(www.vknews.in) ಹುಬ್ಬಳ್ಳಿ : ಇದೀಗ ತೆರೆ ಕಂಡಿರುವ ಡಾಲಿ ಧನಂಜಯ ನಿರ್ದೇಶನದ ‘ಹೆಡ್ ಬುಷ್’ ಚಲನಚಿತ್ರದಲ್ಲಿ ಶ್ರೀವೀರಭದ್ರ ದೇವರಿಗೆ ಮತ್ತು ಶ್ರೀವೀರಭದ್ರದೇವರ ಅವತಾರವನ್ನು ಪ್ರತಿನಿಧಿಸುವ ವೀರಗಾಸೆ ಪುರವಂತಿಕೆಯ ಅಖಂಡ ಧರ್ಮಾಚರಣೆ ಪರಂಪರೆಗೆ ಆಗಿರುವ ಅವಮಾನವನ್ನು ಶ್ರೀರಾಯಚೋಟಿ ವೀರಭದ್ರ ದೇವರ ರಥೋತ್ಸವ ಸೇವಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಹೆಡ್ ಬುಷ್ ಚಲನಚಿತ್ರದಲ್ಲಿ ವಿಲನ್ ಪಾತ್ರ ಸನ್ನಿವೇಶದ ಮಾರುವೇಷವನ್ನು ಸೃಷ್ಟಿಸಲು ಬೇರೆ ಅನೇಕ ಮಾರ್ಗಗಳಿದ್ದರೂ ಸಹಿತ ಶ್ರೀವೀರಭದ್ರ ದೇವರ ಅವತಾರವೇ ಆಗಿರುವ ವೀರಗಾಸೆ ಪುರವಂತ ಕಲಾವಿದರನ್ನು ಬಳಕೆ ಮಾಡಿದ್ದಲ್ಲದೇ ಅವರಿಗೆ ನಾಯಕ ನಟನು ಮನಬಂದಂತೆ ಒದೆಯುವ ದೃಶ್ಯಗಳು ಸಮಸ್ತ ಶ್ರೀವೀರಭದ್ರ ದೇವರ ಭಕ್ತ ಸಮೂಹದ ಭಾವನೆಗಳನ್ನು ಘಾಸಿಗೊಳಿಸಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಶ್ರೀವೀರಭದ್ರ ದೇವರ ಅಸಂಖ್ಯ ಭಕ್ತರಿದ್ದು, ಅವರ ಭಕ್ತಿಯ ಭಾವನೆಗಳನ್ನು ಪ್ರಸ್ತುತ ‘ಹೆಡ್ ಬುಷ್’ ಚಲನಚಿತ್ರವು ಕೆರಳಿಸಿದಂತಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ವೀರಗಾಸೆ ಪುರವಂತ ಕಲಾವಿದರನ್ನು ಇತರೇ ಕಲಾಪ್ರಕಾರಗಳ ಸಾಮಾನ್ಯ ಕಲಾವಿದರಂತೆ ಗುರುತಿಸದೇ ಸಾಕ್ಷಾತ್ ಶ್ರೀವೀರಭದ್ರ ದೇವರ ಧರ್ಮಾಚರಣೆಯ ಅವತಾರವೆಂದೇ ಗುರುತಿಸಿ ಅವರಲ್ಲಿ ಭಕ್ತಿ-ಶೃದ್ಧೆಗಳನ್ನು ಹೊಂದಲಾಗಿದೆ. ಅಂತಹ ವಿಶಿಷ್ಟ ವ್ಯಕ್ತಿತ್ವದ ವೀರಗಾಸೆ ಕಲಾವಿದರನ್ನು ‘ಹೆಡ್ ಬುಷ್’ ಚಲನಚಿತ್ರದಲ್ಲಿ ಮಾರುವೇ಼ಷದ ವಿಲನ್ ಪಾತ್ರ ಸನ್ನಿವೇಶಕ್ಕೆ ಬಳಸಿದ್ದೇ ಮೊದಲ ತಪ್ಪು. ಸಾಲದ್ದೆಂಬಂತೆ ಅವರನ್ನು ಒದೆಯುವ ದೃಶ್ಯಗಳನ್ನು ಚಲನಚಿತ್ರದಲ್ಲಿ ಸೇರಿಸಿರುವುದು ಅಕ್ಷಮ್ಯ ಅಪರಾಧವೇ ಆಗಿದೆ ಎಂದು ಸಮಿತಿ ಆಕ್ಷೇಪಿಸಿದೆ. *ಉಗ್ರ ಹೋರಾಟ* : ಹೆಡ್ ಬುಷ್ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಈ ಕೂಡಲೇ ಶ್ರೀವೀರಭದ್ರ ದೇವರ ಅವತಾರವೇ ಆಗಿರುವ ವೀರಗಾಸೆ ಪುರವಂತ ಕಲಾವಿದರನ್ನು ಒದೆಯುವ ಹಾಗೂ ಅವರ ಕುತ್ತಿಗೆಯ ಮೇಲೆ ಕಾಲಿಟ್ಟು ಅವರನ್ನು ಥಳಿಸುವ ದೃಶ್ಯಗಳನ್ನು ಚಲನಚಿತ್ರದಿಂದ ಕಟಾವಣೆ ಮಾಡದೇ ಹೋದರೆ ರಾಜ್ಯದಲ್ಲಿರುವ ಶ್ರೀವೀರಭದ್ರ ದೇವರ ಸಮಸ್ತ ಭಕ್ತ ಸಮೂಹ ಹೆಡ್ ಬುಷ್ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದೇ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಸಮಿತಿಯ ಪದಾಧಿಕಾರಿಗಳಾದ ಸಿ.ಎಂ. ಶಿವಶರಣ ಕಲಬುರ್ಗಿ, ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ವಕೀಲ ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಗದಗಯ್ಯ ಹಿರೇಮಠ, ಅನಿಲ ಉಳ್ಳಾಗಡ್ಡಿ, ಡಾ.ಗುರುಮೂರ್ತಿ ಯರಗಂಬಳಿಮಠ, ಎಂ.ಐ.ದೇಶನೂರ, ಚೆನ್ನಯ್ಯ ಚೌಕಿಮಠ ಇತರರು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.