ಅರ್ದಂಬರ್ದ ಕೆಲಸಕ್ಕೆ ಎಸ್ಡಿಎಂಸಿ ಅನುಮತಿ ಇಲ್ಲದೆ ಮುಖ್ಯೋಪಾಧ್ಯಾಯ ರಿಂದ ಸಂಪೂರ್ಣ ಕೆಲಸ ಆಗಿದೆ ಎನ್ನುವ ದೃಢ ಪತ್ರ..
(www.vknews. in) ; ಇತಿಹಾಸದ ಪುಟಗಳಲ್ಲಿ ದಾಖಲು ಆಗಿರುವ ಹಾಗೂ ಸುಮಾರು 186 ವರ್ಷ ಪೂರೈಸಿದ ಉಪ್ಪಿನಂಗಡಿಯ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಕಟ್ಟಿ ಕೊಟ್ಟಿದ್ದ ಸುಸಜ್ಜಿತ ಕೊಠಡಿಯು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭ ಕೆಡವಲಾಗಿದ್ದು, ಅದಕ್ಕೆ ಪರಿಹಾರವಾಗಿ ದೊರೆತಂತಹ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಹಣದಲ್ಲಿ ಜಿಲ್ಲಾ ಪಂಚಾಯತ್ ನ ಮೇಲ್ನೋಟದಲ್ಲಿ ನಿರ್ಮಾಣವಾದ 15 ಕೊಠಡಿ ಹಾಗೂ ಮೇಲ್ಛಾವಣಿಯ ಕಟ್ಟಡದಲ್ಲಿ ಮಳೆಯ ಸಂದರ್ಭ ಮಕ್ಕಳಿಗೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯು ನಿರ್ಮಾಣವಾಗಿದೆ.
ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದ್ದರೂ ಸಹ ಗುತ್ತಿಗೆದಾರರು 10% ಕೆಲಸವನ್ನು ಮಾಡದೆ ಬಿಟ್ಟಿದ್ದು, ಮುಖ್ಯೋಪಾಧ್ಯಾಯರು ಎಸ್ಡಿಎಂಸಿ ಯವರು ಮಾಡಿದ ನಿರ್ಣಯಕ್ಕೆ ವಿರುದ್ಧವಾಗಿ ಕೆಲಸ ಸಂಪೂರ್ಣ ಆಗಿದೆ ಎನ್ನುವ ಪತ್ರವನ್ನು ಕೊಟ್ಟಿರುವ ಕಾರಣ ಜಿಲ್ಲಾ ಪಂಚಾಯತ್ ಅವರಿಗೆ ಕೊಡಬೇಕಾಗಿರುವ ಪೂರ್ಣ ಹಣವನ್ನು ಸಂದಾಯ ಮಾಡಿರುತ್ತದೆ.
ಒಂದು ಕಟ್ಟಡ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ, ವಿದ್ಯುದೀಕರಣದ ವ್ಯವಸ್ಥೆಗಳನ್ನು ಮಾಡಿ ಕೊಡದೆ ಎಲ್ಲಾ ಕೆಲಸ ಪೂರ್ಣ ಗೊಂಡಿವೆ ಎಂದು ಒಪ್ಪಿಗೆ ಪತ್ರವನ್ನು ಕೊಟ್ಟಿರುವ ಮುಖ್ಯೋಪಾಧ್ಯಾಯರನ್ನು ತನಿಖೆಗೆ ಒಳಪಡಿಸಬೇಕು ಎನ್ನುವ ಆಗ್ರಹವನ್ನು ಈಗ ಸಾರ್ವಜನಿಕರು ವ್ಯಕ್ತಪಡಿಸುತ್ತಾ ಇದ್ದಾರೆ.
ಮಕ್ಕಳಿಗಾಗಿ ಸುಸಜ್ಜಿತವಾಗಿ ಇರಬೇಕಾದಂತಹ ಕಟ್ಟಡವು ಮೊದಲ ಮಳೆಗೆ ನೀರಿನಿಂದ ಜಲಾವೃತ ಆಗಿರುವುದು ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿರುವುದು ಸುಳ್ಳಲ್ಲ.
ಕೆಲಸ ಪೂರ್ಣ ಆಗದೆ ಇರುವ ಬಗ್ಗೆ ಎಸ್ಡಿಎಂಸಿ ಹಾಗೂ ಸ್ಥಳೀಯ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಸಭೆಯನ್ನು ನಡೆಸಿದಾಗ ಅಪೂರ್ಣ ಕೆಲಸದ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯ ಗಮನಕ್ಕೆ ತರಲು ಹಾಗೂ ಗುತ್ತಿಗೆದಾರರ ಕನಿಷ್ಠ 10% ಹಣವನ್ನು ತಡೆಹಿಡಿಯಲು ನಿರ್ಣಯವನ್ನು ಕೈ ಗೊಂಡರೂ ಮುಖ್ಯೋಪಾಧ್ಯಾಯರು ಅದಕ್ಕೆ ಸಂಬಂಧಿಸಿ ಯಾವುದೇ ಕ್ರಮವನ್ನು ಕೈ ಗೊಳ್ಳದೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಶಂಕೆ ಈಗ ಎಲ್ಲರ ಮನದಲ್ಲಿ ಮೂಡಲು ಶುರುವಾಗಿದ್ದು, ಶಿಕ್ಷಣ ಇಲಾಖೆಯು ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ ಕ್ರಮವನ್ನು ಜರಗಿಸಲು ಸಾರ್ವಜನಿಕರು ಆಗ್ರಹಿಸಿದ್ದು ತಪ್ಪಿತಸ್ಥರೆಲ್ಲರಿಗೂ ಕಾನೂನಿನ ಅಡಿಯಲ್ಲಿ ಕ್ರಮವನ್ನು ಜರಗಿಸಬೇಕಿದೆ. ಹಾಗೂ ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.