ಕಾವು (www.vknews.in) ; ಇಡೀ ಜಗತ್ತಿನಲ್ಲಿ ಭಾರತ ದೇಶ ವೈಶಿಷ್ಟ್ಯಪೂರ್ಣ ದೇಶವಾಗಿದ್ದು ವಿವಿಧ ಧರ್ಮ, ಸಂಸ್ಕೃತಿಗಳ ಸಾಮರಸ್ಯ ಬದುಕು ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೇರಿಸಿದೆ. ಸೂರ್ಯ ಅಸ್ತಮಿಸದ ಬ್ರಿಟಿಷ್ ಸಾಮ್ರಾಜ್ಯದ ಷಡ್ಯಂತ್ರಗಳನ್ನು ಒಗ್ಗಟ್ಟೆಂಬ ಆಯುಧದ ಮೂಲ ಧ್ವಂಸ ಮಾಡಿ ಭವ್ಯ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಪ್ರಪಂಚದ ಸರ್ವರಿಗೂ ಮಾದರಿ ಎಂದು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಬಾಡಿ ಹೇಳಿದ್ದಾರೆ.
ಮಾಡನ್ನೂರು ಜಮಾಅತ್ ಕಮಿಟಿ ವತಿಯಿಂದ ಮಸೀದಿ ವಠಾರದಲ್ಲಿ ಸಡೆದ ಎಪ್ಪತ್ತೆಂಟನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಭಾಷಣಗಾರರಾಗಿ ಮಾತನಾಡುತ್ತಿದ್ದರು. ಇನ್ನೂರು ವರ್ಷಗಳ ಬ್ರಿಟಿಷ್ ದುರಾಡಳಿತವನ್ನು ಕಿತ್ತೆಸೆದು ತ್ಯಾಗ ಮತ್ತು ಪರಿಶ್ರಮದ ಮೂಲಕ ಧೀರ ದೇಶಾಭಿಮಾನಿಗಳು ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಚರಿತ್ರೆಯು ಭಾರತೀಯರಿಗೆ ಮಾದರಿಯಾಗಿದೆ.
ಸ್ವಾತಂತ್ರ್ಯ ಹೋರಾಟದ ಹತ್ತಿರ ಕೂಡ ಸುಳಿಯಲು ಧೈರ್ಯ ತೋರಿಸದ ದೇಶದ್ರೋಹಿ ಸಂತತಿಗಳು ಭಾರತದ ಅಧಿಕಾರ ಚುಕ್ಕಾಣಿ ಹಿಡಿದು ಭಾರತ ಸ್ವಾತಂತ್ರ್ಯ ಹೋರಾಟ ರಂಗದ ಮಹಾನ್ ಚೇತನಗಳನ್ನು ಹಾಗೂ ಕುರುಹುಗಳನ್ನು ಧ್ವಂಸ ಮಾಡುವ ಮೂಲಕ ಭಾರತದ ಪರಮೋಚ್ಚ ಸಂವಿಧಾನಕ್ಕೆ ಸವಾಲು ಹಾಕುತ್ತಿದ್ದಾರೆ. ಸಂವಿಧಾನ ವಿರೋಧಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಬುದ್ಧ ಭಾರತೀಯರು ಸೂಕ್ತ ತಿರುಗೇಟು ನೀಡಿದ್ದು ಇದು ಮುಂದಿನ ದಿನಗಳಲ್ಲಿ ಬೃಹತ್ ಕ್ರಾಂತಿಯಾಗಿ ಮಾರ್ಪಡಲಿದೆ ಎಂದು ಅವರು ಹೇಳಿದರು.
ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಹಾಗೂ ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಹಾಜಿ ಧ್ವಜಾರೋಹಣ ಮಾತನಾಡಿ ” ಸ್ವಾತಂತ್ರ್ಯ ನಂತರ ಭಾರತೀಯರೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದ ಸಹಬಾಳ್ವೆ ನಡೆಸಿದ ಇತಿಹಾಸ ಮಾತ್ರ ಇದ್ದು ಅದನ್ನು ಮುಂದುವರಿಸಿಕೊಂಡು ಹೋಗಲು ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಪಣ ತೊಡಬೇಕು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಮೌಲಾನಾ ಅಬುಲ್ ಕಲಾಂ ಆಝಾದ್,ಜವಹರಲಾಲ್ ಲಾಲ್ ನೆಹರೂ ಮೊದಲಾದ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಿಕೊಂಡು ಸುಭದ್ರ ಮತ್ತು ಭಾವೈಕ್ಯ ಭಾರತವನ್ನು ಕಟ್ಟಲು ಸರ್ವ ಭಾರತೀಯರು ಕೂಡ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕೆಂದು ಅವರು ಕರೆ ನೀಡಿದರು.
ಶುಭಾಶಂಸನೆಗೈದ ಮಾಡನ್ನೂರು ಜಮಾಅತ್ ಉಪಾಧ್ಯಕ್ಷ ಕೆ.ಕೆ.ಇಬ್ರಾಹಿಂ ಹಾಜಿ ಅವರು ” ಯುವ ಜನಾಂಗ ಮಾದಕ ವ್ಯಸನಿಗಳಾಗಿರುವುದು ಭಾರತದ ದೊಡ್ಡ ಸಮಸ್ಯೆಯಾಗಿದ್ದು ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಯುವ ಜನಾಂಗ ಸ್ವಾತಂತ್ರ್ಯ ಹೋರಾಟಗಾರರ ಸುಂದರ ಜೀವನ ಮಾದರಿಗಳನ್ನು ಅನುಸರಿಸಿಕೊಂಡು ಸುಸಂಸ್ಕೃತ ಭಾರತ ನಿರ್ಮಾಣಕ್ಕೆ ಮುಂದಾಗಬೇಕಾದದ್ದು ಇಂದಿನ ಅತಿದೊಡ್ಡ ಅನಿವಾರ್ಯತೆಯಾಗಿದೆ. ಭಾರತದಂಥಾ ತ್ಯಾಗಿವರ್ಯರ ನಾಡಿನಲ್ಲಿ ದೇಶವನ್ನು ಒಡೆಯುವ ಎಲ್ಲಾ ಕೃತ್ಯಗಳು ಕೊನೆಗೊಳ್ಳಬೇಕು ಎಂದು ಅವರು ಹೇಳಿದರು.
ಮಾಡನ್ನೂರು ಜಮಾಅತ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅಬ್ದುಲ್ಲ,ಮದ್ರಸ ಅಧ್ಯಾಪಕರಾದ ಇಬ್ರಾಹಿಂ ಬಾತಿಷ ಝುಹ್ರಿ,ತಾಜುದ್ದೀನ್ ಸಅದಿ,ಇಬ್ರಾಹಿಂ ಸಅದಿ ಊರಿನ ನಾಗರಿಕರು, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳು ಹಾಗೂ ಮದ್ರಸ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡರು. ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಂ ಆರಿಫ್ ಉಸ್ತಾದ್ ಸ್ವಾಗತಿಸಿದರು.
ವರದಿ: ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.