ನನ್ನ ಅವಲೋಕನದಲ್ಲಿ ನನ್ನ ಚಿಕ್ಕಪ್ಪ..
(www.vknews.in) : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾದ ಆತ್ರಾಡಿಯ ಖಾಝಿಯಾಗಿ ಸೇವೆಯಲ್ಲಿ ಮುಂದುವರಿಯುತ್ತಿರುವಾಗ ಇಹಲೋಕ ತ್ಯಜಿಸಿದ ಖಾಝಿ ವಿ.ಕೆ ಅಬೂಬಕ್ಕರ್ ಹಾಜಿಯವರು ಸೂಫಿವರ್ಯರಾದ ಗೌರವಾನ್ವಿತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಹಾಗೂ ಕುತ್ತಾರ್ ನಿವಾಸಿಯಾದ ಪೌರ ಪ್ರಮುಖ ಸೂಫೀಯಾಕರ ಸುಪುತ್ರಿ ಸಾರಮ್ಮ ದಂಪತಿಗಳ ಗಂಡು ಮಕ್ಕಳಲ್ಲಿ ಹಿರಿಯವರಾಗಿದ್ದಾರೆ. ನನ್ನ ಅಜ್ಜಿಯ ಹಿರಿಯ ಸಹೋದರ ದಿವಂಗತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿಯವರು ಮೂಲತಃ ವಿಟ್ಲದವರಾದರೂ ತನ್ನ ವೈವಾಹಿಕ ಜೀವನಕ್ಕೂ ಮೊದಲೇ ತನ್ನ ಹುಟ್ಟೂರನ್ನು ಬಿಟ್ಟಿರಬೇಕೆಂದು ನನ್ನ ಅಂಬೋಣ. ಜಿಲ್ಲೆಯ ಹಾಗೂ ನೆರೆಯ ಉತ್ತರ ಕೇರಳದಲ್ಲಿ ಶ್ರೇಷ್ಠ ವಾಗ್ಮಿಯಾಗಿದ್ದ ಮುಹಮ್ಮದ್ ಹಾಜಿಯವರು ಜಿಲ್ಲೆಯ ಹಲವು ಮೊಹಲ್ಲಾಗಳಲ್ಲಿ ಧಾರ್ಮಿಕ ಪ್ರವಚನ ನೀಡುವ ಪರ್ಯಟನೆಯ ಮಧ್ಯೆ ಕುತ್ತಾರಿಗೆ ಪ್ರವಚನಕ್ಕೊಮ್ಮೆ ಹೋದಾಗ ತನ್ನ ಮದುವೆಗೆ ನೆಂಟಸ್ಥಿಕೆಯ ಪ್ರಸ್ತಾಪ ತನ್ನ ಪ್ರಥಮ ಪತ್ನಿಯ ಮಾವಂದಿರಾದ ಅಬ್ದುಲ್ಲ ಮುಕ್ರಿಕ, ಹಸನ್ ಮುಕ್ರಿಕರವರಿಂದ ಬಂದಾಗ ತನ್ನ ಹೆತ್ತವರಿಗೆ ತಿಳಿಸದೆ ಒಪ್ಪಿಗೆ ನೀಡಿದ ಮುಹಮ್ಮದಾಜಿಯವರು ಅವರರಿಯದೆ ಮದುವೆಗೂ ಮುಂದಾದರು. ಆರು ತಿಂಗಳ ಬಳಿಕ ತನ್ನ ಹತ್ತವರ ಸಮ್ಮತಿಯ ಮೇರೆಗೆ ತನ್ನ ಪ್ರಿಯತಮೆ ಸಾರಮ್ಮರನ್ನು ನನ್ನ ಅಜ್ಜಿಯೂ ಮುಹಮ್ಮದಾಜಿಯವರ ದ್ವಿತೀಯ ಸಹೋದರಿಯೂ ಆದ ಸಾರಮ್ಮರವರು ತನ್ನ ಅಣ್ಣನ ಪತ್ನಿಯನ್ನು ವಿಟ್ಲಕ್ಕೆ ಕರ್ಕೊಂಡು ಬಂದರು. (ಮುಹಮ್ಮದಾಜಿಯವರ ಪತ್ನಿ ಹಾಗೂ ಅವರ ಸಹೋದರಿ ಒಂದೇ ಹೆಸರಿನವರೆಂಬುದನ್ನು ಅನುವಾಚಕರು ಗಮನಿಸಬೇಕು)
ಈತನ್ಮಧ್ಯೆ ತನ್ನ ದೀನಿ ದಅವತ್ ಯಥಾವತ್ತಾಗಿ ಮುಂದುವರಿಯುತ್ತಿದ್ದಂತೆ ನೇತ್ರಾವತಿ ನದಿ ತೀರದ ಊರಾದ ಅಮ್ಮೆಂಬಳದಲ್ಲಿ ಖತೀಬಾರಾಗಿ ಸೇವೆಗೆ ಸೇರಿದರು. ಇಲ್ಲಿನ ಸೇವಾವಧಿಯಲ್ಲಿ ತನ್ನ ಪತ್ನಿಯ ಚೊಚ್ಚಲ ಹಾಗೂ ದ್ವಿತೀಯ ಹೆರಿಗೆಗಳು ನಡೆದಿರುವುದು. ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ ತನ್ನ ದ್ವಿತೀಯ ಹೆರಿಗೆಯಲ್ಲಿ ಜನಿಸಿದ ಗಂಡು ಮಗುವೇ ಈ ಬರಹಕ್ಕೆ ನಿಮಿತ್ತವಾದ ದಿವಂಗತ ಅತ್ರಾಡಿ ಖಾಝಿಯಾದ ವಿ.ಕೆ ಅಬೂಬಕ್ಕರ್ ಹಾಜಿಯವರು. ಅಲ್ಲಿಂದ ಬಿಟ್ಟು ಪಟ್ಟೋರಿಗೆ ಹೋದ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿಯವರು ಇಲ್ಲಿ ಎಷ್ಟು ಕಾಲ ಸೇವೆಯಲ್ಲಿ ಮುಂದುವರಿದರೆಂಬುದಕ್ಕೆ ಖಚಿತತೆ ಇಲ್ಲ. ಇಲ್ಲಿಂದ ಬಿಟ್ಟ ಮುಹಮ್ಮದಾಜಿಯವರು ನೇರಾವಾಗಿ ಹೋಗುವುದು ಅಡ್ಯಾರ್ ಕಣ್ಣೂರಿಗೆ ಆಗಿತ್ತು. ಒಂದರ್ಥದಲ್ಲಿ ಹೇಳುದಾದರೆ ಅಡ್ಯಾರ್ ಕಣ್ಣೂರು ಅಡ್ಯಾರ್ ಕಣ್ಣೂರು ಆದದ್ದೇ ಇವರು ಮಹನೀಯ ಅಗಮನದಿಂದವಾಗಿದೆ. ಹಾಗೂ ತನ್ನ ಜೀವನದಲ್ಲಿ ಹೊಸ ತಿರುವು ಪಡೆದುಕೊಂಡ ಭೂವಿಕವೂ ಈ ಅಡ್ಯಾರ್ ಕಣ್ಣೂರೇ ಆಗಿದೆ. ವಿ.ಕೆ ಅಬೂಬಕ್ಕರ್ ಹಾಜಿ ತನ್ನ ಶೈಶವವನ್ನು ಮೇಲೆ ತಿಳಿಸಿದ ಅಡ್ಯಾರ್ ಕಣ್ಣೂರು ಹೊರತಾದ ಎರಡು ಊರುಗಳಲ್ಲಿ ಕಳೆದಾದರೂ ತನಗೆ ಐದು ವರ್ಷ ತುಂಬಿದ ಬಳಿಕ ತಾನೂ ದೊಡ್ಡವನಾಗುವವರೆಗೂ ಇವರ ಹಾಗೂ ಕುಟುಂಬದ ಊರು ಅಡ್ಯಾರ್ ಕಣ್ಣೂರೇ ಆಗಿತ್ತು. ತನ್ನ ಪ್ರಾಥಮಿಕ ಕಲಿಕೆಯೂ ಅಡ್ಯಾರ್ ಕಣ್ಣೂರಲ್ಲೇ ಆಗಿತ್ತು.
ತನ್ನ ಮೊದಲ ಗುರು ತನ್ನ ತಂದೆಯಾದ ಸ್ಥಳೀಯ ಮುದರ್ರಿಸ್ ಮುಹಮ್ಮದಾಜಿಯವರಾಗಿದ್ದರು. ಹಿಜಾಇಯಾದ ಅಕ್ಷರಮಾಲೆಯ ಮೊದಲ ಅಕ್ಷರವಾದ ಅಲಿಫ್ ನಿಂದ ಪಾರಂಭಗೊಂಡ ಈ ಕಲಿಕೆ ಮುಂದುವರಿದು ದರ್ಸಿನಲ್ಲಿ ಪ್ರಾಥಮಿಕವಾಗಿ ಓದುವ ಗ್ರಂಥಗಳು ಸೇರಿದಂತೆ ಕೆಲವು ಗ್ರಂಥಗಳನ್ನು ತನ್ನ ತಂದೆಯ ಮಡಿಲಲ್ಲೇ ಕಲಿತ ಅಬೂಬಕ್ಕರ್ ಹಾಜಿಯವರು ತನ್ನ ಕಲಿಕೆಯ ಮುಂದುವರಿದ ಭಾಗವೆಂಬಂತೆ ತನ್ನ ತಂದೆಯವರು ಉಳ್ಳಾಲ ತಂಙಳ್ ಎಂದೇ ಪ್ರಖ್ಯಾತಿ ಪಡೆದ ಗೌರವಾನ್ವಿತ ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಕುಂಞ ಕೋಯ ತಂಙಳ್ ಅಲ್ ಬುಖಾರಿಯವರ ಪವಿತ್ರ ಸನ್ನಿಧಿಗೆ ಕರ್ಕೊಂಡು ಹೋಗಿ ಅಲ್ಲಿ ಸೇರಿಸಿದರು. ಅಲ್ಲಿರುವ ಅವರ ಕಲಿಕಾವಧಿ ಎಷ್ಟು ಸಮಯವಿತ್ತೆಂಬುದಕ್ಕೆ ಖಚಿತತೆ ಇಲ್ಲ. ಇಲ್ಲಿಂದ ಪ್ರಸಿದ್ಧ ದರ್ಸ್ ಎಂಬ ಕೀರ್ತಿಗೆ ಪಾತ್ರವಾದ ಪೊಸೋಟು ಸೈದಾಲಿ ತಂಙಳ್ರವರ ದರ್ಸ್ಗೆ ಇವರನ್ನು ಹಾಗೂ ಸಹೋದರಿ ಪುತ್ರನಾದ ದಿವಂಗತ ಪಿ. ಅಹ್ಮದ್ ಮುಸ್ಲಿಯಾರ್ರವರನ್ನು (ಉಂಞಿಮೋನು ಮೊಯಿಲಾರ್) ಸ್ವತಃ ತನ್ನ ತಂದೆ ಮುಹಮ್ಮದಾಜಿಯವರೇ ಕರ್ಕ್ಕೊಂಡು ಹೋಗಿ ಸೇರಿಸಿದರು. ಇಲ್ಲಿ ಪ್ರಧಾನ ಗ್ರಂಥಗಳೆಲ್ಲ ಓದಿದ ಬಳಿಕ ಸ್ಮರಣೀಯ ವ್ಯಕ್ತಿ ಪೈವಳಿಕೆಯ ಪ್ರಸಿದ್ಧಿ ಹೊಂದಿದ ವಲಿಯುಲ್ಲಾಹಿ ಮರ್ಹೂಮ್ ಖಾಝೀ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ರವರ ಪೈವಳಿಕೆ ದರ್ಸಿಗೆ ಸೇರಿದರು. ಅಲ್ಲಿಯೂ ಎಷ್ಟು ವರ್ಷ ಕಲಿಕೆಯಲ್ಲಿ ಕಳೆದರು ಎಂಬೂದಕ್ಕೂ ದಾಖಲೆಗಳಿಲ್ಲ. ಅಲ್ಲಿ ಪೈವಳಿಕೆ ಉಸ್ತಾದರ ಪುತ್ರರಾದ ಅಬ್ದುಲ್ಖಾದಿರ್ ಮುಸ್ಲಿಯಾರ್ ಅಬೂಬಕ್ಕರ್ ಹಾಜಿಯವರ ಸಹಪಾಠಿಯಾಗಿದ್ದರು.
ಇಲ್ಲಿಂದ ಮಗದೊಮ್ಮೆ ಉಳ್ಳಾಲ ದರ್ಸಿಗೆ ಬಂದ ಅಬೂಬಕ್ಕರ್ ಹಾಜಿಯವರು ಉಳ್ಳಾಲ ತಂಙಳ್ರವರಿಂದ معقولات ತ್ತಿನ ಗ್ರಂಥಗಳು ಓದಿದರು. ತನ್ನ ಕಲಿಕೆಯಲ್ಲಿ ತಿರುವು ಪಡೆದುಕೊಂಡ ದಿನಗಳಾಗಿದ್ದವು ಉಳ್ಳಾಲದ ನನ್ನ ಎರಡನೇ ಆಗಮನವೆಂದು ಸ್ಮರಣೀಯ ಪುರುಷ (ಅಬೂಬಕ್ಕರ್ ಹಾಜಿ) ನೆನಪಿಸಿಕೊಳ್ಳುತ್ತಿದ್ದರು. ಇಲ್ಲಿಂದ ನೆರೆಯ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೂರು ಸಿಟಿಯ ಪ್ರಸಿದ್ಧ ವಿದ್ಯಾಂಸ ಅವುರಾಣ್ ಕುಟ್ಟಿ ಮುಸ್ಲಿಯರ್ರವರ ದರ್ಸಿನಲ್ಲಿ ಸೇರಿದ ಸ್ಮರಣೀಯ ಪುರುಷ ತಿರುಗ ಊರಿಗೆ ಬಂದು ತನ್ನ ತಂದೆಯ ಒತ್ತಾಯದ ಮೇರೆಗೆ ಕುಂಬಳೆ ಸಮೀಪದ ವಲಯಂ ನಿವಾಸಿಯೂ ಅಲ್ಲಿನ ಜುಮಅ ಮಸೀದಿಯ ಖತೀಬರೂ ಅದ ಬಹು ಮೊಯಿದಿನ್ ಕುಟ್ಟಿ ಮುಸ್ಲಿಯಾರ್ರವರ ತೃತೀಯ ಪುತ್ರಿ ಅಮೀನಾರವನ್ನು ವಿವಾಹವಾದರು. ವಿವಾಹದ ಬಳಿಕ ಉನ್ನತ ಶಿಕ್ಷಣಕ್ಕಾಗಿ ದೈವುಬಂದಿಗೆ ಹೋಗಿ ಅಲ್ ಖಾಸಿಮೀ ಪದವಿ ಪಡೆದ ವಿ.ಕೆ. ಅಬೂಬಕ್ಕರ್ ಹಾಜಿಯವರು ತನ್ನ ತಂದೆಯ ಕನಸನ್ನು ನೆನಸಾಗಿಸಿದರಲ್ಲದೆ ಅಡ್ಯಾರ್ ಕಣ್ಣೂರು ಮುಹಮ್ಮದಾಜಿಯವರ ಕುಟ್ಟುಂಬದ ಪ್ರಪಥಮ ಪದವೀಧರನೆಂಬ ಹೆಗ್ಗಲಿಕೆಗೆ ಪಾತ್ರರಾದರು.
ತನ್ನ ಧಾರ್ಮಿಕ ಅಧ್ಯಯನ ಮುಗಿದ ಬಳಿಕ ಬೋಧನಾ ರಂಗಕ್ಕೆ ಪ್ರವೇಶಿಸಿದ ಅಬೂಬಕ್ಕರ್ ಹಾಜಿಯರು ಬಂಟ್ವಾಳ ತಾಲೂಕಿನ ವಳವೂರನಲ್ಲಿ ಮುದರ್ರಿಸಾಗಿ ತನ್ನ ಚೊಚ್ಚಲ ಬೋಧನಾ ಸೇವೆಗೆ ನಿಯುಕ್ತರಾದರು. ವಳವೂರಿನಲ್ಲಿ ಕಲಿತ ತನ್ನ ಶಿಷ್ಯರಲ್ಲಿ ಹಲವರು ದೊಡ್ಡ ವಿದ್ವಾಂಸರಾಗಿ ವಿರಾಜಿಸಿದ್ದಾರೆ. ಅಂದಿನ ದರ್ಸಿನ ರೀತಿಯೂ ಪ್ರಸಕ್ತ ಊಹಿಸಲಸಾಧ್ಯವಾಗಿತ್ತಂತೆ. ಆ ಕಾಲದ ಶಿಷ್ಯರೊಬ್ಬರು ಹಳೆಯದನ್ನು ಮೆಲುಕು ಹಾಕಿದ ರೀತಿ ಹೀಗಿದೆ. ಅವರು( ಅಬೂಬಕ್ಕರಾಜಿ) ಷದೀದ್ ಅಲ್ಲ ಅಷದ್ದ್ ಆಗಿದ್ದರು. ಇಲ್ಲದಿದ್ದರೂ ಅವರೊಬ್ಬ ಬಯೋಲಿಜಿಕಲಿ ಕರ್ಕಶರಾಗಿದ್ದರು. ಆದರೆ ಹೆಚ್ಚಿನವರಿಗೆ ತಿಳಿಯದೆ ಹೋದ ಅವರ ನೈಜ ಗುಣವೆಂದರೆ ಅವರು ಕರ್ಕಶತನವು ಸೌಮ್ಯತೆ ಹಾಗೂ ಅನುಕಂಪದೊಂದಿಗೆ ಸಮ್ಮಿಶ್ರವಾಗಿತ್ತೆಂದು ಅವರ ಕುರಿತು ಸನಿಹದಲ್ಲಿ ಬಲ್ಲವರಿಗೆ ತಿಳಿದ ವಿಚಾರವಾಗಿತ್ತೆಂದು ತಿಳಿಯದವರ್ಯಾರಿದ್ದಾರೆ? ವಳವೂರಿನ ತನ್ನ ದರ್ಸ್ ಸುದೀರ್ಘ ಕಾಲದ ದರ್ಸಾಗಿತ್ತು.
ಇವರಿಗೆ ದೊಡ್ಡದಾದೊಂದು ಶಿಷ್ಯ ಕೂಟವನ್ನೇ ಸೃಷ್ಠಿಸಲು ಸಾಧ್ಯವಾದದ್ದು ವಳವೂರಿನ ದರ್ಸಿನಿಂದಾಗಿತ್ತು. ಇಲ್ಲಿಂದ ಬಿಟ್ಟು ಜಿಲ್ಲೆಯ ಗಡಿ ಭಾಗದ ತಲಪಾಡಿಯಲ್ಲಿಯೂ ಮಂಗಳೂರು ಉತ್ತರದ ಭಾಗದ ಸುರತ್ಕಲ್ನಲ್ಲೂ ಸೇವೆ ಸಲ್ಲಿಸಿದ್ದಾರೆ. ಸುರತ್ಕಲ್ನಲ್ಲಿ ಸೇವೆಯಲ್ಲಿರುವಾಗ ಅಲ್ಲಿನ ಪ್ರಮುಖರೊಬ್ಬರು (ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದೇನೆ.) ಅಬೂಬಕ್ಕರಾಜಿಯವರೊಂದಿಗೆ ಮಾತಿಗೆ ಮಾತು ಬೆಳೆದು ಆ ವ್ಯಕ್ತಿ ನಿನಗೆ ಚಾಕು ಹಾಕುವೆನೆಂದು ಹೇಳಿದರಂತೆ. ಆ ವ್ಯಕ್ತಿ ಬೆದರಿಕೆ ಹಾಕಿದಾಗ ಅದಕ್ಕೆ ಅವರು ಸೊಪ್ಪು ಹಾಕದೆ ಶುಕ್ರವಾರದ ದಿನ ಸೇರಿದ ಜನರ ಮುಂದೆಯೇ ನಿನ್ನ ಚಾಕು ನನ್ನ ಪಿರ್ರೆಗೆ ಹಾಕೆಂದು ಧೈರ್ಯದಿಂದ ಹೇಳುತ್ತಿದಂತೆ ಆ ವ್ಯಕ್ತಿ ತನ್ನ ಜಂಭದ ಮಾತಿನಿಂದ ಹಿಂದೆ ಸರಿದು ಕ್ಷಮೆ ಕೇಳಿದ ಸಂಭವವೊಂದನ್ನು ಕೆಲವರು ಹೇಳುವುದನ್ನು ಕೇಳಿದ್ದೇನೆ. (ವಿ ಸೂ ಮಾಹಿತಿ ಕೊರತೆಯಿಂದಾಗಿ ನಾನು ತಿಳಿಸಿರುವ ಹಾಗೂ ತಿಳಿಸಿಲಿಕ್ಕಿರುವ ಅವರ ಈ ಸೇವಾ ಮೊಹಲ್ಲಾಗಳ ಪ್ರಸ್ತಾಪದಲ್ಲಿನ ಕ್ರಮಾನುಗತ ಲಿಖಿತವಲ್ಲ. ಕೇವಲ ಮೌಖಿಕ ಮಾತ್ರವಾಗಿದೆಯೆಂಬುದನ್ನು ಅನುವಾಚಕರು ಗಮನಿಸಬೇಕೆಂದು ವಿನಂತಿಸುತ್ತೇನೆ.)
ಮುಂದೆ ಇಲ್ಲಿಂದ ನೇರವಾಗಿ ದರ್ಸ್ನಲ್ಲಿ ಶೋಭಿಸಿದ ಭೂಮಿಕವೆಂದರೆ ಸುಳ್ಯ ತಾಲೂಕಿನ ಮೊಗರ್ಪಣೆ ದರ್ಸಾಗಿತ್ತು. ಇದು ಸರಿಸುಮಾರು 80 ದಶಕದಲ್ಲಾಗಿತ್ತು. ಅಂದು ನಾನು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿ ನನ್ನ ತಂದೆಯ ಇನ್ನಿಲ್ಲದ ಅಭಿಲಾಷೆಯಿಂದ ದರ್ಸಿಗೆ ಸೇರಬೇಕೆಂಬ ತವಕದಲ್ಲಿದ್ದ ನಾನು ನನ್ನ ಅಜ್ಜ ಆಡ್ಯಾರ್ ಕಣ್ಣೂರು ಮುಹಮ್ಮದಾಜಿಯವರ ನಿರ್ದೇಶನದಂತೆ ಮಿತ್ತಬೈಲ್ ದರ್ಸಿಗೆ ನನ್ನನ್ನು ನನ್ನ ತಂದೆ ಸೇರಿಸಿದ್ದರು. ಸ್ಮರಣೀಯ ವ್ಯಕ್ತಿ ತನ್ನ ಯುವತ್ವದ ಕಾಲ ಮುಗಿದು ಮಧ್ಯೆ ವಯಸ್ಕಕ್ಕೆ ಕಾಲೂರಿದ ಕಾಲವದು. ಆಗ ಸ್ಮರಣೀಯ ವ್ಯಕ್ತಿಯ ಮನೆಯೂ ಮಿತ್ತಬೈಲ್ ಜಮಾಅತ್ತಿಗೊಳಪಟ್ಟ ಪರ್ಲಿಯಾ ಸಮೀಪದ ಮದ್ದ ಎಂಬಲ್ಲಿಯಾಗಿತ್ತು. ನನ್ನ ಊಟದ ಮನೆಗೆ ಮಿತ್ತಬೈಲ್ ಮಸೀದಿಯಿಂದ ಹತ್ತಿರದ ಮಾರ್ಗದಿಂದ ಹೋಗಬೇಕಾದರೆ (ದೂರದ ರಸ್ತೆ ಬೇರೊಂದಿತ್ತು) ಇವರ ಮನೆಯ ಎದುರಿನಿಂದಲೇ ದಾಟಿ ಹೋಗಬೇಕಾಗಿತ್ತು.
ಇವರ ಮನೆಗೆ ಬೆಳ್ಳಿಗ್ಗಿನ ಹಾಗೂ ಸಂಜೆಯ ಹೊತ್ತು ನಾನು ಹೋಗುತ್ತಿದ್ದೆ. ಇವರ ಪತ್ನಿ ಆಮೀನಾ (ಯಲಾಮ ಎಂದು ನಾನು ಇವರನ್ನು ಕರೆಯುತ್ತಿರುವುದು.) ಅಂಗಡಿ ಹಾಗೂ ಮಾರ್ಕೇಟ್ನಿಂದ ದಿನಸಿ ವಸ್ತುಗಳು ಕೋಳಿ,ಮೀನು ಮತ್ತು ಇನ್ನಿತರ ವಸ್ತುಗಳು ತರಲಿಕ್ಕಿದೆಯೆಂದು ಮುಂದಿನ ದಿನವೇ ನೆನಪಿಸುತ್ತಿದ್ದರು. ಇದರ ಹೊರತಾಗಿ ನನಗೆ ಊಟ, ಚಹಾ ನೀಡುತ್ತಿದ್ದರು. ಆಹಾರ ಪ್ರೀಯನಾದ ನನಗೆ ಈ ಸಹಾಯ ಇಷ್ಟವಾಗಿತ್ತು. ಈತನ್ಮಧ್ಯೆ ಸ್ಮರಣೀಯ ವ್ಯಕ್ತಿ ಊರಿಗೆ ಬರುತ್ತಿದ್ದರು. ಆಗ ನಾನು ಮೀಝಾನ್ ಅಜಿನಾಸ್ಸುಗುರಾ, ಕುಬುರಾ ಓದುತ್ತಿದ್ದೆ. ಅವರು ಊರಿಗೆ ಬಂದರೆ ಮೀಝಾನ್ನಿನ “ಪಅಲ” ಯಿಂದ ಹಿಡಿದು ಇಸ್ಮ್ ಮಫ್ವೂಲ್ ತನಕ ಕೇಳುತ್ತಿದ್ದರು. ನಾನು ಅಂಜಿಕೆಯಿಲ್ಲದೆ ಹೇಳುತ್ತಿದ್ದೆ. ಅಜಿನಾಸ್ಸುಗುರಾ ಓದುವಾಗಲೂ ಬದಲಾವಣೆಯಿಲ್ಲ. ಆದರೆ ಆ ಹೊತ್ತಿನಲ್ಲಿ ಅಜನಾಸುಲ್ ಕುಬುರಾ ಓದುವಾಗ ನನಗೆ ಅದೇನೆಂದು ತಿಳಿದಿರಲಿಲ್ಲ. ಝಂಜಾನ್ ತಥೈವ. ನನ್ನ ಸಬಕ್ ಈ ಮೇಲೆ ತಿಳಿಸಿದ ಭಾಗಕ್ಕೆ (ಕುಬುರಾ, ಝಂಜಾನ್) ತಲುಪಿದಾಗ ನನಗೆ ಅವೆರಡೂ ಸರಿಯಾಗಿ ಮನವರಿಕೆಯಾಗದ ಕಾರಣ ಇವರು ಈ ಕುರಿತು ಕೇಳುವಾಗ ನನಗೆ ಉತ್ತರಿಸಲಾಗದ ಅವಸ್ಥೆ ಎದುರಾಗುವಾಗ ಗಂಭೀರ ಶಬ್ದ ತೆಗೆದು ನನ್ನನ್ನು ಕೋಪದಿಂದ ಗದರಿಸುತ್ತಿದ್ದರು.
ಊರಿಂದ ಇಲ್ಲಿಗೆ ಬಂದು ಓದದೆ ಅಲ್ಲಿಲ್ಲಿ ತಿರಾಗಾಡಿದರೆ ಇಲ್ಮ್ ಸಿಗುವುದಿಲ್ಲ. ನೀನು ಇಲ್ಮಿನ ಹೆಸರು ಹೇಳಿ ಕಾಲ ಕಳೆಯುತ್ತೀಯಾ? ಆಗಿನ್ನೂ ನಾನು 13 ದಾಟಿ 14 ಕ್ಕೆ ಕಾಲೂರಿದ ಬಾಲಕನು. ಇದನ್ನು ಅವರು ನನ್ನೊಡನೆ ಕೇವಲ ಕೇಳಿದರೆ ಪರ್ವಾಗಿರಲಿಲ್ಲ. ಶಬ್ದವೆತ್ತಿ ಗದರಿಸುತ್ತಿದ್ದರು. ಕೆಲವೊಮ್ಮೆ ಅವರ ಕೋಪವನ್ನು ಯಲಾಮ ಆಮೀನಾರವರು ಮಧ್ಯೆ ಪ್ರವೇಶಿಸಿ ನಿಯಂತ್ರಿಸುತ್ತಿದ್ದರು. ಈ ಕೋಪದ ಹಿನ್ನೆಲೆಯಲ್ಲಿ ಅವರಿಗಿದ್ದ ಉದ್ದೇಶ ನನಗೆ ಕಿತಾಬ್ ತಿಳಿಯಬೇಕೆಂಬ ಬಯಕೆ ಮಾತ್ರವಾಗಿತ್ತಾದರೂ ನನ್ನ ಮನಸ್ಸು ಒಳಗಿಂದೊಳೆಗೆ ಒರಟುತ್ತಿತು. ಇದು ಅವರು ಊರಿಗೆ ಬರುವ ಎಲ್ಲ ಗುರುವಾರದಂದು ಮುಂದುವರಿಯುತ್ತಾ ಇದ್ದ ಕಾರಣ ಗುರುವಾರ ಅವನ ಮನೆಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟೆ. ಉಳಿದ ದಿನಗಳಲ್ಲಿನ ಸಂಜೆಯ ಭೇಟಿ ಸರಾಗವಾಗಿ ಮುಂದುವರಿಯುತ್ತಿತ್ತು. ನಾನು ಮಿತ್ತಬೈಲ್ ಬಿಟ್ಟು ಉದ್ಯಾವರದಲ್ಲಿ ಕಲಿಯುತ್ತಿದ್ದಾಗ ಅವರು ನಮ್ಮ ಮನೆಗೆ ಬಂದರೆ ನನ್ನ ಕಲಿಕಾ ವಿಧಾನಗಳ ಬಗ್ಗೆ ಅವರು ಕೇಳುತ್ತಲೇ ಇದ್ದರು.
ಸ್ಮರಣೀಯ ವ್ಯಕ್ತಿ ಮೊಗರ್ಪಣೆಯಿಂದ ನೇರವಾಗಿ ಹೋದದ್ದು ಮೂಡಬಿದ್ರೆಗಾಗಿತ್ತು. ಬಿ.ಸಿರೋಡ್ನ ಮನೆಯ ವಾಸವನ್ನು ಮೂಡಬಿದ್ರೆಗೆ ವರ್ಗಾಯಿಸಿದರು. ಅಲ್ಲಿ ಹಲವಾರು ವರ್ಷಗಳ ಕಾಲ ಮುದರ್ರಿಸಾಗಿಯೂ ಖತೀಬರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಅಲ್ಲಿನ ಹಲವಾರು ವರ್ಷಗಳ ಸೇವೆಯೂ ತೀರಾ ಕೆಲವರಿಗೆ ಅತೃಪ್ತಿಯನ್ನುಂಟು ಮಾಡಿದ್ದು, ಇವರನ್ನು ಅಲ್ಲಿನ ಹಾಗೂ ಪರಿಸರ ಜಮಾಅತ್ತಿನ ಖಾಝೀ ಮಾಡಬೇಕೆಂಬ ಅಲ್ಲಿನ ಬಹುತೇಕ ಮಂದಿಗಿದ್ದ ಬಯಕೆ ಈ ಕೆಲವರ ಅತೃಪ್ತಿಯು ಇಲ್ಲವಾಗಿಸಿತು. ಕೊನೆಗೊ ಒಂದೆರೆಡು ವರ್ಷಗಳ ಬಳಿಕ ಅಲ್ಲಿಂದ ಬಿಟ್ಟರೂ ಅಲ್ಲಿನ ಹಾಗೂ ಪರಿಸರ ಜಮಾಅತ್ಗಳ ಜನರಿಗಿದ್ದ ಭಾವನಾತ್ಮಕ ಸಂಬಂಧ ಅವರು ರೋಗಗ್ರಸ್ತರಾಗುವವರೆಗೂ ಅಲ್ಲಿನವರ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿಯೂ ಇವರ ಶಾರೀರಿಕ ಸಾನ್ನಿಧ್ಯವನ್ನು ರುಜು ಮಾಡಿಸುವಲ್ಲಿ ಅಲ್ಲಿಯ ಜನರು ಸಫಲರಾಗಿದ್ದರೆಂಬುದು ಅನುಭವವೇದ್ಯ ಸಂಗತಿಯಾಗಿದೆ. ಈ ಭಾವನಾತ್ಮಕ ಸಂಬಂಧವು ಸ್ಮರಣೀಯ ವ್ಯಕಿಯನ್ನು ಮೂಡಬಿದ್ರೆ ಅಬೂಬಕ್ಕರಾಜಿ ಎಂದು ಜಿಲ್ಲೆಯ ಜನ ಸಂಬೋಧಿಸುವಲ್ಲಿಗೆ ತಲುಪಿಸಿದೆ. ಆದರೆ ಇಲ್ಲಿ ಅಲ್ಲಾಹನ ಇಚ್ಚೆ ಬೇರೆಯೇ ಆಗಿತ್ತು. ಮೂಡಬಿದ್ರೆಯಿಂದ ಬಿಟ್ಟ ಸ್ಮರಣೀಯ ಪುರುಷ ಸ್ವಲ್ಪದರಲ್ಲೇ ಉಡುಪಿಯ ಮಣಿಪಾಲ ಸಮೀಪದ ಅತ್ರಾಡಿ ಹಾಗೂ ಸುತ್ತಮುತ್ತಲಲ್ಲಿರುವ ಕೆಲ ಪ್ರದೇಶದ ಖಾಝೀಯಾಗಿ ನೇಮಕಗೊಂಡರು.
ಈ ಖಾಝಿ ನೇಮಕದಲ್ಲಿ ಪ್ರತ್ಯೇಕವಾಗಿ ಸ್ಮರಿಸಲೇಬೇಕಾದ ವ್ಯಕ್ತಿಯೆಂದರೆ ಬಹು ಝೈನುದ್ದೀನ್ ಮುಸ್ಲಿಯಾರ್ ಕಕ್ಕಿಂಜೆಯವರಾಗಿದ್ದಾರೆ. ಇಲ್ಲಿ ಝೈನುದ್ದೀನ್ರವರ ಅವಿರತವಾದ ಕಾರ್ಯವೈಖೈರಿಯು ಶ್ಲಾಘನೀಯಾರ್ಹವಾದುದಾಗಿದೆ. ಆ ಕಾಲದಲ್ಲಿ ಉಡುಪಿ ಪರಿಸರದಲ್ಲಿ ಅವರ ಉಪಸ್ಥಿತಿಯು ‘ಸಮಸ್ತ’ಕ್ಕೆ ಬಹುದೊಡ್ಡ ಕೊಡುಗೆಯನ್ನೇ ದಾರೆಯೆರೆದಿದೆಯೆಂದರೆ ತಪ್ಪಾಗಲಾರದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು ಅವರ ಸೇವೆಗಳ ಕುರಿತು ಅರಿತಂತಿದ್ದಿಲ್ಲವೆಂಬುದು ಪ್ರತ್ಯೇಕವಾಗಿ ಬೊಟ್ಟುಮಾಡಬೇಕಾದ ಸಂಗತಿಯಾಗಿದೆ. ಪ್ರಸ್ತುತ ಖಾಝಿ ಸ್ಥಾನದಲ್ಲಿ ತನ್ನ ಮರಣದವರೆಗೆ ಮುಂದುವರಿದ ಅಬೂಬಕ್ಕರ್ ಹಾಜಿಯವರು ತನ್ನ ಈ ಸ್ಥಾನದೊಂದಿಗೆ ಉಪ್ಪಳ ಸಮೀಪದ ಪೆರಿಂಗಡಿ ಜಮಾಅತ್ತಿನ ಖತೀಬರಾಗಿಯೂ ಕೆಲ ಕಾಲ ಮುಂದುವರಿದು ಆರೋಗ್ಯ ಸಮಸ್ಯೆಗಳಿಂದ ಖತೀಬ್ ಸೇವೆಯಿಂದ ನಿವೃತ್ತಿ ಹೊಂದಿ ವಿಶ್ರಮ ಜೀವನದೊಂದಿಗೆ ಕೇವಲ ಧಾರ್ಮಿಕ ಸಾರ್ವಜನಿಕ ಕಾರ್ಯಚಟುವಟಿಕೆಯಲ್ಲಿ ಸೀಮಿತವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸ್ಮರಣೀಯ ವ್ಯಕ್ತಿ ಕಳೆದ ಎರಡು ವರ್ಷಗಳಿಂದೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ದೈಹಿಕವಾಗಿಯೂ ಮಾನಸಿಕವಾಗಿಯೂ ಈ ರೋಗದ ಪ್ರಾರಂಭದಲ್ಲಿ ಸ್ಥೈರ್ಯವನ್ನು ಕಳಕೊಂಡರೂ ತನ್ನ ಮನೋದಾರ್ಡ್ಯದ ಮುಂದೆ ಅಲ್ಪಸ್ವಲ್ಪ ಪ್ರಯಾಸವಿದ್ದರೂ ಆ ರೋಗವೂ ಸೋತು ಹೋದಷ್ಟರ ಮಟ್ಟಿಗೆ ತನ್ನನ್ನು ತಾನು ಸುಧಾರಿಸಿ ಬಹುತೇಕ ಆರೋಗ್ಯದಲ್ಲಿ ಮುಂದುವರಿದಿದ್ದರು.
ಇವರು ಸಾಮನ್ಯವಾಗಿ ತನ್ನ ಜೀವನದಲ್ಲಿ ಯಾವೊತ್ತಾದರೂ ಏಕಾಂತತೆಯನ್ನು ಇಷ್ಟಪಡುತ್ತಿರಲಿಲ್ಲ. ಅವರ ಖಾಸಾಗಿ ಕೊಠಡಿಯಲ್ಲಿ ಕನಿಷ್ಠ ಒಂದಿಬ್ಬರ ಉಪಸ್ಥಿತಿಯನ್ನಾದರೂ ಅವರು ಬಯಸುತ್ತಿದ್ದರು. ಈ ಸಮಯದಲ್ಲಿ ಲೌಕಿಕ ಸಮಾಜಿಕ ಸೇರಿದಂತೆ ಯಾವುದಾದರೊಂದು ದೀನೀ ಚರ್ಚೆಗೆ ಅವರೇ ಟೊಪಿಕ್ ಹಾಕಿ ಚರ್ಚೆಗೆ ಉಪಸ್ಥಿತರನ್ನು ಉಪಸ್ಥಿತರರಿಯದೆ ಎಳೆಯುತ್ತಿದ್ದುದು ಅವರ ಹವ್ಯಾಸವಾಗಿತ್ತು. ನಾನು ಮೇಲೆ ತಿಳಿಸಿದಂತೆ ಕನಿಷ್ಠ ಒಂದಿಬ್ಬರಾದರೂ ಬೇಕೆಂಬುದು ಉತ್ಪ್ರೇಕ್ಷೆಯ ಹೇಳಿಕೆಯಾದ್ದರಿಂದ ಗರಿಷ್ಠ ಉಪಸ್ಥಿತರು ಇಂತಿಷ್ಟೇ ಸಂಖ್ಯೆಯಷ್ಟು ಬೇಕೆಂದು ಮಿತಿಯಿಲ್ಲವೆಂಬುದು ಧ್ವನಿತವಾಗುತ್ತಿದೆಯಲ್ಲವೇ? ಒಟ್ಟಿನಲ್ಲಿ ಎಷ್ಟು ಜನವಿದ್ದರೂ ಅದು ಅವರ ಮನಸ್ಸಿಗೆ ಮಾತ್ರವಾಗಿ ಮುದ ನೀಡುವ ಕಾರ್ಯವಾಗಿರದೆ ಅವರೆದುರಿಗೆ ಉಪಸ್ಥಿತಿತರಿರುವ ವ್ಯಕ್ತಿ ಯಾ ವ್ಯಕ್ತಿಗಳಿಗೆ ಅಲಸ್ಯ ಉಂಟು ಮಾಡದೆ ಇನ್ನೂ ಇಲ್ಲಿಯೇ ಉಳಿಯಬೇಕೆಂದು ತೋರುವ ರೀತಿಯಲ್ಲಿ ಅವರಲ್ಲಿ ಕುತೂಹಲ ಸೃಷ್ಠಿಸುವಲ್ಲಿ ಅವರು ಚಾಣಕ್ಯರಾಗಿದ್ದರು.
ಇಂತಹ ಅನುಭವವೇದ್ಯವನ್ನು ಅನುಭವವಿಸಿದವರು ನನ್ನ ಸ್ವತಃ ಅನುಭವದ ಹೊರತಾಗಿ ಹಲವರು ತಮ್ಮ ಅನುಭವವನ್ನು ನನ್ನಲ್ಲಿ ಹಂಚಿಕೊಂಡವರಿದ್ದಾರೆ. ನಾನು ಕಾಸರಗೋಡಿನ ತಾಯಲಂಗಾಡಿ, ಮೊಗ್ರಾಲ್ನಲ್ಲಿ ಸೇವೆಯಲ್ಲಿದ್ದಾಗ ಅವರು ಸೇವೆಯಲ್ಲಿಲ್ಲದ ವೇಳೆಗಳಲ್ಲಿ ಜುಮಆಕ್ಕೆ ಅಲ್ಲಿಗೆ ಬರುತ್ತಿದ್ದರು. ನಾನು ಯಾಕೆ ಇಲ್ಲಿಗೆ ಜುಮಅಕ್ಕೆ ಬಂದೆನೆಂದು ನೀನು ಕೇಳಲಿಲ್ಲವಲ್ಲ ಎಂದು ಅವರೇ ಮುಗುಳ್ನಗೆಯೊಂದಿಗೆ ಪ್ರಶ್ನೆಯನ್ನು ನನ್ನತ್ತ ಬೀಸಿ ತಾನು ಉದ್ದೇಶಿಸಿದ ಚರ್ಚೆಗೆ ನಾನಾರಿಯದೆ ನನ್ನನ್ನು ಎಳೆದೊಯಿತ್ತಿದ್ದರು. ಆಗ ನಾನು ಯಾಕೆ ಇಲ್ಲಿಗೆ ಬಂದಿರಿ? ಎಂದು ಕೇಳಿದರೆ, ಮನೆಯ ಹತ್ತಿರವಿರುವ ಮಸ್ಜಿದ್ನ ಜುಮಅದಲ್ಲಿ ಕಡಿಮೆ ಜನ ಸೇರುತ್ತಾರೆ. ಅಲ್ಲಿಗೆ ಹೋದರೆ ಜುಮಅಕ್ಕೆ ಹೋದ ಪ್ರತೀತಿ ಉಂಟಾಗುವುದಿಲ್ಲ. ಜನ ಅಧಿಕವಾಗಿ ಸೇರುವ ಜುಮಅಕ್ಕೆ ಭಾಗವಹಿಸಿದರೆ ಮನಸ್ಸಿಗೆ ಇನ್ನಿಲ್ಲದ ಅವೇಶ ಉಕ್ಕಿಬರುತ್ತಿದೆಯೆಂದು ಹೇಳುತ್ತಿದ್ದುದು ಈಗಲೂ ನೆನಪಾಗುತ್ತಿದೆ.
ಸಾಮಾನ್ಯವಾಗಿ ಇವರು ಸಮಾಜಿಕ ಮಾಧ್ಯಮದಲ್ಲಿ ಸಕ್ರೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಯಕ್ತಿಯಾಗಿರಲಿಲ್ಲ. ಆದರೆ ಇವರು ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ವಿಶ್ರಮಿಸುತ್ತಿರುವಾಗಲೂ ತನ್ನ ಹತ್ತಿರದ ಕುಟುಂಬಸ್ಥರಿಗೆ ಫೋನು ಮಾಡಿ ಮಾತಾನಾಡುತ್ತಿದ್ದರು. ಕೆಲವೊಮ್ಮೆ ಯೂಟ್ಯೂಬ್ ನೋಡುತ್ತಿದ್ದರು. ಒಮ್ಮೆ ನಾನು ಅವರನ್ನು ಸಂದರ್ಶಿದಾಗ ನೀವು ಈಗ ಸಮಾಜಿಕ ತಾಣದಲ್ಲಿಯೇ ಸಮಯ ದೂಡುತ್ತಿದ್ದೀರಲ್ಲ? ಎಂದು ಹೇಳಿದಾಗ, ಪ್ರಸಕ್ತ ಸಮಯ ದೂಡಲು ಇದಲ್ಲದೆ ಪರ್ಯಾಯ ಆಯ್ಕೆ ಇಲ್ಲ. ಸೇವೆಯಲ್ಲಿರುವಾಗ ದೀನಿ ಚರ್ಚೆಯಲ್ಲಿ ಮುಳುಗುತ್ತಿದ್ದೆ. ಆದರೆ ಈಗ ಮಾತಾಡಲು ಯಾರು ಇಲ್ಲದಿರುವಾಗ ದೊರಕುವ ಸಮಯಲ್ಲಿ ಒಂದಷ್ಟು ಸಮಯವನ್ನು ಇದಕ್ಕೆ ವ್ಯಯಿಸುವೆನೇ ಹೊರತು ಇದರಲ್ಲಿಯೇ ನನ್ನ ಅಮೂಲ್ಯ ಸಮಯವನ್ನು ಕಳೆಯುತ್ತಿಲ್ಲ. ಮೇಲಾಗಿ, ಇದರಲ್ಲಿ ಬರುತ್ತಿರುವ ಕೆಲವೊಂದು ವಾದವನ್ನು ನೋಡುತ್ತಿದ್ದರೆ ಇರುವ ಇಮಾನ್ ಕಳಿಚಿ ಹೋಗಬಹುದೆಂದು ಭಾವೋದ್ರಿಕ್ತವಾಗಿ ಹೇಳಿದರು.
ನಾನು ಕನ್ನಡಕ್ಕೆ ಅನುವಾದಿಸಿದ ಫತ್ಹುಲ್ ಮುಈನ್ಗೆ ಸಂದೇಶ ಟಿಪ್ಪಣಿ ಬರೆಯಿಸಬೇಕೆಂಬ ಉದ್ದೇಶದೊಂದಿಗೆ 2015 ರ ನವಂಬರ್ ಮೊದಲ ವಾರದಲ್ಲಿ ಅವರನ್ನು ಭೇಟಿಯಾದಾಗ ಅವರು ನನ್ನೂಡನೆ, ಮೂಲಗ್ರಂಥ ಆಶಯಗಳಿಗೆ ಅಸಂತುಲಿತತೆ ಬಾರದ ರೀತಿಯಲ್ಲಿ ಅನುವಾದಿಸಿದ್ದೀಯಾ? ಎಂದು ಕೇಳಿದರಲ್ಲದೆ ಈ ಗ್ರಂಥದ ಮಸ್ಅಲಃಯಲ್ಲಿರುವ ಬಹಳಷ್ಟು ಕಡೆಗಳಲ್ಲಿ ಕೆಲವೊಂದು ಒಗಟುಗಳು ಇದರ ಅದ್ಯಂತ್ಯವರೆಗೂ ನನಗೆ ಹೇಳಲಿಕ್ಕಿದೆ. ಅದನ್ನು ಟಿಪ್ಪಣಿ ರೂಪದಲ್ಲಿ ಸೇರಿಸಬಹುದಾ? ಎಂದು ನನ್ನಲ್ಲಿ ಕೇಳಿದಾಗ ಒಲ್ಲದ ಮನಸ್ಸಿನಿಂದಲೇ ಎಷ್ಟು ಪುಟಗಳು ಬರಬಹುದು? ಎಂದು ನಾನು ತಿರುಗಾ ಕೇಳಿದಾಗ ಸರಿಸುಮಾರು 60+ ಬರಬಹುದೆಂದಾಗ ಇದರ ಪ್ರಕಟಣೆಯ ಸಮಯ ಈಗಾಗಲೇ ಮೀರಿದೆ. ಸಾಧ್ಯವಾದರೆ ಇದರ ಹೊಸ ಆವೃತ್ತಿಯಲ್ಲಿ ಸೇರಿಸಲು ಪ್ರಯತ್ನಿಸುವೆನೆಂದಾಗ ಪರ್ವಾಗಿಲ್ಲವೆಂದು ಪ್ರತಿಕ್ರಿಯೆಸಿದ ಅವರು ನನ್ನ ಸಂದೇಶ ನೀನೇ ಬರೆದು ಅದರ ಪ್ರತಿಯನ್ನು ನನಗೆ ಕಳುಹಿಸಿದರೆ ಸಾಕೆಂದರು. ಆ ಬಳಿಕ ಅವರ ಸಹಿಯನ್ನು ಪಡೆಕ್ಕೊಂಡು ಅಲ್ಲಿಂದ ನಾನು ನಿರ್ಗಮಿಸಿದ್ದನ್ನು ನೆನೆಯುವಾಗ ಪ್ರಸಕ್ತ ಅದನ್ನು ಮೆಲುಕು ಹಾಕಲಾಗುತ್ತಿಲ್ಲ.
ಇವರು ಪಾರ್ಶ್ವವಾಯುವಿಗೆ ತುತ್ತಾಗಿ ಮನೆಯಲ್ಲಿ ವಿಶ್ರಮಿಸುತ್ತಿರುವ ಹೊತ್ತಿನಲ್ಲಿ ಅವರನ್ನು ಸಂದರ್ಶಿಸಲು ಹಲವರು ಬರುತ್ತಿದ್ದರು. ಸಂದರ್ಶಗಳೆಲ್ಲರಲ್ಲೂ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಮಾತನಾಡುತ್ತಿದ್ದರು. ತನ್ನ ರೋಗದ ತೀವ್ರತೆಯನ್ನು ತನ್ನ ಜಾಣತನದಿಂದ ನಿಭಾಯಿಸುತ್ತಿದ್ದ ಅವರು ಎಲ್ಲವೂ ಅಲ್ಲಾಹನ ಪರೀಕ್ಷೆ ಎಂದು ತನ್ನನ್ನು ತಾನು ನಿಯಂತ್ರಿಸುತ್ತಿದ್ದುದು ಅವರ ಶರೀರ ಭಾಷೆಯಿಂದ ವೇದ್ಯವಾಗುತ್ತಿತ್ತು. ಇದನ್ನು ಮನವರಿಕೆ ಮಾಡಿದ ನಾನು ತಾವು ತನ್ನ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗುವ ಸಲಹೆಯೊಂದನ್ನು ನಾನು ಕೊಡಬಹುದಾ? ಎಂದು ಅತಿಯಾದ ನಮ್ರತೆಯೊಂದಿಗೆ ಕೇಳಿದಾಗ ಏನದು? ಎಂದು ಅವರು ನನ್ನಲ್ಲಿ ಕೇಳಿದಾಗ, ತಾವು ದಿನದ ಎರಡು ಹೊತ್ತಿನಲ್ಲಿ ಮೆಡಿಟೇಷನ್ ಮಾಡಬೇಕೆಂದೆನ್ನಲ್ಲದೆ ಅದರ ಕ್ರಿಯಾತ್ಮಕ ರೀತಿಯನ್ನು ಅದರಿಂದ ಶರೀರಕ್ಕೆ ದೂರಕುವ ಅನುಕೂಲ ಪರಿಣಾಮ ಹಾಗೂ ಪ್ರಯೋಜನಗಳನ್ನು ವಿವರಿಸಿಕೊಟ್ಟಿದ್ದೆನು. ತಿಂಗಳ ಬಳಿಕ ಹೋದಾಗ ಕಳೆದ ಬಾರಿ ನಾನು ಹೇಳಿದ ಮೆಡಿಟೇಷನ್ ಮಾಡುತ್ತಿದ್ದಾರಾ? ಎಂದು ಕೇಳಿದಾಗ ಮಾಡುತ್ತಿದ್ದೇನೆಯಾದರೂ ನೀನು ಹೇಳಿದ ಪ್ರಯೋಜನಗಳು ಹೇಳತಕ್ಕ ಪರಿಣಾಮಕಾರಿಯಲ್ಲವೆಂದಾಗ ದಿನದ ಎರಡು ಹೊತ್ತು ಮಾಡುತ್ತಿದೀರಾ? ಎಂದು ಕೇಳಿದಾಗ ಕೆಲವೊಮ್ಮೆ ಮಾಡುತ್ತಿದ್ದೇನೆಂದು ಹೇಳುತ್ತಾ ಮುಗುಳ್ನಕ್ಕರು.
ನಮ್ಮ ಕುಟುಂಬದ ಹಿರಿಯರು ಸಮಾನ್ಯವಾಗಿ ತಮ್ಮ ದೀನಿ ಅಚಾರ ವಿಚಾರಗಳಾದಿ ಕಾರ್ಯಚಟುವಟಿಕೆಗಳು ಮಾಡಲುದ್ಯುಕ್ತವಾದರೆ ಅದರ ಪ್ರಾರಂಭದಿಂದಲೇ ಅಡ್ಯಾರ್ ಕಣ್ಣೂರು ಮುಹಮ್ಮದಾಜಿಯವರು ತಿಳಿಯದೆ ನಡೆಯುತ್ತಿರಲಿಲ್ಲ. ಒಟ್ಟಿನಲ್ಲಿ ಇದರಲ್ಲಿ ಅವರ ಪ್ರತ್ಯಕ್ಷ ಯಾ ಪರೋಕ್ಷ ಸ್ವಾಧೀನ ಇದ್ದೇ ಇರುತ್ತೆ ಎಂದರ್ಥ. ಅವರ ಮರಣದ ಬಳಿಕ ನಮ್ಮ ಕುಟುಂಬದಲ್ಲಿನ ಬಹುತೇಕ ವಿಚಾರಗಳಲ್ಲಿ ಇಂತಹ ಒಂದು ಸ್ವಾಧೀನ ಇದ್ದಿದ್ದರೆ ಅದು ಸ್ಮರಣೀಯ ವ್ಯಕ್ತಿ ಅಡ್ಯಾರ್ ಕಣ್ಣೂರು ಅಬೂಬಕ್ಕರಾಜಿಯವರಿಗೆ ಮಾತ್ರವಾಗಿತ್ತು. ಕಾರಣ ಅವರ ವ್ಯಕ್ತಿತ್ವ, ಪಕ್ವತೆ, ಇನ್ನಿತರ ಗುಣಗಳು ಬಹಳವಾಗಿ ಆನುವಂಶಿಕ ರೀತ್ಯಾ ದೊರೆತದ್ದು ಇವರಿಗಾಗಿತ್ತು. ಇಲ್ಲಿ ಇವರ ತಮ್ಮಂದಿರಾದ ಅಲ್ಹಾಜ್ ಅಬ್ದುಲ್ ಖಾದಿರ್ ಮುಸ್ಲಿಯಾರ್ ಹಾಗೂ ದಿವಂಗತ ಅಲ್ಹಾಜ್ ಇಸ್ಮಾಯಿಲ್ ಮುಸ್ಲಿಯಾರ್ರವರು ಹೆಚ್ಚು ಕಡಿಮೆ ಇದೇ ಅನುವಂಶಿಕತೆಯನ್ನು ಮೈಗೂಡಿಸಿಕೊಂಡವಾಗಿರುವರಾದರೂ ಕೆಲವೊಂದು ಗುಣಗಳಲ್ಲಿ ವಿಭಿನ್ನತೆಯೂ ಈ ತ್ರಿಮೂರ್ತಿಗಳಲ್ಲಿ ಕಂಡು ಬರುತ್ತಿದೆ.
ಇದು ಪ್ರಸ್ತುತ ನಡೆಯುತ್ತಿರುವ ವಿಷಯಕ್ಕೆ ಸಂಬಂಧಿಸಿದ ವಿಷಯವಲ್ಲದ ಕಾರಣ ಈ ವಿಭಿನ್ನತೆಯ ಕಾರಣಗಳನ್ನು ನಾನು ಇಲ್ಲಿ ವಿವರಿಸಲಿಚ್ಚಿಸುವುದಿಲ್ಲ. ವಿಷಯಕ್ಕೆ ಬರೋಣ. ನನ್ನ ಹೊಸ ಮನೆಯ ನಿರ್ಮಾಣದ ವೇಳೆಯಲ್ಲಿ “ಫೌಂಡೇಶನ್ ಸ್ಟೋನ್ ಲೇಯಿಂಗ್” ಗೆ ಇವರು ಬಂದು ಅದನ್ನು ಅವರ ಪಾವನ ಹಸ್ತದಿಂದ ನಿರ್ವಹಿಸಿ ಕೊಟ್ಟರು. ಅಲ್ಲಾಹನ ತೌಫೀಖ್ನಿಂದ ಇದು ನಿಜವಾಗಿಯೂ ನನ್ನ ಮನೆಯ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರಮುಖ ಮೈಲುಗಲ್ಲು ಎಂದು ಹೆಮ್ಮೆಯಿಂದ ಹೇಳತಕ್ಕ ರೀತಿಯಲ್ಲಿ ಅಲ್ಲಾಹನು ತನ್ನ ಸಹಾಯವನ್ನು ನನಗೆ ಒದಗಿಸಿರುತ್ತಾನೆ. الحمد لله علي كل حال ಈ ಹೊತ್ತಿನಲ್ಲಿ ನಾನು ಚೆರ್ವತ್ತೂರು ಸಮೀಪದ ಕೈದಕ್ಕಾಡಿನಲ್ಲಿ ಮುದರ್ರಿಸ್ ಆಗಿ ಸೇವೆಯಲ್ಲಿರುವ ಸಮಯವದು. ನೀರಿನ ಅವಶ್ಯಕತೆಗಾಗಿ ನನ್ನ ಹೊಸ ಮನೆಯ ಈಶಾನ್ಯ ಭಾಗದಲ್ಲಿ ಬಾವಿ ತೋಡಬೇಕೆಂಬ ಉದ್ದೇಶವಿತ್ತು. ಆದರೆ ಅಲ್ಲಿ ದೊರೆಯುವ ನೀರು ಹಳದಿ ಬಣ್ಣದೊಂದಿಗೆ ಅಸಹ್ಯವಾದ ವಾಸನೆಯನ್ನು ಸೂಸುತ್ತಿರುವ ಸಮಸ್ಯೆಯೊಂದು ಅನುಭವಿಸುತ್ತಿರುವುದು ಆ ಪರಿಸರದಲ್ಲಿರುವ ಎಲ್ಲರ ಸಮಸ್ಯೆಯಾಗಿತ್ತು. ಇದನ್ನರಿತ ನಾನು ಸ್ಮರಣೀಯ ವ್ಯಕ್ತಿಯನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ಇಬ್ರಾಹೀಂ (ಅ.ಸ) ರವರ ಹೆಸರಲ್ಲಿ ಖುರ್ಆನಿನ ಖತಂ ಮುಗಿಸು ಎಂದರು. ಹಾಗೇನೇ ನಾನು ಖುರ್ಆನ್ ಓದಿ ಮುಗಿಸಿದೆ. ಒಂದೆರೆಡು ದಿನದ ಬಳಿಕ ನಾನು ಕೈದಕ್ಕಾಡ್ಗೆ ಹೋದಾಗ ಅಲ್ಲಿ ಒಂದಿಬ್ಬರೊಂದಿಗೆ ನೀರಿನ ಪ್ರಯಾಸದಾಯಕ ಸಮಸ್ಯೆಯನ್ನು ಅವರಲ್ಲಿ ಪ್ರಸ್ತಾಪಿಸಿದಾಗ ಇದಕ್ಕೆ ಪರಿಹಾರವಿದೆಯೆಂದರು.
ಇಲ್ಲಿನ ಸಮೀಪದ ಪ್ರದೇಶಗಳಾದ ತುರ್ತಿ, ಮಡಕ್ಕರ ಕಾಡುಂಗೋಡ್ ಮುಂತಾದ ಸ್ಥಳಗಳಲ್ಲಿ ಈ ಸಮಸ್ಯೆ ಸ್ವಭಾವಿಕವಾಗಿಯೇ ಇದೆ. ಇದೆಷ್ಟು ಸ್ವಾಭಾವಿಕವೋ ಇದಕ್ಕಿರುವ ಪರ್ಯಾಯ ಪರಿಹಾರವೂ ಅಷ್ಟೆ ಸ್ವಭಾವಿಕವೆಂದರಲ್ಲದೆ ಇಂತಹ ನೀರನ್ನು ಪ್ಯೂರಿಪೈಯ್ ಮಾಡುವ ವ್ಯಕ್ತಿಗೆ ಆಗಲೇ ಅವರಲ್ಲೊಬ್ಬರು ಫೋನಾಯಿಸಿ ನನ್ನತ್ತ ಬರಲು ಹೇಳಿ ಮರುದಿನವೇ ಆ ವ್ಯಕ್ತಿಯನ್ನು ನನ್ನ ಮನೆಗೆ ನಾನು ಕರ್ಕೊಂಡು ಹೋಗಿ ಕಲುಷಿತ ನೀರನ್ನು ಶುದ್ಧೀಕರಿಸುವ ತೀರಾ ನ್ಯಾಚುರಲ್ ವಸ್ತುಗಳನ್ನು ಉಪಯೋಗಿಸಿ ಶುದ್ದೀಕರಿಸಿಕೊಟ್ಟರು. ಇದು ಎಲ್ಲ ಅರ್ಥದಲ್ಲಿ ಅಲ್ಲಾಹನ ಸಹಾಯದಿಂದ ದೊರೆತ ಸೌಭಾಗ್ಯವಲ್ಲದೆ ಮತ್ನೇನು.? ಪರಿಶುದ್ದ ಖುರ್ಆನ್ ಹಾಗೂ ಇಬ್ರಾಹೀಂ(ಅ.ಸ) ಸ್ಮರಣೆ ಸೂಕ್ತ ಸಮಯದಲ್ಲಿನ ನಿಮಿತ್ತಗಳಾಗಿದ್ದರೆ ಅದರ ಮಾರ್ಗಸೂಚಿಯಾಗಿ ಅಬೂಬಕ್ಕರಾಜಿಯವರ ಸಲಹೆ ಕಾರಣವಾಗಿರಲೂಬಹುದು. ವರ್ಷ ಗಟ್ಟಲೆಯಿಂದ ನೀರಿನ ಸಮಸ್ಯೆಯಿಂದಾಗಿ ಮನೆಗಳಿಲ್ಲದೆ ಬಿಕೋ ಎನ್ನುತ್ತಿದ್ದ ನನ್ನ ಮನೆಯಿರುವ ಪ್ರದೇಶದಲ್ಲಿ ಸ್ಯಾಚುರಲ್ ಮಿಟೀರಿಯಲ್ ಉಪಯೋಗಿಸಿ ನೀರಿನ ಶುದ್ಧೀಕರಣಕ್ಕೆ ಶಾಶ್ವತ ಪರಿಹಾರದ ಸಾಧ್ಯತೆಯಿಂದಾಗಿ ಪ್ರಸಕ್ತ ಅಲ್ಲಿ ಮನೆಗಳ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇವರ ಕುರಿತಂತೆ ಇನ್ನಷ್ಟು ಬರೆಯುಲು ನನಗೆ ಸಂಕಲ್ಪವಿದ್ದರೂ ವಿಷಯಗಳ ಡೃಢವಾದ ಹಾಗೂ ಆಳವಾದ ಮಾಹಿತಿಯ ಕೊರತೆಯು ಒಂದಡೆಯಾದರೆ ದೈರ್ಘ್ಯವು ಅನುವಾಚಕರಲ್ಲಿ ಅಲಸ್ಯವನ್ನುಂಟು ಮಾಡುತ್ತಿರುವುದು ಮತ್ತೊಂಡೆಯಾದರೆ ಸಮಯದ ಅಭಾವವು ಇದೆಲ್ಲಕ್ಕೂ ಮಿಗಿಲಾಗಿ ಕಾರಣವಾಗುತ್ತಿರುವುದರಿಂದ ಸ್ಮರಣೀಯ ವ್ಯಕ್ತಿಯ ಜೀವಾನಾದ್ಯಂತವಾದ ಅಧ್ಯಯನಕ್ಕೆ ಪರಿಣತ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ವೈಶಾಲ್ಯತೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಆದರೆ ದುರದೃಷ್ಟವಶಾತ್ ಜಿಲ್ಲೆಯ ಸಮಾಜದಲ್ಲಿ ಗುರುತಿಸಲ್ಪಟ್ಟ ಇಂತಹ ಧಾರ್ಮಿಕ ವಿದ್ವಾಂಸರ ಹಾಗೂ ವಿದ್ವಾಂಸೇತರ ಗಣ್ಯ ವ್ಯಕ್ತಿಗಳ ಅಧ್ಯಯನ ನಡೆಯುತ್ತಿಲ್ಲ.
ಅಲ್ಲಾಹನು ಸ್ಮರಣೀಯ ವ್ಯಕ್ತಿಗೆ ಪೂರ್ಣವಾದ ಕ್ಷಮೆ ಹಾಗೂ ಕರುಣೆ ದಯಪಾಲಿಸಲಿ. ಅವರ ಅರಿವು ಹಾಗೂ ಧಾರ್ಮಿಕ ಬೋಧನೆಗಳಿಗೆ ಸ್ವೀಕೃತಿ ದಯಪಾಲಿಸಿ ಇವುಗಳು ಅವರ ಬರ್ಝಖೀ ಜೀವನದಲ್ಲಿ ಅವರನ್ನು ಸ್ವಾಂತ್ವನಗೊಳಿಸಲು ಪ್ರೇರಕವಾಗುವುದರೊಂದಿಗೆ ಅವನು ದಯಪಾಲಿಸುವ ಸ್ವರ್ಗ ಪ್ರವೇಶನಕ್ಕೆ ನಿಮಿತ್ತವಾಗಲಿ اللّهم أمين يارب العالمين ಎಂಬ ದುವಾದೊಂದಿಗೆ..
— ಎ.ಕೆ ಮುಹಮ್ಮದ್ ಹನೀಫ್, ಅಡ್ಯಾರ್ ಕಣ್ಣೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.