ಈ ಸೈನಿಕ ನೇಮಕಾತಿ ಯೋಜನೆಯ ಸಾಧಕ ಭಾದಕಗಳ ಒಂದು ತಕ್ಷಣದ ಪ್ರತಿಕ್ರಿಯೆ..
(ವಿಶ್ವ ಕನ್ನಡಿಗ ನ್ಯೂಸ್) : ಇನ್ನು ಹದಿನೈದು ದಿನಗಳಲ್ಲಿ ಯೋಜನೆ ಜಾರಿ. ಆದರೆ ಈಗಾಗಲೇ ಉತ್ತರ ಭಾರತದ ಕೆಲವು ಕಡೆ ಪ್ರತಿಭಟನೆ ಪ್ರಾರಂಭವಾಗಿದೆ. ಸೈನ್ಯ ಸೇರಿ ದೀರ್ಘಕಾಲ ಸೇವೆ ಸಲ್ಲಿಸುವ ಆಸಕ್ತಿ ಇದ್ದ ಯುವಕರು ಈ ಯೋಜನೆಯಿಂದ ಆಕ್ರೋಶಗೊಂಡಿದ್ದಾರೆ.
ಮೊದಲನೆಯದಾಗಿ, ಹಣ ಉಳಿತಾಯ ಮತ್ತು ನಿರುದ್ಯೋಗ ನಿವಾರಣೆಗೆ ಈ ಯೋಜನೆ ಉತ್ತಮವಲ್ಲ. ಅತ್ಯಂತ ಮಹತ್ವದ ಸೈನಿಕ ನೇಮಕಾತಿಯಲ್ಲಿ ಈಗಿರುವ ನಿಯಮಗಳು ತುಂಬಾ ಪರಿಣಾಮಕಾರಿಯಾಗಿವೆ. ಬಹುಶಃ ದೂರದೃಷ್ಟಿ ಇಲ್ಲದ ಹೆಚ್ಚು ಚರ್ಚೆಗಳಿಗೆ ಒಳಪಡಿಸದೆ ಆಡಳಿತಾತ್ಮಕ ಒತ್ತಡದಿಂದ ಇದನ್ನು ಮಾಡಿರಬೇಕು. ಈಗಿನ ಕೇಂದ್ರ ಸರ್ಕಾರ ಕೆಲವು ಈ ರೀತಿಯ ಆತುರದ ಯೋಜನೆಗಳನ್ನು ಜಾರಿ ಮಾಡುವುದು ಜನ ಪ್ರತಿರೋಧ ಹೆಚ್ಚಾದಾಗ ಹಿಂಪಡೆಯುವುದು ನಡೆಯುತ್ತಲೇ ಇದೆ.
ಎರಡನೆಯದಾಗಿ, 17/21 ವರ್ಷ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮಾಡುವುದು ಹೆಚ್ಚು ಉಪಯುಕ್ತ. ಒಂದು ವೇಳೆ ತೀರಾ ಅನಿವಾರ್ಯವಾಗಿ ಕೆಲಸಕ್ಕೆ ಸೇರಲೇಬೇಕು ಎನಿಸಿದರೆ ಅದು ಅತ್ಯಂತ ಕಡು ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಮಾತ್ರ ಇದನ್ನು ಉಪಯೋಗಿಸಿಕೊಳ್ಳಬಹುದು. ಏಕೆಂದರೆ ಅವರಿಗೆ ಆ ವಯಸ್ಸಿನಲ್ಲಿ ಸುಮಾರು 35000 ಬಹುದೊಡ್ಡ ಮೊತ್ತ.
ಅದನ್ನು ಹೊರತುಪಡಿಸಿ ಬೆರಳೆಣಿಕೆಯಷ್ಟು ದೇಶ ಪ್ರೇಮದ ಯುವಕರು ಈ ಯೋಜನೆಯಲ್ಲಿ ಸೈನ್ಯ ಸೇರಿಬಹುದೇ ಹೊರತು ಯಾವುದೇ ರಾಜಕಾರಣಿಗಳು ಅಧಿಕಾರಿಗಳು ಶ್ರೀಮಂತರು, ನಗರವಾಸಿಗಳು ಮುಂತಾದ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುವ ಯಾರೂ ಸೈನ್ಯ ಸೇರಲು ಇಷ್ಟು ಪಡುವುದಿಲ್ಲ ಮತ್ತು ಪೋಷಕರು ಸಹ ಇದಕ್ಕೆ ಸುಲಭವಾಗಿ ಒಪ್ಪುವುದಿಲ್ಲ. ಆದ್ದರಿಂದ ಒಂದು ರೀತಿಯಲ್ಲಿ ಮತ್ತೆ ಬಡವರ ಪರೋಕ್ಷ ಶೋಷಣೆಗೆ ಕಾರಣವಾಗುತ್ತದೆ.
4 ವರ್ಷಗಳ ನಂತರ ಮತ್ತೆ ನಿರುದ್ಯೋಗಿಗಳಾಗುವ ಇವರಿಗೆ ಉದ್ಯೋಗದ ಭರವಸೆ ಇದೆಯೇ ಹೊರತು ಖಚಿತತೆ ಇಲ್ಲ. ಇದು ಮತ್ತೊಂದು ಸಮಸ್ಯೆಯ ಹುಟ್ಟಿಗೆ ಕಾರಣವಾಗಬಹುದು. ಈ ರೀತಿಯ ಸೈನಿಕ ತರಬೇತಿ ಪಡೆದ ಈ ಹದಿಹರೆಯದ ಯುವಕರನ್ನು ಬೇಗ ನಿವೃತ್ತಿಗೊಳಿಸಿದರೆ ಒಳಗಿನ ಅಥವಾ ಹೊರಗಿನ ದುಷ್ಟ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಬಂದೂಕು ತರಬೇತಿ ಮತ್ತು ಸೈನಿಕ ಕಲೆ ಶಿಸ್ತು ಕಲಿತವರಿಗೆ ಒಳ್ಳೆಯ ಮಾರ್ಗದರ್ಶನ ಸಿಗದಿದ್ದರೆ ತುಂಬಾ ಕಷ್ಟ. ನಮ್ಮ ವ್ಯವಸ್ಥೆ ಇನ್ನೂ ಆ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಾಗಿದೆ.
ಜೊತೆಗೆ ಈ ರೀತಿಯ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುವಾಗ ಸಂಸತ್ತಿನಲ್ಲಿ ಈ ಬಗ್ಗೆ ದೀರ್ಘವಾಗಿ ಚರ್ಚಿಸಬೇಕು ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಏಕೆಂದರೆ ಇದು ದೇಶದ ಭವಿಷ್ಯದ ಪ್ರಶ್ನೆ. ಅನೇಕ ಅನುಭವಿಗಳು ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರೆ ಇದರ ಭವಿಷ್ಯದ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳಬಹುದು.
ದೀರ್ಘಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದರೆ ಮತ್ತು ಆ ಕಾರಣದಿಂದಾಗಿ ವಯಸ್ಸು ಮತ್ತು ಮನಸ್ಸಿನಲ್ಲಿ ಮಾಗುವ ಪ್ರಕ್ರಿಯೆ ನಡೆದಿರುತ್ತದೆ. ಸಾಮಾನ್ಯವಾಗಿ ಸಾಂಸಾರಿಕ ಜವಾಬ್ದಾರಿ ಹೆಗಲೇರಿರುತ್ತದೆ. ಆದ್ದರಿಂದ ಮಾಜಿ ಸೈನಿಕರು ದಾರಿ ತಪ್ಪುವ ಸಾಧ್ಯತೆ ಕಡಿಮೆ. ಆದರೆ 25 ರ ಆಸುಪಾಸಿನಲ್ಲಿ ಸೈನಿಕ ತರಬೇತಿ ಪಡೆದು ನಿವೃತ್ತರಾಗಿ ಸ್ವಲ್ಪ ಹಣದೊಂದಿಗೆ ಹೊರಬರುವ ಯುವಕರನ್ನು ನಿಯಂತ್ರಿಸುವುದು ಕಷ್ಟ.
ಹೌದು ಯಾವುದೇ ಯೋಜನೆ ದೀರ್ಘಕಾಲದಲ್ಲಿ ಕೆಲವು ಒಳ್ಳೆಯ ಮತ್ತು ಕೆಲವು ಕೆಟ್ಟ ಪರಿಣಾಮವಾಗಳಿಗೆ ಕಾರಣವಾಗಬಹುದು. ಈಗಲೇ ಟೀಕಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ. ಆದರೆ ಭಾರತದ ಸಾಮಾಜಿಕ ಮತ್ತು ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಗಮನಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಈ ಯೋಜನೆಯಲ್ಲಿ ಕೆಲವು ಒಳ್ಳೆಯ ಅಂಶಗಳು ಸಹ ಇರಬಹುದು. ಆದರೆ ಈ ಕ್ಷಣದ ಮೇಲ್ನೋಟಕ್ಕೆ ಅಪಾಯವೇ ಹೆಚ್ಚು ಕಾಣುತ್ತಿದೆ. ಇನ್ನಷ್ಟು ದೀರ್ಘ ಸಮಾಲೋಚನೆಯ ಅವಶ್ಯಕತೆ ಇದೆ ಎಂದು ಭಾವಿತ್ತೇನೆ.
– ವಿವೇಕಾನಂದ ಹೆಚ್.ಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.