(www.vknews. in) ; ಸರಕಾರವು ಬಜೆಟ್ ನಲ್ಲಿ ಘೋಷಿಸಿರುವ 2000 ಆಂಗ್ಲ ಮತ್ತು ಕನ್ನಡವನ್ನು ಒಳಗೊಂಡ ದ್ವಿಭಾಷಾ ಶಾಲೆಗಳ ಬಗ್ಗೆ ರಾಜ್ಯದ ಸಾಹಿತಿಗಳು ಹಾಗೂ ಶಿಕ್ಷಣತಜ್ಞರೆಂಬ ಲೇಬಲ್ ಗಳಿಂದ ಗುರುತಿಸಲ್ಪಡುವವರು ವಿರೋಧವನ್ನು ವ್ಯಕ್ತ ಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳ ಮೇಲಾಟವು ಶುರುವಾದ ದಿನಗಳಿಂದ ಸರಕಾರಿ ಶಾಲೆಗಳ ದಾಖಲಾತಿ ಕುಂಠಿತವಾಗುತ್ತಿದ್ದು, ಸುಮಾರು ಶಾಲೆಗಳು ಈಗಾಗಲೇ ಮುಚ್ಚಲ್ಪಟ್ಟಿವೆ.
ರಾಜ್ಯದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಸುಮಾರು 17000 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 30ಕ್ಕಿಂತ ಕಡಿಮೆ ಇದ್ದು , 500 ರಷ್ಟು ಶಾಲೆಗಳು ಶೂನ್ಯ ದಾಖಲಾತಿಯನ್ನು ಹೊಂದಿದೆ.
ಅದಲ್ಲದೆ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆಯು ಸರಕಾರಿ ಶಾಲೆಗಳಲ್ಲಿ 46 ಲಕ್ಷವಾದರೆ,ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 50 ಲಕ್ಷದಷ್ಟಾಗಿದೆ.
ಈಗಿರುವಾಗ ಸರಕಾರಿ ಶಾಲೆಗಳನ್ನು ಪುನಸ್ಚೇತನ ಗೊಳಿಸುವ ಉದ್ದೇಶದಿಂದ ಕನ್ನಡ ದೊಂದಿಗೆ ಆಂಗ್ಲ ಮಾಧ್ಯಮ ವನ್ನು ಕೂಡ ಪ್ರಾರಂಭ ಮಾಡಬೇಕು ಎನ್ನುವ ಸರಕಾರದ ನಿಲುವುಗಳನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯು ಸ್ವಾಗತಿಸುತ್ತಿದ್ದು, ಸರಕಾರದ ಈ ನಿಲುವಿಗೆ ಎಂದು ಸಹಕಾರವನ್ನು ನೀಡಲಿದೆ. ಯಾಕೆಂದರೆ ರಾಜ್ಯದಲ್ಲಿ ಈಗಾಗಲೇ ಸ್ಥಳೀಯವಾಗಿ ದಾನಿಗಳ ಸಹಕಾರದಿಂದ ಪ್ರಾರಂಭಿಸಿರುವ ಮಕ್ಕಳ ಮನೆ,ಅಥವಾ ಪೂರ್ವ ಪ್ರಾಥಮಿಕ ತರಗತಿಗಳ ಕಾರಣದಿಂದ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿರುವುದಲ್ಲದೆ ,ಮುಚ್ಚುವ ಹಂತಕ್ಕೆ ಬಂದಿರುವ ಶಾಲೆಗಳು ಕೂಡ ಪುನಸ್ಚೇತನಗೊಂಡಿವೆ
ಈ ಸಮಯದಲ್ಲಿ ಸರಕಾರದ ನಿಲುವುಗಳಿಗೆ ವಿರೋಧವನ್ನು ವ್ಯಕ್ತ ಪಡಿಸುವ ಈ ಸಾಹಿತಿಗಳು, ಶಿಕ್ಷಣ ತಜ್ಞರೆನ್ನುವವರು ತಮ್ಮ ಮಕ್ಕಳನ್ನು ,ಮರಿ ಮಕ್ಕಳನ್ನು ಯಾವ ಶಾಲೆಗಳಲ್ಲಿ ,ಯಾವ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ,ಕೊಡಿಸುತ್ತಾ ಇದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ.
ಇವರಿಗೆ ಸರಕಾರಿ ಶಾಲೆಯಲ್ಲಿರುವ ಬಡಮಕ್ಕಳ ವಿದ್ಯಾಭ್ಯಾಸವು ಹೀಗೆಯೇ ಇರಬೇಕು ಎನ್ನುವ ನಿಲುವನ್ನು ವ್ಯಕ್ತಪಡಿಸಲು ,ಸರಕಾರದ ಮೇಲೆ ಒತ್ತಡವನ್ನು ತರಲು ಅಧಿಕಾರವನ್ನು ಕೊಟ್ಟವರು ಯಾರು?
ತಮ್ಮ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ಬೇಕು ಎನ್ನುವ ತೀರ್ಮಾನವನ್ನು ಮಕ್ಕಳ ಪೋಷಕರು ತೀರ್ಮಾನಿಸಲಿ. ಸರಕಾರ ಇದರ ಬಗ್ಗೆ ಏನಾದರೂ ಅಭಿಪ್ರಾಯ ಸಂಗ್ರಹವನ್ನು ಮಾಡುವ ಉದ್ದೇಶವಿದ್ದರೆ ರಾಜ್ಯವ್ಯಾಪಿ ಇರುವ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಸರಕಾರದ ಪರವಾಗಿ ಕೆಲಸಮಾಡಲು ತಯಾರಿದೆ ಎಂದು ಈ ಮೂಲಕ ವ್ಯಕ್ತಪಡಿಸುತ್ತದೆ.
ಸಾಹಿತಿಗಳು ಹಾಗೂ ಶಿಕ್ಷಣತಜ್ಞರುಗಳ ಇಂತಹ ಹೋರಾಟವು ಖಾಸಗಿ ಶಾಲೆಗಳನ್ನು ಹಾಗೂ ಶಿಕ್ಷಣದ ಖಾಸಗೀಕರಣವನ್ನು ಬೆಂಬಲಿಸುವ ಮಾದರಿ ಆಗಿದ್ದು, ಇವರಿಗೆ ಏನಾದರೂ ಬಡ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ ಸಮಾನ ಶಿಕ್ಷಣದ ವ್ಯವಸ್ಥೆಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರ್ಷ0ಪ್ರತಿ ಕೊಡುವ ಅನುಮತಿಗಳ ವಿರುದ್ದವಾಗಿ ಹಾಗೂ ಸರಕಾರಿ ಶಾಲೆಗಳ ಮಕ್ಕಳಿಗಿಂತಲೂ ಹೆಚ್ಚಿನ ಮಕ್ಕಳು ದಾಖಲಾತಿ ಹೊಂದಿರುವ ಖಾಸಗಿ ಶಾಲೆಯ ಮಕ್ಕಳಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವಂತೆ ಒತ್ತಾಯಿಸಲಿ ಹಾಗೂ ಇದಕ್ಕಾಗಿ ಹೋರಾಟವನ್ನು ಮಾಡಲಿ. ಅದು ಬಿಟ್ಟು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯತೆ ಇಲ್ಲ.
ಸರಕಾರಿ ಶಾಲೆಗಳ ಮಕ್ಕಳ ಬಗ್ಗೆ ಹಾಗೂ ಅವರ ಶಿಕ್ಷಣದ ಬಗ್ಗೆ ಹೆಚ್ಚಿನ ವಿರೋಧಗಳನ್ನು ಉಂಟು ಮಾಡಿದರೆ ಇವರ ವಿರುದ್ಧವೇ ಹೋರಾಟವನ್ನು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುತ್ತಿರುವ ಪೋಷಕರ ಪ್ರತಿನಿಧಿಗಳಾದ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಸಂಘಟಿಸ ಬೇಕಾಗುತ್ತದೆ
ಮೊಯ್ದಿನ್ ಕುಟ್ಟಿ ಸಂಚಾಲಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.