(www.vknews. in) ಕಾಲ್ಚೆಂಡಿನಲ್ಲಿ ಭಾರತದ ಅಂಬೆಗಾಲು – ಸುಬ್ರಮಣ್ಯ ಹೆಬ್ಬಾಗಿಲು ಕರ್ನಾಟಕದ ಬೈಂದೂರು ಮೂಲದವನಾದ ನಾನು, ಕಳೆದ 15 ವರ್ಷಗಳಿಂದ ಕತಾರಿನಲ್ಲಿ ವಾಸಿಸುತ್ತಿದ್ದು, ಒಂದು ದಶಕದಲ್ಲಿ ಆದ ಬೆಳವಣಿಗೆಗಳನ್ನು ಪ್ರತ್ಯಕ್ಷವಾಗಿ ಗಮನಿಸುತ್ತಿರುವುದು ಮಾತ್ರವಲ್ಲದೆ, ಕತಾರ್ ದೇಶದ ಕೆಲವು ಕಾಮಗಾರಿಗಳಲ್ಲಿ ಕೆಲಸವನ್ನೂ ಸಹ ನಿರ್ವಹಿಸಿದ್ದೇನೆ. 2022ರ ಫಿಫಾ ಅಂತರರಾಷ್ಟ್ರೀಯ ಕಾಲ್ಚೆಂಡಿನ ಪಂದ್ಯಾವಳಿಗಳ ಸಲುವಾಗಿ ಸಂಪೂರ್ಣ ನಗರವನ್ನೇ ಮಾರ್ಪಡಿಸಿ ಜೀರ್ಣೋದ್ಧಾರ ಮಾಡಲಾಯಿತು. ರಸ್ತೆಗಳ ನವೀಕರಣ, ಕಟ್ಟಡ ನಿರ್ಮಾಣ, ನೂತನ ಕ್ರೀಡಾಂಗಣಗಳ ಕಾಮಗಾರಿ, ಮೆಟ್ರೋ ರೈಲು ಸಂಪರ್ಕ, ವಿದ್ಯುತ್ ಶಕ್ತಿ, ಅನಿಲ ಸೌಲಭ್ಯ, ವಿಮಾನ ನಿಲ್ದಾಣದ ವಿಸ್ತೀರ್ಣ, ಇವೆಲ್ಲವೂ ಪಂದ್ಯಾವಳಿಗಳ ಸಲುವಾಗಿ ದೇಶದ ನವೀಕರಣದ ಅಂಗಗಳು.
ಈಗ ಸೌಲಭ್ಯವಿದೆ, ಇನ್ನು ಪ್ರತಿ ವರ್ಷವೂ ಉನ್ನತ ಮಟ್ಟದ ಪಂದ್ಯಾವಳಿಗಳ ಆಯೋಜನೆ ಮಾಡುವುದು ಅತಿ ಸುಲಭ. ಇಂತಹದೊಂದು ಬೃಹತ್ ಗಾತ್ರದ ಸರಣಿ ಏಷಿಯನ್ ಫುಟ್ಬಾಲ್ ಕಪ್ 2023. 24 ತಂಡಗಳ ಹಣಹಣಿ, ಜನವರಿ 12ರಂದು ಮೊದಲ ಪಂದ್ಯವನ್ನು ಕ್ರೀಡಾಂಗಣದಲ್ಲಿ ನೋಡಲು ಅವಕಾಶ ದೊರಕಿತು. ನಂತರ ದಿನಾಂಕ 13 ಜನವರಿ 2024 ರಂದು ಭಾರತ ದೇಶದ ರಾಷ್ಟ್ರಗೀತೆಯನ್ನು 40,000 ಜನರು ಇರುವ ಕ್ರೀಡಾಂಗಣದಲ್ಲಿ ಕೇಳಬೇಕೆಂಬ ಆಸೆ ಪೂರೈಸಿತು. ಭಾರತ ದೇಶದ ರಾಷ್ಟ್ರೀಯ ಫುಟ್ಬಾಲ್ ತಂಡ ಕತಾರಿಗೆ ಕಾಲಿಟ್ಟ ಗಳಿಗೆಯೇ ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷನಾಗಿ ನಾನು ಹಮಾದ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರುವ ಸೌಭಾಗ್ಯ ದೊರಕಿತು. ನಂತರ ಭಾರತ ತಂಡವು ಆಡಿದ ಮೂರು ಪಂದ್ಯಗಳನ್ನು ಆಯಾ ಕ್ರೀಡಾಂಗಣದಲ್ಲಿ ಹೋಗಿ ವೀಕ್ಷಿಸುವ ಅವಕಾಶವನ್ನು ಬಿಡಲಿಲ್ಲ. ಭಾರತದಲ್ಲಿ ಕ್ರಿಕೆಟಿಗೆ ನೀಡುವ ಪ್ರಾಧಾನ್ಯತೆ ಬಹುಷಃ ಫುಟ್ಬಾಲ್ ಗೆ ಇಲ್ಲವಾಗಿದೆ, ಆದುದರಿಂದ ಬೇರೆ ದೇಶಗಳನ್ನು ಹೋಲಿಸಿದರೆ ನಮ್ಮ ಆಟಗಾರರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತರಬೇತಿಯ ಅಗತ್ಯವಿದೆ ಎಂದೆನಿಸದೆ ಇರದು. ಬಾಲ್ಯದಲ್ಲೇ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಚಿಕ್ಕ ಮಕ್ಕಳಿಂದ ತರಬೇತಿ ನೀಡುತ್ತಾ ಯುವ ಆಟಗಾರರನ್ನು ಸೃಷ್ಟಿಸಬೇಕಾಗಿದೆ ಆಗಲೇ ಆಟವು ರಕ್ತದಲ್ಲಿ ಹರಿಯುತ್ತದೆ ವ್ಯಕ್ತಿಯಲ್ಲಿ ಅವಿಭಾಜ್ಯ ಅಂಗವಾಗುತ್ತದೆ ಆಟ ಕರಗತವಾಗುತ್ತದೆ. ಕತಾರಿನ ಕ್ರಿಕೆಟ್ ತಂಡವು ಅಷ್ಟು ಪ್ರಖ್ಯಾತವಲ್ಲ ಆದರೆ ಫುಟ್ಬಾಲ್ ತಂಡವು 2022ನೇ ಫಿಫಾದಲ್ಲೂ ಪಾಲ್ಗೊಂಡಿತ್ತು ಆದರೆ ಜಯಸಲಿಲ್ಲವಷ್ಟೇ. ಭಾರತದ ಫುಟ್ಬಾಲ್ ತಂಡವು ಉತ್ತಮ ಪ್ರದರ್ಶನ ನೀಡಿತು, ಆದರೆ ಜಯಿಸಲಾಗಲಿಲ್ಲ. ನಾಯಕರಾದ ಶ್ರೀ ಸುನಿಲ್ ಛತ್ರಿ ಅತ್ಯುತ್ತಮ ಆಟಗಾರರು. ತಮ್ಮ ದೇಶಕ್ಕೆ ಹೊಡೆದಿರುವ ಅತಿ ಹೆಚ್ಚು ಗೋಲುಗಳಿಗೆ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿರುವ ವ್ಯಕ್ತಿ ಶ್ರೀ ಸುನಿಲ್ ಛೆತ್ರಿ, ಆದರೆ ಅವರು ಒಬ್ಬರಿಂದಲೇ 11 ಜನರ ತಂಡದ ಪಂದ್ಯ ಗೆಲ್ಲಲಾಗದು! ಬೇರೆ ಆಟಗಾರರು ಬಹಳ ಚತುರತೆ, ಪರಿಶ್ರಮದಿಂದ ಆಡಿದರೂ ಎದುರಾಳಿಗಳ ಪ್ರಹಾರ ಬಹಳ ತೀಕ್ಷ್ಣ ಹಾಗೂ ಅತಿ ವೇಗದ ಚಾಲನೆ ಯಾಗಿತ್ತು. ನಮ್ಮ ದೇಶದವರು ಇನ್ನೂ ಹೆಚ್ಚಿನ ಸಮಯವನ್ನು ಆಟದ ಅಭ್ಯಾಸದ ಮೇಲೆ ಹಾಕಬೇಕೆಂಬ ವಿಷಯವನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಸಮಸ್ತ ಭಾರತೀಯರು ಒಪ್ಪಲೇಬೇಕಾಗುತ್ತದೆ. ಎದುರಾಳಿಗಳನ್ನು ಗಮನಿಸಿದರೆ ನಮ್ಮ ದೇಶದ ತಂಡದಲ್ಲಿ ಏನೋ ಕೊರತೆ ಇದೆ ಎಂಬ ಅಭಿಪ್ರಾಯ ಬಾರದೆ ಇರದು. ಅನ್ನ-ಆಹಾರ, ಸ್ವಾಸ್ಥ್ಯ ಪರಿಸರ, ವಾತಾವರಣ, ದೃಢ ಮೈಕಟ್ಟು, ಅಭ್ಯಾಸ, ಶಕ್ತಿ-ಸಂಯಮ ಇಂತಹ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮಟ್ಟಿಗೆ, ಇಂತಹ ಹಂತದವರೆಗಾದರೂ ಬಂದಿರುವವರಲ್ಲ ಎಂಬ ಸಂತಸವು ಆಗುತ್ತದೆ. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳ ತಂಡಗಳು ಇಂತಹ ಪಂದ್ಯಾವಳಿಗಳಲ್ಲಿ ಕಾಣಸಿಗದು. ಆದರೆ ಭಾರತ ದೇಶದ ತಂಡವು ಏಷ್ಯನ್ ಫುಟ್ಬಾಲ್ ಕಪ್ 2023 ಪಂದ್ಯಾವಳಿಯಲ್ಲಿ ಕಾಲಿಟ್ಟಿರುವುದು ನಿಜವಾಗಲೂ ಒಂದು ಸಾಧನೆಯೇ. ಬರುವ ವರ್ಷಗಳಲ್ಲಿ ಕ್ರಿಕೆಟಿನಂತೆ ಫುಟ್ಬಾಲ್ ಆಟಕ್ಕೂ ಪ್ರಾಧಾನ್ಯತೆ ದೊರಕುತ್ತದೆ ಎಂದು ಆಶಿಸೋಣ. ಇನ್ನೂ ಪ್ರತಿಭಾ ಶಾಲಿ ಆಟಗಾರರು ಸೇರ್ಪಡೆಯಾಗಿ, ಉನ್ನತ ಮಟ್ಟಕ್ಕೆ ಭಾರತದ ಫುಟ್ಬಾಲ್ ಕೀರ್ತಿ ಏರಲಿ ಎಂದು ಆಶಿಸೋಣ
ಕಳೆದ ವಾರ ಭಾರತ ದೇಶದ ಫುಟ್ಬಾಲ್ ತಂಡದವರ ಜೊತೆ ಭೋಜನಕೂಟದಲ್ಲಿ ಚರ್ಚೆ ನಡೆಸಿದೆವು, ಅವರ ಅಭಿಪ್ರಾಯವನ್ನು ಸ್ವೀಕರಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭಕೋರಿ ಕತಾರಿನಿಂದ ಬೀಳ್ಕೊಡುಗೆ ನೀಡಲಾಯಿತು. ಬರುವ ದಿನಗಳಲ್ಲಿ ಹೆಚ್ಚಿನ ಪಂದ್ಯಾವಳಿಗಳಲ್ಲಿ ಭಾಗವಹಿಸಿ ವಿಜಯ ಪತಾಕೆಯನ್ನು ಹಾರಿಸಲೆಂದು ಕೋರುತ್ತೇವೆ, ಜೈ ಹಿಂದ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.