(www.vknews.com) : ಕೋವಿಡ್ ಎಲ್ಲ ಕಡೆ ಹರಡಿತು. ಜನರು ಗಾಬರಿಗೊಂಡರು. ಲಾಕ್ ಡೌನ್ ಪ್ರಾರಂಭವಾಯಿತು. ಕೆಲವು ಕಡೆ ಮುಕ್ತಾಯವೂ ಆಯಿತು. ಆದರೆ ಜನಜೀವನ ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಸಾವಿರಾರು ಹೋಟೆಲುಗಳು, ಆಫೀಸುಗಳು, ಅಂಗಡಿಗಳು ಮುಚ್ಚಿ ಹೋದವು. ಇದೆಲ್ಲ ಎಲ್ಲರಿಗು ತಿಳಿದಿರುವ ವಿಷಯ. ಕೆಲ ವ್ಯಾಪಾರಿಗಳು, ಶ್ರಮಿಕರು ಹೇಳುತ್ತಾರೆ – ನಮಗೆ ಸಂಪಾದನೆ ಇಲ್ಲ . ಆಫೀಸುಗಳಲ್ಲಿ ಕೆಲಸ ಮಾಡುವವರೇ ಪುಣ್ಯವಂತರು. ಮನೆಯಿಂದಲೇ ಕೆಲಸ ಮಾಡುತ್ತಾರೆ. ಆರಾಮಾಗಿ ಸಂಸಾರದ ಜೊತೆ ಇರುತ್ತಾರೆ. ಅವರಿಗೆ ಯಾವ ನಷ್ಟವೂ ಇಲ್ಲ. ಸುರಕ್ಷಿತವಾಗಿದ್ದಾರೆ. ಆದರೆ ವರ್ಕ್ ಫ್ರಮ್ ಹೋಂ ಮಾಡುವವರ ಗತಿ ದೇವರೇ ಗತಿ. ಮಾನಸಿಕ ಚಿತ್ರಹಿಂಸೆಗಳಿಗೆ ಒಳಗಾಗಿದ್ದಾರೆ. ಪ್ರತಿದಿನ ಆನ್ ಲೈನ್ ಮೀಟಿಂಗುಗಳು. ಒಂದು ಮೀಟಿಂಗಿನಲ್ಲಿ ಹತ್ತಾರು ಪ್ರಶ್ನೆಗಳು, ಅತಿಯಾದ ಒತ್ತಡಗಳು, ಸಾಯುವ ಹಾಗಿಲ್ಲ ಬದುಕುವ ಹಾಗಿಲ್ಲ. ಮಧ್ಯಮವರ್ಗದ ಜನರು ಸ್ವಂತ ಲ್ಯಾಪ್ ಟಾಪ್, ಪವರ್ ಬ್ಯಾಕ್ ಅಪ್, ಹೈ ಸ್ಪೀಡ್ ಇಂಟರ್ನೆಟ್ ಸರ್ವಿಸ್ ಎಲ್ಲಿಂದ ತರುತ್ತಾರೆ? ಪಟ್ಟಣದಲ್ಲಿ ವಾಸವಾಗಿರುವವರೇ ಒದ್ದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಕುಳಿತು ಕೆಲಸ ಮಾಡುವವರ ಗತಿ ಏನು ? ಟಾರ್ಗೆಟ್ ಕೊಟ್ಟಿಲ್ಲವೆಂದರೆ ಕೆಲಸ ಉಳಿಯಲ್ಲ. ಅಂದಿನ ಕೆಲಸ ಅಂದೇ ಆಗಬೇಕು. ಅದಕ್ಕೆ ಹೊತ್ತು ಗೊತ್ತು ಏನಿಲ್ಲ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ, ಕೆಲಸ ಮುಗಿಯಬೇಕು ಎಂಬ ಮ್ಯಾನೇಜರ್ ಮಾತುಗಳು ಕಿವಿಯಲ್ಲಿ ಚುಚ್ಚುತ್ತಿರುತ್ತವೆ.
ಕೆಲವರು ಗಟ್ಟಿ ಮನಸ್ಸು ಮಾಡಿ ಕೆಲಸ ಬಿಡುತ್ತಾರೆ. ಕೆಲವರು ಡಿಪ್ರೆಶನ್ ಮಾತ್ರೆಗಳನ್ನು ನುಂಗುತ್ತಿದ್ದಾರೆ. ಮತ್ತೆ ಕೆಲವರು ನಾವು ಓದಲೇ ಬಾರದಾಗಿತ್ತು ಎನ್ನುತ್ತಾ ಬೇಸರದಿಂದ ಕೆಲಸ ಮುಂದುವರೆಸುತ್ತಿದ್ದಾರೆ. ನುರಿತರು ಹೇಳುತ್ತಾರೆ – ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವವರಿಗೆ ೧೦ ವರ್ಷ ಆಯಸ್ಸು ಕಡಿಮೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಸಾವು ಇನ್ನೂ ಬೇಗ ಬರಬಹುದು. ಮಂಡಿ ನೋವು, ಸೊಂಟ ನೋವು, ಅರ್ಧ ತಲೆನೋವು, ದೃಷ್ಟಿಹೀನತೆ, ಕಾರ್ಪಲ್ ಟನಲ್ ಸಿಂಡ್ರೋಮ್, ನಿದ್ರಾಹೀನತೆ, ಜಿಗುಪ್ಸೆ – ಇನ್ನೂ ಮುಂತಾದ ಕಾಯಿಲೆಗಳು ಈಗಾಗಲೇ ಮನೆಮಾಡಿವೆ. ಕೆಲಸ ಎಲ್ಲಿ ಹೊರಟುಹೋಗುತ್ತೋ, ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲೇ ದಿನಗಳು ಉರುಳುತ್ತಿವೆ. ಇದು ಮುಗಿಯಲಾರದ ಸಮಸ್ಯೆ. ಕೆಲಸ ಮಾಡಲೇ ಬೇಕು. ಬದುಕಲೇ ಬೇಕು. ಏಕೆಂದರೆ ಆಫೀಸು ಮಂದಿ ಕಷ್ಟಪಟ್ಟು ಪ್ಯಾಪರ ಮಾಡುವುದು, ರೈತರಾಗುವುದು, ಅಥವಾ ಬೇರೆ ಕೆಲಸಗಳನ್ನು ಕಲಿತು ಜೀವನ ಸಾಗಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಮಕ್ಕಳ ಭವಿಷ್ಯದ ಚಿಂತೆ ಬೇರೆ. ಈ ಎಲ್ಲ ಚಿಂತೆಗಳ ಕಂತೆಗಳಲ್ಲಿ ಮನುಷ್ಯ ತತ್ತರಿಸಿ ಹೋಗಿದ್ದಾನೆ. ಶಾಂತಿಗಾಗಿ ಹುಡುಕಾಡುತ್ತಿದ್ದಾನೆ. ಶಾಂತಿ ಎಲ್ಲಿದೆ ? ಕರೋನ ಟೆನ್ಷನ್ ಬೇರೆ….!
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.