ ವಿಷಯ ಏನು ಹೇಳಿ ಎಂದರು. ನಿಮ್ಮ ತೋಟದಿಂದ ಒಂದು ಸೇಬು ಹರಿದು ಬರುತ್ತಿತ್ತು ನನಗೆ ಹಸಿವಾಗಿತ್ತು. ಅದನ್ನು ನಾನು ತಿಂದುಬಿಟ್ಟೆ. ದಯವಿಟ್ಟು ಅದರ ಬೆಲೆ ಹೇಳಿ ಎಂದರು. ತೋಟದ ಮಾಲಿಕ ಅಬ್ದುಲ್ಲಾ ಸೋಮಿ(ರ) ಇವರ ಈ ದಕ್ಷತೆ ನೋಡಿ ಮಾರುಹೋದರು. ಇಂತಹ ವ್ಯಕ್ತಿಯನ್ನು ತನ್ನ ಬಳಿ ಉಳಿಸಿಕೊಳ್ಳಲು ಇಚ್ಛಿಸಿ, ನೀವು ಆ ಸೇಬಿನ ಬೆಲೆ ತೀರಿಸಬೇಕಾದರೆ ನನ್ನ ತೋಟದಲ್ಲಿ ಒಂದು ವರ್ಷ ಕೆಲಸ ಮಾಡಬೇಕು ಎಂದರು. ಈ ಶಿಕ್ಷೆಯನ್ನು ಅವರು ಹೃತ್ಪೂರ್ವಕವಾಗಿ ಒಪ್ಪಿಕೊಂಡರು. ಒಂದು ವರ್ಷ ಮುಗಿದ ನಂತರ ಪುನಃ ಹಲವು ವರ್ಷ ಅದೇ ಶಿಕ್ಷೆ ಮುಂದುವರೆಯಿತು. ಆ ತೋಟದ ಮಾಲೀಕರು ಇವರ ಪ್ರಾಮಾಣಿಕತೆ, ಸೃಜನಶೀಲತೆ, ನಿಷ್ಕಳಂಕ ವ್ಯಕ್ತಿತ್ವ, ಸಂಯಮ ಮೂರ್ತಿ, ನಿಸ್ಪøಹ ನಿಸ್ವಾರ್ಥ ಸೇವೆಯನ್ನು ನೋಡಿ, ನಿಮ್ಮ ಸೇವೆಯಿಂದ ನಾನು ಸಂತುಷ್ಟನಾದೆ, ನಿಮಗೆ ಒಂದು ಬಹುಮಾನ ಕೊಡಬೇಕು ಎಂದಿದ್ದೇನೆ ಎಂದರು. ಅವರಿಗೆ ಯಾವ ಆಸೆಯೂ ಇರಲಿಲ್ಲ ಆದರೂ ಮಾಲೀಕರ ಅಪ್ಪಣೆಯನ್ನು ಸ್ವೀಕರಿಸಿಕೊಂಡರು. ಅಬ್ದುಲ್ಲಾ ಸೋಮಿ(ರ) ಹೇಳಿದರು- ‘ನನಗೆ ಒಬ್ಬಳು ಮಗಳಿದ್ದಾಳೆ, ಅವಳಿಗೆ ಕಣ್ಣಿಲ್ಲ, ಕೈಕಾಲುಗಳ ಅಂಗವಿಕಲೆ, ಮೂಕಿ ಅವಳನ್ನು ನೀವು ಮದುವೆ ಮಾಡಿಕೊಳ್ಳಬೇಕು’ ಎಂದರು. ಆಗ ಅಬು ಸಾಲೆಹ್(ರ) ಮಾಲೀಕರ ಮಗಳಾದ ಸಯ್ಯಿದಾ ಫಾತಿಮಾ(ರ)ರವರನ್ನು ಮದುವೆ ಮಾಡಿಕೊಂಡರು. ಮಾಲೀಕರ ಮಗಳು ಅತಿ ಸುಂದರವಾಗಿರುವುದು ಅವರಿಗೆ ಮದುವೆಯ ನಂತರ ತಿಳಿಯಿತು. ತನ್ನ ಮಾವನ ಹತ್ತಿರ ಬಂದು- ‘ನೀವು ಹೇಳಿದ ಹಾಗೆ ನಿಮ್ಮ ಮಗಳಿಲ್ಲವಲ್ಲ’ ಎಂದರು. ಮಾವ- ‘ನಾನು ಹೇಳಿದ್ದು ಸತ್ಯವೆ. ಆಕೆ ತನ್ನನ್ನು ಮದುವೆ ಆಗುವ ಗಂಡನ್ನು ಒಂದು ಸಲವೂ ನೋಡಿಲ್ಲ. ತನ್ನ ಕೈಕಾಲುಗಳಿಂದ ದೇವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲಿಲ್ಲ, ತನ್ನ ಬಾಯಿಯಿಂದ ದೇವರಿಗೆ ಇಷ್ಟವಿಲ್ಲದ ಯಾವ ಮಾತನ್ನೂ ಆಡಲಿಲ್ಲ. ಆಕೆಯ ತಂದೆ ತೀರಿಹೋಗಿದ್ದಾರೆ, ಅವಳನ್ನು ನಾನು ಮತ್ತು ಅವಳ ತಾಯಿ, ಬೆಳೆಸಿದ್ದೇವೆ’ ಎಂದರು.

ಇಂತಹ ಸತ್ಯವಂತ ತಂದೆ-ತಾಯಿಯ ಸುಪುತ್ರರೇ ಹ. ಅಬ್ದುಲ್ ಖಾದಿರ್ ಜೀಲಾನಿ(ರ). ಕೆಲವು ವರ್ಷಗಳ ನಂತರ ಇವರ ತಂದೆಯೂ ಸಹ ಸ್ವರ್ಗವಾಸಿಯಾದರು. ಹ. ಅಬ್ದುಲ್ ಖಾದಿರ್‍ರವರನ್ನು(ರ) ಸಾಕುವ ಜವಾಬ್ದಾರಿಯೆಲ್ಲ ಅವರ ತಾಯಿ ಮೇಲೆ ಬಿದ್ದಿತು.

 

ಹ. ಅಬ್ದುಲ್ ಖಾದಿರ್‍ರವರಿಗೆ(ರ) ಓದುವ ಆಸೆ ಬಹಳವಾಗಿತ್ತು. ತನ್ನ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ತಾಯಿಯನ್ನು ಕೇಳಿದರು. ಆಗ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕಾದರೆ ಬಾಗ್ದಾದ್ ಪಟ್ಟಣಕ್ಕೆ ಹೋಗಬೇಕಾಗಿತ್ತು. ಮಗ ಚಿಕ್ಕವನು ಆದರೂ ಅವರ ತಾಯಿ ತನ್ನ ಪ್ರೀತಿಯ ಸುಪುತ್ರನನ್ನು ಹೆಚ್ಚಿನ ವಿದ್ಯಾಭ್ಯಾಸ ಪಡೆದುಕೊಳ್ಳಲು ಬಾಗ್ದಾದ್‍ಗೆ ಕಳುಹಿಸಲು ಸಿದ್ಧರಾದರು. ಆಗ ಬಾಲಕನಿಗೆ ಸುಮಾರು 10 ವರ್ಷ ವಯಸ್ಸಾಗಿತ್ತು. ಮಗನನ್ನು ಬಾಗ್ದಾದ್‍ಗೆ ಕಳುಹಿಸುವಾಗ, ನಲವತ್ತು ಚಿನ್ನದ ನಾಣ್ಯಗಳನ್ನು ಬಾಲಕನ ಅಂಗಿಯಲ್ಲಿ ಯಾರಿಗೂ ಕಾಣದಹಾಗೆ ಹೊಲಿದಿಟ್ಟು, ಬಾಗ್ದಾದ್‍ನಲ್ಲಿ ತೆಗೆದು ಖರ್ಚು ಮಾಡಿಕೋ ಎಂದರು. ‘ಯಾರಿಗೂ ಎಂದೂ ಸುಳ್ಳು ಹೇಳಬೇಡ, ಸತ್ಯವನ್ನೇ ನುಡಿ’- ಎಂದು ಉಪದೇಶ ಮಾಡಿ, ಮುದ್ದಾಡಿ ಕಳುಹಿಸಿಕೊಟ್ಟರು.

ಆ ಕಾಲದಲ್ಲಿ ಒಂದೂರಿನಿಂದ ಇನ್ನೊಂದೂರಿಗೆ ಒಂಟಿಯಾಗಿ ಯಾರೂ ಹೋಗುತ್ತಿರಲಿಲ್ಲ. ಆದುದರಿಂದ ಅವರ ತಾಯಿ ತನ್ನ ಮಗುವನ್ನು ಬಾಗ್ದಾದ್‍ಗೆ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಒಂದು ಗುಂಪಿನೊಂದಿಗೆ ಜೊತೆಗೂಡಿಸಿ ಕಳುಹಿಸಿದರು. ದಾರಿಯಲ್ಲಿ ಡಕಾಯಿತರು ಅವರ ಕಾರ್ವಾನನ್ನು(ಅಚಿಡಿಚಿvಚಿಟಿ) ಲೂಟಿ ಮಾಡಿದರು. ಎಲ್ಲರನ್ನೂ ಜಪ್ತಿಮಾಡಿ ಇದ್ದದ್ದನ್ನೆಲ್ಲಾ ಡಕಾಯಿತರು ಲೂಟಿ ಮಾಡಿಕೊಂಡರು. ಬಾಲಕ ಅಬ್ದುಲ್ ಖಾದಿರನನ್ನು(ರ) ನೋಡಿ ‘ನಿನ್ನ ಬಳಿ ಏನಿದೆ’ ಎಂದು ಕೇಳಿದಾಗ, ನನ್ನ ಬಳಿ 40 ಚಿನ್ನದ ನಾಣ್ಯಗಳಿವೆ ಎಂದು ಹೇಳಿದರು. ಒಬ್ಬ ಡಾಕು ಹುಡುಗ ತಮಾಷೆ ಮಾಡುತ್ತಿರಬಹುದು ಎಂದುಕೊಂಡ. ತನ್ನ ಅಂಗಿಯಲ್ಲಿ ಬಾಲಕನ ತಾಯಿ ನಾಣ್ಯಗಳನ್ನು ಹೊಲಿದಿರುವ ಜಾಗವನ್ನು ತೋರಿಸಿದರು. ಆಗ ಆ ಡಕಾಯಿತ ಬಾಲಕನನ್ನು ತನ್ನ ಸರದಾರನ ಬಳಿ ಕರೆದುಕೊಂಡು ಹೋದನು. ‘ನೀನು ಸತ್ಯ ಹೇಳದೇ ಹೋಗಿದ್ದಿದ್ದರೆ ನಮಗೆ ನಿನ್ನ ಬಳಿ ಇರುವ ನಾಣ್ಯಗಳ ಬಗ್ಗೆ ಗೊತ್ತಾಗುತ್ತಿರಲೇ ಇಲ್ಲ; ನೀನು ಹಾಗೆಯೇ ಸುಮ್ಮನಿದ್ದು ನಾಣ್ಯಗಳನ್ನು ಕಾಪಾಡಿಕೊಳ್ಳಬಹುದಿತ್ತಲ್ಲ’ ಎಂದು ಸರದಾರ ಹೇಳಿದ. ‘ನನ್ನ ತಾಯಿ ಎಷ್ಟು ಸಂಕಷ್ಟದಲ್ಲಿದ್ದರೂ ಸತ್ಯದ ಮಾರ್ಗ ಬಿಡಬಾರದು ಎಂದು ಉಪದೇಶ ಮಾಡಿದ್ದಾರೆ. ಆದುದರಿಂದ ನಾನು ಸತ್ಯವನ್ನೇ ಹೇಳುತ್ತಿದ್ದೇನೆ’ ಎಂದರು. ಹುಡುಗನ ಈ ಗುಣವನ್ನು ನೋಡಿ ಸರದಾರನ ಮನಸ್ಸು ಕರಗಿ ನೀರಾಗಿಹೋಯಿತು. ಆತನ ಜೀವನದ ಪರಿಯೇ ಬದಲಾಯಿತು. ಆತ ಅಳತೊಡಗಿದನು. ಆತನಿಗೆ ಸತ್ಯ ಮಾರ್ಗದ ದರ್ಶನ ಬಾಲಕ ಹ. ಅಬ್ದುಲ್ ಖಾದಿರ್‍ರವರಿಂದ ಆಯಿತು. ಆತ ಎಲ್ಲರೊಂದಿಗೂ ಕ್ಷಮೆ ಯಾಚಿಸಿ ತಾನು ಲೂಟಿ ಮಾಡಿದ್ದ ಎಲ್ಲವನ್ನೂ ಹಿಂತಿರುಗಿಸಿ, ನಾನು ಇಂದಿನಿಂದ ಸನ್ಮಾರ್ಗದಲ್ಲಿ ನಡೆಯುತ್ತೇನೆಂದು ಪ್ರಮಾಣ ಮಾಡಿದನು. ಅವನ ಸಂಗಡಿಗರೂ ಸಹ ಒಳ್ಳೆಯ ಮಾರ್ಗದತ್ತ ಪರಿವರ್ತನೆಗೊಂಡರು. ಒಂದು ಅನ್ವೇಷಣೆಯ ಪ್ರಕಾರ ಭಾರತ ದೇಶ ಭ್ರಷ್ಟಾಚಾರದಲ್ಲಿ 87ನೇ ಸ್ಥಾನ ಪಡೆದಿದೆ. (ಡಿಸೆಂಬರ್-2010 ಅPI ಖeಠಿoಡಿಣ (ರಿಪೋರ್ಟ್) 2010 ಹಗರಣಗಳ ವರ್ಷವೆಂದೇ ಪ್ರಖ್ಯಾತಿ ಪಡೆಯಿತು. (ಭೂಹಗರಣ, ಆದರ್ಶ ಹಗರಣ, ಐಪಿಎಲ್ ಹಗರಣ, ಲಾಭದಾಯಕ ಹುದ್ದೆ ತೆರಿಗೆ ವಂಚನೆ, 2ಜಿ ತರಂಗಾಂತರಗಳ ಹಗರಣ ಇತ್ಯಾದಿ) ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ. ಸತ್ಯವಿರಲಿ, ಸತ್ಯದ ನೆರಳೂ ಸಹ ದೂರ ದೂರದವರೆಗೂ ಕಾಣುತ್ತಿಲ್ಲ. ಪ್ರತಿ ನಿಮಿಷ ಪರರ ಸ್ವತ್ತನ್ನು ನುಂಗಲು ನಾವು ಪ್ರಯತ್ನಿಸುತ್ತಿದ್ದೇವೆ. ಹೀಗೇ ಮುಂದುವರೆದರೆ ಇನ್ನೊಂದು ಸುನಾಮಿ ಬರುವುದರಲ್ಲಿ ಸಂಶಯವೇ ಇಲ್ಲ. ಸೂಫಿಸಂತರ ಮಾರ್ಗವನ್ನು ಅನುಸರಿಸಿ ದೇಶದಲ್ಲಿ ಶಾಂತಿ ನೆಲೆಸುವಂತಾಗಬೇಕು. ಮಕ್ಕಳಿಗೆ ಸತ್ಯವಂತರ ಕಥೆಗಳನ್ನು ಹೇಳಿ ಅವರಿಗೆ ಒಳ್ಳೆಯ ದಾರಿಯನ್ನು ತೋರಿಸುವಂತಾಗಬೇಕು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು.

ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಆಧ್ಯಾತ್ಮಿಕ ವಿದ್ಯೆಯನ್ನು ಆಗಿನ ಕಾಲದ ಪ್ರಮುಖ ಆಧ್ಯಾತ್ಮಿಕ ಗುರುಗಳಾಗಿದ್ದ ಶೇಕ್ ಹಮ್ಮಾದ್ ಬಿನ್ ಮುಸ್ಲಿಂ(ರ) ಮತ್ತು ಶೇಕ್ ಕಾಜಿ ಅಬು ಸಯೀದ್ ಮುಬಾರಕ್ ಅಲ್ ಮಕ್‍ಜೂಮಿ(ರ)ರವರಿಂದ ಪಡೆದುಕೊಂಡರು. 25 ವರ್ಷ ದೇವರ ಧ್ಯಾನದಲ್ಲಿದ್ದರು. 40 ವರ್ಷ ಇಷಾ ವಜೂನಿಂದ ಬೆಳಗಿನ ಫಜರ್ ಪ್ರಾರ್ಥನೆ ಮಾಡಿರುವರು. (ವಜೂ- ನಮಾಜ್ ಮಾಡುವ ಮುನ್ನ ಶರಿಅತ್ ಪ್ರಕಾರ ನೀರಿನಿಂದ ಕೈಕಾಲು ಮುಖ ತೊಳೆಯುವುದು. (ವಜೂ ಮುರಿದುಹೋಗುವ ನಿಯಮಗಳಲ್ಲಿ ನಿದ್ದೆಯೂ ಒಂದಾಗಿದೆ) (ವಜೂ- ಂbಟuಣioಟಿ) ನಿದ್ದೆ ಮಾಡುವುದರಿಂದ ವಜೂ ಮುರಿದುಹೋಗುತ್ತದೆ. ಪುನಃ ನಮಾಜ್ ಮಾಡಬೇಕಾದರೆ ವಜೂ ಮಾಡಬೇಕಾಗುತ್ತದೆ. ಹ. ಅಬ್ದುಲ್ ಖಾದಿರ್ ಜೀಲಾನಿ(ರ) ರಾತ್ರಿಯ ನಮಾಜ್ ಇಷಾಗಾಗಿ ಮಾಡಿದ ವಜೂನಿಂದ ಬೆಳಗಿನ ನಮಾಜನ್ನು 40 ವರ್ಷ ಮಾಡಿದ್ದಾರೆ. ಅಂದರೆ 40 ವರ್ಷ ಅವರು ನಿದ್ದೆ ಮಾಡದೆ ಸೃಷ್ಟಿಕರ್ತನ ಧ್ಯಾನದಲ್ಲಿ ವ್ಯಸ್ಥರಾಗಿದ್ದರು ಎಂದರ್ಥ.) 15 ವರ್ಷ ಇಡೀ ರಾತ್ರಿ ಪವಿತ್ರ ಕುರ್‍ಆನ್ ಪಠಣ ಮಾಡಿದ್ದಾರೆ. ಎಷ್ಟೋ ದಿನ ಏನೂ ತಿನ್ನದೆಯೇ ತನ್ನ ‘ನಾನನ್ನು’ ಕೊಂದಿದ್ದಾರೆ. ಒಂದು ವರ್ಷ ನೀರನ್ನೇ ಕುಡಿಯದೆ ಅವರು ತನ್ನ ‘ನಾನು’ ಅನ್ನು ಪರೀಕ್ಷೆಗೆ ಒಳಪಡಿಸಿದ್ದರು ಎಂದು ಅಬುಲ್ ಮಸೂದ್ ಬಿನ್ ಅಬು ಬಕ್ರ್ ಹರೀಮಿ(ರ) ಹೇಳಿದ್ದಾರೆ, ಒಂದು ವರ್ಷ ಏನನ್ನೂ ತಿನ್ನದೆ ಕೇವಲ ನೀರನ್ನೇ ಸೇವಿಸಿಯೂ ಸಹ ಕಾಲ ಕಳೆದಿರುವುದುಂಟು. ಸಾವಿರಾರು ಜನರಿಗೆ ದಾನಿಯಾಗಿದ್ದ ಕರುಣಾಮಯಿ ತಮ್ಮ ಸ್ವಂತ ಜೀವನ ಯಾವ ರೀತಿ ನಡೆಸಿದ್ದಾರೆಂದು ನೋಡಿದಾಗ ತನ್ನ ‘ನಾನು’ ಅನ್ನು ಯಾವ ರೀತಿ ಪಳಗಿಸಿರಬಹುದು ಎಂದು ಆಶ್ಚರ್ಯವಾಗುತ್ತದೆ.

ಸಾಧನೆಯಲ್ಲಿ ತಲ್ಲೀನವಾದಾಗ ಅವರಿಗೆ ಕೊಂಚವೂ ಪ್ರಪಂಚದ ಅರಿವೇ ಇರುತ್ತಿರಲಿಲ್ಲ. ಹಲವಾರು ಸಲ ಅವರ ಸ್ವಂತ ಪರಿಸ್ಥಿತಿಯ ಬಗ್ಗೆಯೂ ಅವರಿಗೆ ಗಮನವಿರುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದೂರಿನಿಂದ ಇನ್ನೊಂದೂರಿಗೆ ಹೋಗಿ, ನಾನು ಎಲ್ಲಿದ್ದೆ, ಇಲ್ಲಿಗೆ ಹೇಗೆ ಬಂದೆ ಎಂದು ಆಶ್ಚರ್ಯ ಪಡುತ್ತಿದ್ದರು. ಅವರು ಆಧ್ಯಾತ್ಮಿಕ ಸ್ಥಿತಿಯಲ್ಲಿ ಎಷ್ಟು ಮುಳುಗಿ ಹೋಗುತ್ತಿದ್ದರೆಂದರೆ ಅವರ ಶರೀರದ ಬಗ್ಗೆ ಪರಿಜ್ಞಾನವೇ ಇರುತ್ತಿರಲಿಲ್ಲ. ಅವರು ಈ ಸ್ಥಿತಿಯಲ್ಲಿ ಎಲ್ಲೂ ನಿಲ್ಲದೆ ಸತತವಾಗಿ 12 ದಿನ ಓಟವೂ ಮಾಡಿದುಂಟು. ಅವರು ಸಾಮಾನ್ಯ ಸ್ಥಿತಿಗೆ ತಲುಪಿದಾಗ ಇಂತಹ ಘಟನೆಗಳನ್ನು ನೋಡಿ ಚಕಿತಗೊಳ್ಳುತ್ತಿದ್ದರು. “ನೀವು ಅಬ್ದಲ್ ಖಾದಿರ್, ನಿಮ್ಮೊಂದಿಗೆ ಈ ಘಟನಾವಳಿಗಳು ಸರ್ವೇಸಾಮಾನ್ಯ, ಅದನ್ನು ನೋಡಿ ಚಕಿತಪಡಬೇಕಾಗಿಲ್ಲ ಎಂದು ಜನ ಹೇಳಿರುವುದುಂಟು.

ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಅನೇಕ ಪುಸ್ತಕಗಳನ್ನು ಬರೆದರು. ಅದರಲ್ಲಿ ಮುಖ್ಯವಾಗಿ ಅಲ್ ಗುನ್‍ಯಾ-ಲಿ-ತಾಲಿಬಿ ತರೀಖ್ ಅಲ್ ಹಖ್. ಇದನ್ನು ಗುನ್‍ಯತುತ್ತಾಲಿಬಿನ್ ಎಂದು ಸಹ ಹೇಳುತ್ತಾರೆ. ನಾನು 8ನೇ ತರಗತಿಯಲ್ಲಿದ್ದಾಗ ನನಗೆ ಅರಬ್ಬಿ ಓದುವುದನ್ನು ಕಲಿಸಿದ ಗುರುಗಳು ಈ ಪುಸ್ತಕದ ವಿಷಯವನ್ನು ಹೇಳುತ್ತಿದ್ದರು. 20 ವರ್ಷ ಕಳೆದರೂ ಆ ಪುಸ್ತಕದ ಹೆಸರು ಮಾತ್ರ ನಾನು ಮರೆತಿಲ್ಲ. ಈ ಪುಸ್ತಕ ಮನುಷ್ಯನನ್ನು ಸನ್ಮಾರ್ಗದತ್ತ ಕರೆದೊಯ್ಯುತ್ತದೆ ಎಂದು ವಿದ್ವಾಂಸರು ಹೇಳಿದ್ದಾರೆ.

‘ಫತುಹ್-ಅಲ್-ಗೈಬ್’ (ನಿರಾಕಾರನ ಸಂದೇಶಗಳು) ಎಂಬ ಪುಸ್ತಕದಲ್ಲಿ ಅವರ 78 ಪ್ರವಚನಗಳಿವೆ. ಪ್ರವಚನಗಳು ಚಿಕ್ಕದಾಗಿದ್ದರೂ ಬಹಳ ಪ್ರಭಾವಶಾಲಿಯಾಗಿವೆ. ‘ಅಲ್-ಫತ್ಹ ಅರ್ರಬ್ಬಾನಿ’ (ಮಹಾನ್ ದಿವ್ಯ ದರ್ಶನ) – ಇದರಲ್ಲಿ ಅವರ 62 ದೊಡ್ಡ ಪ್ರವಚನಗಳಿವೆ. ಇದನ್ನು ಅವರು ಬಾಗ್ದಾದ್ ಮದ್ರಸಾದಲ್ಲಿ ಕೊಟ್ಟಿದ್ದರು.

‘ಜಲಾಅಲ್ ಖವಾತಿರ್’ – ಇದರಲ್ಲಿ 45 ಪ್ರವಚನಗಳಿವೆ. ಇದನ್ನೂ ಸಹ ಮದ್ರಸಾದಲ್ಲಿ ಹೇಳಲಾಗಿತ್ತು.

‘ಮಲ್‍ಫುಜಾತ್’ (ಹೇಳಿಕೆಗಳು) – ಇದರಲ್ಲಿ ಅವರು ಆಗಾಗ ಹೇಳಿದ ಮಾತುಗಳು ಮತ್ತು ಸಂದೇಶಗಳಿವೆ.

‘ಖಂಸತ ಅಶಾರ ಮಕ್‍ತುಬಾನ್’ (15 ಪತ್ರಗಳು) – ಪರ್ಶಿಯಾ ಭಾಷೆಯಲ್ಲಿ ಹ. ಅಬ್ದಲ್ ಖಾದಿರ್(ರ) ತನ್ನ ಒಬ್ಬ ಶಿಷ್ಯನಿಗೆ ಬರೆದ 15 ಪತ್ರಗಳು.

“ನಿಮ್ಮ ಸ್ವಂತ ‘ನಾನು’ವಿನಿಂದ ಹೊರಬನ್ನಿ ಮತ್ತು ಅದರಿಂದ ನಿಮ್ಮನ್ನು ದೂರಪಡಿಸಿಕೊಳ್ಳಿ. ನಿಮ್ಮ ಒಡೆತನ ಅಥವಾ ಸೌಮ್ಯ ಪ್ರವೃತ್ತಿಯಿಂದ ಕಳಚಿಕೊಳ್ಳಲು ಅಭ್ಯಾಸ ಮಾಡಿ ಮತ್ತು ಎಲ್ಲವನ್ನೂ ದೇವರಿಗೆ ಒಪ್ಪಿಸಿ. ಈತನು ನಿಮಗೆ ಯಾವ ಆಜ್ಞೆಗಳನ್ನು ಪಾಲಿಸಲು ಹೇಳಿದ್ದಾನೋ, ಯಾವುದನ್ನು ನಿಷೇಧಿಸಿದ್ದಾನೋ ಅದಕ್ಕೆ ಗೌರವ ಕೊಟ್ಟು ನಿಮ್ಮ ಹೃದಯದ ಬಾಗಿಲಿಗೆ ಈತನ ಕಾವಲುಗಾರರಾಗಿ, ಏಕೆಂದರೆ ಹೊರದೂಡಲ್ಪಟ್ಟ ಭಾವೋದ್ವೇಗ ಪುನಃ ನಿಮ್ಮ ಹೃದಯದೊಳಗೆ ಬರಬಾರದು.

“ಆಸೆಗಳಿಗೆ ಗುಲಾಮರಾಗುವುದು ಮತ್ತು ಮೌನ ಸಮ್ಮತಿಯಿಂದಿರುವುದು ಹೃದಯದಲ್ಲಿ ಅದರ ಸೇರ್ಪಡೆಗೆ ಎಡೆಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ಅದರ ಪ್ರಚೋದನೆಗೆ ಒಳಗಾಗದೆ ವಿರೋಧಿಸಿ ಹೃದಯದಿಂದ ಅದನ್ನು ಹೊರದೂಡಬಹುದು. ಆದುದರಿಂದ ಆತನ ಇಚ್ಛೆಗೆ ವಿರುದ್ಧವಾದದ್ದನ್ನು ಇಚ್ಛಿಸಲು ಪ್ರಯತ್ನಿಸಬೇಡ. ಆ ನಿನ್ನ ಸ್ವಂತ ಇಚ್ಛೆ ಏನೇ ಇರಲಿ, ಅದು ನಿನ್ನ ಅವಿವೇಕತನದ ಕಣಿವೆ. ಅಲ್ಲಿ ನಿನಗೆ ಸಾವು ಮತ್ತು ಸರ್ವನಾಶ ಕಾದಿದೆ ಮತ್ತು ಅವನ ದೃಷ್ಟಿಗೆ ಬೀಳುವುದು ಮತ್ತು ಅವನಿಂದ ದೂರಾಗುವುದಾಗಿದೆ. ಸದಾ ಆತನ ಆಜ್ಞೆಗಳನ್ನು ಪರಿಪಾಲಿಸು. ಸದಾ ಆತನ ತಡೆಯಾಜ್ಞೆಗಳನ್ನು ಗೌರವಿಸು. ಮತ್ತು ಸದಾ ಅವನ ಅಧಿಕೃತ ಆಜ್ಞೆಗೆ ಏನಿದೆಯೋ ಅದನ್ನು ಸಲ್ಲಿಸು. ಅವನೊಂದಿಗೆ ಸೃಷ್ಟಿಯ ಯಾವ ಭಾಗವನ್ನು ಅವನೊಂದಿಗೆ ಜೊತೆಗೂಡಿಸಬೇಡ. (ಅಂದರೆ ಅವನಿಗೆ ಸರಿಸಮಾನರು ಯಾರು ಇಲ್ಲ ಎಂದರ್ಥ). ನಿನ್ನ ಇಚ್ಛೆ, ನಿನ್ನ ಆಸೆಗಳು ಮತ್ತು ನಿನ್ನ ಇಂದ್ರಿಯ ಸುಖದ ಹಸಿವುಗಳು ಎಲ್ಲವೂ ಆತನ ಸೃಷ್ಟಿಗೆ ಸೇರಿದ್ದು. ಆದುದರಿಂದ ಇದರಲ್ಲಿ ಯಾವುದಾದರೂ ನೀನು ಅವನೊಂದಿಗೆ ಜೊತೆಗೂಡಿಸಿದರೆ ನೀನು ದೇವರ ನಂಬುಗನಾಗುವೆ. (ಅಂದರೆ ದೇವರ ಆರಾಧನೆ ಹೊರತುಪಡಿಸಿ ಮನಸ್ಸಿನಲ್ಲಿ ಬೇರೆ ವಸ್ತುಗಳ ಆರಾಧನೆಯನ್ನು ಮಾಡುತ್ತಿದ್ದರೆ, ಅಂದರೆ ತನ್ನ ಆಸೆಗಳ ಗುಲಾಮನಾಗಿದ್ದರೆ ಆತ ದೇವರ ನಂಬುಗನಾಗುತ್ತಾನೆ) ದೇವರು ಹೇಳಿದ್ದಾನೆ :

ಯಾರು ತನ್ನ ದೇವರನ್ನು ಸೇರಲು ಭರವಸೆ ಇಡುತ್ತಾರೋ ಅವರು ಸತ್ಕಾರ್ಯ ಮಾಡಲಿ ಮತ್ತು ದೇವರೊಂದಿಗೆ ಯಾರನ್ನು ಹೋಲಿಸದಿರಲಿ (18: 110’ – ಪುತುಹ್ ಅಲ್‍ಗೈಬ್(ಹ.ಅಬ್ದುಲ್ ಖಾದಿರ್(ರ))

‘ಗೌಸ್-ಎ-ಆಜಮ್’ ಅವರ ಬಿರುದುಗಳಲ್ಲಿ ಪ್ರಮುಖವಾದುದು. ಷೇಖ್ ಅಥವಾ ಮುರ್ಶಿದ್‍ಗಳ(ಗುರು) ‘ಹಿರಿಯ ಗುರು’ ‘ಸಂತ ಸಾಮ್ರಾಜ್ಯದ ಚಕ್ರವರ್ತಿ’ ಎಂದೂ ಸಹ ಇವರನ್ನು ಕರೆಯಲಾಗುತ್ತದೆ. ಸಹಾಬಿ, ತಾಬಯೀನ್, ತಬತಾಬಯೀನ್, ಗೌಸ್, ಕುತುಬ್ ಮತ್ತು ಅಬ್ದಾಲ್ – ಇವು ಸೂಫಿ ಸಂತರ ದರ್ಜೆಗಳು. ಪ್ರವಾದಿವರ್ಯರ ಸಹಚರರನ್ನು ಸಹಾಬಿ ಎನ್ನುತ್ತೇವೆ. ಸಹಾಬರ ಹಿಂಬಾಲಕರನ್ನು ತಾಬಯೀನ್, ಇವರ ಹಿಂಬಾಲಕರನ್ನು ತಬತಾಬಯೀನ್ ಎನ್ನುತ್ತಾರೆ. ಇವರ ನಂತರ ಶರಿಅತ್‍ನಲ್ಲಿ ಪಾಂಡಿತ್ಯ ಪಡೆದು, ಆಧ್ಯಾತ್ಮದಲ್ಲಿ ಉತ್ತುಂಗ ತಲುಪಿದ್ದರೆ ಅವರನ್ನು ಆ ಕಾಲದ ‘ಗೌಸ್’ ಎಂಬ ದರ್ಜೆ ಅಥವಾ ಬಿರುದಿನಿಂದ ಪರಿಚಯಿಸಲಾಗುತ್ತಿತ್ತು. ಹೀಗೆಯೇ ಅವರ ದರ್ಜೆಯ ನಂತರ ಕುತುಬ್ ಮತ್ತು ಅಬಾಲ್ ಬರುತ್ತಾರೆ.

 

ಇವರ ಆಧ್ಯಾತ್ಮಿಕ ವಂಶವೃಕ್ಷ ಹ.ಅಲಿ(ರ)ರವರನ್ನು ಹಿಂಬಾಲಿಸುತ್ತದೆ. ರಕ್ತ ಸಂಬಂಧದಲ್ಲೂ ಸಹ ಇವರ ಮೂಲ ಹ. ಅಲಿ(ರ) ಮತ್ತು ಹ. ಫಾತಿಮಾ(ರ) ರವರೆಗೂ ತಲುಪುತ್ತದೆ.

ತಂದೆಯ ಪೀಳಿಗೆ ತಾಯಿಯ ಪೀಳಿಗೆ

 

 

ಹ. ಅಲಿ(ರ)                                 ಹ. ಫಾತಿಮಾ(ರ)

ಹ. ಇಮಾಮ್ ಹಸನ್(ರ)                          ಹ. ಇಮಾಮ್ ಹುಸೇನ್(ರ)

ಹ. ಇಮಾಮ್ ಮಥ್ನಿ(ರ)                ಹ. ಇಮಾಮ್ ಜೈನುಲ್ ಆಬಿದೀನ್(ರ)

ಹ. ಅಬ್ದುಲ್ ಮಹ್ದ್(ರ)                               ಹ. ಇಮಾಮ್ ಮುಹಮ್ಮದ್ ಬಾಖಿರ್(ರ)

ಹ. ಮೂಸ ಅಲ್ ಜಾವ್ನ್(ರ)            ಹ. ಇಮಾಮ್ ಜಾಫರ್ ಸಾದಿಖ್(ರ)

ಹ. ಅಬ್ದುಲ್ಲಾ ಢಾನಿ(ರ)                              ಹ. ಇಮಾಮ್ ಮೂಸ ಕಾಜಿಂ(ರ)

ಹ. ಮೂಸ ಥಾನಿ(ರ)                     ಹ. ಶೇಕ್ ಅಲಿ ರಜಾ(ರ)

ಹ. ದಾವೂದ್(ರ)                         ಹ. ಅಬು ಅಲಾವುದ್ದೀನ್(ರ)

ಹ. ಮಹಮ್ಮದ್(ರ)                       ಹ. ಕಮಾಲುದ್ದೀನ್ ಈಸಾ(ರ)

ಹ. ಯಾಯ್ಹಾ ಅಜ್ಜಾಹಿದ್(ರ)          ಹ. ಅಬುಲ್ ಅತಾ ಅಬ್ದುಲ್ಲಾ(ರ)

ಹ. ಅಬಿ ಅಬ್ದಿ ಲ್ಲೈ(ರ)                     ಹ. ಶೇಕ್ ಸಯ್ಯದ್ ಮಹ್ಮಮೂದ್(ರ)

ಹ. ಅಬು ಸಾಲೆಹ್ ಮೂಸ(ರ)         ಹ. ಸಯ್ಯದ್ ಮುಹಮ್ಮದ್(ರ)

ಹ. ಸಯ್ಯದ್ ಅಬು ಜಮಾಲ್(ರ)     ಹ. ಸಯ್ಯದ್ ಅಬ್ದುಲ್ಲಾ ಸೋಮಿ(ರ)

 

ಹ. ಸಯ್ಯದ್ ಅಬ್ದುಲ್ಲಾ ಸೋಮಿರವರು ತನ್ನ ಮಗಳ ವಿವಾಹವನ್ನು ಹ. ಅಬು ಸಾಲೆಹ್ ಮೂಸರವರೊಂದಿಗೆ ಮಾಡಿದರು. ಈ ಮಹಾನ್ ದಂಪತಿಗಳ     ಸುಪುತ್ರನೇ ಹ. ಅಬ್ದುಲ್ ಖಾದಿರ್ ಜೀಲಾನಿ.

ಹ. ಮುಹಿಯುದ್ದೀನ್ ಅಬು ಮುಹಮ್ಮದ್ ಅಬ್ದುಲ್ ಖಾದಿರ್ ಜೀಲಾನಿ(ರ)

 

ಹ. ಅಬ್ದುಲ್ ಖಾದಿರ್‍ರವರು ಶರಿಅತ್ ಪರಿಪಾಲಕರಾಗಿದ್ದರು. ಆಧ್ಯಾತ್ಮದಲ್ಲಿ ಶಿಖರ ಮುಟ್ಟಿದ್ದರು. ಕೆಲವು ಸಮಯ ದೇವರ ಆರಾಧನೆಯಲ್ಲಿ ಎಷ್ಟು ಮಗ್ನರಾಗುತ್ತಿದ್ದರೆಂದರೆ ಅವರಿಗೆ ಜ್ಞಾನ ತಪ್ಪಿಹೋಗುತ್ತಿತ್ತು. ಎಷ್ಟೋ ಸಲ ಈ ಪರಿಸ್ಥಿತಿಯಲ್ಲಿ ಇವರು ನಿಧನರಾಗಿ ಹೋಗಿದ್ದಾರೆ ಎಂದು ಜನರು ಭಾವಿಸಿ ಅವರನ್ನು ಹೆಣದ ಹಲಗೆಯ ಮೇಲೆ ಮಲಗಿಸಿ ಸ್ನಾನ ಮಾಡಿಸಿರುವುದುಂಟು. ಅವರು ತಮ್ಮ ಅವಸ್ಥೆಯಿಂದ ಆ ಸಮಯದಲ್ಲಿ ಎಚ್ಚರಗೊಂಡಾಗ ಜನರಿಗೆ ಮತ್ತು ಇವರಿಗೆ ಆಶ್ಚರ್ಯವಾಗುತ್ತಿತ್ತು. 25 ವರ್ಷ ಅವರು ಇರಾಕಿನ ಕಾಡುಮೇಡುಗಳು ದೇವನ ಆರಾಧನೆಯಲ್ಲಿ ಅಲೆದರು. ನಂತರ ಪಟ್ಟಣಕ್ಕೆ ಬಂದು ಜನರಿಗೆ ಆಧ್ಯಾತ್ಮ ಜ್ಞಾನೋದಯ ಮಾಡುತ್ತಿದ್ದರು. ಅವರು ಪ್ರವಚನ ಮಾಡುವಾಗ ಈಗಿರುವಂತೆ ಮೈಕ್‍ಗಳು ಇರಲಿಲ್ಲ. ಅವರ ಪ್ರವಚನ ಕೇಳಲು ಸಹಸ್ರಾರು ಮಂದಿ ಸೇರುತ್ತಿದ್ದರು. ಪ್ರವಚನ ಕೇಳಲು ಮೊದಲನೆಯ ಪಂಕ್ತಿಯಲ್ಲಿ ಕುಳಿತಿರುವವರಿಗೆ ಎಷ್ಟು ಶುದ್ಧವಾಗಿ ಕೇಳಿಸುತ್ತದೆಯೋ, ಅತಿ ದೂರ, ಕೊನೆಯ ಪಂಕ್ತಿಯಲ್ಲಿ ಕುಳಿತಿರುವವರಿಗೂ ಅಷ್ಟೇ ಶುದ್ಧವಾಗಿ ಇವರ ಧ್ವನಿ ಕೇಳಿಸುತ್ತಿತ್ತು. ಹಿರಿಯರು ಹೇಳುತ್ತಾರೆ – ಅವರ ಪ್ರವಚನ ಕೇಳಲು 10 ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಿದ್ದರಂತೆ. ದೂರ ದೂರದವರೆಗೆ ಜನ ಕುಳಿತು ಪ್ರವಚನ ಕೇಳುತ್ತಿದ್ದರಂತೆ. ಮೈಕ್ ಇಲ್ಲದೆಯೇ ಪರಿಶುದ್ಧವಾಗಿ ಎಲ್ಲರಿಗೂ ಧ್ವನಿ ಕೇಳಿಸುವುದೆಂದರೆ ನಮ್ಮಂಥವರಿಗೆ ಆಶ್ಚರ್ಯ ಹುಟ್ಟಿಸುವಂಥಹ ಸಂಗತಿಯೆ. ಆದರೆ ದೇವರ ಸ್ನೇಹಿತರಿಗೆ ಯಾವುದೇ ಪವಾಡ ದೊಡ್ಡ ವಿಷಯವಲ್ಲ.

ಅವರು ಸೂಫಿಯಲ್ಲದೆ ವ್ಯಾಪಾರಿಯೂ ಸಹ ಆಗಿದ್ದರು. ಸರಕು ಸರಬರಾಜು ಮಾಡಲು ಅವರದೇ ಸ್ವಂತ, ಆಗಿನ ಕಾಲದ ದೋಣಿಗಳಿದ್ದವು. ಒಂದು ದಿನ ಹ. ಅಬ್ದುಲ್ ಖಾದಿರ್‍ರವರು ಪ್ರವಚನ ಮಾಡುತ್ತಿರುವಾಗ ಒಬ್ಬ ವ್ಯಕ್ತಿ ಬಂದು ಅವರಿಗೆ ವಿಷಯ ತಿಳಿಸುತ್ತಾನೆ. “ಸ್ವಾಮಿ, ಸಾಮಾನುಗಳ ಸಮೇತ ನಿಮ್ಮ ದೋಣಿಗಳು ಮುಳುಗಿ ಹೋದವಂತೆ.” ಆಗ ಸಂತರು ಏನೂ ಪ್ರತಿಕ್ರಿಯೆ ತೋರದೆ ತಮ್ಮ ಪ್ರವಚನ ಮುಂದುವರೆಸುತ್ತಾರೆ. ಕೆಲ ಸಮಯದ ನಂತರ ಪುನಃ ಒಬ್ಬ ವ್ಯಕ್ತಿ ಬಂದು “ನಿಮ್ಮ ದೋಣಿಗಳಿಗೆ ಏನೂ ನಷ್ಟವಾಗಿಲ್ಲವಂತೆ” ಎನ್ನುತ್ತಾನೆ. ಆಗಲೂ ಸಂತರು ಏನೂ ಹೇಳದೆ ತಮ್ಮ ಪ್ರವಚನ ಮುಂದುವರೆಸಿದರು.

ನಾವು ನಷ್ಟವಾದಾಗ ಅಥವಾ ಲಾಭವಾದಾಗ ಏನು ಮಾಡುತ್ತೇವೆ, ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಸಂತರ ವರ್ತನೆಯಿಂದ ತಿಳಿದುಬಂದ ವಿಷಯವೆಂದರೆ, ಅವರಿಗೆ ಪ್ರಾಪಂಚಿಕ ವಿಷಯಗಳು ದುಃಖ ಅಥವಾ ಸಂತೋಷ ನೀಡುತ್ತಿರಲಿಲ್ಲ. ಪ್ರಪಂಚವನ್ನು ಅವರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಏನು ಆಗಬೇಕೆಂದಿದೆಯೋ ಅದು ದೇವರ ಇಚ್ಛೆಯಂತೆ ನಡೆದೇ ನಡೆಯುತ್ತದೆ ಎಂಬ ದೇವರಲ್ಲಿ ಅಪಾರ ನಂಬಿಕೆಯನ್ನೂ ಸಹ ಆ ಘಟನೆ ನಮ್ಮಲ್ಲಿ ಹುಟ್ಟಿಸುತ್ತದೆ. ಸೂಫಿಸಂತರ ಪ್ರಾರ್ಥನೆಗಳಿಂದ ನಮ್ಮ ಕಷ್ಟಗಳು ದೂರವಾಗುತ್ತವೆ. ಅದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅವರು ದೇವರ ಪ್ರಿಯರು. ರಾಜರುಗಳು ಸಹ ಸೂಫಿಸಂತರ ಆಶೀರ್ವಾದ ಪಡೆದು ಯುದ್ಧಗಳಿಗೆ ಹೋಗುತ್ತಿದ್ದರು. ಇದರಲ್ಲಿ ಅವರ ರಾಜಕೀಯವಿದ್ದರೂ ಸಂತರಲ್ಲಿ ಅಪಾರ ನಂಬಿಕೆ ಇತ್ತು ಎಂದು ತಿಳಿಯುತ್ತದೆ. ಚರಿತ್ರೆಯ ಪುಟಗಳಲ್ಲಿ ಅಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.

ಮುಸ್ಲಿಂ ವರ್ಷದ ನಾಲ್ಕನೆ ತಿಂಗಳು ಸಂತರ ಜಯಂತಿಯನ್ನು ಆಚರಿಸಲಾಗುತ್ತದೆ. ಅದಕ್ಕೆ ಕರ್ನಾಟಕದ ಹಳ್ಳಿ ಭಾಷೆಯಲ್ಲಿ ‘ಗ್ಯಾರ್‍ವೀ’ (ಹನ್ನೊಂದನೆಯ) ಎಂದು ಕರೆಯಲಾಗುತ್ತದೆ. ದಿನಾಂಕ 11ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಕೆಲವರು ಆ ಇಡೀ ತಿಂಗಳಲ್ಲಿ ಯಾವುದಾದರೂ ಒಂದು ದಿನ ಜಯಂತಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸುವವರು ಅನ್ನದಾನ ಮಾಡುತ್ತಾರೆ. ಮಲೇಶಿಯಾ, ಥೈಲ್ಯಾಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶ, ಅಮೇರಿಕ ಮುಂತಾದ ದೇಶಗಳಲ್ಲಿ ವರ್ಷಕ್ಕೊಮ್ಮೆ ಅವರ ಜಯಂತಿಯನ್ನು, ಧ್ಯಾನ, ಕೀರ್ತನೆಗಳ ಸಭೆಗಳನ್ನು ನಡೆಸುವ ಮೂಲಕ ಆಚರಿಸುವುದು ಜಾರಿಯಲ್ಲಿದೆ.

 

Zabiulla Khan

 

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...