(www.vknews.in) : ತಮ್ಮ ಸಾಂಸ್ಕ್ರತಿಕ,ಧಾರ್ಮಿಕ ಪದ್ದತಿಯಂತೆ ಶಾಲಾ ಸಮವಸ್ತ್ರದ ಮೂಲಕವೇ ತಲೆ ಮುಚ್ಚಿ ಕೊಳ್ಳತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕನ್ನು ನ್ಯಾಯಾಲಯದ ತೀರ್ಪು ಕಸಿದು ಕೊಳ್ಳುವುದಿಲ್ಲ ಎಂಬ ಶುಭ ನಿರೀಕ್ಷೆಯಲ್ಲಿದ್ದಾರೆ ದೇಶದ ಅಷ್ಟೂ ಪ್ರಜೆಗಳು. ವೈವಿಧ್ಯಮಯ ಸಂಸ್ಕೃತಿಗಳ ತವರೂರು,ಹಲವು ಜಾತಿ ಭಾಷೆ ಧರ್ಮಗಳ ನೆಲೆಬೀಡು ಆಗಿರುವ ನಮ್ಮ ದೇಶದ ಮೂಲ ಶಕ್ತಿಯೇ ಅದು ಬಲಿಷ್ಟವಾದ ಸಂವಿಧಾನವನ್ನು ಹೊಂದಿದೆ ಎಂಬುದಾಗಿದೆ. ನಿಜವಾಗಿಯೂ ಈಗ ಉದ್ಭವಿಸಿದ ಈ ಹಿಜಾಬ್ ವಿವಾದ ಅನಗತ್ಯವಾಗಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಸೃಷ್ಟಿ ಮಾಡಿದ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟ.
ಭಾರತದಲ್ಲಿ ಅಭಿವೃದ್ದಿಯ ಮಾನದಂಡದಲ್ಲಿ ಆಡಳಿತ ನಡೆಸಲು ಮತ್ತು ವಿರೋಧ ವ್ಯಕ್ತಪಡಿಸಲು ಸಾದ್ಯವಾಗದೇ ಇರುವವರು ಕೊನೆಗೇ ಭಾವನಾತ್ಮಕ ವಿಷಯಗಳಿಗೆ ಆಶ್ರಯ ಪಡೆಯವುದು ಚಾಳಿಯಾಗಿ ಬಿಟ್ಟಿದೆ. ರಾಜ್ಯದಲ್ಲಿ ಮಕಾಡೆ ಮಲಗಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ವಿರೋಧ ಪಕ್ಷಗಳು ಮೈ ಕೈ ಮೆರೆತು ಫೀಲ್ಡಿಗಿಳಿಯ ಬೇಕಿತ್ತು. ಆದರೆ ಅವರಿಗೆ ಅದಕ್ಕೆ ಟೈಮೇ ಇರಲಿಲ್ಲ. ಆಗ ಅವರಿಗೆ ಬಿದ್ದು ಸಿಕ್ಕಿದ ಒಂದು ಅಸ್ತ್ರ ವಾಗಿತ್ತು ನಾರಾಯಯಣ ಗುರುಗಳು ಸ್ತಬ್ದ ಚಿತ್ರ ವಿವಾದ. ಈ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಇನ್ನೇನು ಆಡಳಿತ ಪಕ್ಷದ ವಿರುದ್ದ ಕರಾವಳಿಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ತಿರುಗಿ ಬೀಳುತ್ತಾರೆಂಬ ಹಂತಕ್ಕೆ ತಲುಪಿದಾಗ ಆಡಳಿತ ಪಕ್ಷದವರಿಗೆ ಮತ್ತೊಂದು ಅಸ್ತ್ರ ಸುಲಭದಲ್ಲಿ ಬಿದ್ದು ಸಿಕ್ಕಿತು ನೋಡಿ. ಸಾರ್ವಜನಿಕರು ಇಂತಹ ಬೋಗಸ್ ಇಷ್ಯೂಗಳನ್ನು ಯಾವಾಗ ತಿರಸ್ಕರಿಸುತ್ತಾರೋ ಆಗ ದೇಶ ಅಭಿವೃದ್ದಿಯ ಪಥದಲ್ಲಿ ಮುಂದೆ ಸಾಗುತ್ತದೆ.
ಇನ್ನು ಈ ಹಿಜಾಬಿನ ವಿಚಾರವನ್ನೇ ತೆಗೆದು ಕೊಳ್ಳೋಣ. ಇವತ್ತು ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಏನೇನೋ ಯೋಜನೆಗಳನ್ನು ತಂದಿದ್ದೇನೆ ಎಂದು ಭಾಷಣ ಮಾಡುತ್ತಿದ್ದಾರೆ ಮೋದಿಯವರು. ಅವರ ಆ ಮಾತಿನಲ್ಲಿ ನೈತಿಕತೆ ಇದ್ದರೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾದ ಈ ವಿವಾದದಲ್ಲಿ ಒಂದು ವೇಳೆ ತಲೆ ಮುಚ್ಚುವುದರ ವಿರುದ್ದ ಕೋರ್ಟ್ ತೀರ್ಪು ಬಂದಲ್ಲಿ ಮೋದಿಯವರು ಮಧ್ಯೆ ಪ್ರವೇಶಿಸಿ ಹಿಜಾಬ್ ನಿರಾಕರಣೆಯ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗುವ ಸಾವಿರಾರು ಮಹಿಳೆಯರ ಪರವಾಗಿ ಕಾನೂನು ರೂಪಿಸುವರೇ?
ಅವರು ಅದಕ್ಕೆ ತಯಾರಾಗುವುದಂತೂ ಕನಸಿನ ಮಾತೇ ಸರಿ. ನೋಡಿ, ದೇಶದ ಸಿಖ್ ಸಮುದಾಯವು ಅವರದೇ ಪೇಟ ಧರಿಸಿ ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿರುವುದು ಅವರಿಗೆ ಕಾನೂನು ನೀಡಿದ ಆಶ್ರಯದಿಂದಾಗಿದೆ. ಅದೇ ರೀತಿ ಯಾರಿಗೂ ಯಾವುದೇ ತೊಂದರೆ ನೀಡದ ಮುಸ್ಲಿಂ ವಿದ್ಯಾರ್ಥಿನಿಯರ ತಲೆಮುಚ್ಚುವ ಬೇಡಿಕೆಯನ್ನು ನ್ಯಾಯಾಲಯ ಪುರಸ್ಕರಿಸಿದರೆ ಅದು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಲಿದೆ. ಈಗಾಗಲೇ ಬಾಬರಿ ಮಸೀದಿ ದ್ವಂಸ,ಚರ್ಚ್ ದ್ವಂಸ,ಜೈ ಶ್ರೀರಾಂ ಹೇಳಲು ಬಲವಂತ ಪಡಿಸುವುದು,ದ್ವೇಷ ಭಾಷಣ ಗಳಿಂದ ಹರಾಜಾದ ನಮ್ಮ ಮಾನವನ್ನು ಒಂದಿಷ್ಟು ಉಳಿಸಿ ಕೊಳ್ಳಲು ಇದು ಉಪಯುಕ್ತವಾಗಲಿದೆ.
ಅದೇ ರೀತಿ ಮುಸ್ಲಿಂ ಮಹಿಳೆಯರ ಶಾಲ್ ನ ವಿರುದ್ದ ಇದಕ್ಕೆ ಸಂಭಂದವೇ ಇಲ್ಲದ ಒಂದಿಷ್ಟು ಹುಡುಗರು ಕೇಸರಿ ಶಾಲು ಧರಿಸಿ ಬಂದದ್ದನೇ ದೊಡ್ಡ ಇಷ್ಯು ಮಾಡಿ ರಾಜ್ಯದ ಶಾಂತಿ ಕದಡುತ್ತಿದೆ ಎಂದು ನ್ಯಾಯಾಲಯವನ್ನು ನಂಬಿಸಿ ತೀರ್ಪಿನಲ್ಲಿ ಪ್ರಭಾವ ಬೀರುವಂತಾಗಲು ಶಾಲೆಗೆ ದೀರ್ಘ ರಜೆ ಘೋಷಿಸಿದ್ದನ್ನು ನ್ಯಾಯಾಲಯ ಅರ್ಥ ಮಾಡಿ ಕೊಳ್ಳ ಬೇಕಾಗುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.