ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಸರ್ಕಾರವು ಅಲ್ಪಸಂಖ್ಯಾತರಿಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳತಕ್ಕದ್ದು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸ್ಸಾರ್ ಅಹಮ್ಮದ್ ಅವರು ತಿಳಿಸಿದರು. ಇಂದು ನಗರದ ಹೊರವಲಯದಲ್ಲಿರುವ ಮೌಲಾನಾ ಆಜಾದ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಮಹಿಳಾ ಸರ್ಕಾರೇತರ ಸಂಸ್ಥೆಯವರು ಮತ್ತು ಪ್ರತಿಷ್ಠಿತ ಮಹಿಳಾ ಸಮಾಜ ಸೇವಕರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರೆಂದರೆ ಕೇವಲ ಇಸ್ಲಾಂ ಧರ್ಮದವರಲ್ಲದೇ ಕ್ರಿಶ್ಚಿಯನ್, ಬೌಧ, ಪಾರ್ಸಿ, ಜೈನ ಮುಂತಾದ ಹಲವು ಸಮುದಾಯಗಳು ಸೇರಿವೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ, ತಾಲ್ಲೂಕು ಮಾಹಿತಿ ಕೇಂದ್ರ, ಅಂಗನವಾಡಿ ಕೇಂದ್ರಗಳು, ಒನ್ ಸ್ಟಾಪ್ ಸಖಿ ಕೇಂದ್ರಗಳು, ಸ್ವಾಧಾರ ಗೃಹಗಳು, ಸಾಂತ್ವನ ಗೃಹಗಳು, ಸ್ವ-ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಮಹಿಳಾ ಸಹಾಯವಾಣಿಗಳನ್ನು ಸರ್ಕಾರವು ಸ್ಥಾಪಿಸಿದೆ. ಇವುಗಳ ಪೂರ್ಣ ಪ್ರಯೋಜನವನ್ನು ಪಡೆಯಬೇಕು. ಅಲ್ಪಸಂಖ್ಯಾತರಿಗಾಗಿ ಲಭ್ಯವಿರುವ ಯೋಜನೆಗಳ ಮತ್ತು ಸೌಲಭ್ಯಗಳ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಛೇರಿಯಲ್ಲಿ ತಾಲ್ಲೂಕು ಮಾಹಿತಿ ಕೇಂದ್ರಗಳಲ್ಲಿ ವಿವರ ಲಭ್ಯವಿರುತ್ತದೆ. ನೀವು ಕಾಳಜಿ ವಹಿಸಿ ಇಂತಹ ಕಛೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಗಾಗಿ 181 ಸಹಾಯವಾಣಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮೇಲ್ಕಂಡ ಸ್ಥಳಗಳಲ್ಲಿ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳಾದ ಅಧಾರ್, ವೋಟರ್ ಐಡಿ, ಹಿರಿಯ ನಾಗರೀಕರ ಗುರುತಿನ ಚೀಟಿ, ಬಿ.ಪಿ.ಎಲ್ ಪಡಿತರ ಚೀಟಿ, ಯಶಸ್ವಿನಿ ಆಯೋಗ್ಯ ಕಾರ್ಡ್, ಕಟ್ಟಣ ನಿರ್ಮಾಣ ಕಾರ್ಮಿಕರ ಇ-ಶ್ರಮ್ ಕಾರ್ಡ್ ಮುಂತಾದ ಅತ್ಯಗತ್ಯ ದಾಖಲೆಗಳನ್ನು ಸಿದ್ಧ ಮಾಡಿ ಇಟ್ಟುಕೊಳ್ಳಬೇಕು ಎಂದರು.
ಇಲ್ಲಿ ತಿಳಿಸಲಾದ ಯೋಜನೆಗಳ ಮತ್ತು ಸೌಲಭ್ಯಗಳ ಕುರಿತು ತಮ್ಮ ಗ್ರಾಮಗಳಲ್ಲಿ ಮತ್ತು ಮನೆಗಳಲ್ಲಿ ಎಲ್ಲರಿಗೂ ತಿಳಿಸಿ ಅವರಿಗೂ ಸಹ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಬೇಕೆಂದರು. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾತನಾಡಿ, ಜಿಲ್ಲೆಯ ಜನತೆಗೆ ಸರ್ಕಾರಿ ಸೌಲಭ್ಯಗಳನ್ನು ಕುರಿತು ಅಲ್ಪಸಂಖ್ಯಾತರ ಸಮುದಾಯಕ್ಕೆ ಲಭ್ಯವಾಗಬೇಕಾದ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಮಾಹಿತಿ ಕೇಂದ್ರಗಳ ಸದುಪಯೋಗವನ್ನು ಸಮುದಾಯವು ಪಡೆದುಕೊಳ್ಳಬೇಕೆಂದರು.
ಹಲವಾರು ವಿದ್ಯಾರ್ಥಿವೇತನ ಯೋಜನೆಗಳು ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ಸಾಕ್ಷರರಾಗಲು ಸರ್ಕಾರವು ವಿದ್ಯಾರ್ಥಿವೇತನ, ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಶಾಲೆಗಳನ್ನು ಜಿಲ್ಲಾದ್ಯಂತ ತೆರೆದಿದೆ. ಅರ್ಹ ಫಲಾನುಭವಿಗಳು ಈ ಕಾರ್ಯಕ್ರಮದ ಲಾಭ ಪಡೆಯಬೇಕು. ಆ ಮೂಲಕ ಎಲ್ಲರೂ ವಿದ್ಯಾವಂತರಾಗುವ ಸರ್ಕಾರದ ಕನಸನ್ನು ನನಸು ಮಾಡಬೇಕು. ಜಿಲ್ಲಾದ್ಯಂತ ಸ್ಥಾಪಿಸಿರುವ ಮೊರಾರ್ಜಿ ಶಾಲೆಗಳು, ಮೌಲಾನಾ ಆಜಾದ್ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೇಲ್ಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಗಳಾದ ಸುಮಯಾ, ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುರಳಿ ಸೇರಿದಂತೆ ಕೆಎಂಡಿಸಿ ನಿರ್ದೇಶಕ ಅಬ್ದುಲ್ ಖಯೂಮ್,ಜಫ್ರುಲ್ಲಾ ಮತ್ತು ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. ವರದಿ ಶಬ್ಬೀರ್ ಅಹ್ಮದ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.