(www.vknews.in) : ಮರಣವು ಎಲ್ಲರಿಗೂ ಕಟ್ಟಿಟ್ಟ ಬುತ್ತಿ ಆದರೆ ಕೆಲವು ಮರಣಗಳನ್ನು ಸುಲಭದಲ್ಲಿ ಮರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ನಾನು ಕಂಡು ಕೇಳಿದಂತಹ ಹಲವು ಅನಿವಾಸಿಗಳ ಮರಣವು ಅಷ್ಟು ಸುಲಭದಲ್ಲಿ ಜೀರ್ಣಿಸಿಕೊಳ್ಳಲಾಗುವುದಿಲ್ಲ.
ಆತನ ಹೆಸರು ರಿಯಾಝ್ . ಕುವೈತ್ ನಲ್ಲಿ ಉದ್ಯೋಗದಲ್ಲಿರುವ ರಿಯಾಝ್ ಮರುಭೂಮಿಯ ಸುಡುಬಿಸಿಲಿನಲ್ಲಿ ದುಡಿದ ಹಣದಿಂದ ತನ್ನ ತಾಯಿ ತಂದೆಯನ್ನು ಈ ಬಾರಿಯ ಪವಿತ್ರ ಹಜ್ ನಿರ್ವಹಿಸಲು ಮಕ್ಕಾಗೆ ಕಳುಹಿಸಿದ್ದರು. ಆದರೆ ಹಜ್ ಕರ್ಮದ ನಡುವೆ ರಿಯಾಝ್ ನ ತಂದೆ ಕಾಣೆಯಾಗುತ್ತಾರೆ. ಎಲ್ಲಿ ಹುಡುಕಾಡಿದರೂ ತಂದೆಯ ಪತ್ತೆಯೇ ಇಲ್ಲ. ಭಾರತೀಯ ರಾಯಭಾರಿ ಕಚೇರಿ, ಸೌದಿ ಪೊಲೀಸರಿಗೆ ಹಾಗೂ ಅನಿವಾಸಿ ಸಂಘಟನೆಗಳ ಮೊರೆ ಹೋಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಪತ್ತೆಯಾದ ಎಲ್ಲಾ ಮೃತದೇಹಗಳನ್ನು ಪರಿಶೀಲಿಸಲಾಗಿಯೂ ರಿಯಾಝ್ ನ ತಂದೆಯ ಮೃತದೇಹ ಸಿಕ್ಕಿಲ್ಲ. ಎಲ್ಲಾ ಪ್ರಯತ್ನಗಳೂ ಸೋತು ಹೋದಾಗ್ಯೂ ರಿಯಾಝ್ ನ ತಾಯಿಯ ವೀಸಾ ಕಾಲಾವಧಿ ಮಗಿದು ಆ ತಾಯಿ ಕಣ್ಣೀರಿನೊಂದಿಗೆ ತಾಯ್ನಾಡಿಗೆ ವಾಪಾಸಾಗುತ್ತಾರೆೆ.
ಹಜ್ ಕಳೆದು ಎರಡು ತಿಂಗಳ ನಂತರ ಒಂದು ಅಪರಿಚಿತ ಮೃತದೇಹ ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಮಕ್ಕಾದ ಆಸ್ಪತ್ರೆ ಶವಾಗಾರದಲ್ಲಿ ಪತ್ತೆಯಾಗುತ್ತದೆ. ತನ್ನ ತಂದೆಯ ಮೃತದೇಹದ ಗುರುತು ಹಿಡಿದು ಡಿಎನ್ಎ ಪರೀಕ್ಷೆ ನಡೆಸಿ ತನ್ನ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ರಿಯಾಝ್ ಕುವೈತಿನಿಂದ ಮಕ್ಕಾಗೆ ಬರುತ್ತಾರೆ. ಹಾಗೆ ಡಿಎನ್ಎ ಪರೀಕ್ಷೆಯಲ್ಲಿ ತನ್ನ ತಂದೆಯ ಮೃತದೇಹವೆಂದು ದೃಡಪಟ್ಟ ಹಿನ್ನೆಲೆಯಲ್ಲಿ ರಿಯಾಝ್ ಮಕ್ಕಾದ ಜನ್ನತುಲ್ ಮಹಲ್ಲಾದಲ್ಲಿ ತನ್ನ ಪ್ರೀತಿಯ ತಂದೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸುತ್ತಾರೆ. ಅಂತ್ಯ ಸಂಸ್ಕಾರ ನೆರವೇರಿಸಿ ತನ್ನ ಜೊತೆ ಆಸರೆಯಾಗಿ ನಿಂತಿದ್ದ ಅನಿವಾಸಿ ಸಂಘಟನೆಗಳ ಮಿತ್ರರನ್ನು ಮಾತನಾಡಿಸಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿ ತಂದೆಯನ್ನು ಕಳೆದುಕೊಂಡು ಭಾರವಾದ ಮನಸ್ಸಿನಿಂದ ತನ್ನ ಪತ್ನಿ ಮಕ್ಕಳೊಂದಿಗೆ ಪುನಃ ಕುವೈತ್ ಗೆ ಪ್ರಯಾಣ ಬೆಳೆಸುತ್ತಾರೆ.
ಮಕ್ಕಾದಿಂದ ಕುವೈತ್ ಗೆ ತೆರಲುವ ರಿಯಾದ್ ಮಾರ್ಗದ ಮದ್ಯೆ ತಾಯಿಫ್ ಸಮೀಪ ರಿಯಾಝ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿ ಭೀಕರ ಅಪಘಾತಕ್ಕೀಡಾಗುತ್ತದೆ. ಅಪಘಾತದಲ್ಲಿ ರಿಯಾಝ್ ಸ್ಥಳದಲ್ಲೇ ಮೃತರಾಗುತ್ತಾರೆ. ರಿಯಾಝ್ ಪತ್ನಿ ಹಾಗೂ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದು, ಅಲ್ ಮೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ರಿಯಾಝ್ ಇಹಲೋಕ ತ್ಯಜಿಸಿದರೆ, ತನ್ನ ಮಾವ ಹಾಗೂ ಪತಿಯನ್ನು ಕಳೆದುಕೊಂಡ ರಿಯಾಝ್ ಪತ್ನಿ , ಇನ್ನೊಂದೆಡೆ ತಂದೆ ಹಾಗೂ ಅಜ್ಜನನ್ನು ಕಳೆದುಕೊಂಡ ಪುಟ್ಚ ಮಕ್ಕಳು ಅನಾಥರಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆೆ. ಇವರಿಗೆ ಆಸರೆಯಾಗಿ ಈಗ ಯಾರೂ ಇಲ್ಲ. ಸದ್ಯ ರಿಯಾಝ್ ಸಹೋದರ ಕುವೈಟಿನಿಂದ ಆಸ್ಪತ್ರೆಯ ಕಡೆಗೆ ಹೊರಟಿದ್ದಾರೆ.
ಇದಾಗಿದೆ ಪ್ರತೀ ಅನಿವಾಸಿಯ ಬದುಕು. ಇನ್ನೊಬ್ಬರ ಸಂತ್ರಪ್ತಿಗಾಗಿ ಬದುಕುವ ಅನಿವಾಸಿಗೆ ತನ್ನ ಕೊನೆ ಸಮಯದಲ್ಲಿ ಆಸರೆಯಾಗಲು ಯಾರೂ ಇರುವುದಿಲ್ಲ. ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಹಲವು ಅನಿವಾಸಿಗಳು ಎಡವಿದರೆ ಕೆಲವರು ಮಾತ್ರ ಯಶಸ್ಸನ್ನು ಕಾಣುತ್ತಾರೆ. ಹೆಚ್ಚಿನ ಅನಿವಾಸಿಗಳ ಬದುಕಿನ ಹಿಂದೆ ತೋರ್ಪಡಿಸಲಾಗದ ನೋವಿನ ಕಥೆ ಇದ್ದೇ ಇರುತ್ತದೆೆ. ಆದ್ದರಿಂದ ಎಲ್ಲಾ ಅನಿವಾಸಿ ಸಹೋದರರನ್ನು ಒಂದೇ ತಕ್ಕಡಿಯಲ್ಲಿ ತೂಗದಿರಿ.
– ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.