ವಿವಾಹವೆಂದರೆ ತ್ಯಾಗ, ಮತ್ತೊಬ್ಬರು ಕೇಳದೇ ಇದ್ದರೂ, ಅವರಿಗಾಗಿ ಒಳ್ಳೆಯದನ್ನು ಸದಾ ಮಾಡುತ್ತಿರಬೇಕು – ನಿಕೋಲಾಸ್ ಸ್ಪಾರ್ಕ್ಸ್ (ವಿಶ್ವ ಕನ್ನಡಿಗ ನ್ಯೂಸ್) : ಮೊದಲು ಪ್ರಸ್ತುತ ಸ್ಥಿತಿಯಲ್ಲಿ ಪ್ರೇಮ ವಿವಾಹಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ಎಂಬುವುದರ ವಿಷಯವಾಗಿ ಇದರ ಸಾಧಕ ಗಳನ್ನು ತಿಳಿಸಲು ಇಚ್ಚಿಸುತ್ತೇನೆ..
ಇತ್ತೀಚಿನ ದಿನಗಳನ್ನು ಗಮನಿಸುವುದಾದರೆ ಅತಿ ಹೆಚ್ಚು ಆಕರ್ಷಿತರಾಗುವ ಯುವಕ-ಯುವತಿಯರು ಪ್ರೇಮವಿವಾಹಗಳಿಗೆ ಮನಸೋಲುತ್ತಿದ್ದಾರೆ. ಇಬ್ಬರೂ ಸಹ ವಿವಾಹಕ್ಕೆ ಮೊದಲು ಪರಸ್ಪರ ಅರಿತುಕೊಂಡು ಜೀವನ ಸಂಗಾತಿಯಾಗಲು ಪಣ ತೊಡುತ್ತಾರೆ, ಸುಖ-ದುಃಖವನ್ನು ಅರಿತುಕೊಂಡು ಹೋಗುವ ಜೀವನದಲ್ಲಿ ಯಶಸ್ವಿಯಾಗಲು ಬಯಸುತ್ತಾರೆ. ಇದಕ್ಕೆ ಕೆಲವೊಮ್ಮೆ ತಂದೆ, ತಾಯಿಂದಿರ ವಿರೋಧದ ನಡುವೆಯೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಎಲ್ಲ ಸದಸ್ಯರನ್ನು ಒಪ್ಪಿಸಿಯೇ ಮದುವೆಯಾಗುವುದರಲ್ಲಿ ಯಾವುದೇ ರೀತಿಯ ಜಗಳಗಳಿಗೆ ಆಸ್ಪದವಿರುವುದಿಲ್ಲ.
ಮದುವೆ ಎನ್ನುವುದು ದೈವೀಕದ ಬಂಧ. ಪ್ರೀತಿಸಿದ ನಂತರ ಗಟ್ಟಿಯಾಗಿ ನಿಲ್ಲಬೇಕಾದರೆ ಪರಸ್ಪರ ನಂಬಿಕೆ ಇರಬೇಕು, ಜೊತೆಗೆ ಯಾವುದೇ ಸನ್ನಿವೇಶದಲ್ಲಿಯೂ ಸಹ ಕೈಬಿಡಬಾರದು. ತಮಗೆ ಇಷ್ಟದ ರೀತಿಯಲ್ಲಿ ಜೀವನ ಸಾಗಿಸಲು ಪ್ರಯತ್ತಿಸುತ್ತಾರೆ. ಆದರೂ ಪುರಾಣಗಳಿಂದ ಹಿಡಿದು ಇಲ್ಲಿಯ ತನಕವೂ ನಮ್ಮ ದೇಶದಲ್ಲಿ ಜಾತಿಗಳಿಗೆ ಮೊದಲು ಬೆಲೆ ನೀಡುತ್ತಾರೆ ವಿನಃ ಪ್ರೀತಿ ಪೇಮಕ್ಕೆ ಬರೀ ಕನಸಿನ ಮಾತಾಗಿದೆ, ಇದಕ್ಕೆ ಹಲವಾರು ನಿರ್ದೇಶನಗಳಿವೆ, ಎಷ್ಟೇ ಪ್ರಯತ್ನಿಸಿದರೂ ಪ್ರೇಮ ವಿವಾಹದಿಂದ ಸಂಪೂರ್ಣವಾಗಿ ಸಮಾನತೆಯನ್ನು ಸಮಾಜದಲ್ಲಿ ಕಾಣಲು ಸಾದ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.
ಹಿಂದೂ ಜಾತಿಯವರನ್ನೇ ಮದುವೆಯಾದರೆ ಸಮಾಜ ಒಪ್ಪದು, ಇನ್ನು ಅಂತರ್ ಧರ್ಮಿಯ ಮದುವೆಯಾದರಂತೂ ನಿಜಕ್ಕೂ ಅವರ ಯಾತನೆ ಹೇಳತೀರದು. ಇಡೀ ಕುಟುಂಬಕ್ಕೆ ಅವರು ಶಾಪವಿದ್ದಂತೆ, ಇನ್ನೂ ಹೆಣ್ಣು ಮಕ್ಕಳಾದರೆ, ಅವರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಾರೆ. ಹೀಗಿರುವಾಗ ನಾವು ಯಾವ ರೀತಿಯಲ್ಲಿ ಸಮಾನತೆಯನ್ನು ತರಲು ಸಾಧ್ಯವಾಗುತ್ತದೆ. ಇದಕ್ಕೆ ಹಲವಾರು ನಿಜ ಸಂಗತಿಗಳು ನಮ್ಮ ಮಧ್ಯದಲ್ಲಿಯೇ ನಡೆಯುತ್ತದೆ. ಸಮಾರು 3 ವರ್ಷಗಳ ಹಿಂದೆ ಮಂಡ್ಯ ಹತ್ತಿರದ ಗ್ರಾಮದಲ್ಲಿ, ಮೇಲ್ಜಾತಿಯ ಹುಡುಗಿಯು ಕೆಳ ಜಾತಿಯ ಹುಡುಗನನ್ನು ಪೋಲಿಸರ ರಕ್ಷಣೆಯೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ. ಇತ್ತ ಮನೆಯವರು ಇವರ ಮದುವೆಯನ್ನು ಒಪ್ಪದೆ ಮರ್ಯಾದೆ ಹತ್ಯೆಯನ್ನು ಮಾಡಲಾಯಿತು. ನಿಜಕ್ಕೂ ಇಡೀ ಸಮಾಜವೇ ತಲೆತಗ್ಗಿಸುವಂತದ್ದು, ಆದರೂ ಇಂತಹ ಅದೆಷ್ಟೂ ಘಟನೆಗಳು ಕೆಲವೊಮ್ಮೆ ಮುಚ್ಚಿ ಹೋಗುತ್ತದೆ, ಕೆಲವರು ಮನೆ ಬಿಟ್ಟು ಹೋಗುತ್ತಾರೆ, ಮತ್ತೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇವೆಲ್ಲವೂ ನಮ್ಮ ಸಮಾಜದ ಸುತ್ತ- ಮುತ್ತಲಿನಲ್ಲಿಯೇ ನಡೆಯುತ್ತದೆ.
ಇನ್ನು ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವವರು ಅತಿ ಸರಳವಾಗಿ ಮದುವೆಯಾಗುತ್ತಾರೆ, ಅವರು ಸುಲಭವಾಗಿ ಗುರುಹಿರಿಯರನ್ನು ಒಪ್ಪಿಸಿಯೇ ಮದುವೆಯಾಗುತ್ತಾರೆ. ಅವರ ಮದುವೆಯನ್ನು ಯಾರೂ ಸಹ ನಿರಾಕರಿಸುವುದಿಲ್ಲ, ಯಾಕೆಂದರೆ, ಮುಂದೆ ಯಾವುದೇ ಪರಿಸ್ಥಿಗಳನ್ನು ನಿಭಾಯಿಸುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿರುತ್ತಾರೆ. ನೂರರಲ್ಲಿ 10% ಮಾತ್ರವೇ ಪ್ರೇಮ ವಿವಾಹಗಳು ನಡೆಯುತ್ತದೆ. ಇನ್ನೂ ಬಹಳಷ್ಟು ಮದುವೆಗಳು ನಡೆಯುವುದೇ ಕಷ್ಟ ಸಂಗತಿ.
ಪ್ರೇಮ ವಿವಾಹವನ್ನು ಮಾಡುವ ಮೂಲಕ 12 ನೇ 13 ನೇಯ ಶತಮಾನದಲ್ಲಿಯೇ ಬಸವಣ್ಣನವರು ಹೊಸ ಕ್ರಾಂತಿಗೆ ಹೆಜ್ಜೆ ಹಾಕಿದರು, ಲಿಂಗಾಯಿತ ಹುಡುಗಿಯನ್ನು ಮಾದಿಗರ ಜನಾಂಗಕ್ಕೆ ಸೇರಿದ ಹುಡುಗನೊಂದಿಗೆ ವಿವಾಹ ಮಾಡಿಸಿದರು. ಪರಿಣಾಮ ಇಡೀ ಸಮಾಜವೇ ಅವರನ್ನು ದೂಷಿಸಿತು. ಆದರೂ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾದ್ಯವಾಗಲಿಲ್ಲ.
ಎಲ್ಲಿಯವರೆಗೂ ಜಾತಿ ಎಂಬ ಪಿಡುಗು ಸಮಾಜದಲ್ಲಿ ದೂರವಾಗುವುದಿಲ್ಲವೊ, ಅಲ್ಲಿಯವರೆಗೂ ಯಾವುದೇ ಸಮಾನತೆ ಕಾಣುವುದು ಸ್ವಲ್ಪ ಕಷ್ಟದ ಮಾತು, ಅಲ್ಲದೆ ಸಾಧಕಗಳಿಗಿಂತಲೂ ಬಹಳಷ್ಟು ಭಾಧಕಗಳೇ ಹೆಚ್ಚು ನಡೆಯುತ್ತಿದೆ. ಪ್ರೀತಿಯ ರೂಪದಲ್ಲಿ living together ಸಂಬಂಧಗಳನ್ನು ಮಾಡಿಕೊಂಡು ಎಷ್ಟು ಹೆಣ್ಣು ಮಕ್ಕಳು ಮೋಸ ಹೋಗುವುದುಂಟು, ಅಲ್ಲದೆ ಕೆಲವೊಮ್ಮೆ ಇಬ್ಬರ ನಡುವೆ ಪರಸ್ಫರ ಹೊಂದಾಣಿಕೆ ಇಲ್ಲದಾಗ ವರ್ಷದೊಳಗೆ ವಿವಾಹ ವಿಚ್ಚೇದನಕ್ಕೂ ಮುಂದುವರಿಯುತ್ತದೆ, ಮದುವೆಯಾದಾಗ ಪ್ರೀತಿಯ ರೂಪದಲ್ಲಿ ಮಾತನಾಡಿಸುತ್ತಾರೆ, ದಿನಗಳು ಕಳೆದಂತೆ ಅವರನ್ನು ದೂಷಿಸುವುದು, ವರದಕ್ಷಿಣೆ ಕಿರುಕುಳ ನೀಡುವುದು ಹಾಗೂ ವಿವಾಹ ವಿಚ್ಚೇದನ ನೀಡುವುದು, ಇಂತಹ ವಿಷಯಗಳು ದಕ್ಷಿಣ ಕರಾವಳಿಯಲ್ಲಿ ನಡೆಯುತ್ತಲೇ ಇದೆ. ಈಗಲೂ ಹಲವು ಕಡೆಗಳಲ್ಲಿ ಇಂತಹ ಸಮಸ್ಯೆಗಳು ಉದ್ಬವಿಸುತ್ತಲೇ ಇದೆ.
ಇಲ್ಲಿ ನಾನು ನನ್ನ ಸ್ನೇಹಿತೆಯ ಪ್ರೇಮ ವಿವಾಹದ ಬಗ್ಗೆಯೇ ಹೇಳಲು ಇಚ್ಚಿಸುತ್ತೇನೆ, ಸುಮಾರು 9 ವರ್ಷಗಳ ಹಿಂದೆ ಮಾರ್ಗೆಟ್ ಎಂ.ಎ ಮಾಡುತ್ತಿರುವಾಗ ಹಿಂದೂ ಜಾತಿಗೆ ಸೇರಿದ ಲಿಂಗಾಯಿತ ಹುಡುಗನೊಂದಿಗೆ ಮದುವೆಯಾಗುತ್ತಾಳೆ, ಆಕೆ ಕ್ರಿಸ್ಚಿಯನ್ ಎನ್ನುವ ಕಾರಣಕ್ಕೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೆ . ಈಗಲೂ ಸಹ ಅವರು ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ, ಇಂದಿಗೂ ಅವರನ್ನು ಮಗಳು ಎಂದು ಒಪ್ಪಿಕೊಂಡಿಲ್ಲ. ಇದು ಸರ್ವೇ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ನಡೆಯುವ ವಿಷಯವಾಗಿದೆ. ಹೇಳುತ್ತಾ ಹೋದರೆ ಮುಂದೆ ಅದಕ್ಕೆ ಪೂರ್ಣ ವಿರಾಮವೇ ಇರುವುದಿಲ್ಲ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಉತ್ತರ ಸಿಗುವುದೇ ಕಷ್ಟವಾಗುತ್ತದೆ.
ಸಮಾಜದಲ್ಲಿ ಬದುಕುವ ಜನರು ಮುಂದೆ ಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿಯಿರದೆ ಸಮಾಜಕ್ಕೆ ಅಂಜಿ ಜೀವನ ನಡೆಸಬೇಕಾಗುತ್ತದೆ. ಕೆಲವು ಹಳ್ಳಿಗಳಲ್ಲಿ ತಂದೆ ತಾಯಿಗಳು ಮಾಡದ ತಪ್ಪಿಗೆ ಊರಿನಿಂದಲೇ ಬಹಿಷ್ಕಾರ ಹಾಕುತ್ತಾರೆ, ಆಗ ಮಕ್ಕಳ ಬಗ್ಗೆ ಅಸಮಾಧಾನ ಉಂಟಾಗಿ ಅವರಿಂದಲೇ ದೂರ ಉಳಿಯುತ್ತಾರೆ. ಇದು ಸಮಾಜದಲ್ಲಿ ನಡೆಯುತ್ತಿರುವ ದಿನಂಪ್ರತಿಯ ಹೋರಾಟ. ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಪ್ರೇಮ ವಿವಾಹ ಎಂದಾಗ ಸಮಾಜದಲ್ಲಿ ಸುಲಭವಾಗಿ ಯಾರು ಒಪ್ಪುವುದಿಲ್ಲ. ಅವರಿಗೆ ಜಾಗೃತಿಯನ್ನು ಮೂಡಿಸುವ ಮೂಲಕ ಕೆಲವೊಂದು ಸಂದರ್ಭಗಳಲ್ಲಿ ಮನಃಪರಿವರ್ತಿಸಬಹುದು ವಿನಃ, ಸಮಾಜವನ್ನು ಬದಲಾಯಿಸುವುದು ಒಂದು ಪ್ರಶ್ನೆಯಾಗಿ ನಿಲ್ಲುತ್ತದೆ.
ಕೊನೆಯದಾಗಿ ಹೇಳುವುದಾರೆ ಪ್ರಸ್ತುತ ಸ್ಥಿತಿಯಲ್ಲಿ ಪ್ರೇಮ ವಿವಾಹದ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವುದು ಕಷ್ಟವಾಗುತ್ತದೆ, ಇದರಲ್ಲಿ ಸಾಧಕಗಳು ಕಡಿಮೆಯಾಗಿ ಭಾದಕಗಳೇ ಹೆಚ್ಚು ಎನ್ನುವುದು ನನ್ನ ಅಭಿಪ್ರಾಯ..
– ಜ್ಯೋತಿ .ಜಿ (ಆಡಳಿತ ತರಬೇತಿ ಸಂಸ್ಥೆ, ಮೈಸೂರು)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.