ನವದೆಹಲಿ (www.vknews.in) | ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಬಂಧಿತನನ್ನು ಮುಜಮ್ಮಿಲ್ ಶರೀಫ್ ಎಂದು ಗುರುತಿಸಲಾಗಿದೆ. ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸ್ಥಳ ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡ ಶೋಧ ನಡೆಸಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಾರ್ಚ್ 3ರಂದು ಎನ್ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಸ್ಫೋಟದ ಪ್ರಮುಖ ಆರೋಪಿ ಮುಸವೀರ್ ಶಜೀಬ್ ಹುಸೇನ್ ನನ್ನು ತನಿಖಾ ತಂಡ ಈ ಹಿಂದೆ ಗುರುತಿಸಿತ್ತು. ಇತರ ಪ್ರಕರಣಗಳಲ್ಲಿ ಏಜೆನ್ಸಿ ತನಿಖೆ ನಡೆಸುತ್ತಿರುವ ಮತ್ತೊಬ್ಬ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ಥಾಹಾ ಅವರನ್ನೂ ಗುರುತಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಇಬ್ಬರಿಗಾಗಿ ಶೋಧ ನಡೆಯುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಎನ್ಐಎ ಪ್ರಕಾರ, ಈಗ ಬಂಧಿಸಲ್ಪಟ್ಟಿರುವ ಮುಜಮ್ಮಿಲ್ ಶರೀಫ್ ಈ ಇಬ್ಬರು ಆರೋಪಿಗಳಿಗೆ ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮೂವರು ಆರೋಪಿಗಳು ಮತ್ತು ಇತರ ಶಂಕಿತರ ನಿವಾಸಗಳು ಮತ್ತು ಅಂಗಡಿಗಳ ಮೇಲೆ ತನಿಖಾ ತಂಡ ಇಂದು ದಾಳಿ ನಡೆಸಿದೆ. ಶೋಧದ ಸಮಯದಲ್ಲಿ ವಿವಿಧ ಡಿಜಿಟಲ್ ಸಾಧನಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎನ್ಐಎ ತಿಳಿಸಿದೆ.
ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ಫೀಲ್ಡ್ನ ಐಟಿಪಿಎಲ್ ರಸ್ತೆಯಲ್ಲಿರುವ ಕೆಫೆಯಲ್ಲಿ ಐಇಡಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಹಲವಾರು ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.