(www.vknews.in) : ಈ ಜಗತ್ತನ್ನು ಉತ್ತರದಿಂದ ದಕ್ಷಿಣದ ತನಕ ಮತ್ತು ಪೂರ್ವದಿಂದ ಪಶ್ಚಿಮದ ತನಕ ಸಂಪೂರ್ಣವಾಗಿ ಆಡಳಿತ ಮಾಡಿದ ನಾಲ್ಕು ಚಕ್ರವರ್ತಿಗಳಲ್ಲಿ ಎರಡು ಮುಸ್ಲಿಂ ಮತ್ತು ಎರಡು ಅಮುಸ್ಲಿಮ್ ಚಕ್ರವರ್ತಿಗಳು ಇದ್ದರು. ಹಝ್ರತ್ ಸುಲೈಮಾನ್ (ಅ) ಮತ್ತು ಹಝ್ರತ್ ಝುಲ್ಖರ್ನೈನ್ (ಅಲೆಗ್ಸಾಂಡರ್) ಮುಸ್ಲಿಮರಾಗಿದ್ದರೆ ಬುಖ್ತ್ನಸ್ರ್ ಮತ್ತು ನಮ್ರೂದ್ ಅಮುಸ್ಲಿಮರಾಗಿದ್ದರು.
ಈ ಮೊದಲ ಅಧ್ಯಾಯದಲ್ಲಿ ಹೇಳಿದಂತೆ ಪ್ರವಾದಿಯೊಬ್ಬರನ್ನು ಕೊಂದ ಒಂದು ಜನಾಂಗವನ್ನು ಅಲ್ಲಾಹನು ಕಲ್ಲುಗಳನ್ನಾಗಿ ರೂಪ ಬದಲಾಯಿಸಿ ನಿರ್ಮೂಲನೆ ಮಾಡಿದ ಬಳಿಕ ಈ ಜಗತ್ತಿನಲ್ಲಿ ಬೇರೊಂದು ಜನಾಂಗ ಹೊರಬಂತು. ಪ್ರವಾದಿ ನೂಹ್ರವರ ಮಗ ಹಾಮ್ ರವರ ಸಂತಾನದಲ್ಲಿ ಹುಟ್ಟಿದ ಕೂಶ್ ಎಂಬವನು ಆ ಜನಾಂಗದ ಚಕ್ರವರ್ತಿಯಾದನು. ಈತನಿಗೆ ಎರಡು ಮಕ್ಕಳಿದ್ದರು. ಒಬ್ಬ ನ ಹೆಸರು ಕನ್ಆನ್. ಮತ್ತೊಬ್ಬ ಹಾಸ್. ತಂದೆ ಕೂಶ್ ಮರಣಹೊಂದಿದಾಗ ಅಧಿಕಾರವು ಹಾಸ್ ನಿಗೆ ಹೋಯಿತು. ಇತ್ತ ಎರಡನೇ ಮಗ ಬೇಟೆಯಾಡುವುದರಲ್ಲಿ ನಿಪುಣನಾದ ಕಾರಣ ಆತನು ಅಧಿಕಾರದ ಕಡೆ ವಾಲದೆ ಬೇಟೆಯಾಡುವುದರಲ್ಲಿ ತಲ್ಲಿನನಾದನು. ಅಲ್ಲದೆ ಆತನಿಗೆ ಅಲ್ಲಾಹನು ಬಹಳ ದೃಡಕಾಯ ಶರೀರ ಮತ್ತು ಆರೋಗ್ಯವನ್ನು ಕೂಡ ಕೊಟ್ಟಿದ್ದನು.
ಒಂದು ದಿನ ಈತ ಇರಾಕಿನ ಕಾಡಿನಲ್ಲಿ ಬೇಟೆಗೆ ಹೋದಾಗ ಸುಂದರಿಯಾದ ಮಹಿಳೆಯೊಬ್ಬಳು ಜಾನುವಾರುಗಳನ್ನು ಮೇಯಿಸುವುದನ್ನು ಕಂಡನು. ಆ ಮಹಿಳೆಯ ಅಸಾಮಾನ್ಯ ಸೌಂದರ್ಯ ನೋಡಿ ತಬ್ಬಿಬ್ಬಾದ ಆತ ಆಕೆಯನ್ನು ಹೇಗಾದರೂ ಮಾಡಿ ತನ್ನ ಬಲೆಯಲ್ಲಿ ಮಾಡಲು ನೋಡಿದನು. ಆದರೆ ಆಕೆ ಅದಕ್ಕೆ ಮರುಳಾಗಲಿಲ್ಲ. ಇದರಿಂದ ಕುಪಿತನಾದ ಆತ ಅವಳಲ್ಲಿ ಹೇಳಿದ. “ನಿನಗೆ ನಾನು ಯಾರು ಅಂತ ಗೊತ್ತಿದೆಯಾ? ನಾನು ಚಕ್ರವರ್ತಿ “ಕೂಶ್” ರವರ ಮಗ. ನೀನು ನನ್ನಲ್ಲಿ ಎದುರು ಮಾತನಾಡಿದರೆ ನಿನ್ನನ್ನು ಈಗಲೇ ಕಶಾಪು ಮಾಡುತ್ತೇನೆ” ಎಂದು. ಆಗ ಆಕೆ ಆತನನ್ನು ಗೇಲಿ ಮಾಡುತ್ತಾ ಹೇಳಿದಳು. “ಉಫ್… ನಿನ್ನಂತಹಾ ಬೇಟೆಯಾಡುವ ಅಲೆಮಾರಿಗಳು ಅರಸರ ಸಂತಾನವೇ? ನಿನಗೆ ಹೇಳಲು ನಾಚಿಕೆಯಾಗುವುದಿಲ್ಲವೇ”
ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿ ಮನೆಯಲ್ಲಿದ್ದ ಅವಳ ಪತಿ ಬಂದು ಈ ಕನ್ಆನನಲ್ಲಿ ಮಾತಿಗಿಳಿದಾಗ ಕನ್ಆನನು ತನ್ನ ಕೈಯಲ್ಲಿದ್ದ ಆಯುಧದಿಂದ ಆತನನ್ನು ಕೊಂದು ಬಿಟ್ಟನು. ಬಳಿಕ ಈತ ಅವಳನ್ನು ಮನೆಗೆ ಕರಕೊಂಡು ಹೋಗಿ ಲೈಂಗಿಕ ಸಂಪರ್ಕ ನಡೆಸಿದನು. ಅಧಿಕಾರದಲ್ಲಿದ್ದ ತನ್ನ ಸಹೋದರ ಹಾಸ್ ನನ್ನು ಕೂಡ ಕೊಂದು ಅಧಿಕಾರವನ್ನು ಕೂಡ ಪಡಕೊಂಡನು. ಈತನಿಗೆ ಮೊದಲೇ ಹಲವಾರು ಮದುವೆಗಳಾಗಿದ್ದರೂ ಈ ಹೆಣ್ಣು ಈತನಿಗೆ ಬಹಳ ಪ್ರೀತಿಯವಳು ಮತ್ತು ಹತ್ತಿರದವಳಾದಳು.
ಪತ್ನಿ ಗರ್ಭಿಣಿಯಾದಳು. ಈ ವೇಳೆಯಲ್ಲಿ ಪತಿ ಕನ್ಆನಿಗೆ ತಾನು ಒಬ್ಬನಾಗಿ ಜಗಳವಾಡಿ ಕೊನೆಗೆ ಪರಾಭವವಾಗುವ ಕನಸು ಆಗಾಗ್ಗೆ ಬೀಳುತ್ತಿತ್ತು. ಅಲ್ಲದೆ ಆತ ಅಂದರೆ ಕನಸಲ್ಲಿ ಕಾಣಲ್ಪಡುವ ವ್ಯಕ್ತಿ ಕನ್ಆನನಲ್ಲಿ “ನಾನೀಗ ಕತ್ತಲೆಯಲ್ಲಿದ್ದೇನೆ. ಹತ್ತಿರದಲ್ಲೇ ಬೆಳಕಿಗೆ ಬರಲಿದ್ದೇನೆ” ಎಂದು ಕೂಡ ಕನಸಿನಲ್ಲಿ ಹೇಳುತ್ತಿದ್ದನು. ಅಲ್ಲದೆ ಕನ್ಆನನ ಪತ್ನಿಗೂ ತನ್ನ ಹೊಟ್ಟೆಯಿಂದ ಈ ಮಗು “ನಾನು ಸಾಮಾನ್ಯ ಮನುಷ್ಯನಲ್ಲ. ನನ್ನಿಂದ ನಿಮ್ಮ ನಾಶವಾಗಲಿದೆ” ಎಂದು ಹೇಳುವ ಶಬ್ದ ಕೂಡ ಆಗಾಗ್ಗೆ ಕೇಳುತ್ತಿತ್ತು.
ಇದರಿಂದ ಗಾಬರಿಗೊಂಡ ಕನ್ಆನನು ಕೆಲವು ಜ್ಯೋತಿಷ್ಯರ ಬಳಿ ಹೋಗಿ ತನಗೆ ಮತ್ತು ತನ್ನ ಹೆಂಡತಿ ಶಲ್ಖಾಅ ಳಿಗೂ ಆದ ಅನುಭವಗಳನ್ನು ಹೇಳಿದನು. ಆಗ ಅವರೆಲ್ಲರೂ ” ಈ ಹತ್ತಿರದಲ್ಲೇ ಒಂದು ಮಗು ಹುಟ್ಟಲಿದೆ. ಅದರಿಂದ ನಿನ್ನ ನಾಶವಾಗಲಿದೆ” ಎಂದು ಭವಿಷ್ಯ ನುಡಿದಿದ್ದರು.
ಇದರಿಂದ ಕುಪಿತನಾದ ಆತ ಕೆಲವೊಮ್ಮೆ ಹೆಂಡತಿಯ ಹೊಟ್ಟೆಗೆ ತುಳಿದು ಗರ್ಭದಲ್ಲಿರುವ ಮಗುವನ್ನು ಮುಗಿಸಿ ಬಿಡಲು ತಯಾರಾಗುತ್ತಿದ್ದನು. ಆಗ ಅಗೋಚರ ವ್ಯಕ್ತಿಯಿಂದ “ನಿನಗೆ ನನ್ನನ್ನು ಕೊಲ್ಲಲು ಸಾದ್ಯವಿಲ್ಲ” ಎಂಬ ಕರೆ ಕೇಳುತ್ತಿತ್ತು.
ಪತ್ನಿ ಶಲ್ಖಾಅಳು ಗರ್ಭಕ್ಕೆ ಒಂಬತ್ತು ತಿಂಗಳು ಪೂರ್ತಿಯಾದಾಗ ಉದ್ದ ಮೂಗಿನ, ಓರೆ ಮತ್ತು ನೀಲಿ ಬಣ್ಣದ ಕಣ್ಣಿರುವ ತದ್ರೂಪಿಯಾಗಿರುವ ಒಂದು ಮಗುವಿಗೆ ಜನ್ಮ ನೀಡಿದಳು.
ಒಂದು ದಿನ ಒಂದು ಹಾವು ಅದರ ಹುಂಚದಿಂದ ಹೊರಬಂದು ಆ ಮಗುವಿನ ಮೂಗಿನೊಳಗೆ ಹೋಯಿತು. ಈ ಭಯಾನಕ ದೃಶ್ಯವನ್ನು ಕಂಡ ತಾಯಿ ಶಲ್ಖಾಅ್ ಸಂಗತಿಯನ್ನು ಪತಿ ಕನ್ಆನನಿಗೆ ತೀಳಿಸಿದಾಗ ಆತ ಅವಳಲ್ಲಿ ಹೇಳಿದ. “ಇನ್ನು ನೋಡುವುದು ಬೇಡ. ಅವನನ್ನು ಕೊಂದುಬಿಡು” ಎಂದು. ಆದರೆ ಆಕೆಗೆ ಹಾಗೆ ಮಾಡಲು ಮನಸ್ಸು ಬರಲಿಲ್ಲ. ಬಳಿಕ ಇಬ್ಬರೂ ಸೇರಿ ಮಗುವನ್ನು ಒಂದು ಕಾಡಿನಲ್ಲಿ ಬಿಟ್ಟು ಬರಲು ಹೋದಾಗ ಅಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಒಬ್ಬನು “ಮಗುವನ್ನು ನನಗೆ ಕೊಡಿ” ಎಂದು ಹೇಳಿ ಇವರಿಂದ ಪಡಕೊಂಡನು.
ಮನೆ ತಲುಪಿದಾಗ ಆತನ ಮನೆಯ ಸಾಕು ಮೃಗಗಳು ಈ ಮಗುವನ್ನು ಕಂಡು ಭಯದಿಂದ ಆಚೀಚೆ ಓಡಲು ಶುರುಮಾಡಿತು. ಗಾಬರಿಗೊಂಡ ಆತ ಈ ವಿವರವನ್ನು ತನ್ನ ಪತ್ನಿಗೆ ತಿಳಿಸಿದಾಗ ಆಕೆ “ಇಂತಹಾ ತದ್ರೂಪಿಯಾಗ ಲಕ್ಷಣಗೆಟ್ಟ ಮಗು ನಮಗೆ ಬೇಡ. ಈಗಲೇ ಕೊಂದು ಬಿಡುವ” ಎಂದು ಹೇಳಿದಳು. ಬಳಿಕ ಅವರಿಬ್ಬರೂ ಹತ್ತಿರದಲ್ಲಿ ಹರಿಯುತ್ತಿರುವ ಒಂದು ನದಿಗೆ ಹಾಕಿ ಮನೆಗೆ ಮರಳಿದರು. ಆದರೆ ಅಲ್ಲಿಯೂ ಮಗುವಿನ ಆಯುಷ್ಯ ಮುಗಿಯದ ಕಾರಣ ಮಗುವು ದಡ ತಲುಪಿತು. ಅಲ್ಲಿ ಅಲ್ಲಾಹನ ವಿಧಿಯಂತೆ ಯಾವಾಗಲೂ ಹುಲಿಯೊಂದು ಬಂದು ಮಗುವಿಗೆ ಹಾಲುಣಿಸಲು ಶುರುಮಾಡಿತು. ಈ ಅಸಾಧಾರಣ ದೃಶ್ಯವನ್ನು ಕಂಡ ಊರಿನ ಮಹಿಳೆಯೊಬ್ಬಳು ಈ ಸಂಗತಿಯನ್ನು ಊರಲ್ಲೆಲ್ಲಾ ಹೇಳುತ್ತಾ ಹೋದಳು. ನಿಮಿಷದಲ್ಲೇ ವಾರ್ತೆ ಕಾಡ್ಗಿಚ್ಚಿನಂತೆ ಹರಡಿತು. ಜನಸಾಗರವೇ ನದಿ ಕಿನಾರೆಗೆ ತಲುಪಿತು. ಎಲ್ಲರೂ ಒಗ್ಗೂಡಿ ಆ ಅಸಾಮಾನ್ಯ ರೂಪದ ಮಗುವನ್ನು ಕೊಂಡುಹೋಗಿ ಶುಶ್ರೂಷೆ ಮಾಡಿದರು. ಕಂದನಿಗೆ ನಮ್ರೂದ್ ಎಂದು ನಾಮಕರಣ ಕೂಡ ಮಾಡಿದರು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಹೆಸರಿನ ಗ್ರಂಥದಿಂದ.
ಹೃದಯ ವಿದ್ರಾಹಕ ಚರಿತ್ರೆಯೊಂದಿಗೆ ಲೇಖನವು ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.