(www.vknews.in) : ಇಂದು ದೆಹಲಿಯಲ್ಲಿ ಭಾರತದ ಗಿಳಿ ಎಂದೇ ಹೆಸರುವಾಸಿಯಾಗಿರುವ ಸೂಫಿ ಕವಿ ಅಮೀರ್ ಖುಸ್ರೋ ರವರ ೭೧೯ ನೇಯ ಗಂಧ (ಉರೂಸ್) ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. “ನಿಜಾಮಿ ಬಾನ್ಸುರಿ” ಪುಸ್ತಕದ ಕೆಲವು ಪುಟಗಳ ತರ್ಜುಮೆಯನ್ನು ಉರೂಸ್ ಪ್ರಯುಕ್ತ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ದೆಹಲಿಯ ಸೇನಾಛಾವಣಿಯಲ್ಲಿ ಎರಡು ದಿನ ತಂಗಿದ್ದೆ. ನಂತರ ಹಸನ್ರವರು ನನ್ನನ್ನು ಅವರ ಗುರುಗಳ ಹತ್ತಿರ ಕರೆದುಕೊಂಡು ಹೋದರು. ಜಮುನಾ ನದಿಯ ತೀರದಲ್ಲಿ ಒಂದು ಮನೆಯ ಬಾಗಿಲ ಮುಂದೆ ಜನಸಂದಣಿ ಸೇರಿತ್ತು. ನೂರಾರು ಜನರು ಒಳಗೆ ಹೋಗುತ್ತಿದ್ದರು ಮತ್ತು ಹೊರಗೆ ಬರುತ್ತಿದ್ದರು. ಖಾನ್ಖಾಹದ ಬಾಗಿಲ ಮುಂದೆ ಹೋಗಿ ಹಸನ್ ತನ್ನ ಹಣೆಯನ್ನು ಹೊಸಿಲಿಗೆ ತಾಗಿಸಿ ಅದನ್ನು ಚುಂಬಿಸಿದರು. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹೀಗೇ ಮಾಡುತ್ತಿದ್ದರು.
ಆದರೆ ನಾನು ಹೊಸಿಲಿನ ಮೇಲೆ ಸಾಷ್ಟಾಂಗ ಮಾಡಲಿಲ್ಲ. ಕೊನೆಗೆ ನಾವೆಲ್ಲ ಒಳಗೆ ಹೋದೆವು. ಅಲ್ಲಿ ಬಹಳ ಜನರು ಸೇರಿದ್ದರು. ಹಜ್ರತ್ ಒಂದು ನಮಾಜಿನ ಚಾಪೆಯ ಮೇಲೆ ಕುಳಿತಿದ್ದರು. ಇವರ ಬಣ್ಣ ಗೋಧಿಬಣ್ಣದ್ದಾಗಿತ್ತು. ಗಡ್ಡವೂ ಬಹಳ ಕಳೆಯಿಂದ ಕೂಡಿತ್ತು. ತಲೆಗೆ ಅಮಾಮ (ಪೇಟ) ವನ್ನು ಕಟ್ಟಿದ್ದರು. ಹಸನ್ ಮುಂದೆ ಹೋಗಿ ಸಾಷ್ಟಾಂಗ ಮಾಡಿದರು.
(ಶಿರ ಬಾಗಿಸು-ಸಾಷ್ಟಾಂಗ – ಸಜ್ದಾ) ನನ್ನಲ್ಲಿ ಒಂದು ರೀತಿಯ ಕಳವಳ ಆವರಿಸಿತು. ನಾನೂ ಸಹ ಸಾಷ್ಟಾಂಗ ಮಾಡಿದೆ. ನಾನು ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದೆ ಹಸನ್(ರ), ಬಂದದ್ದು ಒಳ್ಳೆಯದಾಯಿತು- ಎಂದು ಗುರುಗಳು ನುಡಿದರು. ಈ ಹಿಂದೂ ಯುವಕ ಫಾರ್ಸಿಯನ್ನು ಚೆನ್ನಾಗಿ ಹೇಳಲು ಪ್ರಾರಂಭಿಸಿದ್ದಾನೆ. ಮಕ್ದೂಮ್ (ಹಿರಿಯರು)ರವರಿಗೆ ಎಲ್ಲಾ ಗೊತ್ತು ಎಂದು ಹಸನ್ ಕೈ ಮುಗಿದು ಹೇಳಿದರು. ಗುರುಗಳು ಮುಗುಳ್ನಗೆ ಬೀರಿ ಹೇಳಿದರು-ಈ ಯುವಕನ ತಂದೆ- ತಾಯಿ ಕ್ಷೇಮವಾಗಿದ್ದಾರೆ. ಇಲ್ಲಿ ಈತನ ಬರುವಿಕೆ ಶುಭವಾಗಲಿ. ರಾತ್ರಿ ಖುಸ್ರು ಬರುತ್ತಾರೆ. ಈ ಯುವಕ ಅವರನ್ನೂ ಭೇಟಿ ಮಾಡಲಿ. ನೀವು ಈತನನ್ನೂ ಕರೆತನ್ನಿ.
ನಾವು ಪುನಃ ಛಾವಣಿ ಕಡೆಗೆ ಹೋಗಲಿಲ್ಲ. ಕೆಲವು ಸಮಯ ಗುರುಗಳ ಸನ್ನಿಧಿಯಲ್ಲಿ ಕುಳಿತು ಆಚೆ ಬಂದೆವು. ಇಲ್ಲಿ ಖ್ವಾಜ ಹಸನ್(ರ)ರವರ ಚಿರಪರಿಚಿತರು ಬಹಳ ಜನ ಇದ್ದರು ಮತ್ತು ಅವರು ಬಹಳ ಜನಪ್ರಿಯರಾಗಿದ್ದಾರೆ. ಎನ್ನಿಸುತ್ತಿತ್ತು. ಎಲ್ಲರೂ ನನ್ನ ಕ್ಷೇಮವನ್ನು ವಿಚಾರಿಸುತ್ತಿದ್ದರು. ಇವರೆಲ್ಲರಲ್ಲೂ ಎಂಥ ಪ್ರೀತಿಯಿತ್ತೆಂದರೆ, ಸ್ವಂತ ಸಹೋದರರಂತೆ ಕಾಣುತ್ತಿದ್ದರು. ಅಪರಿಚಿತ ವ್ಯಕ್ತಿಗಳ ಜೊತೆಯೂ ಅವರ ವರ್ತನೆ ಬಹಳ ಚೆನ್ನಾಗಿತ್ತು.
ಮಧ್ಯಾಹ್ನದ ಊಟಕ್ಕಾಗಿ ನಾವು ಲಂಗರ್ ಖಾನಾಗೆ ಹೋದೆವು. ಅಲ್ಲಿ ನೂರಾರು ಜನ ಸೇರಿದ್ದರು. ಒಬ್ಬ ಮುದುಕರು ಊಟವನ್ನು ಬಡಿಸುತ್ತಿದ್ದರು. ಅವರ ಹೆಸರು ಬುರ್ಹಾನುದ್ದೀನ್ ಗರೀಬ್ ಎಂದು ತಿಳಿಸಲಾಯಿತು. ಮುಸಲ್ಮಾನರು ಮಾಡಿದ ಅಡುಗೆಯನ್ನು ನಾನು ಊಟ ಮಾಡಿರಲಿಲ್ಲ. ಆದರೆ ಖ್ವಾಜಾ ಹಸನ್ ಜೊತೆ ನನ್ನ ಪ್ರಯಾಣ ಪ್ರಾರಂಭವಾದ ನಂತರ ನನ್ನ ಆಚರಣೆ ಮುರಿದು ಹೋಯಿತು.ಗುರುಗಳ ಲಂಗರ್ ಖಾನಾದಲ್ಲಿ ಎಲ್ಲಾ ರೀತಿಯ ಮೃಷ್ಟಾನ್ನ ಭೋಜನಗಳಿದ್ದವು. ಊಟ ಬಡಿಸುವವರು ಬಹಳ ಬೆಲೆಬಾಳುವ ಉಡುಪನ್ನು ಧರಿಸಿದ್ದರು ಮತ್ತು ಸ್ವಚ್ಛವಾಗಿದ್ದರು. ಊಟೋಪಚಾರದ ಜಾಗವೂ ಸಹ ಬಹಳ ಸ್ವಚ್ಛವಾಗಿತ್ತು.
ಊಟವನ್ನು ಎಲ್ಲರಿಗೂ ಬೇರೆ ಬೇರೆ ತಟ್ಟೆಗಳಲ್ಲಿ ಬಡಿಸಲಾಗುತ್ತಿತ್ತು. ಪರದೇಶಗಳಿಂದ ಬಂದ ಕೆಲವು ಮುಸಲ್ಮಾನ ಅತಿಥಿಗಳು ಇದರ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಎಲ್ಲರೂ ಸೇರಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ನಮ್ಮ ಪದ್ಧತಿ. ಇವನ ಮತ್ತೊಬ್ಬ ಸ್ನೇಹಿತ ಹೇಳಿದ- ನಿಜ, ಪೈಗಂಬರ್ ಮುಹಮ್ಮದ್ ಹೇಳಿದ್ದಾರೆ- ಯಾವ ತಟ್ಟೆಯಲ್ಲಿ ಬಹಳ ಜನ ಸೇರುತ್ತಾರೋ ಆ ಆಹಾರದಲ್ಲಿ ದೈವ ಬರಕತ್ (ವೃದ್ಧಿ) ಕೊಡುತ್ತಾನೆ. (ಆಗಿನ ಕಾಲದಲ್ಲಿ ಬಿಳಿಯ-ಕರಿಯ, ಮೇಲು-ಕೀಳು, ಶ್ರೀಮಂತ-ಬಡವ, ದೇಶಿ-ಪರದೇಶಿ, ಸ್ನೇಹಿತ-ಶತ್ರು – ಇಂತಹ ಹಲವಾರು ಭಾವನೆಗಳ ಪಿಡುಗುಗಳನ್ನು ಹೋಗಲಾಡಿಸಲು, ಎಲ್ಲರಿಗೂ ಸಮಾನತೆಯ ಹಕ್ಕನ್ನು ಕೊಡಲು, ಸ್ನೇಹ ಜೀವಿಗಳಾಗಿ ಶಾಂತಿಯಿಂದ ಬಾಳಲು ಪೈಗಂಬರ್ ಮೇಲಿನ ವಾಕ್ಯ ನುಡಿದಿದ್ದಾರೆ ಎಂದು ನನ್ನ ಭಾವನೆ.)
ಮೂರನೆ ಅತಿಥಿ ಬೇಜಾರಾಗಿ ಮತ್ತು ಬಹಳ ಜೋರಾಗಿ ಕೂಗಿ ಹಜ್ರತ್ ಮೌಲಾನ ಬುರ್ಹಾನುದ್ದೀನ್(ರ) ರವರಿಗೆ ಹೇಳಿದ- ಶರಿಅತ್ ವಿರೋಧವಾಗಿ ನೀವು ಈ ಪದ್ಧತಿಯನ್ನು ಏಕೆ ಆಚರಿಸುತ್ತಿದ್ದೀರಿ?, ಮೌಲಾನ ಬುರ್ಹಾನುದ್ದೀನ್(ರ) ತನ್ನ ಜಾಗದಿಂದ ಅಲ್ಲಿಗೆ ಬಂದು, ಆ ಅತಿಥಿಗಳ ಮುಂದೆ ಖುರಾನಿನ ಒಂದು ಶ್ಲೋಕವನ್ನು ಹೇಳಿದರು. ಅದರ ತಾತ್ಪರ್ಯ ಇದಾಗಿತ್ತು. ದೈವ ಹೇಳುತ್ತಾನೆ- ನಿಮಗೆ ಒಪ್ಪಿಗೆ ಇದೆ, ಇಷ್ಟವಾದಲ್ಲಿ ಒಂದೇ ತಟ್ಟೆಯಲ್ಲಿ ಸೇರಿ ತಿನ್ನಿ, ಇಲ್ಲವಾದಲ್ಲಿ ಬೇರೆ ಬೇರೆ ತಿನ್ನಿ.
ಅತಿಥಿಗಳು ಹೇಳಿದರು- ಜೊತೆಗೂಡಿ ತಿನ್ನಲೂ ಸಹ ದೈವ ಹೇಳಿದ್ದಾನೆ. ನೀವು ಏಕೆ ಮುಸ್ಲಿಮರ ಒಗ್ಗಟ್ಟನ್ನು ಹಾಳು ಮಾಡುತ್ತಿದ್ದೀರಿ? ಈಗ ಅವರು ಹಿಂದುಗಳ ರೀತಿಯಲ್ಲಿ ಊಟವನ್ನು ಬೇರೆ ಬೇರೆಯಾಗಿ ತಿನ್ನುತ್ತಿದ್ದಾರೆ. ನನ್ನ ಗುರುಗಳು ಕೆಲವೊಮ್ಮೆ ಒಂದೇ ತಟ್ಟೆಯಲ್ಲಿ ಹಲವಾರು ಜನರನ್ನು ಸೇರಿಸಿ ಊಟ ಮಾಡಿಸುತ್ತಾರೆ. ಕೆಲವೊಮ್ಮೆ ಬೇರೆ ಬೇರೆ ತಟ್ಟೆಗಳಲ್ಲಿ ಊಟವನ್ನು ಮಾಡಿಸುತ್ತಾರೆ. ಹಿಂದೂ ಅತಿಥಿಗಳು ಬಂದರೆ ಈ ರೀತಿಯಾಗುತ್ತದೆ. ಈ ದಿನ ನಮ್ಮೊಂದಿಗೆ ಒಬ್ಬ ಹಿಂದೂ ಅತಿಥಿಯೂ ಹಾಜರಾಗಿದ್ದಾರೆ. ಆದುದರಿಂದ ಬೇರೆ ಬೇರೆ ತಟ್ಟೆಗಳಲ್ಲಿ ಊಟವನ್ನು ಬಡಿಸಲಾಗಿದೆ ಎಂದು ಮೌಲಾನ ಬುರ್ಹಾನುದ್ದೀನ್ ನುಡಿದರು.
ಆ ಅತಿಥಿಗಳು ತೃಪ್ತರಾಗಲಿಲ್ಲ. ಮಾತುಗಳು ಬೆಳೆಯುತ್ತಲೇ ಇದ್ದವು. ಗುರುಗಳು ಈ ಔತಣದಲ್ಲಿ ಹಾಜರಾಗಿರಲಿಲ್ಲ. ಅವರು ಸಾಮಾನ್ಯವಾಗಿ ಉಪವಾಸವಿರುತ್ತಾರೆ ಮತ್ತು ಸೂರ್ಯ ಮುಳುಗಿದ ನಂತರ ಆಹಾರ ಸೇವಿಸುತ್ತಾರೆ ಎಂದು ತಿಳಿಯಿತು. ರಾತ್ರಿಯ ನಮಾಜಿನ ಮುಂಚಿತವಾಗಿ ಖ್ವಾಜಾ ಹಸನ್ ಮತ್ತು ನನ್ನನ್ನು ಗುರುಗಳು ತಮ್ಮ ಹತ್ತಿರ ಕರೆದರು. ನಾವು ಅಲ್ಲಿ ಹೋದ ತದನಂತರ ಇಕ್ಬಾಲ್ ಹೆಸರಿನ ಒಬ್ಬ ಸೇವಕ ಬಂದ. ಅವನ ಜೊತೆ ಇಬ್ಬರು ಯುವಕ ಸೇವಕರಿದ್ದರು. ಅವರು ತಲೆ ಮೇಲೆ ತಟ್ಟೆಗಳನ್ನು ಹೊತ್ತು ತಂದಿದ್ದರು. ಅದನ್ನು ಕೆಳಗಿಳಿಸಿ ಭೂಮಿಯ ಮೇಲಿಟ್ಟರು.
ತಟ್ಟೆಯ ಮೇಲೆ ಜರಿಯ ಪೋಷಾಕು ಹೊದಿಸಲಾಗಿತ್ತು. ಪೋಷಾಕನ್ನು ಜರುಗಿಸಿದಾಗ ಮಣ್ಣಿನ ತಟ್ಟೆಗಳಲ್ಲಿ ಎರಡೆರಡು ಚಪಾತಿಗಳಿದ್ದವು ಮತ್ತು ಜೊತೆಯಲ್ಲಿ ಬೇಯಿಸಿದ ತರಕಾರಿಯಿತ್ತು. ಮಾಂಸವಿರಲಿಲ್ಲ. ಗುರುಗಳು ನನ್ನನ್ನು ಸನ್ನೆ ಮಾಡಿ ಬರಲು ಹೇಳಿದರು. ಖ್ವಾಜಾ ಹಸನರನ್ನೂ ಸಹ ಹತ್ತಿರ ಕರೆಸಿಕೊಂಡರು. ಯಾವ ತಟ್ಟೆಯಲ್ಲಿ ಬೆಂದ ತರಕಾರಿಯಿತ್ತೋ ಅದನ್ನು ನನ್ನ ಕಡೆಗೆ ಜರುಗಿಸಿದರು ಮತ್ತು ತಾವೂ ಸಹ ಇದರಿಂದ ತಿನ್ನಲು ಆರಂಭಿಸಿದರು. ಊಟದಲ್ಲಿ ಶೋರ್ಬಾ(ಅನ್ನ ಕಡಿಮೆ ತಿಳೀ ಸಾರು ಹೆಚ್ಚು- ಗಿeg. oಡಿ ಓoಟಿ-veg.) ಹೆಚ್ಚಾಗಿದ್ದರೆ ಒಂದೇ ತಟ್ಟೆಯಲ್ಲಿ ಎಲ್ಲರೂ ಸೇರಿ ತಿನ್ನುವುದು ಸ್ವಚ್ಛತೆ ಮತ್ತು ಶುದ್ಧತೆಯ ವಿರುದ್ಧವಾಗಿದೆ. ನಾವು ಈಗ ತಿನ್ನುತ್ತಿರುವ ಊಟದಂತಿದ್ದರೆ ಅದರಲ್ಲಿ ಹಲವಾರು ಜನ ಒಟ್ಟಿಗೆ ಸೇರಿ ತಿನ್ನಬಹುದು ಎಂದು ಖ್ವಾಜಾ ಹಸನ್ಗೆ ಹೇಳಿದರು.
ಇವತ್ತು ಮಧ್ಯಾಹ್ನ ಕೆಲವು ಅತಿಥಿಗಳು ಮುನಿಸಿಕೊಂಡಿದ್ದರು. ಆಗ ಮೌಲಾನ ಬುರ್ಹಾನುದ್ದೀನ್ ಖುರಾನಿನ ಈ ಆಯತ್(ಶ್ಲೋಕ)ವನ್ನು ಹೇಳಿದರು. ನಿಮ್ಮ ಮೇಲೆ ಏನೂ ಪಾಪವಿಲ್ಲ. ಇಷ್ಟವಿದ್ದರೆ ಜೊತೆಗೂಡಿ ಊಟ ಮಾಡಿ, ಇಷ್ಟವಿಲ್ಲದಿದ್ದರೆ ಬೇರೆ ಬೇರೆಯಾಗಿ ಊಟ ಮಾಡಿ. ಒಂದೇ ತಟ್ಟೆಯಲ್ಲಿ ಎಲ್ಲರೂ ಸೇರಿ ಊಟ ಮಾಡುವುದು ಪೈಗಂಬರ್ ಮುಹಮ್ಮದ್(ಸ)ರವರ ಆಚರಣೆಯಾಗಿದೆ ಎಂದು ಕೆಲವು ಅತಿಥಿಗಳು ಪ್ರತಿವಾದಿಸಿದರು ಎಂದು ಖ್ವಾಜಾ ಹಸನ್ ಸಂಜರಿ(ರ) ಗುರುಗಳಿಗೆ ತಿಳಿಸಿದರು.
ಇನ್ನೂ ಈ ಮಾತು ಮುಗಿದಿರಲಿಲ್ಲ, ಅಮೀರ್ ಖುಸ್ರೂ(ರ) ಬಂದಿರುವ ಸುದ್ದಿಯನ್ನು ಗುರುಗಳಿಗೆ ತಿಳಿಸಲಾಯಿತು. ಅವರಿಗೆ ಬರಲು ಬಿಡಿ ಎಂದು ಗುರುಗಳು ಹೇಳಿದರು. ಕೆಲ ಸಮಯದ ನಂತರ ಒಬ್ಬ ಸಣಕಲ ಮನುಷ್ಯ ಒಳಗೆ ಬಂದ. ಆತ ಬಹಳ ಬಿಳಿಯ ಬಣ್ಣದವನಾಗಿದ್ದ. ಬೇರೆ ತುರ್ಕರ ರೀತಿಯಲ್ಲಿಯೇ ಆತನ ಗಡ್ಡವೂ ಇದ್ದಿತು. ಅಮೀರ್ ಖುಸ್ರೂ(ರ) ಗುರುಗಳ ಮುಂದೆ ಬಂದಾಕ್ಷಣ, ಮುಂದೆ ಬಗ್ಗಿ ತನ್ನ ಹಣೆಯನ್ನು ಭೂಮಿಗೆ ತಾಕಿಸಿದರು. ನಿಮ್ಮ ಬರುವಿಕೆ ಶುಭವಾಗಲಿ! ಎಂದು ಗುರುಗಳು ನುಡಿದರು. ಹಸನ್ ಬಂದಿದ್ದಾರೆ. ದೇವಗಡದಿಂದ ತನ್ನ ಜೊತೆಯಲ್ಲಿ ಒಬ್ಬ ಹಿಂದು ಯುವಕನನ್ನು ಕರೆತಂದಿದ್ದಾರೆ ಎಂದು ಗುರುಗಳು ಅಮೀರ್ ಖುಸ್ರೂ(ರ) ಗೆ ಹೇಳಿದರು. ಅಮೀರ್ ಖುಸ್ರೂ(ರ) ಖ್ವಾಜ ಹಸನ್(ರ) ಜೊತೆ ಕೈ ಜೋಡಿಸಿ ವಿನಮ್ರತೆಯಿಂದ ವಜ್ರಾಸನದಲ್ಲಿ ಗುರುಗಳ ಮುಂದೆ ಕುಳಿತುಕೊಂಡರು. ಇಂದಿನ ತಾಜಾ ಕವಿತೆಯನ್ನು ಹೇಳುವಂತೆ ಗುರುಗಳು ಅಮೀರ್ ಖುಸ್ರೂ(ರ) ಗೆ ಅಪ್ಪಣೆ ನೀಡಿದರು. ಖುಸ್ರೂ ಕೆಲವು ಗಜಲ್ಗಳನ್ನು ಹೇಳಿದರು. ಗುರುಗಳು ಬಹಳ ಸಂತೋಷಪಟ್ಟರು.
ಹಿಂದಿ ಭಾಷೆಯಲ್ಲೂ ಸಹ ಕವನ ಹೇಳಲು ಪ್ರಾರಂಭಿಸಿ ಎಂದು ನಾನು ನಿಮಗೆ ಹೇಳಿದ್ದೆ, ಏಕೆಂದರೆ ಹಿಂದುಗಳ ಸಾಮಾನ್ಯ ನಡೆ-ನುಡಿಗಳ ಬಗ್ಗೆ ಮುಸಲ್ಮಾನರಲ್ಲಿ ಸೆಳೆತ ಉಂಟಾಗಲಿ, ಇವರ ನಡುವೆ ಇರುವ ಅಪರಿಚಿತತೆ ಮತ್ತು ಅಂತರ ದೂರವಾಗಲಿ ಎಂದು ಗುರುಗಳು ಹೇಳಿದರು. ಅಮೀರ್ ಖುಸ್ರೂ(ರ) ಎರಡೂ ಕೈಗಳನ್ನು ಮತ್ತೆ ಜೋಡಿಸಿ, ಮಕ್ದೂಮ್ (ಗುರುಗಳ) ಅಪ್ಪಣೆಯಂತೆ ಗುಲಾಮ ಕೆಲಸ ಪ್ರಾರಂಭಿಸಿದ್ದಾನೆ. ನಂತರ ಹಿಂದಿಯಲ್ಲಿ ಕೆಲವು ಕವನದ ಸಾಲುಗಳನ್ನು ಹೇಳಿದರು. ಅವು ಬಹಳ ಚೆನ್ನಾಗಿವೆ ಎಂದು ನನಗೆ ಅನಿಸಿತು. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ನನ್ನಿಂದಾಗಲಿಲ್ಲ. ಏಕೆಂದರೆ ಪೂರ್ವದ ಭಾಷಾ ಶೈಲಿಯಲ್ಲಿತ್ತು.
ಕೆಲವು ಸಮಯದ ನಂತರ ಗುರುಗಳು ನಮಾಜ್ಗಾಗಿ ನಮಾಜಿನ ಚಾಪೆಯ ಮೇಲೆ ನಿಂತುಕೊಂಡರು. ಒಬ್ಬ ಖಾದಿಮ್ ಪಡಸಾಲೆಯಲ್ಲಿ ಪಲ್ಲಂಗವನ್ನು ಹಾಸಿದ. ನಮಗೆಲ್ಲರಿಗೂ ಆಚೆ ಹೋಗುವ ಅಪ್ಪಣೆ ದೊರಕಿತು. ನಾವು ಆಚೆ ಬಂದ ಮೇಲೆ ಅಮೀರ್ ಖುಸ್ರೂ(ರ) ನನ್ನೊಂದಿಗೆ ಬಹಳ ಪ್ರೀತಿಯಿಂದ ಮಾತಾಡಿದರು. ಬಹಳ ಸಮಯದವರೆಗೆ ನನ್ನ ಸಮಾಚಾರ ವಿಚಾರಿಸಿಕೊಂಡರು. ನನ್ನ ಉತ್ತರಗಳು ಮುಗಿದ ಮೇಲೆ, ಈತ ದೇವಗಡದ ರಾಜ ವಂಶದ ಹಿಂದೂ ಆಗಿದ್ದಾನೆ. ಕೇವಲ ನಮ್ಮ ಗುರುಗಳ ಬಗ್ಗೆ ಕೇಳಿ, ಈತನ ಮನಸ್ಸಿನಲ್ಲಿ ನಮ್ಮ ಗುರುಗಳ ಮೇಲೆ ಪ್ರೀತಿ ಹುಟ್ಟಿತು.
ಆದುದರಿಂದ ನಾನು ಈತನನ್ನು ನನ್ನ ಜೊತೆ ಕರೆತಂದೆ. ಈ ರಾತ್ರಿ ಸಹೋದರ ಹಸನ್(ರ) ಮತ್ತು ನೀವು ನನ್ನ ಅತಿಥಿಗಳು. ನನ್ನ ಮನೆಗೆ ನಡೆಯಿರಿ. ಹಾಗೆಯೇ ನಾವು ಅವರ ಮನೆಗೆ ಹೋದೆವು. ರಾತ್ರಿ ಬಹಳ ಕಾಲದವರೆಗೂ ಮಾತುಕತೆ ನಡೆಯಿತು. ಅಮೀರ್ ಖುಸ್ರೂ(ರ) ಶರೀರವೂ ನಾಜೂಕಾಗಿತ್ತು ಮತ್ತು ಯೋಚನೆಗಳೂ ಸಹ ನಾಜೂಕಾಗಿವೆ. ಅವರು ಹಿಂದೂ ಧರ್ಮವನ್ನು ಬಹಳ ಚೆನ್ನಾಗಿ ಅರಿತಿದ್ದರು. ನನ್ನ ತಂದೆ ಅಮೀರ್ ಸೈಫುದ್ದೀನ್ ಮಹಮೂದ್ ಲಾಚಿನ್ ನಸಲಿನ ತುರ್ಕರಾಗಿದ್ದರು ಮತ್ತು ನನ್ನ ತಾತ ಹಿಂದೂ ಆಗಿದ್ದರು. ಆದುದರಿಂದ ನನ್ನ ಮಾತೃ ಭಾಷೆ ಹಿಂದಿ ಮತ್ತು ಆಡುಭಾಷೆ ಫಾರ್ಸಿ ಹಾಗೂ ತುರ್ಕಿಯಾಗಿದೆ ಎಂದು ಅಮೀರ್ ಖುಸ್ರೂ(ರ) ಹೇಳಿದರು: ನನ್ನ ಗುರುಗಳು ಎಲ್ಲಾ ಜಾತಿಯ ಮತ್ತು ಎಲ್ಲಾ ಧರ್ಮಗಳ ಜನರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಾರೆ ಎಂದು ಅಮೀರ್ ಖುಸ್ರೂ(ರ) ನುಡಿದರು.
ಗುರುಗಳು ದಿನವೆಲ್ಲಾ ಉಪವಾಸವಿರುತ್ತಾರೆ ಮತ್ತು ರಾತ್ರಿ ಕೇವಲ ಜೋಳದ ರೊಟ್ಟಿಯನ್ನು ತಿನ್ನುತ್ತಾರೆ. ಇದರಿಂದ ಅವರ ದೈಹಿಕ ಶಕ್ತಿ ಕುಂದುವ ಭಯವಿದೆ ಎಂದು ನಾನು ಹೇಳಿದೆ. ಅದಕ್ಕೆ ಅಮೀರ್ ಖಸ್ರೂ(ರ) ಪ್ರತ್ಯುತ್ತರಿಸಿದರು- ದೈವದ ಧ್ಯಾನ ಅವರ ದೈಹಿಕ ಶಕ್ತಿಗೆ ಸಾಕಾಗಿದೆ." ನಾನು ಅಮೀರ್ ಖಸ್ರೂ(ರ) ಜೊತೆ ಅಲ್ಲಾವುದ್ದೀನ್ ಖಿಲ್ಜಿಯ ಕೆಟ್ಟ ನಡವಳಿಕೆಗಳನ್ನು ಹೇಳಲು ಪ್ರಾರಂಭಿಸಿದೆ. ಆತ ಬಹಳ ಕೆಟ್ಟ ಮಹಾರಾಜನೆಂದು ಹೇಳಿದೆ.
“ಎಲ್ಲಾ ಮಹಾರಾಜರೂ ಡಕಾಯಿತರಾಗಿರುತ್ತಾರೆ. “ನನ್ನ ಈ ಮಾತುಗಳನ್ನು ಕೇಳಿ ಅಮೀರ್ ಖಸ್ರೂ(ರ) ಬಹಳ ನಕ್ಕರು ಹರದೇವ ನೀನು ಯಾವತ್ತಾದರೂ ಡಾಕು ನೋಡಿದ್ದೀಯಾ? ಎಂದು ಕೇಳಿದರು. ಒಂದಲ್ಲ ಹಲವಾರು ಡಾಕುಗಳನ್ನು ನೋಡಿದ್ದೇನೆ ಎಂದು ಉತ್ತರಿಸಿದೆ. ‘ಡಾಕು’ ಎಂದು ಯಾರಿಗೆ ಹೇಳುತ್ತಾರೆ? ಅಮೀರ್ ಖಸ್ರೂ(ರ) ಪ್ರಶ್ನಿಸಿದರು. ಬೇರೆಯವರ ಸಂಪತ್ತನ್ನು ಲೂಟಿ ಮಾಡಿ, ಪ್ರಾಣ ತೆಗೆಯುವವರು, ಹೆಂಗಸರು ಮತ್ತು ಮಕ್ಕಳ ಮೇಲೆ ಕರುಣೆ ತೋರದವರನ್ನು ಡಕಾಯಿತರು ಎನ್ನುತ್ತಾರೆ ಎಂದು ನಾನು ಉತ್ತರಿಸಿದೆ.
ಅವರು ಬೇರೆಯವರ ಸಂಪತ್ತನ್ನು ಲೂಟಿ ಮಾಡುತ್ತಾರೆ. ಹೆಂಗಸರ ಮತ್ತು ಮಕ್ಕಳ ಮೇಲೂ ಸಹ ಕರುಣೆ ತೋರುವುದಿಲ್ಲ – ಈ ಪಾಪಗಳ ಹೊರತು ನೀನು ಅವರಲ್ಲಿರುವ ಈ ಒಳ್ಳೆಯ ಗುಣಗಳ ಬಗ್ಗೆಯೂ ಕೇಳಿರಬಹುದು. – ಅವರಲ್ಲಿ ಬೇರಾವ ಕೆಟ್ಟ ಗುಣಗಳೂ ಇರುವುದಿಲ್ಲ. ಅವರು ಸುಳ್ಳು ಹೇಳುವುದಿಲ್ಲ. ಅವರ ಮನಸ್ಸಿನಲ್ಲೇನಿದೆ, ಅದೇ ನಾಲಿಗೆಯ ಮೇಲೂ ಇರುತ್ತದೆ. ಅವರು ಲೂಟಿ ಮಾಡಿರುವ ಸಂಪತ್ತನ್ನು ಬಡವರಲ್ಲಿ ಹಂಚಿಬಿಡುತ್ತಾರೆ. ಅತಿಥಿಗಳಿಗೆ ಮತ್ತು ಪರದೇಶದ ಯಾತ್ರಿಗಳಿಗೆ ಭೋಜನದ ಏರ್ಪಾಡು ಮಾಡುತ್ತಾರೆ. ದಿಕ್ಕಿಲ್ಲದ ಹೆಂಗಸರು ಮತ್ತು ಮಕ್ಕಳಿಗೆ ಸಹಾಯ ಮಾಡುತ್ತಾರೆ. ಯಾವಾಗಲೂ ಸೃಷ್ಟಿಕರ್ತನ ಸಮಾಜಕ್ಕೆ ಲಾಭ ತಂದುಕೊಡುತ್ತಿರುತ್ತಾರೆ. ಪ್ರ್ರಾರ್ಥನೆ ಮಾಡುತ್ತಾರೆ.
ನಮಾಜನ್ನು ಮಾಡುತ್ತಾರೆ. ಹಿಂದೂಗಳಾಗಿದ್ದರೆ ಯಾವಾಗಲೂ ಮಂದಿರಗಳಿಗೆ ಹೋಗುತ್ತಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಡಕಾಯಿತರ ಈ ಸದ್ಗುಣಗಳು ಒಳ್ಳೆಯದಾಗಿವೆ ಎಂದು ಹೇಳುವ ಯೋಗ್ಯತೆ ಪಡೆದಿವೆಯೋ ಇಲ್ಲವೋ ಈಗ ನೀನು ನನಗೆ ಹೇಳು! ಎಂದು ಅಮೀರ್ ಖಸ್ರೂ(ರ) ನನಗೆ ಪ್ರಶ್ನಿಸಿದರು. ಒಳ್ಳೆಯ ಮಾತು ಒಳ್ಳೆಯದೆ, ಕೆಟ್ಟ ಮಾತು ಕೆಟ್ಟದ್ದೆ. ಆದರೆ ಲೂಟಿ ಮಾಡುವುದು ಕೆಟ್ಟದ್ದು. ನೀವು ತಿಳಿಸಿದ ಆ ಎಲ್ಲಾ ಮಾತುಗಳು ಒಳ್ಳೆಯದಾಗಿವೆ ಎಂದು ನಾನು ಉತ್ತರಿಸಿದೆ.
ನಾನು ಒಬ್ಬ ಡಕಾಯಿತನ ಸದ್ಗುಣಗಳ ಬಗ್ಗೆ ಹೇಳಿದರೆ, ಆತ ಡಾಕು, ಕರುಣೆಯಿಲ್ಲದವನು ಎಂದು ನೀನು ಟೀಕಿಸುವುದಿಲ್ಲ ತಾನೆ! ಎಂದು ಅಮೀರ್ ಖಸ್ರೂ(ರ) ನುಡಿದರು. ಇವರ ಸದ್ಗುಣಗಳನ್ನು ಬಿಟ್ಟು ಹೇಳುವುದಾದರೆ ಅವರೆಲ್ಲಾ ಡಕಾಯಿತ ಮಹಾರಾಜರು ಮತ್ತು ಮಹಾನ್ ಡಕಾಯಿತರಾಗಿರುತ್ತಾರೆ. ಬೇರೆಯವರ ದೇಶವನ್ನು ಕಿತ್ತುಕೊಳ್ಳುತ್ತಾರೆ. ಅವರನ್ನು ಕಂಗಾಲು ಮಾಡಿಬಿಡುತ್ತಾರೆ. ಅವರು ಹೆಂಗಸರು ಮತ್ತು ಮಕ್ಕಳ ಮೇಲೂ ಕರುಣೆ ತೋರುವುದಿಲ್ಲ. ಆದರೆ ಈ ಕಳಂಕ ಬಿಟ್ಟರೆ ಅವರಲ್ಲಿ ಸದ್ಗುಣಗಳು ಇವೆ. ನಮಾಜು ಮಾಡುತ್ತಾರೆ. ಉಪವಾಸ ಮಾಡುತ್ತಾರೆ. ದಾನವನ್ನು ಮಾಡುತ್ತಾರೆ. ಹಸಿದವರಿಗೆ ಅನ್ನ ನೀಡುತ್ತಾರೆ. ಬಟ್ಟೆಯಿಲ್ಲದವರಿಗೆ ಬಟ್ಟೆಗಳನ್ನು ಹಂಚುತ್ತಾರೆ.
ಬೇರೆಯವರ ದುಃಖ ನೋಡಲಾರರು. ಆದರೆ ಯಾವುದೇ ಒಬ್ಬ ವ್ಯಕ್ತಿಯಿಂದ ತನ್ನ ಮಹಾರಾಜರ ಗದ್ದುಗೆಗೆ ಅಪಾಯವಿದೆ ಎಂದು ಶಂಕೆ ಬಂದಾಗ, ಅವರು ಕರುಣೆ ಮತ್ತು ನ್ಯಾಯವನ್ನು ಮರೆತುಬಿಡುತ್ತಾರೆ. ಆ ಶಂಕಿತ ವ್ಯಕ್ತಿ ಗುರುವಾಗಿರಲಿ, ತನ್ನ ತಂದೆಯಾಗಿರಲಿ, ತಾಯಿಯೇ ಆಗಿರಲಿ, ತನ್ನ ಸ್ವಂತ ಮಕ್ಕಳಾಗಿರಲಿ ಅಥವಾ ಸಹೋದರರಾಗಿರಲಿ ಅವರು ಯಾರನ್ನೂ ಲೆಕ್ಕಿಸುವುದಿಲ್ಲ. ಎಲ್ಲರನ್ನೂ ನಿರ್ನಾಮ ಮಾಡುವುದೇ ತನ್ನ ಧರ್ಮ ಮತ್ತು ರಾಜ್ಯದ ಕಾನೂನು ಎಂದು ತಿಳಿಯುತ್ತಾರೆ.
ಅಲ್ಲಾವುದ್ದೀನ್ ಖಿಲ್ಜಿಯ ಸ್ಥಿತಿಯೂ ಇದೇ ಆಗಿದೆ ಎಂದು ತಿಳಿದುಕೋ. ಆತ ಪ್ರಪಂಚದ ದೊಡ್ಡ ದೊಡ್ಡ ಡಕಾಯಿತರುಗಳಲ್ಲಿ ಒಬ್ಬ ಪ್ರಚಂಡ ಡಕಾಯಿತ ಆಗಿದ್ದಾನೆ ಎಂದು ಅಮೀರ್ ಖಸ್ರೂ(ರ) ನನಗೆ ಹೇಳಿದರು. ಹರದೇವ ನೀವು ದೆಹಲಿಗೆ ಬಹಳ ಹೊಸಬರು. ಸ್ವತಂತ್ರವಾದಿ ಮಹಾರಾಜನ ಆಳ್ವಿಕೆಯಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟವೆಂದು ಕೆಲವು ದಿನಗಳ ನಂತರ ನಿಮಗೆ ಗೊತ್ತಾಗುತ್ತದೆ. ಅಲ್ಲಾವುದ್ದೀನ್ ಖಿಲ್ಜಿ ಸೇನೆಯ ದೊಡ್ಡ ದೊಡ್ಡ ಸರದಾರರು ಮತ್ತು ಆತನ ದೊಡ್ಡ ದೊಡ್ಡ ಶ್ರೀಮಂತರು ತನ್ನ ಗುರುಗಳ ಅನುಯಾಯಿ ಗಳಾಗಿದ್ದಾರೆ. ಕೆಲವರು ಮಾತ್ರ ಮಹಾರಾಜನ ಅನುಯಾಯಿಗಳಾಗಿದ್ದಾರೆ.
ಇವರಿಗೆ ಮಹಾರಾಜನೊಬ್ಬನನ್ನು ಬಿಟ್ಟರೆ, ಸೃಷ್ಟಿಕರ್ತನ ಅವಶ್ಯಕತೆಯೂ ಇಲ್ಲ. ಪ್ರವಾದಿ ಮುಹಮ್ಮದ್ (ಸ) ರವರ ಅವಶ್ಯಕತೆಯೂ ಇಲ್ಲ. ಅವರು ಪ್ರಾರ್ಥನೆ ಮಾಡಿದರೂ ಸಹ ಕೇವಲ ಮಹಾರಾಜ ನಮ್ಮನ್ನು ದೈವಭಕ್ತನೆಂದು ತಿಳಿದುಕೊಳ್ಳಲಿ ಎಂದು ಮಾಡುತ್ತಾರೆ. ಮಹಾರಾಜ ಪ್ರವಾದಿ ಮುಹಮ್ಮದ(ಸ)ರನ್ನು ಪ್ರೀತಿಸುತ್ತಾನೆಂದು ತಿಳಿದು ಅವನಿಗೆ ತೋರಿಸುವುದಕ್ಕೋಸ್ಕರ ಇವರೂ ಸಹ ಅವರನ್ನು ಪ್ರೀತಿಸುವ ರೀತಿಯಲ್ಲಿ ನಟಿಸುತ್ತಾರೆ. ಇವರು ದೆಹಲಿಯ ಗುರುಗಳ ಸನ್ನಿಧಿಗಳಿಗೆ ಹೋಗುತ್ತಾರೆ, ಅವರ ಮುಂದೆ ತಲೆ ಬಾಗುತ್ತಾರೆ. ಕಾಣಿಕೆಗಳನ್ನು ನೀಡುತ್ತಾರೆ ಮತ್ತು ಆಶೀರ್ವಾದ ಮಾಡಿಸಿಕೊಳ್ಳುತ್ತಾರೆ. ಇಲ್ಲಿನ ವಿಷಯಗಳನ್ನು ಮಹಾರಾಜನಿಗೆ ತಿಳಿಸಲು ಮಹಾರಾಜನಿಗಾಗಿ ಗೂಡಾಚಾರಿಕೆ ಮಾಡುತ್ತಾರೆ. ಅವರ ಒಲವು ಯಾರ ಬಗ್ಗೆ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಲು ಮಹಾರಾಜನಿಗೆ ಅವಶ್ಯವಾಗಿದೆ.
ನೀವು ಬಹುಶಃ ಕೇಳಿರಬಹುದು. ಜಲಾಲುದ್ದೀನ್ ಖಿಲ್ಜಿಯ ಚಿಕ್ಕಪ್ಪನಾದ ಮುಯೀಜುದ್ದೀನ್ ಕೈಖ್ಬಾದ್ ತುರ್ಕ ಸಾಮ್ರಾಜ್ಯದ ಕೊನೆಯ ಮಹಾರಾಜನಾಗಿದ್ದ. ಆತನನ್ನು ಜಲಾಲುದ್ದೀನ್ ಜಮುನಾನದಿಯ ಹತ್ತಿರವಿರುವ ಅರಮನೆಯಲ್ಲಿ ಕೊಲೆಗೈದಿದ್ದನು. ನಾನು ಕೈಖ್ಬಾದನ ನೌಕರನಾಗಿ ಕೆಲಸ ಮಾಡಿದ್ದೇನೆ. ಕೈಖ್ಬಾದನ ತಾಯಿ ಹಿಂದೂ ಆಗಿದ್ದಳು. ಕೈಖ್ಬಾದ್ ಜಮುನಾ ತೀರದಲ್ಲಿ ಭವ್ಯವಾದ ಅರಮನೆ ನಿರ್ಮಾಣ ಮಾಡಿಸಿದ ನಂತರ ಅದಕ್ಕೆ ಒಂದು ಸುಂದರವಾದ ಹೆಸರನ್ನು ಸೂಚಿಸಲು ನನಗೆ ಹೇಳಲಾಯಿತು. ಅದರಲ್ಲಿ ನನ್ನ ಹೆಸರು, ನನ್ನ ಸಾಮ್ರಾಜ್ಯದ ಬಗ್ಗೆ ಮತ್ತು ದೈವ ನಾಮವೂ ಸಹ ಬರಬೇಕು ಎಂದು ಕೈಖ್ಬಾದ್ ಹೇಳಿದ. ಆ ಹೆಸರು ಹೇಗಿರಬೇಕು ಎಂದರೆ ಹಿಂದೂ ಪ್ರಜೆಗಳೂ ಸಹ ಆ ಹೆಸರನ್ನು ಅರ್ಥಮಾಡಿಕೊಳ್ಳುವಂತಿರಬೇಕು. ಎಂದು ಸೂಚಿಸಲಾಯಿತು.
‘ಕೆ ಲೋಕ್ ಹರಿ’ ಎಂಬ ಹೆಸರನ್ನು ಇಡುವಂತೆ ನಾನು ಸಲಹೆ ನೀಡಿದೆ. ‘ಕೆ’ ಎಂಬ ಪದದಲ್ಲಿ ಕೈಖ್ಬಾದನ ವಿವರವಿತ್ತು. “ಲೋಕ್” ಎಂಬ ಪದದಲ್ಲಿ ಆತನ ಸಾಮ್ರಾಜ್ಯದ ಬಗ್ಗೆ ಮತ್ತು ‘ಹರಿ’ ಪದದಲ್ಲಿ ದೈವನ ಚರ್ಚೆ ನಮೂದಿಸಲಾಗಿತ್ತು. ಈ ರೀತಿ ಒಂದೇ ಪದದಲ್ಲಿ ನಾನು ಮೂರು ಪದಗಳನ್ನು ಜೋಡಿಸಿದ್ದೆ. ಇದರಿಂದ ಕೈಖ್ಬಾದ್ ಬಹಳ ಸಂತೋಷ ಪಟ್ಟು ನನಗೆ ಬಹಳ ದೊಡ್ಡ ಕಾಣಿಕೆ ನೀಡಿದ್ದ. ಆದರೆ ಜಲಾಲುದ್ದೀನ್ ಖಿಲ್ಜಿ ಯಾವುದೇ ದೃಢ ಕಾರಣವಿಲ್ಲದೆಯೇ ಪಂಜಾಬಿನಿಂದ ದೆಹಲಿಗೆ ಬಂದು ಕೈಖ್ಬಾದನನ್ನು ಕೊಲೆಗೈದು ಮಹಾರಾಜನ ಪಟ್ಟಕ್ಕೇರಿದ. ಕೈಖ್ಬಾದ್ನ ಮಂತ್ರಿಗಳು, ಕೊತ್ವಾಲರು, ವಿದ್ವಾಂಸರು ಮತ್ತು ನ್ಯಾಯಾಧೀಶರು ತಮ್ಮ ನೌಕರಿಯನ್ನು ಕಳೆದುಕೊಂಡು ಕಂಗಾಲಾದರು.
ಇವರೆಲ್ಲಾ ಸೇರಿ ಹನ್ನೆರಡು ಸಾವಿರ ಮಂದಿಯಾಗಿದ್ದರು. ಈ ಸಮಯದಲ್ಲಿ ದೆಹಲಿಯಲ್ಲಿ ಪೀರ್ಸೈಯ್ಯದಿ ಮೌಲಾ ಎಂಬ ಹೆಸರಿನ ಮಹಾನ್ ಗುರುಗಳು ವಾಸವಾಗಿದ್ದರು. ಯಾವುದೇ ಪ್ರಾಪಂಚಿಕ ವ್ಯವಹಾರವಿಲ್ಲದೆಯೇ ಅವರಿಗೆ ದೈವಮಾಯೆಯಿಂದ ಸಂಪತ್ತು ಸಿಗುತ್ತದೆ ಎಂದು ಪ್ರಚಾರವಾಗಿತ್ತು. ಅವರು ಪ್ರತೀ ದಿನ ಸಾವಿರಾರು ಮಂದಿಗೆ ತನ್ನ ಆಶ್ರಮದಲ್ಲಿ ಅನ್ನದಾನ ಮಾಡುತ್ತಿದ್ದರು. ಇವರ ಈ ಅತಿಥಿ ಸತ್ಕಾರ್ಯ ಇಡೀ ಪಟ್ಟಣಕ್ಕೆ ತಿಳಿದಿತ್ತು. ಆದುದರಿಂದ ಕೈಖ್ಬಾದ್ನ ಹನ್ನೆರಡು ಸಾವಿರ ಮಂತ್ರಿಗಳು, ನ್ಯಾಯಾಧೀಶರು, ಕೊತ್ವಾಲರು ಮತ್ತು ಸೈನ್ಯದ ಸರದಾರರು ತಮ್ಮ ಹಸುವಿನ ಬೇಗೆಯನ್ನು ತೀರಿಸಿಕೊಳ್ಳಲು ಸೈಯ್ಯದಿ ಮೌಲಾರವರ ಖ್ವಾನ್ಖಾಹಗೆ ಬಂದರು. ಸೈಯ್ಯದಿ ಮೌಲಾ, ಅವರಿಗೆ ಅನ್ನದಾನ ಮಾಡಲು ಪ್ರಾರಂಭಿಸಿದರು. ಹಲವಾರು ತಿಂಗಳು ಅವರು ಇವರೆಲ್ಲರಿಗೂ ಅನ್ನ ಮತ್ತು ಬಟ್ಟೆಗಳನ್ನೂ ಸಹ ಕೊಡುತ್ತಿದ್ದರು ಮತ್ತು ತಂಗಲು ಜಾಗವನ್ನೂ ಸಹ ಕೊಟ್ಟರು. ಈ ವಿಷಯ ಜಲಾಲುದ್ದೀನ್ ಖಿಲ್ಜಿಗೆ ತಿಳಿಯಿತು. ಸೈಯ್ಯದಿ ಪೀರ್ ಹನ್ನೆರಡು ಸಾವಿರ ಜನರೊಂದಿಗೆ ಸೇರಿ ನನ್ನ ವಿರುದ್ಧ ಎಲ್ಲಿ ಕ್ರಾಂತಿ ಎಬ್ಬಿಸಿಬಿಡುತ್ತಾರೋ ಎಂದು ಆತ ಭಯಭೀತನಾದ.
ಆದುದರಿಂದ ತನ್ನ ನಂಬಿಕಸ್ತ ಮಂತ್ರಿಗಳನ್ನು ಆತ ಸೈಯ್ಯದಿ ಮೌಲಾರವರ ಹತ್ತಿರ ಗೂಢಚರ್ಯಕ್ಕೆ ಕಳುಹಿಸಿದನು. ಅವರು ಅಲ್ಲಿಗೆ ಬಹಳ ವಿನಮ್ರತೆಯಿಂದ ಹೋಗಿ, ತಲೆಬಾಗಿ ಕಾಣಿಕೆಗಳನ್ನು ನೀಡಿದರು. ಸೈಯ್ಯದಿ ಮೌಲಾರವರ ಅನುಯಾಯಿಗಳು ಸಹ ಆಗಿಹೋದರು. ಹಗಲು-ರಾತ್ರಿ ಬರಲಾರಂಭಿಸಿದರು. ಅವರಿಗೆ ಅಲ್ಲಿ ಯಾವ ಸುಳಿವೂ ಸಿಗಲಿಲ್ಲ. ಆದ್ದರಿಂದ ತಾವೇ ಸ್ವತಃ ಒಂದಿನ ಕೈಖಾಬಾದ್ನ ಮಂತ್ರಿಗಳ ನ್ಯಾಯಾಧೀಶರ ಮತ್ತು ಮೌಲ್ವಿಗಳ ಜೊತೆ ಮಾತು ಮಾತಲ್ಲೇ ಹೇಳಲಾರಂಭಿಸಿದರು – ಸೈಯ್ಯದಿ ಮೌಲಾ ಮಹಾರಾಜರ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದಾರೆ. ಜಲಾಲುದ್ದೀನ್ ಬಹಳ ಅಂಜುಬುರುಕ, ನಿಶ್ಶಕ್ತ, ಮುದುಕ ಮತ್ತು ಜಿಪುಣನಾಗಿದ್ದಾನೆ ಮತ್ತು ಇವನ ಹತ್ತಿರ ಯಾವ ದೈವಮಾಯೆಯೂ ಇಲ್ಲ. ಅವನಿಂದ ರಾಜ್ಯಭಾರ ನಡೆಸಲು ಆಗುವುದಿಲ್ಲ. ಬನ್ನಿ ನಾವೆಲ್ಲರೂ ಸೇರಿ ಸೈಯ್ಯದಿ ಮೌಲಾರವರನ್ನು ಮಹಾರಾಜರನ್ನಾಗಿ ಮಾಡಿಕೊಳ್ಳೋಣ.
ಕೈಖ್ಬಾದ್ನ ಕಾಲದಲ್ಲಿ ಯಾರು ಯಾರು ಯಾವ ಹುದ್ದೆಯಲ್ಲಿದ್ದರೋ ಅದನ್ನೇ ಪುನಃ ಅವರು ದಕ್ಕಿಸಿಕೊಳ್ಳಲಿ. ಈ ಮಾತುಗಳಲ್ಲಿ ಆ ಮಂತ್ರಿಗಳಿಗೆ, ನ್ಯಾಯಾಧೀಶರುಗಳಿಗೆ, ಮತ್ತು ಮೌಲ್ವಿಗಳಿಗೆ ಬಹಳ ಅಭಿರುಚಿ ಕಂಡಿತು. ಅವರೆಲ್ಲರೂ ಸಹ ಇದಕ್ಕೆ ಒಪ್ಪಿಕೊಂಡರು. ಅವರಲ್ಲಿ ಕೆಲವು ವ್ಯಕ್ತಿಗಳನ್ನು ಆರಿಸಿ ಜಲಾಲುದ್ದೀನನ ಗೂಢಾಚಾರರೊಂದಿಗೆ ಸೈಯ್ಯದಿ ಮೌಲಾರವರ ಸನ್ನಿಧಿಗೆ ಹೋಗಿ ಈ ವಿಷಯವನ್ನು ತಿಳಿಸಿದರು. ನನಗೆ ರಾಜನ ಪಟ್ಟ ಬೇಕಾಗಿಲ್ಲ. ರಾಜ್ಯಭಾರ ಏನೆಂಬುದು ನಾನು ಬಹಳ ಚೆನ್ನಾಗಿ ಬಲ್ಲೆನು. ನೀವು ನಿರ್ಗತಿಕರೆಂದು ತಿಳಿದು ಆಶ್ರಯ ಕೊಟ್ಟೆ, ಊಟ ಕೊಟ್ಟೆ ಮತ್ತು ಬಟ್ಟೆ ಕೊಟ್ಟೆ. ಏನಾದರೂ ನೀವು ಈ ರೀತಿಯ ಕುಚೇಷ್ಟೆ ಮಾಡಿದರೆ ನಿಮ್ಮನ್ನು ಖ್ವಾನ್ಖಾಹದಿಂದ ಹೊರದೂಡುತ್ತೇನೆ ಎಂದು ಸೈಯ್ಯದಿ ಮೌಲಾರವರು ಎಚ್ಚರಿಕೆ ನೀಡಿದರು.
ಇದನ್ನು ಕೇಳಿ ಅವರೆಲ್ಲರೂ ಅಲ್ಲಿಂದ ತಮ್ಮ ಸ್ಥಾನಗಳಿಗೆ ಮರಳಿ ಅಲ್ಲಿ ಚರ್ಚೆ ಮಾಡತೊಡಗಿದರು. ಈ ಫಕೀರನಂತೂ ಬುದ್ಧಿವಂತನಿಲ್ಲ, ನಾವು ಮಹಾರಾಜನನ್ನಾಗಿ ಮಾಡಿಕೊಳ್ಳೋಣ, ಈತನಿಗೂ ಮನಸ್ಸಲ್ಲಿ ಮಹಾರಾಜನಾಗಬೇಕೆಂಬ ಆಸೆಯಿದೆ ಆದರೂ ಹೊರಗಡೆ ಮಾತ್ರಾ ಆಗುವುದಿಲ್ಲವೆಂದು ವಿರೋಧ ವ್ಯಕ್ತಪಡಿಸುತ್ತಿದ್ದಾನೆ ಅಷ್ಟೆ. ನಾಳೆ ರಾತ್ರಿ ನೀವೆಲ್ಲಾ ಇಲ್ಲಿಗೆ ಬನ್ನಿ, ಎಲ್ಲರೂ ಸೇರಿ ಚರ್ಚೆ ಮಾಡೋಣ. ಒಂದು ರಾತ್ರಿ ಕೋಟೆಯನ್ನು ಹತ್ತಿ ಜಲಾಲುದ್ದೀನ್ ಖಿಲ್ಜಿಯ ಕೊಲೆ ಮಾಡಿ, ಸೈಯ್ಯದಿ ಮೌಲಾರವರನ್ನು ಸಿಂಹಾಸನದ ಮೇಲೆ ಕೂರಿಸೋಣ ಎಂದರು.
ಜಲಾಲುದ್ದೀನ್ನ ಗೂಢಾಚಾರರು ಚರ್ಚೆಯಲ್ಲಿ ನಿಗದಿತವಾದ ಸರಿಯಾದ ಸಮಯಕ್ಕೆ ಸೈಯ್ಯದಿ ಮೌಲಾ ಆಶ್ರಮಕ್ಕೆ ಬಂದರು. ಜಲಾಲುದ್ದೀನ್ ಮಗ ಅರ್ಕಲಿಖಾನ್ ಸಹ ವೇಷಧಾರಿಯಾಗಿ ಬಂದು ಸಭೆಯಲ್ಲಿ ಪಾಲ್ಗೊಂಡ. ಅಲ್ಲಿ ಕ್ರಾಂತಿ ಮತ್ತು ಕಗ್ಗೊಲೆಯ ಸಂಪೂರ್ಣ ನಕಾಶೆ ತಯಾರಾಗಿತ್ತು. ಆ ಸಮಯದಲ್ಲಿ ಸೈಯ್ಯದಿಮೌಲಾರವರು ಅಲ್ಲಿ ಹಾಜರಿರಲಿಲ್ಲ. ಆದರೆ ಯಾವುದೋ ಕೆಲಸದ ಸಲುವಾಗಿ ಆ ಮನೆಯ ಕಡೆ ಬಂದರು. ಎಲ್ಲರೂ ಕುಳಿತಿರುವುದನ್ನು ನೋಡಿ ನಿಂತರು! ಸ್ವಾಗತ ವಾರ್ತೆಯಾಗಿ “ನಿಮ್ಮ ಬರವು ಶುಭವಾಗಲಿ ಮತ್ತು ನಿಮ್ಮ ಆಸೆಗಳು ನೆರವೇರಲಿ” ಎಂದು ಹೇಳಿ ಅವರು ತನ್ನ ಕೋಣೆಯ ಕಡೆಗೆ ಹೊರಟುಹೋದರು. ಸೈಯ್ಯದಿ ಮೌಲಾರವರ ಬಾಯಿಂದ ಈ ಶಬ್ದಗಳನ್ನು ಕೇಳಿ ಜಲಾಲುದ್ದೀನನ ಮಗ ಅರ್ಕಲಿಖಾನನಿಗೆ ಸೈಯ್ಯದಿ ಮೌಲಾ ಈ ಷಡ್ಯಂತ್ರದಲ್ಲಿ ಶಾಮೀಲಾಗಿದ್ದಾರೆ ಎಂದು ನಂಬಿಕೆಯಾಗತೊಡಗಿತು.
ಆದುದರಿಂದಲೇ ಅವರು ಈ ರೀತಿಯ ಪ್ರಾರ್ಥನಾ ಶಬ್ದಗಳನ್ನು ಹೇಳಿದ್ದಾರೆ ಎಂದು ಖಚಿತವಾಗತೊಡಗಿತು. ಸಭೆ ಮುಕ್ತಾಯಗೊಂಡಿತು. ಕ್ರಾಂತಿಯ ದಿನ ನಿಗದಿಪಡಿಸಲು ನಾಳೆ ಇದೇ ಜಾಗದಲ್ಲಿ ಎಲ್ಲರೂ ಪುನಃ ಸೇರಬೇಕೆಂದು ತೀರ್ಮಾನಿಸಲಾಯಿತು. ಈ ಎಲ್ಲಾ ವಿಷಯವನ್ನು ಜಲಾಲುದ್ದೀನ್ ಗೂಢಚಾರರು, ಮಂತ್ರಿಗಳು ಮತ್ತು ಆತನ ಮಗ ಅರ್ಕಲಿಖಾನ್ ಜಲಾಲುದ್ದೀನ್ನಿಗೆ ಹೇಳಿದರು. ಆಗ ಜಲಾಲುದ್ದೀನ್ ಅವರೆಲ್ಲರನ್ನೂ ಸೆರೆ ಹಿಡಿಯಲು ನಿಗದಿತ ವೇಳೆಗೆ ಒಂದು ದೊಡ್ಡ ಸೈನ್ಯವನ್ನು ಕಳುಹಿಸಿದರು. ಅವರು ಸೇರಿರುವ ಜಾಗದಲ್ಲಿ ಸೇನೆ ಧಾವಿಸಿ ಎಲ್ಲರನ್ನು ಬಂಧಿಸಿದರು. ಆದರೆ ಸೈಯ್ಯದಿ ಮೌಲಾ ಆ ಗುಂಪಿನಲ್ಲಿರಲಿಲ್ಲ. ತಮ್ಮ ಕೋಣೆಯಲ್ಲಿ ವಾಸವಾಗಿದ್ದರು.
ಆದರೆ ಅರ್ಕಲಿಖಾನ್ ಇವರನ್ನು ಸಹ ಸೆರೆ ಹಿಡಿದ. ಇಡೀ ರಾತ್ರಿ ಇವರನ್ನೆಲ್ಲಾ ಬಂದೀಖಾನೆಯಲ್ಲಿ ಕೂಡಿಡಲಾಯಿತು. ಬೆಳಿಗ್ಗೆ ದರ್ಬಾರಿನಲ್ಲಿ ಹಾಜರು ಪಡಿಸಲಾಯಿತು. ಮಹಾರಾಜ ಎತ್ತರದ ಜಾಗದಲ್ಲಿ ಕುಳಿತುಕೊಂಡನು, ಅವನ ಹಿಂದೆ ಯುವರಾಜ ಅರ್ಕಲಿಖಾನ್, ಮಂತ್ರಿಗಳು ಮತ್ತು ಸೈನ್ಯದ ಸರದಾರರು ನಿಂತಿದ್ದರು. ಸೈಯ್ಯದಿ ಮೌಲಾ, ನ್ಯಾಯಾಧೀಶರು ಮತ್ತು ಮಂತ್ರಿಗಳಿಗೆ ಬೇಡಿಗಳನ್ನು ತೊಡಿಸಿ ಮಹಾರಾಜನ ಮುಂದೆ ಹಾಜರುಪಡಿಸಲಾಯಿತು. ಮಹಾರಾಜ ಜಲಾಲುದ್ದೀನ್ ಸೈಯ್ಯದಿ ಮೌಲಾರೊಂದಿಗೆ ಸಂಭಾಷಿತನಾದ – “ನಿನ್ನ ಜೊತೆ ನಾನು ಏನು ತಪ್ಪು ಮಾಡಿದ್ದೆ, ಅದಕ್ಕಾಗಿ ನೀನು ನನ್ನನ್ನು ಕೊಲೆಗೈಯುವ ಷಡ್ಯಂತ್ರವನ್ನು ರಚಿಸಿದೆ?”
“ನಾನು ನಿರಪರಾಧಿ. ಈ ಷಡ್ಯಂತ್ರದಲ್ಲಿ ನನ್ನ ಯಾವ ಕೈವಾಡವೂ ಇಲ್ಲ” ಎಂದು ಸೈಯ್ಯದಿ ಮೌಲಾ ಉತ್ತರಿಸಿದರು.
“ಹಾಗಾದರೆ ಮೈದಾನದಲ್ಲಿ ಬೆಂಕಿ ಹಾಕಿಸಿ, ಈತ ಸತ್ಯವಾದಿಯಾಗಿದ್ದರೆ ಆ ಬೆಂಕಿಯಲ್ಲಿ ಧುಮುಕಲಿ” ಎಂದು ಮಹಾರಾಜ ಹೇಳಿದ.
“ನಾನು ಇದಕ್ಕೆ ಸಿದ್ಧನಾಗಿದ್ದೇನೆ” ಎಂದು ಸೈಯದಿ ಮೌಲಾ ಒಪ್ಪಿಕೊಂಡರು. “ಬೆಂಕಿಯ ಗುಣ ಸುಡುವುದು. ಅದು ಅಪರಾಧಿಗಳನ್ನೂ ಸುಡುತ್ತದೆ, ನಿರಪರಾಧಿಗಳನ್ನೂ ಸುಡುತ್ತದೆ. ಬೆಂಕಿಯಲ್ಲಿ ಹಾಕುವ ತೀರ್ಮಾನ ಶರಿಅತ್ನ (ಮುಸ್ಲಿಂ ಕಾನೂನು) ವಿರೋಧವಾಗಿದೆ” ಎಂದು ಮಹಾರಾಜನ ಆಸ್ಥಾನದ ನ್ಯಾಯಾಧೀಶರು ಹೇಳಿದರು. ಈ ಸಮಯ ಬಂಧಿತರ ಹಿಂದೆ ಜಂಗಿ ಆನೆಗಳ ಒಂದು ದಂಡು ನಿಂತಿತ್ತು. ತನ್ನ ಮುಫ್ತಿಯರ ಮಾತು ಕೇಳಿ ಜಲಾಲುದ್ದೀನ್ ಚಿಂತೆಗೀಡಾಗಿ ಯಾವ ತೀರ್ಪು ತೆಗೆದುಕೊಳ್ಳಬೇಕೆಂದು ಯೋಚಿಸಲಾರಂಭಿಸಿದ. ಸೈಯ್ಯದಿ ಮೌಲಾ ಬೆಂಕಿಯಲ್ಲಿ ಬೀಳಲು ಸಿದ್ಧನಾಗಿದ್ದಾನೆ ಅಂದರೆ ಆತ ನಿರಪರಾಧಿಯಾಗಿರಬಹುದು.
ಈ ಮುದಿ ವಯಸ್ಸಿನಲ್ಲಿ ನಾನು ಒಬ್ಬ ಸೈಯದ್ ದರವೇಶಿಯ ಕೊಲೆ ಆಪಾದನೆಯನ್ನು ನನ್ನ ತಲೆ ಮೇಲೆ ಏಕೆ ತೆಗೆದುಕೊಳ್ಳಲಿ ಎಂದು ಎಡಗಡೆ ನಿಂತಿರುವ ಮಂತ್ರಿಯನ್ನು ಪಿಸುಮಾತಿನಲ್ಲಿ ಮಹಾರಾಜ ಹೇಳಿದನು. ಸುಲ್ತಾನನ ಇಚ್ಛೆಯನ್ನು ನೋಡಿ ಮಂತ್ರಿ ತಲೆ ಬಾಗಿ ಹೇಳಿದ- `ಸುಲ್ತಾನರು ಹೇಳಿದ್ದು ಸರಿ. ನನಗೂ ಸಹ ಸೈಯ್ಯದಿಮೌಲಾ ನಿರಪರಾಧಿ ಎನಿಸುತ್ತದೆ, ಇದನ್ನು ಕೇಳಿದಾಕ್ಷಣ ಅರ್ಕಲಿಖಾನನಿಗೆ ಸಂದೇಹವಾಯಿತು’ ಈಗ ಸೈಯ್ಯದಿಮೌಲಾ ಮತ್ತು ಅವನ ಅನುಯಾಯಿಗಳಿಗೆ ಮಹಾರಾಜ ಬಿಟ್ಟುಬಿಡುತ್ತಾನೆ, ದೊಡ್ಡ ಗಲಾಟೆ ಆಗಬಹುದು. ಮಹಾರಾಜ ನಿಶಕ್ತನಾಗಿದ್ದಾನೆ. ನಾನು ಸ್ವvಃ ನನ್ನ ಕಿವಿಗಳಿಂದ ಕೇಳಿಸಿಕೊಂಡಿದ್ದೇನೆ ಮತ್ತು ಕಣ್ಣಾರೆ ಎಲ್ಲವನ್ನೂ ನೋಡಿದ್ದೇನೆ.
ಆದುದರಿಂದ ಆತ ಮಹಾರಾಜ ಮತ್ತು ಮಂತ್ರಿಯ ಹಿಂದೆ ನಿಂತುಕೊಂಡೇ ತನ್ನ ಕೈಯಿಂದ ಆನೆಗಳತ್ತ ಸನ್ನೆ ಮಾಡಿದ. ಮಹಾರಾಜ ಮಂತ್ರಿ ಮಾತನಾಡಿದ್ದನ್ನು ಆನೆ ಸವಾರರು ವೀಕ್ಷಿಸುತ್ತಿದ್ದರು. ಮಹಾರಾಜನ ಅಪ್ಪಣೆ ಪಡೆದು ಯುವರಾಜ ನಮಗೆ ಅಪ್ಪಣೆ ಮಾಡಿರಬಹುದು ಎಂದು ಊಹಿಸಿ ತಮ್ಮ ಆನೆಗಳನ್ನು ಕೈದಿಗಳ ಮೇಲೆ ಬಿಟ್ಟರು. ಕೆಲಕಾಲದಲ್ಲೇ ಎಲ್ಲಾ ಕೈದಿಗಳ ನಿರ್ನಾಮವಾಯಿತು. ಒಂದು ಆನೆ ಸೈಯ್ಯದಿ ಮೌಲಾರವರನ್ನು ಸೊಂಡಿಲಲ್ಲಿ ಹಿಡಿದು ಬಿಸಾಡಿತು. ಅವರ ಕಾಲ ಮೇಲೆ ಒಂದು ಕಾಲನ್ನಿಟ್ಟು ಇನ್ನೊಂದು ಕಾಲನ್ನು ಸೊಂಡಿಲಿನಿಂದ ಎಳೆದು ಸೈಯ್ಯದಿ ಮೌಲಾರನ್ನು ಸೀಳಿತು. ಹೀಗಾದಾಕ್ಷಣ ಎಲ್ಲಾ ಕಡೆ ಕತ್ತಲು ಆವರಿಸಿತು. ಹಗಲಿನ ವೇಳೆ ರಾತ್ರಿಯಾಯಿತು. ಮತ್ತು ಬಹಳ ಜೋರಾಗಿ ಬಿರುಗಾಳಿ ಬೀಸಿತು. ದರ್ಬಾರಿನ ಎಲ್ಲಾ ಖೀಮೆಗಳು(ಪಡಾವು) ಹಾರಿಬಿಟ್ಟವು.
ಮಹಾರಾಜ, ಯುವರಾಜ ಮತ್ತು ಮಂತ್ರಿಗಳು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಅರಮನೆಯ ಒಳಗೆ ಓಡಿಹೋದರು, ಈ ಬಿರುಗಾಳಿ ಇಡೀ ಪಟ್ಟಣವನ್ನು ತಿತ್ತರ ಬಿತ್ತರ ಮಾಡಿತು. ಇದಾದ ಒಂದು ವರ್ಷದವರೆಗೂ ಜಲಾಲುದ್ದೀನ್ ನಿದ್ದೆಯಿಂದ ಕಿರುಚಿಕೊಂಡು ಏಳುತ್ತಿದ್ದ ಮತ್ತು ತನ್ನನ್ನು ಸೈಯ್ಯದಿ ಮೌಲಾ ಹೊಡೆಯಲು ಬಂದಿದ್ದಾನೆ ಎಂದು ಕೂಗಾಡಿ ನಿಂತುಕೊಳ್ಳುತ್ತಿದ್ದ. ಕೆಲವೊಮ್ಮೆ ನಿದ್ದೆಯಿಂದ ಪಲ್ಲಂಗದಿಂದ ಕೆಳಗೆ ಬಿದ್ದುಹೋಗುತ್ತಿದ್ದ. ಇದೇ ಅವಸ್ಥೆಯಲ್ಲಿ ಆತ ತನ್ನ ಅಣ್ಣನ ಮಗ ಅಲಾವುದ್ದೀನ್ ಖಿಲ್ಜಿಯ ಹತ್ತಿರ ಹೋದ. ಆತ ಕಡಾಮಾನಕಪುರದ ಒಡೆಯನಾಗಿದ್ದ. ಅಲ್ಲಿ ಆತನ ಅಪ್ಪಣೆಯ ಮೇರೆಗೆ ಜಲಾಲುದ್ದೀನನ ತಲೆ ಕಡಿಯಲಾಯಿತು ಮತ್ತು ಶರೀರವನ್ನು ನದಿಯಲ್ಲಿ ಬಿಸಾಡಲಾಯಿತು.
ಅಮೀರ್ ಖುಸ್ರೂ(ರ)ರವರ ಬಾಯಿಯಿಂದ ಈ ಮಾತುಗಳನ್ನು ಕೇಳಿ ದಿಗ್ಭ್ರಮೆಯಿಂದ ನಾನು ಅವರ ಮುಖ ನೋಡತೊಡಗಿದೆ. ಅಮೀರ್ ಖುಸ್ರೂ(ರ) ಮುಖ ಹೊಳೆಯುತಿತ್ತು. ಅದನ್ನು ಬಿಟ್ಟು ಇಡೀ ಪ್ರಪಂಚವೇ ನನಗೆ ಕತ್ತಲೆನಿಸುತ್ತಿತ್ತು. ಅಮೀರ್ ಖುಸ್ರೋ(ರ) ಮುಖದಲ್ಲಿ ಮುಗುಳ್ನಗೆ ಬೀರುತಿತ್ತು. ಆದರೆ ನನಗೆ ಇಡೀ ಪ್ರಪಂಚವೇ ಅಳುತ್ತಾ ಇರುವುದು ಕಾಣಿಸುತ್ತಿತ್ತು. ಕೊನೆಗೆ ನನಗೆ ನನ್ನ ಶ್ರೀ ಕೃಷ್ಣನ ಗೀತೆಯ ನೆನಪು ಬಂತು. ಅಮೀರ್ ಖುಸ್ರೋ(ರ) ಮಾತುಗಳನ್ನು ಕೇಳಿ ಅವರು ಗೀತೆಯನ್ನು ಹೇಳುತ್ತಿದ್ದಾರೆ. ಮತ್ತು ಅಕ್ಷರಶಃ ಸರಿಯಾಗಿ ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡೆ. ನಂತರ ಗಾಬರಿಗೊಂಡು ಅಮೀರ್ ಖುಸ್ರೋ(ರ)ಗೆ ಹೇಳಿದೆ – ನಮ್ಮ ಗುರುಗಳ ಬಗ್ಗೆಯೂ ಶತ್ರುಗಳು ಅಲಾವುದ್ದೀನನಿಗೆ ಶಂಕಿತನನ್ನಾಗಿ ಮಾಡಲು ಪ್ರಯತ್ನಿಸಿದ್ದಾರಂತೆ ಎಂದು ನೆನ್ನೆ ಸಭೆಯಲ್ಲಿ ಕೇಳಲ್ಪಟ್ಟೆ. ಹಾಗಾದರೆ ಅಲಾವುದ್ದೀನ್ ನನ್ನ ಮನಮೋಹನ ಮತ್ತು ನನ್ನ ಪ್ರಭು ಸುಲ್ತಾನುಲ್ ಮಷಾಯಖ್ ಹಝರತ್ ಖ್ವಾಜಾ ನಿಜಾಮುದ್ದೀನ್ ಔಲಿಯಾ(ರ)ರವರ ಜೊತೆಯೂ ಅರ್ಕಲಿಖಾನ್ ಸೈಯದಿ ಮೌಲಾ ಜೊತೆ ಮಾಡಿದ ಹಾಗೆಯೇ ಮಾಡುತ್ತಾನೆಯೇ?
ಹಾಗೆ ಆಗುವುದಿಲ್ಲ ಎಂದು ಅಮೀರ್ ಖುಸ್ರೋ(ರ) ಉತ್ತರಿಸಿದರು. ಇಡೀ ಹಿಂದೂಸ್ಥಾನ ನನ್ನ ಗುರುಗಳ ಮುಷ್ಟಿಯಲ್ಲಿದೆ ಎಂದು ಅಲಾವುದ್ದೀನನಿಗೆ ತಿಳಿದಿದೆ. ಆತನ ಸಾಮ್ರಾಜ್ಯದ ಉಳಿವು ಅಳಿವು ನನ್ನ ಗುರುಗಳ ಬೆರಳುಗಳಲ್ಲಿದೆ. ಆದರೆ ಆತ ಮುಂದಾಲೋಚಕ ಮತ್ತು ಬುದ್ಧಿವಂತ ಮಹಾರಾಜ. ನನ್ನ ಗುರುಗಳ ಸಭೆಗಳಲ್ಲಿ ಆತನ ಗುಲಾಮರು ಯಾರೂ ಹಾಜರಾಗುವುದಿಲ್ಲ ಎಂದು ತನ್ನ ಗೂಢಚಾರರನ್ನು ಕಳುಹಿಸಿ ತಿಳಿದುಕೊಂಡಿದ್ದಾನೆ. ಕಿಡಿಗೇಡಿಗಳಂತಹ ವ್ಯಕ್ತಿಗೆ ನನ್ನ ಗುರುಗಳು ಬಾಯಿಕೊಟ್ಟು ಸಹ ಮಾತನಾಡುವುದಿಲ್ಲ. ಸಭೆಯಲ್ಲಿ ನೆನ್ನೆ ನೀವು ಕೇಳಿದ್ದೂ ಸಹ ಅಲಾವುದ್ದೀನನ ಒಂದು ಮುಂಜಾಗೃತ ಕ್ರಮವಾಗಿತ್ತು, ವಿರೋಧಿಗಳು ನನ್ನ ಗುರುಗಳ ಬಗ್ಗೆ ಮಹಾರಾಜನ ಹತ್ತಿರ ಏನು ಪಿಸುಗೂಡಿದ್ದಾರೊ ಅದೆಲ್ಲಾ ಕತ್ತಲಿನಂತೆ ಸೂರ್ಯನ ಬೆಳಕಿನಿಂದ ದೂರವಾಗಿಹೋಗುತ್ತೆ, ಇದನ್ನೂ ನೀವು ಬಹಳ ಬೇಗ ಕೇಳುವಿರಿ.
— ಜಬಿವುಲ್ಲಾ ಖಾನ್, ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.