(ವಿಶ್ವ ಕನ್ನಡಿಗ ನ್ಯೂಸ್) : 2010, ಅದೊಂದು ರಮಲಾನಿನ ಹನ್ನೊಂದನೇ ದಿನ ನಮ್ಮ ತಂದೆಯವರು ಈ ಲೋಕಕ್ಕೆ ವಿದಾಯ ಹೇಳಿದರು. ತಂದೆಯ ಬೆಲೆ ಏನು ಅಂತ ಆವಾಗ ಗೊತ್ತಾಯಿತು. ತಂದೆಯ ಮರಣದ ಮರುದಿನ ನನ್ನ ಸ್ನೇಹಿತರಲ್ಲಿ ಶೇಕಮಲೆ ಮಸೀದಿಯಲ್ಲಿ ಹೇಳಿದ ನೆನಪು, ತಂದೆ ಎಂದರೆ ಏನು ಅಂತ ಗೊತ್ತಾಗಬೇಕಾದರೆ ತಂದೆ ವಫಾತ್ ಆಗಬೇಕು. ಮನಸ್ಸು ಅಷ್ಟು ನೋಯುತ್ತಿತ್ತು ಎಲ್ಲವೂ ತಂದೆಯನ್ನು ನೆನೆದು. ಅವರು ನಮಗಾಗಿ ಸಣ್ಣದರಿಂದಲೇ ಪಟ್ಟ ಪಾಡು, ಹೇಳ ತೀರದ ಕಷ್ಟ ಕಾರ್ಪಣ್ಯಗಳು.
ಹಬ್ಬ ಹರಿದಿನಗಳಲ್ಲಿ ತಾನು ಹೊಸ ಬಟ್ಟೆ ಖರೀದಿಸದಿದ್ದರೂ ಮಕ್ಕಳಾದ ನಾವು ಹೊಸ ಬಟ್ಟೆ ಧರಿಸಿ ಹೋಗುವಾಗ ಪಡುತ್ತಿದ್ದ ಆನಂದ, ತಡ ರಾತ್ರಿವರೆಗೂ ನಮಗಾಗಿ ದುಡಿಯುತ್ತಿದ್ದ ಕ್ಷಣಗಳು. ಅಂಗಡಿಗೆ ಯಾರು ಬಂದರೂ ಕೂಡಲೇ ಚಹಾ ತಾ ಅಂತ ಮನೆಯವರಿಗೆ ಅಪ್ಪಣೆ ಮಾಡುತ್ತಿದ್ದ ಶಬ್ದಗಳು. ನಮಗೆ ಕಲಿಯಲು ಪ್ರೇರೇಪಿಸುತ್ತಿದ್ದ ಶಿಕ್ಷಣದ ಕುರಿತಂತೆ ಪ್ರೋತ್ಸಾಹದ ನುಡಿಗಳು. ಸುಶಿಕ್ಷಿತರಿಗೆ ನೀಡುತ್ತಿದ್ದ ಗೌರವಾದರಗಳು. ಕೂಲಿ ಕೆಲಸ ಮಾಡುತ್ತಾ, ಅಡಿಕೆ ಸುಳಿಯುತ್ತಾ, ಚೆಪ್ಪು ಗೋಟು ಅಡಿಕೆಯ ಸಿಪ್ಪೆ ಸುಳಿಯುತ್ತಾ, ವ್ಯಾಪಾರ ಮಾಡುತ್ತಾ ಅದರಲ್ಲಿ ಬರುವ ಆದಾಯದಲ್ಲಿ ತನ್ನ ಸಂಸಾರವನ್ನು ಸಾಕಿ ಸಲಹುತ್ತಿದ್ದ ದಿನಗಳು.
ದುಡಿದು ದುಡಿದು ಕೊನೆಗೆ ಅನಾರೋಗ್ಯ ಪೀಡಿತರಾಗಿ ತಿಂಗಳುಗಟ್ಟಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಮಲಗಿದ್ದ ದಿನ ರಾತ್ರಿಗಳು. ಒಟ್ಟಾರೆಯಾಗಿ ತನ್ನ ಜೀವನವನ್ನು ತನ್ನವರಿಗಾಗಿ ಸವೆಸಿ ಹೋದ ನಮ್ಮ ತಂದೆ.. ಎಲ್ಲವೂ ಕಣ್ಣಿಗೆ ಕಾಣುವಂತೆ ಒಂದೊಂದೇ ನೆನಪಾಗುತ್ತಿತ್ತು. ಅವರು ಆ ದಿನ ಮರಣ ಹೊಂದಿ ಆರಡಿ ಮಣ್ಣಿನಡಿಯಲ್ಲಿ ಮರೆಯಾಗಿದ್ದರು..
ಸುಬುಹಾನಲ್ಲಾಹ್,, ಅವರ ಖಬರ್ ಜೀವನ ಹೇಗಿರಬಹುದು.. ಮಕ್ಕಳಾದ ನಮ್ಮಿಂದ ಅವರ ಮರಣದ ನಂತರ ಅವರಿಗಾಗಿ, ಅವರ ಪರಲೋಕ ವಿಜಯಕ್ಕಾಗಿ ಸಂತೃಪ್ತ ಬರ್ಝಕೀ ಜೀವನಕ್ಕಾಗಿ ಏನನ್ನಾದರು ಮಾಡಲು ಸಾಧ್ಯವಿದೆಯಾ… ದುಃಖ ದುಮ್ಮಾನಗಳಿಂದ ಆವೃತ ಗೊಂಡಿದ್ದ ಮನಸ್ಸು ಅಂದು ಎಲ್ಲವೂ ಅವರ ಬಗ್ಗೆಯೇ ಚಿಂತಿಸುವಂತೆ ಮಾಡಿತ್ತು…. ಆದರೆ ಯಾವುದೇ ಕಾರಣಕ್ಕೂ ನಮಗೆ ಇನ್ನು ಯಾರು ಎಂದು ಅಂದು ತೋಚಿರಲಿಲ್ಲ… ಅವರ ಖಬರ್ ಗೆ ಸ್ವರ್ಗದ ಬಾಗಿಲು ತೆರೆದು ಕೊಡು ರಬ್ಬೇ…
ನನ್ನ ತಂದೆಯವರು ವಫಾತ್ ಆದ ಅದೇ ವರ್ಷ ಪವಿತ್ರ ರಮಲಾನ್ ತಿಂಗಳ ಅದೊಂದು ದಿನ (ನೆನಪು ಸರಿಯಾಗಿದ್ದರೆ ಗುರುವಾರ) ಸಾಲೆತ್ತೂರು ಅಬ್ಬಾಸ್ ಸಅದಿ ಉಸ್ತಾದರು ಶೇಕಮಲೆ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ, ಶೇಕಮಲೆ ಮಸೀದಿಯಲ್ಲಿ ಲುಹುರ್ ನಮಾಜ್ ಬಳಿಕ ಧಾರ್ಮಿಕ ಅಧ್ಯಯನ ತರಗತಿ ಒಂದನ್ನು ಆಯೋಜಿಸಿದ್ದರು…
ಅಂದು ಕ್ಲಾಸ್ ನಲ್ಲಿ ಮಂಡನೆಗೆ ನೀಡಿದ್ದ ವಿಷಯ “ಮಯ್ಯತ್ ಪರಿಪಾಲನೆ ಮತ್ತು ಝಕಾತ್” ಕ್ಲಾಸ್ ತೆಗೆಯಲು ಬಂದ ಪಂಡಿತ ತೇಜಸ್ಸು ಹೇಳಿತು, ಈ ಎರಡು ವಿಷಯಗಳನ್ನು ಬಿಡಿ ಕೇವಲ ಒಂದು ವಿಷಯವನ್ನೇ ಒಂದು ವಾರ ಕ್ಲಾಸ್ ತೆಗೆದರೂ ಹೇಳಿ ಮುಗಿಸಲು ಸಾಧ್ಯವಿಲ್ಲ….! ಇಂದು ಸಾಧ್ಯವಾದಷ್ಟು ಮಯ್ಯತ್ ಪರಿಪಾಲನೆ ಬಗ್ಗೆ ಕಲಿಯೋಣ, ಉಳಿದದ್ದು ಇನ್ನೊಮ್ಮೆ ನೋಡೋಣ…
ಸುಬುಹಾನಲ್ಲಾಹ್….!!! ಅತ್ಯದ್ಭುತ ವಿಷಯ ಮಂಡನೆ.. ಯಾರಿಗೂ ಅರ್ಥವಾಗಬಲ್ಲ ಸರಳ ಸುಂದರ ಮಾತುಗಳು.. ಸಾದಾ ಸೀದಾ ಭಾಷಾ ಶೈಲಿಯ ಅದ್ಭುತವಾದ ನಿನಾದ… ಮದ್ಯೆ ಮದ್ಯೆ ಚಿಂತನೆಗೆ ಒರೆ ಹಚ್ಚುವ ತಿಳಿ ಹಾಸ್ಯ…
ಕುಂತಲ್ಲಿಂದ ಕದಲದೇ ತದೇಕ ಚಿತ್ತದಿಂದ ಪ್ರತಿಯೊಂದು ಶಬ್ದಗಳನ್ನು ಆಲಿಸುತ್ತಿರುವ ಸಭಿಕರು… ನಾನಂತೂ ಈ ಕ್ಲಾಸ್ ಕೇಳಿ ಸ್ತಂಭೀಭೂತನಾದೆನೋ.. ಮೂಕಸ್ಮಿತನಾದೇನೋ… ಏನೇನೋ… ಏನೋ ಆದೆ, ಅಸರ್ ಬಾಂಗ್ ತನಕ ಕ್ಲಾಸ್ ಮುಂದುವರಿದಿತ್ತು
ಅಂದು ಆಗಿತ್ತು ಅನುಗ್ರಹೀತ ವ್ಯಕ್ತಿತ್ವ ಖಾಝಿ ಬೇಕಲ್ ಉಸ್ತಾದರನ್ನು ನಾವು ಪ್ರಪ್ರಥಮವಾಗಿ ಪರಿಚಯಪಡುವ ಭಾಗ್ಯ ಹಾಗೂ ಅವಕಾಶ ಒದಗಿ ಬಂದದ್ದು. ಆ ದಿನ ಆಗಿತ್ತು ಆ ಪಂಡಿತ ತೇಜಸ್ವಿನ ಕ್ಲಾಸ್ ಗೆ ಪ್ರಪ್ರಥಮವಾಗಿ ನಾನು ಎಟೆಂಡ್ ಆಗುವುದು. ಬೇಕಲ್ ಉಸ್ತಾದರ ಪರಮ ಶಿಷ್ಯ ಜಾಲ್ಸೂರ್ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದರ ಪ್ರಯತ್ನದಿಂದಲೇ ಬೇಕಲ್ ಉಸ್ತಾದ್ ರವರು ಪ್ರಥಮ ಬಾರಿಗೆ ಶೇಕಮಲೆ ಜಮಾಅತ್ ಗೆ ಬಂದು ಇಂತಹ ಅತ್ಯಮೂಲ್ಯ ತರಗತಿಯನ್ನು ನಡೆಸಿಕೊಡಲು ಸಾಧ್ಯವಾಯಿತು ಅಂದರೆ ತಪ್ಪಾಗಲಾರದು.
ಕಾರಣ, ಆ ವರ್ಷ ನಾಡಿನ ವಿವಿಧ ಭಾಗಗಳಲ್ಲಿ ಬೇಕಲ್ ಉಸ್ತಾದರ ಸರಣಿ ಕ್ಲಾಸ್ ಗಳನ್ನು ಜಲೀಲ್ ಸಖಾಫಿ ಯವರ ನೇತೃತ್ವದಲ್ಲಿ ಉಸ್ತಾದರ ಶಿಷ್ಯಂದಿರು ಸಂಘಟಿಸಿದ್ದರು. ಅಲ್ಲಾಹು ಖಬೂಲ್ ಮಾಡಲಿ
ಆ ಬಳಿಕ ನಡೆದದ್ದು ಮಾತ್ರ ಒಂದು ಇತಿಹಾಸ…. ಉಸ್ತಾದರ ಈ ಒಂದು ಇನ್ ಡೋರ್ ಕ್ಲಾಸ್ ನಿಂದ ಪುಳಕಿತಗೊಂಡು ಆವೇಶ ಭರಿತರಾಗಿದ್ದ ಶೇಕಮಲೆಯ ಜನತೆಯ ಅಭಿಲಾಷೆಯಂತೆ ಅದೇ ವರ್ಷ ರಮಲಾನ್ ಬಳಿಕ ಶೇಕಮಲೆ ಮಸೀದಿ ಮುಂಭಾಗದಲ್ಲಿ ಒಂದು ಔಟ್ ಡೋರ್ ಕ್ಲಾಸ್ ಸಂಘಟಿಸಿದ್ದೆವು.
ಅಂದಿನ ಚರ್ಚಾ ವಿಷಯ ಮುಸ್ಲಿಮರಲ್ಲಿರುವ ಆಚಾರಗಳು ಮತ್ತು ಅನಾಚಾರಗಳು ಎಂಬುದಾಗಿತ್ತು… ಜ್ವರದಿಂದ ಬಳಲುತ್ತಿದ್ದ ಉಸ್ತಾದರು ಮುಂಚಿನ ದಿವಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಅದನ್ನು ಲೆಕ್ಕಿಸದೇ ನಮ್ಮೂರಿನ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಆಗಮಿಸಿ ಅತ್ಯುತ್ತಮ ಕ್ಲಾಸ್ ನಡೆಸಿ ಕೊಟ್ಟರು. ಹಲವು ಸಂಶಯಗಳಿಗೆ ಉತ್ತರವನ್ನು ನೀಡುವ ಕಾರ್ಯಕ್ರಮವನ್ನೂ ಅಂದು ಹಮ್ಮಿ ಕೊಳ್ಳಲಾಗಿತ್ತು.
ಬೇಕಲ್ ಉಸ್ತಾದ್ ಮತ್ತು ನಮ್ಮ ನಡುವೆ ಅವಿನಾಭಾವ ಸಂಬಂಧವೊಂದು ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯುತ್ತಿತ್ತು. ಎಂದೆಂದಿಗೂ ಬಿಟ್ಟು ಕೊಡಲಾರದ ಸಂಬಂಧವಾಗಿ ಅದು ಕವಲೊಡೆದು ಬೇರೂರುತ್ತಿತ್ತು. ಮುಂದಿನ ವರ್ಷವೂ ರಮಲಾನ್ ನಲ್ಲಿ ಬೇಕಲ್ ಉಸ್ತಾದ್ ರವರ ಕ್ಲಾಸ್ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ರಮಲಾನಿನ ಎರಡನೇ ಆದಿತ್ಯವಾರ ಲುಹರ್ ನಮಾಜ್ ಬಳಿಕ ಉಸ್ತಾದ್ ರವರು ಸಮಯ ಕೊಟ್ಟಿದ್ದಾರೆ ಅಂತ ಉಸ್ತಾದರ ಖಾದಿಮ್ ಸನ್ಮಿತ್ರ ಇಸಾಕ್ ಬಾ ಹಸನಿ ದಿನಾಂಕ ನಿಗದಿಪಡಿಸಿಕೊಟ್ಟರು. ಅಂದಿನ ಚರ್ಚಾ ವಿಷಯ ”ಕುಟುಂಬ ಸಂಬಂಧ”. ಸೂಕ್ತ ಪಂಡಿತನಿಂದ ಸೂಕ್ತ ವಿಷಯದಲ್ಲಿ ಸೂಕ್ತ ಶೈಲಿಯಲ್ಲಿ ಮಂಡನೆಗೊಂಡ ಕ್ಲಾಸ್ ಮೈ ನವಿರೇಳುಸುವಂತಿತ್ತು
ಮುಂದಿನ ವರ್ಷವೂ ಅದೇ ತೀರ್ಮಾನ, ರಮಲಾನ್ ನಲ್ಲಿ ಬೇಕಲ್ ಉಸ್ತಾದರ ಕ್ಲಾಸ್. ನಾಡಿನ ನಾಲ್ಕೂ ದಿಕ್ಕುಗಳಲ್ಲಿ ಉಸ್ತಾದರ ಕ್ಲಾಸಿನ ಮಹಿಮೆ ಪಸರಿಸಿತ್ತು. ಜನರು ಆ ದಿನಕ್ಕಾಗಿ ಇದಿರು ನೋಡುತ್ತಾ ಕಾದು ಕುಳಿತು ಕೊಳ್ಳುವಂತಹಾ ಪರಿಸ್ಥಿತಿ ನಿರ್ಮಾಣವಾಗಿತ್ತು. ರಮಲಾನ್ ಪ್ರಾರಂಭಗೊಂಡಾಗ ಹಲವು ಕಡೆಗಳಿಂದ ಕಾಲ್ ಬರುತ್ತಿತ್ತು. ಬೇಕಲ್ ಉಸ್ತಾದರ ಕ್ಲಾಸ್ ಯಾವಾಗ. ತಕ್ಷಣವೇ ಮರು ಉತ್ತರ ನೀಡಲಾಗುತ್ತಿತ್ತು, ರಮಲಾನಿನ ಎರಡನೇ ಆದಿತ್ಯವಾರ…
ಅದೆಷ್ಟೋ ದೊಡ್ಡ ದೊಡ್ಡ ಮಹಲ್ಲ್ ಗಳಲ್ಲಿ ಉಸ್ತಾದರ ರಮಲಾನ್ ನ ಭಾನುವಾರದ ಕ್ಲಾಸಿಗೆ ತುಂಬಾ ಬೇಡಿಕೆ ಇದ್ದರೂ ಅದೆಲ್ಲವನ್ನೂ ಬದಿಗಿರಿಸಿ ಉಸ್ತಾದರು ಪ್ರತೀ ರಮಲಾನಿನ ಎರಡನೇ ಭಾನುವಾರ ಗ್ರಾಮೀಣ ಪ್ರದೇಶದ ಹಳೇ ಕಾಲದ ಮಸೀದಿ ನೆಲೆ ನಿಂತಿರುವ ಚರಿತ್ರೆಯ ಪುಟಗಳನ್ನು ಓದಿ ಹೇಳುತ್ತಿರುವ ಶೇಕಮಲೆಗಾಗಿ ಆ ದಿನವನ್ನು ಮೀಸಲು ಇಡುತ್ತಿದ್ದರು. ಶೇಕಮಲೆಯಲ್ಲಿ ಕ್ಲಾಸ್ ಇಲ್ಲದಿದ್ದರೆ ಮಾತ್ರ ಆ ದಿನ ಬೇರೆ ಕಡೆಗೆ ಅವಕಾಶ ನೀಡೋಣ ಅಂತ ಖಾದಿಮ್ ರವರಲ್ಲಿ ಹೇಳುತ್ತಿದ್ದರಂತೆ.
ಆ ವರ್ಷವೂ ಕ್ಲಾಸ್ ನಡೆಯಿತು ವಿಷಯ: ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರ, ಕ್ಲಾಸ್ ಶೃಂಖಲೆ ಪ್ರತೀ ವರ್ಷ ಮುಂದುವರಿಯಿತು….
ಮುಂದಿನ ವರ್ಷಗಳಲ್ಲಿ ಅನೇಕಾನೇಕ ಸಕಾಲಿಕ ವಿಷಯಗಳಲ್ಲಿ ಉಸ್ತಾದರು ತನ್ನ ಅಗಾಧ ಪಾಂಡಿತ್ಯದಿಂದ ತುಂಬಿ ತುಳುಕುತ್ತಿದ್ದ ಜ್ಞಾನ ಭಂಡಾರದ ಬತ್ತಳಿಕೆಯಿಂದ ಇಲ್ಮನ್ನು ಹೊರಕ್ಕೆ ಹಚ್ಚಿ ಜ್ಞಾನದಾಹಿಗಳ ಹೃದಯಕ್ಕೆ ನಾಟಿಸಿ ಜನರ ದಾಹವನ್ನು ತಣಿಸುತ್ತಿದ್ದರು…
ವಿಶುದ್ದ ಕುರ್ ಆನ್ ನ ಸಾರ್ವಕಾಲಿಕ ಮಹತ್ವ, ಈಮಾನ್ ಸಂರಕ್ಷಣೆಯ ದಾರಿ, ಏಳು ಮಹಾ ಪಾಪಗಳು, ಮುಸ್ಲಿಮನ ಹಕ್ಕು ಮತ್ತು ಭಾಧ್ಯತೆಗಳು, ವ್ಯಾಪಾರ ವ್ಯವಹಾರ, ನೈಜ ಹಾದಿ ಅಹ್ಲುಸುನ್ನತ್ ವಲ್ ಜಮಾಅತ್ ಮುಂತಾದ ಹಲವು ವಿಷಯಗಳನ್ನು ಪ್ರತಿಪಾದಿಸುತ್ತಾ ಉಸ್ತಾದರು ಮಂಡಿಸಿದ ತರಗತಿಗಳು ಇತಿಹಾಸದ ಸುವರ್ಣ ಪುಟಗಳಲ್ಲಿ ಬರೆದಿಡಬೇಕಾದ ಘಟನೆಗಳಾಗಿರುತ್ತದೆ. ಉಸ್ತಾದರ ಕ್ಲಾಸ್ ಗೆ ವಿಷಯ ನೀಡುವುದೂ ಒಂದು ಇಂಟ್ರೆಸ್ಟಿಂಗ್ ಟಾಸ್ಕ್ ಆಗಿತ್ತು…
2010 ರಲ್ಲಿ ಎರಡು ತರಗತಿ ಗಳನ್ನು ನಡೆಸಿಕೊಟ್ಟಿದ್ದ ಉಸ್ತಾದ್, ಬಳಿಕ ಎಲ್ಲಾ ವರ್ಷಗಳ ರಮಲಾನ್ ನ ಎರಡನೇ ಆದಿತ್ಯವಾರ ಲುಹರ್ ನಮಾಜ್ ಗೇ ಶೇಕಮಲೆಗೆ ಹಾಜರಾಗುತ್ತಿದ್ದರು. ಆರು ವರ್ಷಗಳ ಕಾಲ ಶೇಕಮಲೆಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದ ಅದಮ್ ಅಹ್ಸನಿ ಉಸ್ತಾದ್ ಮತ್ತು ನಾವು ಮುಂಚಿನ ದಿನವೇ ಬೇಕಲ್ ಉಸ್ತಾದರ ಪಾಂಡಿತ್ಯದ ಬಗ್ಗೆ, ಮಹತ್ವಗಳ ಕುರಿತು ತಡ ರಾತ್ರಿ ತನಕವೂ ಪರಸ್ಪರ ಚರ್ಚಿಸುವುದು ವಾಡಿಕೆ ಆಗಿತ್ತು. ಕ್ಲಾಸ್ ತೆಗೆಯಲು ಬರುವ ಆದಿತ್ಯವಾರ ದಿನ ಉಸ್ತಾದ್ ರವರಿಗೆ ಉಲೂ ನಿರ್ವಹಿಸಲು ಬಿಸಿ ನೀರು ಕಾಯಿಸಿ ಇಟ್ಟು ಉಸ್ತಾದರ ಬರುವಿಕೆಗಾಗಿ ಕಾಯುತ್ತಿದ್ದೆವು.
ಅದೊಂದು ದಿನ ಶೇಕಮಲೆ ಮಸೀದಿಗೆ ಹೊಸತಾಗಿ ನಿರ್ಮಿಸಿದ ಮುಖ್ಯ ದ್ವಾರವನ್ನು ಬೇಕಲ್ ಉಸ್ತಾದ್ ರವರೇ ಉದ್ಘಾಟಿಸಿ ಒಳಗಡೆಗೆ ನಡೆದುಕೊಂಡು ಬಂದಿದ್ದರು. 2010 ರಲ್ಲಿ ಶೇಕಮಲೆ ಜಮಾಅತ್ ವರದಕ್ಷಿಣೆ ರಹಿತ ಜಮಾಅತ್ ಆಗಿ ತೀರ್ಮಾನ ಕೈಗೊಂಡಾಗ ಬೇಕಲ್ ಉಸ್ತಾದ್ ರವರು ಎಲ್ಲಾ ವರ್ಷಗಳ ಕ್ಲಾಸ್ ಗಳಲ್ಲಿ ಇದನ್ನು ನೆನಪಿಸುತ್ತಾ ಪ್ರೋತ್ಸಾಹದ ಮಾತುಗಳನ್ನು ಆಡುತ್ತಾ ಇದನ್ನು ಕೈ ಬಿಡಬೇಡಿ ಅಂತ ಪ್ರತೀ ಬಾರಿ ಜಮಾಅತರಲ್ಲಿ ಮನವಿ ಮಾಡುತ್ತಿದ್ದರು.
2010 ರಿಂದ 2019ರ ತನಕ, ಹತ್ತು ವರ್ಷಗಳಲ್ಲಿ ಎಡೆ ಬಿಡದೆ ಹನ್ನೊಂದು ತರಗತಿಗನ್ನು ನಡೆಸಿಕೊಟ್ಟ ಉಸ್ತಾದ್ 2019 ಮೇ 19 ರಂದು ”ಲೋಕಾಂತ್ಯ” ಎಂಬ ವಿಷಯದಲ್ಲಿ ಕ್ಲಾಸ್ ನೀಡಿದರು. ಎಲ್ಲರ ಕಣ್ಣಲ್ಲಿಯೂ ಕಣ್ಣೀರು ಬರುವಂತೆ ವಿಷಯ ಮಂಡಿಸಿದ ಉಸ್ತಾದ್ ಕ್ಲಾಸ್ ನ ಮದ್ಯೆ ಒಂದು ವಿಷಯ ಹೇಳಿದರು. ಏನು ಈ ದಿನ ನನ್ನ ಕ್ಲಾಸ್ ಗೆ ಜನ ಸ್ವಲ್ಪ ಕಡಿಮೆ ಸೇರಿದಂತೆ ಕಾಣುತ್ತಿದೆ, ನನ್ನ ಕ್ಲಾಸ್ ತೆಗೆಯುವ ಸಮಯಗಳು ಮುಗಿಯುತ್ತಾ ಬಂತಾ…?!!!
ಸುಬುಹಾನಲ್ಲಾಹ್….! 2020 ರ ರಮಲಾನ್ ನಲ್ಲಿ ಪ್ರಥಮ ಕೊರೋನ ಲಾಕ್ ಡೌನ್ ಕಾರಣದಿಂದ ಕ್ಲಾಸ್ ಆಯೋಜಿಸಲು ಸಾಧ್ಯವಾಗದೇ ಹೋಯಿತು. 2021 ರ ರಮಲಾನ್ ಆಗಮಿಸುವ ಮುನ್ನ ಬೇಕಲ್ ಉಸ್ತಾದರು ಈ ಲೋಕದ ಜೀವನಕ್ಕೇ ಅಂತ್ಯ ಹೇಳಿ ಹೊರಟು ಹೋಗಿದ್ದರು….!!!! ನಮ್ಮೂರಿನಲ್ಲಿ ತನ್ನ ಕೊನೆಯ ಕ್ಲಾಸ್ ನಲ್ಲಿ ನಾನು ಕ್ಲಾಸ್ ತೆಗೆಯುವ ದಿನಗಳು ಮುಗಿಯಿತಾ ಅಂತ ಹೇಳಿದ ಮಾತಿನ ಮರ್ಮ ಅಂದು ಗೊತ್ತಾಗದಿದ್ದರೂ ಉಸ್ತಾದ್ ವಫಾತ್ ಆದಾಗ ಗೊತ್ತಾಯಿತು…
ಒಂದು ಮಧ್ಯಮ ವರ್ಗದ ಮಹಾನುಭಾವರಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಸಮೀಪದ ಮೊಂಟುಗೋಳಿಯ ಪೂಡಲ್ ಮುಹಮ್ಮದ್ ಮತ್ತು ಕದೀಜ ದಂಪತಿಗಳ ಪುತ್ರನಾಗಿ 27-2-1949 ರಂದು ಜನಿಸಿದ್ದ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಎಂಬ ಹೆಸರಿನ ಬೇಕಲ್ ಉಸ್ತಾದ್, ಉಡುಪಿ, ಹಾಸನ ಚಿಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಆಗಿದ್ದರು.
ನಾಲ್ಕು ಮಝ್ಹಬ್ ಗಳಲ್ಲಿ ವಿಧಿ ನೀಡಬಲ್ಲ ಕರ್ನಾಟಕದ ಮಹೋನ್ನತ ವಿದ್ವಾಂಸರಾದ ಉಸ್ತಾದರ ಕರಗಳಿಗೆ ಕರ್ನಾಟಕ ಉಲಮಾ ಒಕ್ಕೂಟದ ಚುಕ್ಕಾಣಿಯನ್ನು ಜಗದೊಡೆಯನಾದ ಅಲ್ಲಾಹು ನೀಡಿದ್ದ, ಕನ್ನಡ ನಾಡಿಗೆ ಕೀರ್ತಿ ತಂದ ಖ್ಯಾತ ಕರ್ಮ ಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ಪಂಡಿತರಾಗಿದ್ದು, ಸಮಕಾಲೀನ ಜಗತ್ತಿನ ಅಗ್ರಶ್ರೇಣಿಯ ಸುನ್ನೀ ವಿದ್ವಾಂಸ, ದಾರ್ಮಿಕ ಸಂಶಯಗಳ ನಿವಾರಣೆಗೆ ಜನರು ಕಂಡಿದ್ದ ಅಂತಿಮ ನ್ಯಾಯ ಕೇಂದ್ರ, ವಿದ್ಯಾದಾಹಿಗಳ ಅಭಯ ತಾಣ, ಸಮಾಜದಲ್ಲಿ ಸಮಯೋಚಿತ ಬದಲಾವಣೆಗಳೊಂದಿಗೆ ಜ್ಞಾನದ ನಂದಾದೀಪವಾಗಿ ಬೆಳೆದ ಪಂಡಿತ ತೇಜಸ್ಸು.
ಧಾರ್ಮಿಕ ಶಿಕ್ಷಣದ ಜತೆ ಲೌಕಿಕ ಶಿಕ್ಷಣದ ಅನಿವಾರ್ಯತೆಯನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟು , ಜನ ಜಾಗೃತಿಯ ಮಿಂಚಿನ ಸಂಚಲನವನ್ನು ಉಂಟುಮಾಡಿ, ಸುಶಿಕ್ಷಿತ ಸಮುದಾಯ ಒಂದರ ಸೃಷ್ಟಿಗೆ ಕಾರಣಕರ್ತರಾಗಿದ್ದರು ಬೇಕಲ್ ಉಸ್ತಾದ್…
ಸತ್ಯವನ್ನು, ಧರ್ಮದ ನುಡಿಯನ್ನು, ತತ್ವಾದರ್ಶಗಳನ್ನು ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ, ಅವ ನನ್ನವ, ನಮ್ಮವ, ಅಧ್ಯಕ್ಷ, ಕಾರ್ಯದರ್ಶಿ, ಪಂಡಿತ, ಪಾಮರ, ಬಡವ, ಧನಿಕ, ಮಂತ್ರಿ, ಮಹೋದಯ, ಅಧಿಕಾರಿ.. ಬಿಕಾರಿ… ಎಂಬ ಯಾವುದೇ ತಾರತಮ್ಯ ಇಲ್ಲದೇ ಸತ್ಯವನ್ನು ನೇರವಾಗಿ ನುಡಿಯುವ ಧೈರ್ಯವಂತ ಧಾರ್ಮಿಕ ವಿದ್ವಾಂಸ.
ಅವರು ನಡೆದ ಹಾದಿ ನಮಗೆ ದಾರಿ ದೀಪವಾಗಿತ್ತು…. ಬೇಕಲ್ ಉಸ್ತಾದ್ ವಫಾತ್ ಆದಾಗ ಮನಸ್ಸಿಗೆ ಆದ ನೋವನ್ನು ಹೇಳಿ ಮುಗಿಸಲು ಅಸಾಧ್ಯ… ಶುಭ್ರವಾಗಿ ಉರಿಯುತ್ತಿದ್ದ ಬೆಳಕೊಂದು ಹಠಾತ್ತನೆ ಆರಿ ನಮ್ಮನ್ನು ಕಾರಿರುಳಿನ ಕೂಪಕ್ಕೆ ದೂಡಿ ಹಾಕಿದಂತಹ ಮನೋಸ್ಥಿತಿ ಮಾರ್ದ್ವನಿಸಿತ್ತು. ಮನದಲ್ಲಿ ಮೂಡಿ ಬಂದದ್ದು ಒಂದೇ ಚಿಂತೆ…
ನಮಗೆ ಇನ್ನು ಯಾರು…? ನಮ್ಮ ತಂದೆಯವರು ವಫಾತ್ ಆದಾಗ ತಂದೆಯನ್ನು ನೆನೆದು ದುಃಖದ ಕಟ್ಟೆ ಒಡೆದು ಕಣ್ಣೀರ ಕೋಡಿ ಹರಿದಿತ್ತು, ಆದರೆ ನಮಗೆ ಇನ್ನು ಯಾರು ಎಂದು ಕಿಂಚಿತ್ತೂ ತೋಚಿರಲಿಲ್ಲ… ಆದರೆ ಬೇಕಲ್ ಉಸ್ತಾದ್ ವಫಾತ್ ಆದಾಗ ಬೇಕಲ್ ಉಸ್ತಾದರ ಮುಂದಿನ ಜೀವನದ ಬಗ್ಗೆ ಎಳ್ಳಷ್ಟೂ ಯೋಚನೆ ಮೂಡಿರಲಿಲ್ಲ… ಕಾರಣ, ಅವರು ಸರ್ವ ಸಿದ್ಧತೆಗಳೊಂದಿಗೆ ಸುಸಜ್ಜಿತರಾಗಿ ಪರಲೋಕ ಯಾತ್ರೆ ಕೈಗೊಂಡಿದ್ದರು.
ಮತ್ತೊಮ್ಮೆ ಮಗದೊಮ್ಮೆ ದುಃಖದ ಕಟ್ಟೆ ಒಡೆಯುತ್ತಿದ್ದದ್ದು ಒಂದೇ ಯೋಚನೆಯಲ್ಲಿ…. ನಮಗೆ ಇನ್ನು ಯಾರು….? ನಾವೆಲ್ಲರೂ ಮತ್ತೊಮ್ಮೆ ಯತೀಮ್ ಆದ ಮನೋ ವೇದನೆ ಮನದಾಳದಲ್ಲಿ ಮಗದೊಮ್ಮೆ ಆವರಿಸಿತು….
2016 ರಲ್ಲಿ ನನ್ನ ಮಗ ಕಾಲು ಮುರಿತಕ್ಕೊಳಗಾಗಿ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಾಗ ಯಾವುದೇ ಸಂಬಂಧ ಇಲ್ಲದ, ಏನೂ ಅಲ್ಲದ ನಮ್ಮ ಮನೆಗೆ ಭೇಟಿ ನೀಡಿ ದುಆ ಮಾಡಿ ದಿನ ನಿತ್ಯ ಪಠಿಸಲು ಖುರ್ ಆನಿನ ಸೂರತ್ ಹಾಗೂ ಝಿಕ್ರ್ ನೀಡಿ ಅನುಗ್ರಹಿಸಿದ್ದರು.
ಮಗದೊಂದು ದಿನ ತುಂಬಿ ಸೇರಿದ್ದ ಸಭೆಯೊಂದರಲ್ಲಿ ನಾನು ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ನಾಲಗೆ ಜೋತು ಬಿದ್ದಂತೆ ಭಾಸವಾಗ ತೊಡಗಿತು, ಶರೀರ ಕಂಪಿಸ ತೊಡಗಿತು.. ಹಾಗಂತ ನಾನೇನೂ ದೊಡ್ಡ ಮಾತುಗಾರನಲ್ಲದಿದ್ದರೂ ಅಗತ್ಯಕ್ಕೆ ತಕ್ಕಷ್ಟು ವಿಚಾರಗಳನ್ನು ಜನರ ಮುಂದೆ ವಿನಿಮಯ ಮಾಡಿ ಹಂಚಿಕೊಳ್ಳಲು ಅಲ್ಲಾಹುವಿನ ಅನುಗ್ರಹದಿಂದ ಸಾಧ್ಯವಾಗುತ್ತಿತ್ತು. ಹೇಗಾದರೂ ಅಂದಿನ ಮಾತುಗಳನ್ನು ಪೂರ್ತಿಗೊಳಿಸಿ ಬೇಕಲ್ ಉಸ್ತಾದ್ ಗೆ ನೇರವಾಗಿ ಫೋನ್ ಹಚ್ಚಿ ಮನ ಬಿಚ್ಚಿದೆ…
ಆದದ್ದು ಬಿಡು, ಇನ್ನು ಆ ರೀತಿ ರಿಪೀಟ್ ಆಗದು ಎಂದು ಹೇಳಿ ದಿನ ನಿತ್ಯ ಐದು ವಕ್ತ್ ಪಠಿಸಲು ಖುರ್ ಆನಿನ ಸೂರತ್ ಗಳನ್ನು ನೀಡಿ ಆಶೀರ್ವದಿಸಿದರು. ಆ ವರ್ಷ ಬೇಕಲ್ ಉಸ್ತಾದ್ ನಮ್ಮೂರಿಗೆ ರಮಲಾನ್ ಕ್ಲಾಸ್ ಗೆ ಬಂದಾಗ ಯಾವುದೇ ತೊದಲುವಿಕೆ ಇಲ್ಲದೇ ಎಂದಿನಂತೆ ಸಭೆಯಲ್ಲಿ ಉಸ್ತಾದರಿಗೆ ಸ್ವಾಗತ ಮಾತುಗಳನ್ನು ಸರ್ಪಿಸಲು ಅಲ್ಲಾಹು ಅನುಗ್ರಹಿಸಿದ…
ಉಸ್ತಾದರಿಗೆ ತಾಜುಲ್ ಫುಖಃಹಾ ಬಿರುದು ಪ್ರಾಪ್ತಿಯಾದ ಸಂದರ್ಭದಲ್ಲಿ ಕುಂಬ್ರ ಮರ್ಕಝ್ ನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಉಸ್ತಾದರ ಅಭಿನಂದನಾ ಪತ್ರವನ್ನು ಉಸ್ತಾದರ ಸನ್ನಿಧಿಯಲ್ಲಿ ಓದಲು ಅವಕಾಶ ದೊರಕಿದ್ದು ನನ್ನ ಜೀವನದ ಬಲು ದೊಡ್ಡ ಭಾಗ್ಯವೇ ಸರಿ…
ಬರೆದರೆ ಮುಗಿಯದು… ಅವರ ಸ್ಥಾನಕ್ಕೆ ಅವರೇ ಸಾಟಿ, ಇನ್ನೊಂದು ಬದಲಿಯೂ ಇಲ್ಲ… ಇನ್ನೊಮ್ಮೆ ಬರಲಿಕ್ಕೂ ಇಲ್ಲ…
ಉಸ್ತಾದ್ ರವರ ವಫಾತ್ ನ ಎರಡನೇ ಪುಣ್ಯ ಸ್ಮರಣೆ ಪ್ರಯುಕ್ತ ಇಂದು ದಿನಾಂಕ 3/9/2022 ಶನಿವಾರ ಉಸ್ತಾದ್ ರವರ ಪಾರ್ಥಿವ ಶರೀರವನ್ನು ದಫನ ಮಾಡಲಾದ ಮರಿಕ್ಕಳ ಮಸೀದಿಯ ಪರಿಸರದಲ್ಲಿ ಅನುಸ್ಮರಣಾ ಕಾರ್ಯಕ್ರಮ ಇದೆ. ಅಲ್ಲಾಹು ಬೇಕಲ್ ಉಸ್ತಾದರ ಪವಿತ್ರ ವದನವನ್ನು ಸ್ವರ್ಗದಲ್ಲಿ ಕಣ್ತುಂಬಾ ಕಾಣಲು ನಮಗೆಲ್ಲರಿಗೂ ತೌಫೀಕ್ ನೀಡಲಿ… ತಖಬ್ಬಲಲ್ಲಾಹ್… ಆಮೀನ್ ಯಾ ರಬ್ಬಲ್ ಆಲಮೀನ್…
✍️ ಎಸ್.ಪಿ ಬಶೀರ್ ಶೇಕಮಲೆ, ಕುಂಬ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.