(www.vknews.in) : ಒಂದು ಕಾಲವಿತ್ತು ರೇಡಿಯೋ ಮತ್ತು ಟಿ.ವಿ. ವಾರ್ತೆಗಳನ್ನು ಜನರು ಬಹಳ ಗಂಭೀರವಾಗಿ ಕೇಳುತ್ತಿದ್ದರು ಮತ್ತು ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನೂರಾರು ಭಾಷೆಯ ನೂರಾರು ಟಿ.ವಿ. ಚಾನೆಲ್ಲುಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ವಾರ್ತೆಗಳ ವೈಭವೀಕರಣ ಕೇಳಲೇ ಬೇಡಿ…! ವಾರ್ತೆಗಳಿಗಿಂತ ಗ್ರಾಫಿಕ್ಸ್ ಹೆಚ್ಚಾಗಿರುತ್ತದೆ. ಹಿನ್ನೆಲೆ ಮ್ಯೂಸಿಕ್ ಸಹ ಡ್ರಾಮಾ ಸಿನಿಮಾಗಳಿಗಿಂತ ಕಡಿಮೆ ಇರುವುದಿಲ್ಲ. ಹೇಗಾದರೂ ಮಾಡಿ ವೀಕ್ಷಕರ ಗಮನ ವಾರ್ತೆಗಳತ್ತ ಸೆಳೆಯಬೇಕಂತ ವಾರ್ತಾಚಾನೆಲುಗಳು ಹರಸಾಹಸ ಪಡುತ್ತಿರುವುದುಂಟು. ಟಿ.ಆರ್.ಪಿ. ಪೈಪೋಟಿ ತಾರಕಕ್ಕೇರಿದೆ. ಆದರೆ ವಿಪರ್ಯಾಸವೇನೆಂದರೆ ರೋರಿಸಿದ್ದನ್ನೇ ಪದೇ ಪದೇ ತೋರಿಸುತ್ತಿರುತ್ತಾರೆ. ಜನರು ಸಹ ಹುಷಾರು. ಕೋತಿ ಮರಗಳನ್ನು ಜಿಗಿಯುವ ಹಾಗೆ ರಿಮೋಟನ್ನು ವಿಡಿಯೋಗೇಮಿನಂತೆ ಒತ್ತಿ ಒತ್ತಿ ಚಾನೆಲ್ಗಳನ್ನು ಬದಲಿಸುತ್ತಿರುತ್ತಾರೆ. ಆದರೆ ಏನು ಮಾಡುವುದು; ಎಲ್ಲಾ ಚಾನೆಲ್ಲುಗಳಲ್ಲೂ ಅದೇ ರಾಗ, ಅದೇ ಹಾಡು. ಒಂದೇ ವಾರ್ತೆಯನ್ನು ಪ್ರತಿಯೊಂದು ಚಾನೆಲ್ಗಳು ತನ್ನದೇ ಆದ ರೀತಿಯಲ್ಲಿ ಮಸಾಲೆ ಬೆರೆಸಿ ಬಿತ್ತರಿಸುತ್ತಿರುತ್ತವೆ.
ಬೀದಿ ಜಗಳ ಬ್ರೇಕಿಂಗ್ ನ್ಯೂಸ್ ಮಾಡಲಾಗುತ್ತದೆ. ಯಾರೋ ನಟಿ ಗರ್ಭಿಣಿಯಾದರೆ ಬ್ರೇಕಿಂಗ್ ನ್ಯೂಸ್. ರಾಜಕೀಯ ವ್ಯಕ್ತಿಯೋರ್ವ ಹೋಟೆಲಿಗೆ ಹೋಗಿ ದೋಸೆ ತಿಂದರೆ ಬ್ರೇಕಿಂಗ್ ನ್ಯೂಸ್. ಈ ರೀತಿಯ ಬ್ರೇಕಿಂಗ್ ವಾರ್ತೆಗಳು ಒಂದೇ ಎರಡೇ…! ಸಮಾಜದಲ್ಲಿ ಬೇರೆ ಗಂಭೀರ ಸಮಸ್ಯೆಗಳೇ ಇಲ್ಲವೇನೋ; ಮನಸ್ಸಿಗೆ ಬಂದಿದ್ದನ್ನು ಬ್ರೇಕಿಂಗ್ ನ್ಯೂಸ್ ಮಾಡಿ ಬಿಡುತ್ತಾರೆ.
ವಾರ್ತೆಗಳು ಒಂದು ಕಾಲದಲ್ಲಿ ಸಮಾಜದ ಕನ್ನಡಿಯಂತಿತ್ತು. ಪತ್ರಕರ್ತರು ಆದಷ್ಟು ಸತ್ಯವನ್ನು ಬಿಂಬಿಸುತ್ತಿದ್ದರು. ಪ್ರಭಾವಿತ ವ್ಯಕ್ತಿಗಳು, ಸರ್ಕಾರಗಳು ಎಲ್ಲರೂ ಪತ್ರಕರ್ತರಿಗೆ ಹೆದರುತ್ತಿದ್ದರು. ಎಲ್ಲಿ ನಮ್ಮ ರಹಸ್ಯವನ್ನು ಸಮಾಜದ ಮುಂದೆ ಬಯಲು ಮಾಡಿಬಿಡುತ್ತಾರೋ ಎಂಬ ಭಯ ಇತ್ತು. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದವು. ಇಂದು ಹಾಗಿಲ್ಲ. ವಾರ್ತಾಚಾನೆಲ್ಗಳು ಹಿಂದಿನ ಕೈವಾಡಗಳಿಂದ ನಡೆಸಲ್ಪಡುತ್ತವೆ. ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯವೆಂಬಂತೆ ಮಾಡಿ ತೋರಿಸಲಾಗುತ್ತದೆ. ಕಟ್ ಅಂಡ್ ಪೇಸ್ಟ್ ಸಂಸ್ಕೃತಿ ಹೆಚ್ಚಾಗಿದೆ.
ಹೆಸರುವಾಸಿ ಕೆಲ ಪತ್ರಿಕೆಗಳು, ಟಿವಿ ಚಾನೆಲ್ಗಳು, ಸಾಮಾಜಿಕ ಜಾಲತಾಣಗಳು ಮಾರಾಟವಾಗಿವೆ ಎಂಬಂತೆ ತೋರುತ್ತದೆ. ಅದನ್ನು ಖರೀದಿಸಿದ ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಅವನ್ನು ಬಳಸಿಕೊಳ್ಳುತ್ತಿರುವುದುಂಟು. ಸಮಾಜಕ್ಕೆ ವಾರ್ತೆಗಳ ಹೆಸರಲ್ಲಿ ಕೆಸರು ಬಡಿಸಲಾಗುತ್ತಿದೆ. ಅದನ್ನು ತಿಂದು ತೇಗಿದ ಜನಸಮೂಹ ದಾರಿತಪ್ಪಿದ ಮಕ್ಕಳಂತಾಗುತ್ತಿದ್ದಾರೆ. ಉತ್ತಮ ಸಮಾಜ ಕಟ್ಟಲು ಶ್ರಮಿಸಬೇಕಿದ್ದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ಜನರ ನಂಬಿಕೆಗಳಿಗೆ ದ್ರೋಹ ಬಗೆಯುತ್ತಿವೆ.
ಮಾಧ್ಯಮಗಳು ಸಮಾಜವನ್ನು ಒಡೆಯುತ್ತಿವೆ. ದೇಶದ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸುತ್ತಿವೆ ಎಂದು ಅರಿತ ಕೆಲ ಬುದ್ಧಿಜೀವಿಗಳು, ಸತ್ಯವನ್ನು ಸಮಾಜಕ್ಕೆ ತಿಳಿಸಲೇಬೇಕೆಂದು ಮಾಧ್ಯಮಗಳ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡರು. ಅದುವೇ ಸಾಮಾಜಿಕ ಅಂತರ್ಜಾಲ ಮಾಧ್ಯಮ. ಹೊಸ ಹೊಸ ಯುಟ್ಯೂಬರ್ ಗಳು ಹುಟ್ಟಿಕೊಂಡರು. ಸತ್ಯ ಮತ್ತು ಸುಳ್ಳಿನ ಯುದ್ಧ ಪ್ರಾರಂಭವಾಗಿದೆ. ಮುಖ್ಯವಾಹಿನಿಗಳು ಬಹಳ ಪ್ರಭಾವಶಾಲಿಗಳಾಗಿದ್ದರೂ ಜನರ ಒಲವು ಯುಟ್ಯೂಬರ್ ಗಳತ್ತ ವಾಲುತ್ತಿದೆ. ಸತ್ಯ ಹೇಳುತ್ತಿದ್ದ ಎಷ್ಟೋ ಪತ್ರಕರ್ತರ, ಬರಹಗಾರರ, ಛಾಯಾಗ್ರಾಹಕರ, ವಿಡಿಯೋಗ್ರಾಫರ್ಗಳ, ಸಾಮಾಜಿಕ ಕಾರ್ಯಕರ್ತರ ಪ್ರಾಣ ತೆಗೆಯಲಾಗಿದೆ. ಇನ್ನೂ ಕೆಲವರು ಮೀಡಿಯಾ ದಾದಾಗಳ ಕೆಂಗಣ್ಣಿನ ಗುರಿಯಲ್ಲಿದ್ದಾರೆ.
ಯಾವುದೇ ವಾರ್ತೆಗಳಿರಲಿ ನೇರವಾಗಿ ನಂಬಬೇಡಿ. ಅದರ ಬಗ್ಗೆ ಕೂಲಂಕುಷವಾಗಿ ಅನ್ವೇಷಣೆ ಮಾಡಿ ಸತ್ಯವನ್ನು ತಿಳಿದುಕೊಳ್ಳಿ. ಸಮಾಜದ ಮತ್ತು ದೇಶದ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ನಮ್ಮಿಂದ ಉತ್ತಮ ಸಮಾಜ; ಉತ್ತಮ ಸಮಾಜದಿಂದ ಉತ್ತಮ ದೇಶ. ಸುಳ್ಳು ಸುದ್ದಿಗಳು, ವದಂತಿಗಳು ಹಿಮಾಲಯ ಪರ್ವತದಂತೆ ಬೆಳೆದಿರಬಹುದು. ಆದರೆ ಕೊನೆಗೆ ಗೆಲ್ಲುವುದು ಸತ್ಯವೇ.
ಪ್ರವಾದಿ ಮುಹಮ್ಮದರು (ಸ) ವದಂತಿ ಹರಡಬೇಡಿ ಎಂದು ತಾಕೀತು ಮಾಡಿದ್ದಾರೆ. ವದಂತಿಯಿಂದ ಮನುಕುಲಕ್ಕೆ ಎಷ್ಟೊಂದು ನಷ್ಟವಾಗುತ್ತದೆ ಎಂದು ನಾವು ಅನೇಕ ಘಟನೆಗಳನ್ನು ನಮ್ಮ ಸುತ್ತ ಮುತ್ತ ನೋಡಿರುವುದುಂಟು. ವಾಟ್ಸ್ ಆಪ್ ಮಾಧ್ಯಮದಿಂದ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ನಾವೂ ಭಾಗಿಗಳಾಗುತ್ತಿದ್ದೇವೆ. ಎಚ್ಚರ ವಹಿಸಿ. ಸಮಾಜದ ಜೊತೆ ಚೆಲ್ಲಾಟ ಮಾಡಬೇಡಿ. \
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಊದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.