ಬೆಳ್ತಂಗಡಿ (www.vknews.in) : ಗುರುವಾಯನಕೆರೆಯ ಅರಮಲೆಬೆಟ್ಟದ ಬಳಿ ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅರೆಮಲೆಬೆಟ್ಟು ದ್ವಾರದ ನಿವಾಸಿ, ಬೆಳ್ತಂಗಡಿ ತಾ. ಪಂ. ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಅಂಜಲಿ ನಾಯಕ್ ಗಾಯಗೊಂಡವರು.
ಅಂಜಲಿ ಅವರು ರಸ್ತೆ ಬದಿ ನಿಂತಿದ್ದ ಓಮ್ನಿ ಕಾರಿನ ಪಕ್ಕದಲ್ಲಿ ರಸ್ತೆ ದಾಟಲೆಂದು ನಿಂತಿದ್ದರು. ಈ ವೇಳೆ ಶಕ್ತಿನಗರ ಕಡೆಯಿಂದ ಗುರುವಾಯನಕೆರೆ ಕಡೆಗೆ ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಅಂಜಲಿ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಗುರುವಾಯನಕೆರೆಯ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ಕೊಂಡೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಯಿತು.
ಅಂಜಲಿ ಅವರ ಪತಿ ಗೋಪಿನಾಥ ನಾಯಕ್ ಅವರು ಗುರುವಾಯನಕೆರೆಯಲ್ಲಿ ಅಂಗಡಿಯನ್ನು ಹೊಂದಿದ್ದರು. ಪತಿಯ ಅಂಗಡಿಗೆ ಹೋಗಲು ಅಂಜಲಿ ಅವರು ರಸ್ತೆ ಬದಿ ನಿಂತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.