(www.vknews.in) : ಒಂದು ದಿನ ಪವಿತ್ರ ಹರಮಿನಲ್ಲಿ ನಿದ್ರೆಯಲ್ಲಿರುವಾಗ ಈ ಹಂದಲ ಬಿನ್ ಸಫ್ವಾನ್ ಎಂಬವರಿಗೆ ಅಲ್ಲಾಹನ ಕಡೆಯಿಂದ “ನೀವು ಈಗಲೇ ಯಮನಿಗೆ ಹೋಗಿ ಆ ಕೆಟ್ಟ ಜನತೆಗೆ ಅವರು ಮಾಡುತ್ತಿರುವ ಆರಾಧನೆಯ ಬಗ್ಗೆ ಸತ್ಯ ಸಂಗತಿ ತಿಳಿಸಬೇಕು. ಅವರಿಗೆ ಬರುವ ಶಿಕ್ಷೆ ಮತ್ತು ಈ ಮೊದಲೇ ಅಲ್ಲಾಹನೊಂದಿಗೆ ಮಾಡಿದ ಕರಾರಿನ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕರಾರು ಉಲ್ಲಂಘನೆ ಮಾಡಿದರೆ ಈಗ ಅವರು ನೀರು ಕುಡಿಯುತ್ತಿರುವ ಕೆರೆಯ ನೀರನ್ನು ಮಳೆ ಬರಿಸದೆ ಬತ್ತಿಸಲಾಗುವುದು” ಎಂಬ ಕನಸು ಬಿತ್ತು.
ಮರುದಿನವೇ ಅವರು ಯಮನಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ತಲುಪಿ ಅವರಿಗೆ ಉಪದೇಶಿಸಿದರು. ಆದರೆ ಅವರು ಇವರನ್ನೇ ಕೊಲ್ಲಲು ರೆಡಿಯಾದರು. ಆಗ ಅಲ್ಲಾಹನು ಮಳೆ ಬರಿಸದೆ ಆ ಕೆರೆಯ ನೀರನ್ನು ಬತ್ತಿಸಿದನು. ಕುಡಿಯಲು ನೀರಿಲ್ಲದೆ ಕಂಗಾಲಾದಾಗ ಅವರು ಅವರ ವಿಗ್ರಹಗಳತ್ತ ಹೋಗಿ ದೂರು ಕೊಟ್ಟರು. ವಿಗ್ರಹಗಳು ಮೌನವಾಯಿತು. ಬಳಿಕ ಕೆಲವು ದಿನಗಳಾಗುವಾಗ ಮೇಲಿನಿಂದ ಭಯಾನಕ ಘರ್ಜನೆ ಕೇಳಲು ಆರಂಬಿಸಿತು. ಇದರ ಶಬ್ದಕ್ಕೆ ಅವರೆಲ್ಲರೂ ಸತ್ತರು.
ನಂತರದ ಉಳಿದ ಆ ಜನಾಂಗಕ್ಕೆ ಅಲ್ಲಾಹನು ಈ ಕನಸು ಕಂಡ ಹಝ್ರತ್ ಹಂದಲ ಬಿನ್ ಸಪ್ವಾನ್ ರನ್ನು ನುಬುವ್ಬತ್ ಕೊಟ್ಟು ಪ್ರವಾದಿಯನ್ನಾಗಿ ಮಾಡಿದನು. ಅವರು ಜನತೆಯನ್ನು ಸರಿದಾರಿಯತ್ತ ಕೊಂಡೊಯ್ಯುತ್ತಿರುವಾಗ ಇಬ್ಲೀಸನು ಇವರನ್ನು ಕೆಟ್ಟ ದಾರಿಯತ್ತ ಎಳೆದನು. ಗಂಡಸರು ತಮ್ಮ ಹೆಂಡತಿಯರನ್ನು ಇತರ ಗಂಡಸರಿಗೆ ಕೊಟ್ಟು ಅವರ ಹೆಂಡತಿಯರನ್ನು ಇವರು ಪಡೆದು ಪರಸ್ಪರ ಲೈಂಗಿಕ ಸಂಪರ್ಕದಲ್ಲಿ ತೊಡಗಲು ಶುರುಮಾಡಿದರು. ಅಲ್ಲದೆ ತಮ್ಮ ಪತ್ನಿಯಂದಿರೊಂದಿಗೆ ನೈಸರ್ಗಿಕ ಅಥವಾ ಅನುಮತಿಸಲ್ಪಟ್ಟ ರೂಪದಲ್ಲಿ ಲೈಂಗಿಕ ಸಂಪರ್ಕ ಮಾಡದೆ ಕೆಟ್ಟ ರೂಪದಲ್ಲಿ (Anal Intercourse) ಮಾಡತೊಡಗಿದರು. ಅದು ಕೊನೆಗೆ ಅವರಿಗೆ ಒಂದು ಪಿಡುಗಾಗಿ ಬಿಟ್ಟಿತು.
ಇದರಿಂದ ಬೇಸತ್ತಿದ್ದ ಆ ಹೆಂಗಸರಲ್ಲಿ ಒಬ್ಬಳ ಬಳಿ ಒಂದು ದಿನ ಇಬ್ಲೀಸನು ಸುಂದರಿಯಾದ ಒಂದು ಹೆಣ್ಣಿನ ರೂಪದಲ್ಲಿ ಬಂದು ಹೆಣ್ಣು ಮತ್ತು ಹೆಣ್ಣು ಪರಸ್ಪರ ಲೈಂಗಿಕ ಸಂಪರ್ಕ ಮಾಡುವುದನ್ನು ( Lesbianism) ಕಲಿಸಿ ಕೊಟ್ಟನು. ಬಳಿಕ ಹೆಂಗಸರು ಪರಸ್ಪರ ಅದರ ಬಗ್ಗೆ ಮಾತನಾಡಿ ಅದು ಸಾರ್ವತ್ರಿಕವಾಯಿತು. ಇದು ಜಗತ್ತಿನಲ್ಲಿ ಉಂಟಾದ ಮೊದಲ ಸ್ತೀ ಸಲಿಂಗ ಲೈಂಗಿಕ ಸಂಪರ್ಕವಾಗಿತ್ತು. ಅಷ್ಟೇ ಅಲ್ಲದೆ ಹೀಗೆ ಮಾಡುವುದು ಅವರಿಗೆ ಅಭಿಮಾನವೂ ಆಗಿತ್ತು.
ಈ ನೀಚ ಕೃತ್ಯ ಮಾಡಬಾರದೆಂದು ಆ ಕೆಟ್ಡ ಜನಾಂಗಕ್ಕೆ ಪ್ರವಾದಿಯವರು ಎಷ್ಟು ಉಪದೇಶ ಕೊಟ್ಟರೂ ಅವರದಕ್ಕೆ ಕಿವಿಗೊಡಲಿಲ್ಲ. ಬಳಿಕ ಅಲ್ಲಾಹನು ಅವರಿಗೆ ಮಳೆಯಿಲ್ಲದೆ ಕ್ಷಾಮ ಬರಿಸಿದನು. ಆದರೂ ಅವರಿಗೆ ಬುದ್ದಿ ಬರಲಿಲ್ಲ. ಕೊನೆಗೆ ಉಪದೇಶ ಕೊಡುತ್ತಿದ್ದ ಆ ಪ್ರವಾದಿಯರನ್ನು ಕೊಂದು ಸುಡಲು ಹಾಕಿದರು. ಆಗ ಆಕಾಶದಿಂದ ಹಝ್ರತ್ ಜಿಬ್ರೀಲರು ಬಂದು ಘೋರವಾಗಿ ಘರ್ಜಿಸಿದರು. ಸುಬ್ಹಾನಲ್ಲಾಹ್ ನಿಂತಿದ್ದವರು ನಿಂತಲ್ಲಿಯೂ, ಕುಳಿತಿದ್ದವರೂ ಕುಳಿತಲ್ಲಿಯೂ, ಮೊಲೆ ಉಣಿಸುವವರು ಮೊಲೆ ಉಣಿಸುವ ರೂಪದಲ್ಲಿ ಬಂಡೆ ಕಲ್ಲಾಗಿ ಮಾರ್ಪಟ್ಟರು. ಬಳಿಕ ಆ ಊರೇ ಕಪ್ಪು ಕಲ್ಲಿನಿಂದ ಮುಳುಗಿದ ಊರಾಯಿತು.
ಬೇರೊಂದು ಅಭಿಪ್ರಾಯ ಪ್ರಕಾರ ಒಂದು ಆಳವಾದ ಬಾವಿ ತೋಡಿದರು. ತೋಡುತ್ತಾ ಹೋದಂತೆ ಅದರ ತಳ ಭಾಗವನ್ನು ಬಹಳ ಚಿಕ್ಕದಾಗಿ ಮಾಡುತ್ತಾ ಹೋದರು. ಬಳಿಕ ಪ್ರವಾದಿ ಹಂದಲ ಬಿನ್ ಸಫ್ವಾನ್ ರನ್ನು ಅದಕ್ಕೆ ಬಿಸಾಕಿದರು. ಬಳಿಕ ಎಂದಿಗೂ ಮೇಲೆ ಬರಲು ಸಾಧ್ಯವಾಗದಂತೆ ಕೆಳಭಾಗವನ್ನು ಮುಚ್ಚುವ ರೂಪದಲ್ಲಿ ಒಂದು ಬಂಡೆಕಲ್ಲನ್ನು ಇಟ್ಟರು.
ಈ ವೇಳೆಯಲ್ಲಿ ಬಾವಿಯ ಒಳಗಿನಿಂದ ಪ್ರವಾದಿಯವರು ಅಲ್ಲಾಹನಲ್ಲಿ “ನನ್ನ ಅಲ್ಲಾಹ್… ನನ್ನ ಈಗಿನ ಈ ಕಷ್ಟ ಮತ್ತು ಬಲಹೀನತೆ ನೀನು ಕಾಣುತ್ತಿರುವಿ. ಆದ್ದರಿಂದ ತಡಮಾಡದೆ ಒಂದಾ ನನ್ನನ್ನು ಬಚಾವು ಮಾಡು ಇಲ್ಲವಾದರೆ ನನ್ನ ರೂಹನ್ನು ಹಿಡಿ. ಯಾವತ್ತೂ ಈ ಬೆಳಕಿಲ್ಲದ ಕಪ್ಪು ಇರುಳಿನಲ್ಲಿ ನನ್ನನ್ನು ಕೈಬಿಟ್ಟು ಹೋಗಬೇಡ” ಎಂದು ಅಳುತ್ತಾ ಹೇಳುವ ಆ ಅಸಹಾಯಕತೆಯ ಶಬ್ದ ಈ ಖದೀಮರಿಗೆ ಕೇಳುತ್ತಿತ್ತಂತೆ. ಆಗ ಅವರು “ಈಗ ನಾವು ನಮ್ಮ ವಿಗ್ರಹ ದೇವರ ಎದುರಲ್ಲಿ ಸಂಪೂರ್ಣವಾಗಿ ಸಕ್ಸೆಸ್ ಆಗಿದ್ದೇವೆ” ಎಂದು ಹೇಳಿ ಸಂತೋಷ ಪಡುತ್ತಿದ್ದರಂತೆ. ಆದರೆ ಅಲ್ಲಾಹನು ಅವರ ದುಆಕ್ಕೆ ಉತ್ತರ ಕೊಟ್ಟನು. ನಿಮಿಷದಲ್ಲೇ ಇಹಲೋಕ ತ್ಯಜಿಸಿದರು.
ಬಳಿಕ ಈ ಜನಾಂಗ ಅವರ ಒಂದು ಉತ್ಸವದ ದಿನ ಪಾನ ಮತ್ತರಾಗಿ ಬಹಳ ಗೌಜಿಯಲ್ಲಿ ಕುಣಿಯುತ್ತಿರುವಾಗ ಮೇಲಿನಿಂದಲೂ ಭೂಮಿಯ ಅಡಿಯಿಂದಲೂ ಬೆಂಕಿಯ ಜ್ವಾಲಾಮುಖಿಗಳು ಬಂದು ಅವರ ಮೇಲೆ ಬಿತ್ತು. ಇದರಿಂದ ಅವರ ದೇಹಗಳು ಸೀಸವನ್ನು ಬೆಂಕಿಗೆ ಹಾಕಿದರೆ ಕರಗಿ ಹೋಗುವಂತೆ ಕರಗಿ ಹೋಯಿತು.
ಈ ವಿಭಾಗವನ್ನು ಅಲ್ಲಾಹನು ಅವನ ಪವಿತ್ರ ಕುರ್ಆನಿನಲ್ಲಿ ಅಸ್ಹಾಬು ರ್ರಸ್ ಅಂದರೆ ಪ್ರವಾದಿಯನ್ನು ಬಾವಿಗೆ ಎಸೆದ ವರ್ಗ ಎಂಬ ನಾಮಕರಣ ಮಾಡಿ ಕರೆದಿದ್ದಾನೆ.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.