(www.vknews.in) : ನವಾಬ್ ಹೈದರ್ ಅಲಿ ಕಾಲದಲ್ಲಿ ಬೆಂಗಳೂರಿನಲ್ಲಿ ೩ ಲಂಗರ್ ಖಾನಾ ಅಂದರೆ ಅನ್ನದಾನ ಆಶ್ರಮಗಳಿದ್ದವು. ಯಾರು ಬೇಕಾದರು ಅಲ್ಲಿಗೆ ಹೋಗಿ ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಬಹುದಾಗಿತ್ತು. ತಂಗುವ ವ್ಯವಸ್ಥೆಯೂ ಇರುತಿತ್ತು. ಸೂಫಿಸಂತರು ಆ ಅನ್ನದಾನ ಆಶ್ರಮಗಳನ್ನು ನಡೆಸುತ್ತಿದ್ದರು. ಹೈದರ್ ಅಲಿ ಮತ್ತು ಟೀಪು ಸುಲ್ತಾನರ ಗುರುಗಳಲ್ಲಿ ಒಬ್ಬರಾದ ಹಜ್ರತ್ ಅತಾವುಲ್ಲಾ ಷಾ ಸುತ್ತಾರಿ ಬೆಂಗಳೂರಿನ ೩ ಅನ್ನದಾನ ಆಶ್ರಮಗಳ ಪೈಕಿ ಒಂದನ್ನು ನಡೆಸುತ್ತಿದ್ದರು. ಆ ಅನ್ನದಾನ ಆಶ್ರಮ ಇದ್ದ ಸ್ಥಳ ಲಾಲ್ ಬಾಗ್ ಎದುರು. ಇಂದಿನ MTR ಹೋಟೆಲ್ ಮತ್ತು ಸಿದ್ದಯ್ಯ ರಸ್ತೆಗೆ ಹತ್ತಿರ. ಹೈದರ್ ಅಲಿ ಬೆಂಗಳೂರಿಗೆ ಬಂದರೆ ಗುರುಗಳನ್ನು ಭೇಟಿಯಾಗಲು ಬರುತ್ತಿದ್ದರು. ಗುರುಗಳ ಅಪ್ಪಣೆ ಮೇರೆಗೆ ಹೈದರ್ ಅಲಿ ಒಂದು ತೋಟವನ್ನು ನಿರ್ಮಾಣ ಮಾಡಿದರು. ತರಕಾರಿ, ಹೂವು ಹಂಪಲು ಬೆಳೆಯಲಾಗುತ್ತಿತ್ತು. ಆ ತೋಟದ ಹೆಸರನ್ನು ಟಿಪ್ಪುವಿನ ಇಷ್ಟದಂತೆ ಲಾಲ್ ಬಾಗ್ ಎಂದು ಕರೆಯಲಾಯಿತು.
ಸುಮಾರು ೨೪೦ ವರ್ಷಗಳು ಕಳೆದಿವೆ. ಲಾಲ್ ಬಾಗ್ ಸುತ್ತ ಮುತ್ತ ಸಂಪೂರ್ಣವಾಗಿ ಬದಲಾವಣೆಗಳಾಗಿವೆ, ಇಂದಿನ ಊರ್ವಶಿ ಚಿತ್ರಮಂದಿರ ಜಾಗದಲ್ಲಿ ಒಂದು ಬಹು ದೊಡ್ಡ ನೀರಿನ ಕಲ್ಯಾಣಿ ಇತ್ತಂತೆ, ಆದರೆ ಗುರುಗಳ ಸಮಾದಿ ಇಂದಿಗೂ ಲಾಲ್ ಬಾಗ್ ಎದುರು, ಅಲ್ ಅಮೀನ್ ಕಾಲೇಜಿನ ಹಿಂಭಾಗ ಬಡಾ ಮಕಾನ್ ಕಬರಸ್ಥಾನದಲ್ಲಿ ಇದೆ. ಕಲ್ಲು ಗೋಡೆಗಳಲ್ಲಿ ನಿರ್ಮಾಣಗೊಂಡಿದ್ದ ಮಸೀದಿ ಮತ್ತು ಗುರುಗಳ ದರ್ಗಾ ಇಂದು ಹೊಸ ನಿರ್ಮಾಣ ಕಂಡಿದೆ. ದರ್ಗಾದ ಅಕ್ಕ ಪಕ್ಕದ ಜಮೀನಿನಲ್ಲಿ ಜನರು ತಮಗೆ ಇಷ್ಟಬಂದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಕಾಲವು ಬದಲಾದಂತೆ ಎಲ್ಲವು ಬದಲಾಗಿದೆ. ಗುರುಗಳು ವಕ್ಫ್ ಗೆ ದಾನ ಮಾಡಿದ್ದ ಜಮೀನನ್ನು ಜನರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೋರ್ಟ್ ಕೇಸುಗಳು ನಡೆಯುತ್ತಿವೆ. ಕೆಲವು ಕೇಸುಗಳನ್ನು ವಕ್ಫ್ ಬೋರ್ಡ್ ಗೆದ್ದು ಜಮೀನನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ.ಸಿದ್ದಯ್ಯ ರೋಡ್ ಮತ್ತು ಡಬಲ್ ರೋಡ್ ಬಳಿ ಗುರುಗಳು ದಾನ ಮಾಡಿದ್ದ ಒಂದು ಜಮೀನಿತ್ತು. ಕೆಲವರು ಅತಿಕ್ರಮಣ ಮಾಡಿಕೊಂಡು ಅಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ಈಗ ವಕ್ಫ್ ಬೋರ್ಡ್ ಅಧೀನಕ್ಕೆ ಆ ಜಾಮೀನು ಲಭ್ಯವಾಗಿದೆ.
ಸಂತೋಷದ ಸುದ್ದಿ ಎಂದರೆ ಬಿಲ್ಡರ್ ಜಿಯಾವುಲ್ಲಾ ಶರೀಫರ ಷರೀಫ್ ಫೌಂಡೇಶನ್ ವತಿಯಿಂದ ಅಲ್ಲಿ ಒಂದು ಭವ್ಯ ಉರ್ದು ಹಾಲ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಐಎಎಸ್ ಐಪಿಎಸ್ ಕೆಎಎಸ್ ಕೋಚಿಂಗ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಬೆಂಗಳೂರಿನ ೫ ವಕ್ಫ್ ಆಸ್ತಿಗಳಲ್ಲಿ ಶಾಲೆ, ಕಾಲೇಜು, ಹೆಣ್ಣು ಮಕ್ಕಳ ಹಾಸ್ಟೆಲ್, ಆಸ್ಪತ್ರೆ ಮತ್ತು ಯೂನಿವರ್ಸಿಟಿಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದರ ನಿರ್ಮಾಣಕ್ಕೆ ಮತ್ತು ಅದನ್ನು ಕಾರ್ಯ ರೂಪಕ್ಕೆ ತರಲು ತಗಲುವ ಕೋಟ್ಯಂತರ ರೂಗಳ ವೆಚ್ಚವನ್ನು ನಾನು ಕೊಡಲು ಸಿದ್ಧ ಎಂದು ಜಿಯಾವುಲ್ಲಾ ಷರೀಫ್ ಒಪ್ಪಿಕೊಂಡಿದ್ದಾರೆ. ಶ್ರೀಮಂತರು ದಾನ ಮಾಡಲು ಮುಂದೆ ಬರಬೇಕು ಎಂದು ಕೇಳಿಕೊಂಡಿದ್ದಾರೆ.
ಹಿಜಾಬ್ ಬ್ಯಾನ್ ವಿಷಯ ಉಲ್ಬಣಗೊಂಡ ಮೇಲೆ ಮುಸಲ್ಮಾನರಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು, ನಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಆದಷ್ಟು ತೆರೆಯಬೇಕು ಎಂಬ ಭಾವನೆಗಳು ಚಿಗುರಿವೆ. ಸಚ್ಚರ್ ಕಮಿಟಿಯ ರಿಪೋರ್ಟ್ ಬಗ್ಗೆ ಮುಸಲ್ಮಾನರು ಗಂಭೀರವಾಗಿ ಚಿಂತಿಸಲು ಪ್ರಾರಂಭಿಸಿದರೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಾರ್ಗಗಳಿಗೆ ತಳಹದಿ ಹಾಕಬಹುದು. ಮುಂದಿನ ಪೀಳಿಗೆಗೆ ಮಾರ್ಗದರ್ಶಿಗಳಾಗಬಹುದು. ಮುಂದಿನ ೨೦ ವರ್ಷಗಳಲ್ಲಿ ಅನೇಕ ಬದಲಾವಣೆಗಳು ಕಾಣಬಹುದು.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.