(www.vknews.in) ; ದಿನಾಂಕ: 12-01-2024ನೇ ಶುಕ್ರವಾರದಂದು ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್ನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾರಿಗೆ ಸಂಚಾರ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಜನರ ಮತ್ತು ಜನ ಪ್ರತಿನಿಧಿಗಳಿಂದ ಪ್ರಶಂಸಿಸಲ್ಪಟ್ಟ ಉತ್ಸಾಹಿ ಗೃಹರಕ್ಷಕರಾದ ಮಂಗಳೂರು ಘಟಕದ ಶ್ರೀ ರಾಜೇಶ್ ಗಟ್ಟಿ ಮತ್ತು ಗೃಹರಕ್ಷಕಿ ಬಬಿತಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ಅವರು ಹೂಹಣ್ಣು, ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದರು.
ಶ್ರೀ ರಾಜೇಶ್ ಗಟ್ಟಿಯವರು ದಿನಾಂಕ:16-05-2007 ರಿಂದ ಮಂಗಳೂರು ಘಟಕದ ಗೃಹರಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೊಲೀಸ್ ಠಾಣೆ, ಇತರ ಇಲಾಖೆಗಳಲ್ಲಿ, ಚುನಾವಣಾ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಗೃಹರಕ್ಷಕಿ ಬಬಿತಾ ಅವರು ದಿನಾಂಕ: 23-08-2017 ರಿಂದ ಮಂಗಳೂರು ಘಟಕದ ಗೃಹರಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೊಲೀಸ್ ಠಾಣೆ, ಇತರ ಇಲಾಖೆಗಳಲ್ಲಿ, ಚುನಾವಣಾ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ.
ಈ ಸಂದರ್ಭ ಸಮಾದೇಷ್ಟರಾದ ಡಾ|| ಚೂಂತಾರು ಅವರು ಸನ್ಮಾನಿತ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಹುಮ್ಮಸ್ಸಿನಿಂದ ಇತರ ಗೃಹರಕ್ಷಕರಿಗೆ ಮಾದರಿಯಾಗುವಂತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಂತಹ ಗೃಹರಕ್ಷಕರು ಇರುವುದು ನಮ್ಮ ಗೃಹರಕ್ಷಕದಳಕ್ಕೆ ಹೆಮ್ಮೆಯ ವಿಚಾರ ಎಂದರು. ಗೃಹರಕ್ಷಕರು ಕಾನೂನು ಸುವ್ಯವಸ್ಥೆ ಪಾಲನೆ, ಸಾರಿಗೆ ನಿಯಂತ್ರಣ, ದೇಶ ರಕ್ಷಣೆ, ಬಂಧಿಖಾನೆಯ ಕೈದಿಗಳ ಕಾವಲು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು, ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ ಎಂದು ಪ್ರಶಂಶಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಗೃಹರಕ್ಷಕರುಗಳನ್ನು ಗುರುತಿಸಿ ಸನ್ಮಾನಿಸಿ ಗೃಹರಕ್ಷಕರನ್ನು ಇನ್ನಷ್ಟು ಹುರಿದುಂಬಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ಗೋಪಿನಾಥ್ ಬಿ.ಎನ್., ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಎಲ್ಲಾ 15 ಘಟಕಾಧಿಕಾರಿಗಳು ಹಾಗೂ ಮಂಗಳೂರು ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.