(www.vknews. in) ; ಸರಕಾರಿ ಶಿಕ್ಷಕರ ತರಗತಿ ಬಹಿಷ್ಕಾರ, ಸರಕಾರವನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರವೇ?
ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದು ರಾಜ್ಯ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ
2016ಕ್ಕಿಂತ ಮುಂಚೆ ನೇಮಕ ಹೊಂದಿದ ಪಿ.ಎಸ್.ಟಿ. ಶಿಕ್ಷಕರ ನೇಮಕಾತಿ ಆದೇಶದಲ್ಲಿ 1 ರಿಂದ 7 ತರಗತಿವರೆಗಿನ ಶಿಕ್ಷಕರು ಎಂದಿರುವ ಕಾರಣ ಅವರು ಒಂದರಿಂದ 8ನೇ ತರಗತಿವರೆಗೂ ಪಾಠ ಪ್ರವಚನ ಮಾಡುತ್ತಿದ್ದರು. ಆದರೆ 2017ರಲ್ಲಿ ರಚಿತವಾದ ನೂತನ ಸಿ ಆ್ಯಂಡ್ ಆರ್ ಅನ್ವಯ ಶಿಕ್ಷಕರನ್ನು 1 ರಿಂದ 5 ತರಗತಿಗೆ ಮಾತ್ರ ಸೀಮಿತಗೊಳಿಸಿ ಹಿಂಬಡ್ತಿ ನೀಡಿರುವುದು ಹಾಗೂ ಪದವೀಧರ ಶಿಕ್ಷಕರ ನೇಮಕ ಆಗದೆ ಇರುವ ಶಾಲೆಗಳಲ್ಲಿ ಅದೇ ಶಿಕ್ಷಕರು ಪಾಠಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ ಆದರೆ ಇಷ್ಟು ವರ್ಷಗಳಿಂದ ಸರಕಾರದ ನೆಲೆಯಲ್ಲಿ ಆಗಿರುವ ಕಾನೂನು ಬದಲಾವಣೆಯ ಬಗ್ಗೆ ಮೌನವಾಗಿದ್ದ ಇವರು ಮತ್ತು ಇವರ ಸಂಘಟನೆಯು ಈಗ ನಿದ್ದೆಯಿಂದ ಎದ್ದು ಬಂದು ಪ್ರತಿಭಟನೆ ,ತರಗತಿ ಬಹಿಷ್ಕಾರ ಎನ್ನುವ ನಿಲುವನ್ನು ತಾಳಲು ಕಾರಣವೇನು?
ಕಾನೂನು ತೊಡಕು ಇರುವ ಕಾರಣ ಸ್ವಲ್ಪ ಸಮಯಾವಕಾಶವನ್ನು, ಹಾಗೂ ಮುಖ್ಯಮಂತ್ರಿ ಯೊಂದಿಗೆ ಚರ್ಚಿಸಬೇಕು ಎನ್ನುವ ನಿಲುವನ್ನು ವ್ಯಕ್ತಪಡಿಸಿದ ಶಿಕ್ಷಣ ಸಚಿವರ ಮಾತಿಗೂ ಬೆಲೆ ಕೊಡದೆ ಇರಲು ಕಾರಣವೇನು?
7..8 ವರ್ಷದಿಂದ ಕಾನೂನಿನಲ್ಲಿ ಬದಲಾವಣೆಗಾಗಿ ಪ್ರಯತ್ನಿಸದೆ ಈ ಒತ್ತಡ ತಂತ್ರಕ್ಕೆ ಇಳಿಯಲು ಪ್ರೇರಣೆ, ಕಳೆದ ಶೈಕ್ಷಣಿಕ ವರ್ಷ ಅಂದರೆ ಮಾರ್ಚ್ 1 2023 ರ ತರಗತಿ ಬಹಿಷ್ಕಾರವೇ? ಅಂದಿನ ಬಹಿಷ್ಕಾರದಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ ಆಗಿರುವಾಗ ,ಅದೇ ಮಾದರಿಯ ತರಗತಿ ಬಹಿಷ್ಕಾರದಿಂದ ತಮ್ಮ ಬೇಡಿಕೆ ಈಡೇರಿಸಬಹುದು ಎನ್ನುವ ಆಲೋಚನೆಯೇ?
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ನಡತೆ) ನಿಯಮಗಳು 2021 ರ ಪ್ರಕಾರ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದು ನಡತೆ ನಿಯಮಗಳ ಉಲ್ಲಂಘನೆ ಆಗಿರುವುದರಿಂದ ಇಂತಹ ಮುಷ್ಕರ ಆಹ್ವಾನವನ್ನು ನೀಡುವ ಹಾಗೂ ಪ್ರೋತ್ಸಾಹಿಸುವ ಸಂಘಟನೆಗಳನ್ನು ಸರಕಾರವು ಬ್ಯಾನ್ ಮಾಡಬೇಕಿದೆ.
ಎಲ್ಲಾ ಬಹಿಷ್ಕಾರಗಳು,ಪ್ರತಿಭಟನೆಗಳು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗಿರುವಾಗ, ಈ ಮಕ್ಕಳ ಪರವಾಗಿ ಮತನಾಡಬೇಕಾದವರು ಯಾರು?
ಸರಕಾರವೇ ? ಇಲಾಖೆಯೇ ? ಮಕ್ಕಳ ಹಕ್ಕುಗಳ ಅಯೋಗವೇ?
ಶಿಕ್ಷಕರ ನ್ಯಾಯಯುತ ಬೇಡಿಕೆಗಳಿದ್ದರೆ ಅದನ್ನು ಸರಕಾರವು ಆದಷ್ಟು ಬೇಗ ಮಕ್ಕಳ ಹಿತದೃಷ್ಟಿಯಿಂದ ಈಡೇರಿಸಿ ನ್ಯಾಯ ಒದಗಿಸಬೇಕು.
ಅದೇ ರೀತಿ ಸರಕಾರ ,ಶಿಕ್ಷಣ ಇಲಾಖೆ ಹಾಗೂ ಅಲ್ಲಿರುವ ಶಿಕ್ಷಕರನ್ನು ನೆಚ್ಚಿಕೊಂಡು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿರುವ ಪೋಷಕರಿಗೆ ಹಾಗೂ ಅಲ್ಲಿರುವ ಮಕ್ಕಳಿಗೆ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ಸರಕಾರದ ಕೈ ಯಲ್ಲಿದೆ.
ಈ ತರಗತಿ ಬಹಿಷ್ಕಾರ ,ಪ್ರತಿಭಟನೆಗಳು ತಾತ್ವಿಕ ಅಂತ್ಯ ಎನ್ನುವುದು ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚುವ ಕಡೆ ಹೋಗದಿರಲಿ ಎನ್ನುವ ಪ್ರತ್ಯಾಷೆಯೊಂದಿಗೆ
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.