ಬಂಟ್ವಾಳ (www.vknews. in) : ಸ್ವಸ್ಥ ಭಾರತಕ್ಕಾಗಿ ಸ್ವಚ್ಛ ಪರಿಸರ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ಜೂನ್ 01 ರಂದು ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕೃತಿಯ ಅವಗಣನೆ ಆಗುತ್ತಿರುವ ಈ ಹೊತ್ತಿನಲ್ಲಿ ಪರಿಸರದ ಮಹತ್ವದ ಕುರಿತು ಚಿಂತನೆ ನಡೆಸುವುದು ಹಾಗೂ ಮುಂದಿನ ಪೀಳಿಗೆಗೆ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಭಾರತ ಸ್ವಸ್ಥವಾಗಿರಬೇಕಾದರೆ, ಪಂಚಭೂತಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆ ನಮ್ಮದಾಗಿದ್ದು, ಇದು ಪರಿಸರವನ್ನು ಶ್ರೀಮಂತಗೊಳಿಸುವ ವೈಚಾರಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಅದಮ್ಯ ಚೇತನ ಫೌಂಡೇಶನ್ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೊದಲನೇ ಗೋಷ್ಠಿಯಲ್ಲಿ ಪರಿಸರ ಚಿಂತಕ ಶಿವಾನಂದ ಕಳವೆ ಜಲ ಮರ ಜಾಗೃತಿಯ ದೇಸಿ ದಾರಿ ಕುರಿತು ಮಾತನಾಡುವರು. ಎರಡನೇ ಗೋಷ್ಠಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಹಾಗೂ ಸಾವಯವ ಕೃಷಿಕ ವಸಂತ ಕಜೆ ಅವರು ಮಣ್ಣು ಮತ್ತು ಆಹಾರ ವಿಷ ಮುಕ್ತವಾಗುವುದರ ಕುರಿತು ಮಾತನಾಡಲಿದ್ದಾರೆ. ಬಳಿಕ ಸಮಗ್ರ ತ್ಯಾಜ್ಯ ನಿರ್ವಹಣೆಯ ವಿವಿಧ ಆಯಾಮಗಳ ಕುರಿತು ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಕೆ.ಆರ್ ಶ್ರೀಹರ್ಷ ಮಾತನಾಡಲಿದ್ದು, ಆರಾಧನೆ ಮತ್ತು ನಂಬಿಕೆಗಳಲ್ಲಿ ಪರಿಸರ ಉಳಿವಿನ ದೃಷ್ಟಿ ಕುರಿತು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಮಾತನಾಡುವರು.
ಅಪ್ಲೈಡ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ಉಪಾಧ್ಯಕ್ಷ ಹಾಗೂ ಪರ್ಯಾವರಣ ಸಂರಕ್ಷಣಾ ಗತಿವಿಧಿ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ ಪರಿಸರಸ್ನೇಹಿ ಜೀವನ ಪದ್ಧತಿ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದರು. ಒಂದು ಸಂಸ್ಥೆಯಿಂದ ನಾಲ್ವರು ವಿದ್ಯಾರ್ಥಿಗಳು ಹಾಗೂ ಓರ್ವ ಪ್ರಾಧ್ಯಾಪಕರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಾವಿರದಷ್ಟು ಪ್ರತಿನಿಧಿಗಳು ಸೇರುವ ನಿರೀಕ್ಷೆ ಇದೆ ಎಂದವರು ತಿಳಿಸಿದರು. ಈ ಸಂದರ್ಭ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾನ್ಸುಪಾಲ ಕೃಷ್ಣಪ್ರಸಾದ ಕಾಯರ್ ಕಟ್ಟೆ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.