(www.vknews.in) : ಕೇರಳ 2018ರ ಬಳಿಕ ಮತ್ತೊಂದು ಜಲದುರಂತಕ್ಕೆ ಸಾಕ್ಷಿಯಾಗಿದೆ. ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ವಯನಾಡ್ನಲ್ಲಿ ಮಂಗಳವಾರ, ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಚೆಲಿಯಾರ್ ನದಿಯ ಪಕ್ಕದಲ್ಲಿ ಇರುವ ಚೆಂಬರ ಮತ್ತು ವೆಲ್ಲಾರಿ ಎನ್ನುವ ಎರಡು ಗುಡ್ಡಗಳು ಕುಸಿತವಾಗಿದೆ. ಇದರಿಂದಾಗಿ ನದಿ ನೀರು ಮಣ್ಣು ಜೊತೆಗೆ ತಪ್ಪಲಿನಲ್ಲಿದ್ದ ಊರಿನ ಕಡೆಗೆ ಧಾವಿಸಿದಾಗ ನಡೆದದ್ದು ಮಹಾ ದುರಂತ. ಸುಮಾರು 18 ಕಿ. ಮೀ. ಅನಾಹುತ ಸಂಭವಿಸಿದೆ.
ನದಿಯಿಂದ ಹಲವು ಶವಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ಶವಗಳು ಕೊಚ್ಚಿ ಹೋಗಿರಬಹುದು ಎಂದು ಊಹಿಸಲಾಗಿದೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. 400ಕ್ಕೂ ಹೆಚ್ಚು ಮನೆಗಳ ಜೊತೆಗೆ ಹಲವಾರು ಮಂದಿ ಭೂ ಸಮಾಧಿಯಾಗಿದ್ದಾರೆ. ಈಗ ಅಲ್ಲಿ 10 ಮನೆಗಳು ಉಳಿದಿದೆ ಎಂಬ ಮಾಹಿತಿ ಇದೆ. ವಿದೇಶದಲ್ಲಿರುವ ವ್ಯಕ್ತಿಯೋರ್ವರು, ತಾನು ಮಡದಿ ಮಕ್ಕಳು ಸಹಿತ ಇಡೀ ಕುಟುಂಬದ ಹದಿನೇಳು ಮಂದಿಯನ್ನು ಕಳೆದುಕೊಂಡಿದ್ದೇನೆಂದು ಮಾಡುವ ಆಕ್ರಂದನ ಘಟನೆಯ ತೀವ್ರತೆಗೊಂದು ಸ್ಯಾಂಪಲ್. ಮಸೀದಿಯೊಂದರ ಮದ್ರಸಾ ಅಧ್ಯಾಪಕ, ಇತರ ಕಟ್ಟಡ, ಮನೆಗಳಲ್ಲಿದ್ದ ಮಕ್ಕಳು, ಮಹಿಳೆಯರು ಹೀಗೆ 250 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಸಾವಿನ ಸಂಖ್ಯೆ 200ರ ಗಡಿದಾಟಬಹುದು ಎಂದು ಶಂಕಿಸಲಾಗಿದೆ. ಸಿಕ್ಕುತ್ತಿರುವ ಹೆಣಗಳ ಗುರುತೇ ಸಿಗದಂತಾಗಿದೆ.
2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಭೂಕುಸಿತ, ಇತ್ತೀಚೆಗೆ ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತ, ಇದೀಗ ಕೇರಳದ ವಯನಾಡಿನಲ್ಲಿ ಆದ ಗುಡ್ಡ ಕುಸಿತ.. ಹೀಗೆ ದುರಂತಗಳು ಚರ್ಚಾಸ್ಪದವಾಗಿದೆ. ಮನುಷ್ಯರಿಂದಾಗಿಯೇ ಇಂತಹ ದುರಂತಗಳು ಸಂಭವಿಸುತ್ತಿವೆಯೇ ಎಂದು ಆಲೋಜಿಸಬೇಕಾದ ಅಗತ್ಯವೂ ಕಾಣುತ್ತಿದೆ.
ದೇಶದಲ್ಲಿ ಅತೀ ಹೆಚ್ಚು ಭೂಕುಸಿತವಾಗುವ ರಾಜ್ಯ ಕೇರಳ ಎನ್ನಲಾಗಿದೆ. 2021 ರಲ್ಲಿ ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅನೇಕ ಭೂಕುಸಿತ ಮತ್ತು ಪ್ರವಾಹವಾಗಿ 53 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿತ್ತು. 2022 ಕ್ಕೆ ಭೂ ವಿಜ್ಞಾನ ಸಚಿವಾಲಯವು ನೀಡಿರುವ ಮಾಹಿತಿಯಂತೆ ಏಳು ವರ್ಷಗಳಲ್ಲಿ ಕೇರಳವು ದೇಶದಲ್ಲಿ ಅತಿ ಹೆಚ್ಚು ಭೂಕುಸಿತಗಳಿಗೆ ಸಾಕ್ಷಿಯಾದ ರಾಜ್ಯವಾಗಿದೆ. 2015 ಮತ್ತು 2022 ರ ನಡುವೆ 3,782 ಭೂಕುಸಿತವಾಗಿದೆ.
ಹವಾಮಾನ ಬದಲಾವಣೆ, ಮನುಷ್ಯ ಪಕೃತಿಯೊಂದಿಗೆ ವಿಕೃತವಾಗಿ ನಡೆದುಕೊಳ್ಳುವುದು ಕೂಡ ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣ. ಪ್ರಕೃತಿ ತನ್ನ ಸಹಜತೆಯ ಮೇಲೆ ಮಾನವ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ತೋರಿಸುತ್ತಿರುವ ಆಕ್ರೋಶವೇ ಇಂತಹ ಘಟನೆಗಳಾಗಿವೆ. ಪಶ್ಚಿಮ ಘಟ್ಟದ ಬಹುತೇಕ ಕಾಡನ್ನು ಒಳಗೊಂಡ ರಾಜ್ಯವಾಗಿರುವ ಕೇರಳದಲ್ಲಿ ದಿನದಿಂದ ದಿನಕ್ಕೆ ಅರಣ್ಯನಾಶ ಮಾಡಿ ರೆಸಾರ್ಟ್, ಹೋಟೆಲ್ ಮಾಡಿ ನಗರೀಕರಣಕ್ಕೆ ಬದಲಾಗುತ್ತಿರುವುದಕ್ಕೆ ಪ್ರಕೃತಿಯ ಪ್ರತಿಕ್ರಿಯೆ ಇಂಥವುಗಳಾಗಿವೆ.
ಈ ಸಂದರ್ಭದಲ್ಲಿ 13 ವರ್ಷಗಳ ವರದಿಯೊಂದರ ಕುರಿತಾಗಿ ಈಗ ಚರ್ಚಿಸಬೇಕಾದ ಜರೂರು ಇದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ESAs) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು 13 ವರ್ಷಗಳ ಹಿಂದೆಯೇ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ಆಗಸ್ಟ್ 2011ರಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಇಂದು ಭೂಕುಸಿತ ಸಂಭವಿಸಿದ ವಯನಾಡಿನ ಪ್ರಸ್ತಾಪ ಕೂಡ ಅದರಲ್ಲಿದೆ. ಸಮಿತಿಯು ಗುರುತಿಸಿರುವ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ESL) ವಯನಾಡ್ ಕೂಡ ಸೇರಿದೆ. ಅಲ್ಲಿ ಪರಿಸರ ವಿರೋಧಿ ಚಟುವಟಿಕೆಗಳನ್ನು ಮಾಡಬಾರದೆಂದು ಸಮಿತಿ ಅಂದೇ ಎಚ್ಚರಿಕೆ ನೀಡಿತ್ತು.
ಸಮಿತಿಯ ವರದಿಯಲ್ಲಿ ಪಶ್ಚಿಮ ಘಟ್ಟಗಳಾದ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಲು ಪ್ರಸ್ತಾಪಿಸಲಾಗಿತ್ತು. ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳು – 1 ಮತ್ತು ಪರಿಸರ ಸೂಕ್ಷ್ಮ ವಲಯಗಳು – 2 ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳು ಮತ್ತು ನಿಬಂಧನೆಗಳು ಇದ್ದವು. ವರದಿ ಹೊರ ಬಂದು 13 ವರ್ಷಗಳಾದರೂ ಇಲ್ಲಿಯವರೆಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ವರದಿಯಲ್ಲಿ ಹೇಳಿರುವುದನ್ನು ಜಾರಿಗೆ ತರಲು ಉತ್ಸುಕರಾಗಿರಲಿಲ್ಲ. ಪ್ರಸ್ತಾವನೆಗಳನ್ನು ದುರ್ಬಲಗೊಳಿಸುವ ಕ್ರಮಗಳೂ ನಡೆದಿವೆ.
ಕೇಂದ್ರ ಸರ್ಕಾರವು ನಂತರ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿತು. ಮತ್ತೊಂದು ವರದಿಯನ್ನು ತರಲು ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಿತು. ಗಾಡ್ಗೀಳ್ ಸಮಿತಿಯು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಇಎಸ್ಎ ಎಂದು ಸೂಚಿಸಲು ಶಿಫಾರಸು ಮಾಡಿತ್ತು. ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟಗಳ ಇಎಸ್ಎ ವ್ಯಾಪ್ತಿಯನ್ನು ಶೇಕಡಾ 37ಕ್ಕೆ ಇಳಿಸಿತು. ಆಗ ಉಮ್ಮನ್ ಚಾಂಡಿ ನೇತೃತ್ವದ ಕೇರಳ ರಾಜ್ಯ ಸರ್ಕಾರ ಡಬ್ಲ್ಯುಜಿಇಇಪಿ ವರದಿಯನ್ನು ವಿರೋಧಿಸಿ ಸ್ವತಂತ್ರ ವರದಿಯನ್ನು ಮತ್ತೊಂದು ಸಮಿತಿಗೆ ಒಪ್ಪಿಸಿತ್ತು.
ಪಶ್ಚಿಮ ಘಟ್ಟಗಳ ಪರಿಸರ ಪ್ರಾಮುಖ್ಯತೆಯನ್ನು ಗುರುತಿಸಿದ ಗಾಡ್ಗೀಳ್ ವರದಿ ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳಿಂದ ವಿರೋಧಕ್ಕೀಡಾಯಿತು. ಈಗಿನ ಪಿಣಯಾಯಿ ವಿಜಯನ್ ಸರಕಾರ ಅಕ್ರಮ ಕಲ್ಲುಗಣಿಗಾರಿಕೆಯನ್ನು ಸಕ್ರಮಗೊಳಿಸುವ ಪ್ರಯತ್ನವನ್ನು ಮಾಡಿರುವುದು ಸರಿಯಾದ ನಿರ್ಧಾರವಲ್ಲ ಎಂದು ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಅನಧಿಕೃತ ನಿರ್ಮಾಣಗಳನ್ನು ಸರ್ಕಾರ ಕ್ರಮಬದ್ಧಗೊಳಿಸಿದ ನಂತರ ಥಾಮಸ್ ಆಕ್ಷೇಪ ವ್ಯಕ್ತಪಡಿಸಿದ್ದೂ ಉಲ್ಲೇಖನೀಯ.
ಗಾಡ್ಗೀಳ್ ಸಮಿತಿ ವರದಿಯ ಶಿಫಾರಸುಗಳ ಜಾರಿಯಿಂದ ವಯನಾಡು ದುರಂತವನ್ನು ತಪ್ಪಿಸಲು ಸಾಧ್ಯವಿತ್ತು ಎಂದು ಖಚಿತ ಅಭಿಪ್ರಾಯ ನನ್ನದಲ್ಲ. ಆದರೆ ಇಂತಹ ದುರಂತಗಳ ಬಗ್ಗೆ ಎಚ್ಚರಿಕೆಗಳನ್ನು ತಿಳಿದೂ ಅವಗಣಿಸಲಾಗುತ್ತಿದೆ ಎಂಬುದು ಗಮನಾರ್ಹ. ಕೆಲವು ದುರಂತಗಳನ್ನು ತಡೆಯಲು ಮನುಷ್ಯರಿಗೆ ಸಾಧ್ಯವಿಲ್ಲ ಎಂಬುದು ಎಷ್ಟು ಸತ್ಯವೋ ಕೆಲವು ದುರಂತಗಳಿಗೆ ಮನುಷ್ಯರೇ ಕಾರಣ ಎಂಬುದೂ ಸತ್ಯ. ಮನುಷ್ಯ ಮನಸು ಮಾಡಿದರೆ ಕೆಲವು ದುರಂತಗಳನ್ನು ತಪ್ಪಿಸಬಹುದು ಎಂಬುದೂ ಸತ್ಯ. ಪ್ರಕೃತಿಯ ಸಹಜತೆಗೆ ಮಾನವ ಹಸ್ತಕ್ಷೇಪದಿಂದ ತೊಂದರೆಯಾಗುತ್ತಿದೆ. ಪ್ರಕೃತಿಯಲ್ಲಿ ಮಾನವ ಹಸ್ತಕ್ಷೇಪಗಳು ದರಂತಗಳನ್ನು ತಂದೊಡ್ಡುತ್ತಿವೆ.
ಪ್ರಕೃತಿಯಲ್ಲಿ ಮಾನವನಿಂದಾಗುವ ಮಾನವ ಹಸ್ತಕ್ಷೇಪಗಳಲ್ಲಿ ಯಾವುದೆಲ್ಲಾ ಬಲು ಅಪಾಯಕಾರಿ ಎಂಬುದನ್ನು ಗುರುತಿಸುವುದು, ಹಾಗೆ ಗುರುತಿಸಿದ ಹಸ್ತಕ್ಷೇಪಗಳಾಗದಂತೆ ತಡೆಯುವ ಕ್ರಮಗಳಾಗಬೇಕಾಗಿದೆ. ಪ್ರಕೃತಿ ದುರಂತಗಳ ಕುರಿತು ಸಂಶೋಧನಾ ವರದಿ ತರಿಸಿ ಅದರ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಈ ಗಂಭೀರ ಚಿಂತನೆ, ಚರ್ಚೆ ತುರ್ತಾಗಿ ನಡೆಯಬೇಕಿದೆ. ಪ್ರಕೃತಿಯಲ್ಲಿ ಮನುಷ್ಯ ಹಸ್ತಕ್ಷೇಪಗಳಿಂದಾಗಿಯೇ ನಡೆಯುವ ದುರಂತಗಳನ್ನು ಕೊನೆಗಾಣಿಸಲು ಮಾಡಬೇಕಾದ ಕ್ರಮಗಳು ನಡೆಯಬೇಕಾಗಿದೆ.
— ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.