(ವಿಶ್ವಕನ್ನಡಿಗ ನ್ಯೂಸ್) : ಶತಮಾನಗಳ ದಾಸ್ಯ ಸಂಕೋಲೆಗಳಿಂದ ಬಂಧಿತವಾಗಿದ್ದ ಭಾರತವನ್ನು 1948ರಲ್ಲಿ ಸ್ವತಂತ್ರ್ಯ ಗೊಳಿಸಲಾಗುವುದು ಎಂದು ಬ್ರಿಟನ್ನಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಲೇಬರ್ ಪಕ್ಷ ಘೋಷಿಸಿ ಆಗಿತ್ತು.ಇದಕ್ಕೆ ಪೂರಕವಾಗಿ ಭಾರತದಲ್ಲಿ ಸಂವಿಧಾನ ರಚನೆ ಕುರಿತು ಚರ್ಚೆಗಳು ತೀವ್ರವಾದವು.ಆದರೆ ಲಾರ್ಡ್ ಮೌಂಟ್ ಬ್ಯಾಟನ್ 1947ರ ಜೂನ್ 4ರಂದು ಸುದ್ದಿಗೋಷ್ಠಿ ನಡೆಸಿ ಭಾರತವನ್ನು ಒಂದು ವರ್ಷ ಮೊದಲೇ(1947) ಸ್ವಾತಂತ್ರ್ಯಗೊಳಿಸಲಾಗುವುದೆಂದು ಘೋಷಿಸಿ ಬಿಟ್ಟರು.
ಇದರಿಂದ ಅಚ್ಚರಿಗೊಳಗಾದ ರಾಷ್ಟ್ರೀಯ ನಾಯಕರು ಸಂವಿಧಾನ ರಚನಾ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಿದರು. ಆರಂಭದಲ್ಲಿ ನೆಹರೂ ಹಾಗು ಪಟೇಲರು ಸಂವಿಧಾನ ರಚನಾ ಜವಾಬ್ದಾರಿಯನ್ನು ಖ್ಯಾತ ಅಂತಾರಾಷ್ಟ್ರೀಯ ಸಂವಿಧಾನ ತಜ್ಞರಾದ ಸರ್ ಗೌರ್ ಜಿನ್ನಿಂಗ್ ರವರಿಗೆ ವಹಿಸಲು ನಿರ್ಧರಿಸಿದ್ದರು .ಆದರೆ ಮಹಾತ್ಮಾ ಗಾಂಧೀಜಿಯವರು ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಿದ್ದರು.
ಆ ಮೂಲಕ ಅರ್ಹ ವ್ಯಕ್ತಿಗೆ ಅರ್ಹ ಜವಾಬ್ದಾರಿಯನ್ನು ನೀಡಲಾಯಿತು.ಇದು ಬಾಬಾಸಾಹೇಬರ ಸಾಮಾಜಿಕ ಹೋರಾಟಕ್ಕೆ ಅತೀ ದೊಡ್ಡ ಅಸ್ತ್ರವೊಂದು ದೊರೆತಂತಾಯಿತು. ಅಂಬೇಡ್ಕರ್ ರವರನ್ನು ಸಂವಿಧಾನದ ಕರಡು ಸಮೀತಿಯ ಅಧ್ಯಕ್ಷರಾಗಿ ನೇಮಿಸಲಾಯಿತು.ಆ ಸಮೀತಿಯಲ್ಲಿ ಏಳು ಮಂದಿ ಸದಸ್ಯರಿದ್ದರು.ಅಂಬೇಡ್ಕರ್ ರವರ ತಪಃ ಸ್ವರೂಪಿ ಪರಿಶ್ರಮದಿಂದ ಜಗತ್ತಿನ ಅತೀ ಶ್ರೇಷ್ಠವಾದ ಸಂವಿಧಾನ ಭಾರತೀಯರ ಭವಿಷ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ತಯಾರಾಗಿತ್ತು.ಇದಕ್ಕಾಗಿ ಅಂಬೇಡ್ಕರ್ ತಮ್ಮ ಸಕಲ ಶಕ್ತಿಯನ್ನೂ ವಿನಿಯೋಗಿಸಿದರು.1949 ನವೆಂಬರ್ 26 ರಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರಪ್ರಸಾದ್ರು ಮಾತನಾಡುತ್ತಾ “ಅಧ್ಯಕ್ಷೀಯ ಸ್ಥಾನದಲ್ಲಿ ಕುಳಿತು, ದಿನನಿತ್ಯದ ನಡಾವಳಿಕೆಗಳನ್ನು ಗಮನಿಸಿದ್ದೇನೆ.
ನನ್ನ ಅರಿವಿಗೆ ಬಂದಿದ್ದೇನೆಂದರೆ… ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್ರವರು ತಮ್ಮ ಅನಾರೋಗ್ಯದ ಹೊರತಾಗಿಯೂ ಅದೆಂತಹ ಅಪರೂಪದ ಶ್ರದ್ದೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆ…” ಎಂದು ಶ್ಲಾಘಿಸಿದಾಗ ಇಡೀ ಪಾರ್ಲಿಮೆಂಟ್ ಚಪ್ಪಾಳೆ ತಟ್ಟುತ್ತದೆ. ಮುಂದುವರೆದ ರಾಜೇಂದ್ರಪ್ರಸಾದರು “…ನಿಜ ಹೇಳಬೇಕೆಂದರೆ ಅಂಬೇಡ್ಕರ್ ಅವರನ್ನು ನಾವು ಕರಡು ಸಮಿತಿಯ ಮುಂಚೂಣಿಯ ಜವಾಬ್ದಾರಿ ನೀಡಿದ್ದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅದೆಷ್ಟು ಸಮರ್ಪಕವಾಗಿತ್ತೆಂದರೆ ಖಂಡಿತ ಅದಕ್ಕಿಂತ ಸೂಕ್ತ ನಿರ್ಧಾರ ನಮ್ಮಿಂದ ಸಾಧ್ಯವೇ ಇರಲಿಲ್ಲ…” ಎನ್ನುತ್ತಾರೆ. ರಾಜೇಂದ್ರ ಪ್ರಸಾದ್ ರವರ ಈ ಮಾತುಗಳು ಅಂಬೇಡ್ಕರ್ರವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಇಂದು ಕೆಲವರು ಸಂವೀಧಾನ ರಚನಾ ಕಾರ್ಯದಲ್ಲಿ ಅಂಬೇಡ್ಕರ್ ರವರ ಪಾತ್ರವನ್ನು ಪ್ರಶ್ನಿಸುತ್ತಾ “ಸಂವಿಧಾನ ರಚನಾ ಸಭೆಯಲ್ಲಿ ಕೇವಲ ಅಂಬೇಡ್ಕರ್ ಮಾತ್ರವೇ ಇದ್ದುದಲ್ಲ. ಇತರ ಸದಸ್ಯರೂ ಇದರಲ್ಲಿ ಭಾಗಿಯಾಗಿದ್ದರು. ಆದುದರಿಂದ ಸಂವಿಧಾನ ರಚನೆಯ ಕ್ರೆಡಿಟನ್ನು ಅಂಬೇಡ್ಕರ್ ರವರಿಗೆ ಕೊಡಬಾರದು ” ಎಂದು ವಾದಿಸುತ್ತಾರೆ. ಅದಕ್ಕೆ ಉತ್ತರವನ್ನುಟಿ.ಟಿ.ಕೃಷ್ಣಮಚಾರಿಯವರು ಅಂದೇ ಹೇಳಿದ್ದರು. ಟಿ.ಟಿ.ಕೃಷ್ಣಮಚಾರಿಯವರು ಸಂಸತ್ತಿನಲ್ಲಿ ಹೇಳಿದ್ದ ಮಾತುಗಳಿವು “ಡಾ.ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ನನ್ನನ್ನು ಸೇರಿದಂತೆ ಏಳು ಸದಸ್ಯರನ್ನು ನೇಮಿಸಿದ್ದೀರಿ. ಅವರಲ್ಲೊಬ್ಬರು ರಾಜೀನಾಮೆ ನೀಡಿದರು, ಒಬ್ಬರು ಅಕಾಲ ಮರಣಹೊಂದಿದರು, ಒಬ್ಬರು ಸ್ವಂತ ಕೆಲಸಗಳಿಗಾಗಿ ಅಮೆರಿಕದಲ್ಲೇ ಉಳಿದರು, ಒಬ್ಬರು ರಾಜಕೀಯ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡರು. ಇಬ್ಬರು ಅನಾರೋಗ್ಯದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಉಳಿಯಬೇಕಾಯಿತು ಕೊನೆಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್ರವರೊಬ್ಬರ ಮೇಲೆಯೇ ಭಾರತ ಸಂವಿಧಾನ ರಚಿಸುವ ಪೂರ್ಣ ಜವಾಬ್ದಾರಿ ಬಿದ್ದಿತು. ಅವರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು” ಎನ್ನುತ್ತಾರೆ ಟಿ.ಟಿ.ಕೃಷ್ಣಮಚಾರಿ ಯವರು.
ಕೃಷ್ಣಮಚಾರಿಯವರ ಈ ಮಾತುಗಳು ಸಾಕು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ರವರ ಪರಿಶ್ರಮ ಏನೆಂದು ಅರಿತುಕೊಳ್ಳಲು. ಇಲ್ಲಿ ನಾವು ನೆನಪಿಸಬಹುದಾದ ಮತ್ತೊಂದು ವ್ಯಕ್ತಿತ್ವ ಬೆನಗಲ್ ನರಸಿಂಗ ರಾವ್ ರವರು. ಬಿ.ಎನ್.ರಾವ್ ರವರು ಅಂಬೇಡ್ಕರ್ ರವರ ಸಾಂವಿಧಾನಿಕ ಸಲಹಾಗಾರರಾಗಿದ್ದರು. ಅವರು ಅಂಬೇಡ್ಕರ್ ರವರ ಪ್ರತಿನಿಧಿಯಾಗಿ ಸುಮಾರು 60 ದೇಶಗಳಿಗೆ ಭೇಟಿ ನೀಡಿದ್ದರು. 1945 ನವೆಂಬರ್ 25 ರಂದು ಅಂಬೇಡ್ಕರ್ ರವರು ಬೆನಗಲ್ ರವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ ಸಂವಿಧಾನ ರಚನೆಯ ಶ್ರೇಯಸ್ಸು ಬೆನಗಲ್ ರವರಿಗೂ ಸಹ ಸಲ್ಲಬೇಕು ಎಂದಿದ್ದರು.
ಹೀಗೆ ಬೆನಗಲ್ ರವರ ಅಪೂರ್ವ ಸಲಹೆಗಳ ಸಹಾಯದಿಂದ ಅಂಬೇಡ್ಕರ್ ರವರು ಜಗತ್ತಿನ ಸರ್ವ ಶ್ರೇಷ್ಠವಾದ ಸಂವಿಧಾನವನ್ನು ರಚಿಸುವ ಮೂಲಕ ಭಾರತದ ಭವಿಷ್ಯಕ್ಕೆ ಹೊಸ ಭಾಷ್ಯವನ್ನೇ ಬರೆದರು.ಅಂಬೇಡ್ಕರ್ ವಿರಚಿತ ಸಂವಿಧಾನ ಇಷ್ಟೊಂದು ಅದ್ಭುತವಾಗಿ ಮೂಡಿಬರಲು ಕೇವಲ ಅಂಬೇಡ್ಕರ್ ರವರ ಜ್ಞಾನಸಾಗರ ಮಾತ್ರವೇ ಕಾರಣವಲ್ಲ ಅವರು ಅನುಭವಿಸಿದ ಯಾತನೆಗಳು ಅವಮಾನಗಳೂ ಸಹ ಇದರಲ್ಲಿ ಪ್ರೇರಕ ಅಂಶ ವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬರಹ: ಮುಹಮ್ಮದ್ ರಿಯಾಜ್, ಕಾರ್ಕಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.